#ಕಾಳು_ಮೆಣಸಿನ_ರಾಣಿ_ಚೆನ್ನಬೈರಾದೇವಿ_ಸಮಾದಿ
#ಶಿವಮೊಗ್ಗ_ಜಿಲ್ಲೆಯ_ಸಾಗರ_ತಾಲ್ಲೂಕಿನ_ಆವಿನಹಳ್ಳಿಯಲ್ಲಿದೆ
#ಎರಡು_ಶತಮಾನದ_ಹಿಂದೆ_ಕರ್ನಲ್_ಕಾಲಿನ್_ಮೆಕೆಂಜಿ_ಇಲ್ಲಿಗೆ_ಬೇಟಿ_ನೀಡಿ_ದಾಖಲೆ_ಮಾಡಿದ್ದಾರೆ
#ಆರು_ವರ್ಷದ_ಹಿಂದೆ_ಇತಿಹಾಸಕಾರರು_ಆ_ನಕ್ಷೆ_ಆದರಿಸಿ_ಸ್ಥಳ_ಸಂಶೋಧನೆ_ಮಾಡಿದ್ದಾರೆ.
#ಇದು_ರಾಷ್ಟ್ರೀಯ_ಸ್ಮಾರಕ_ಇದನ್ನು_ಸಂರಕ್ಷಿಸ_ಬೇಕು
#pepperqueen #gerusoppe #saluvdynasty #chennabyaradevi
ಗೇರುಸೊಪ್ಪೆಯ ಪ್ರಸಿದ್ಧ ಜೈನ ರಾಣಿ ಚೆನ್ನಬೈರಾದೇವಿ ದೀರ್ಘಕಾಲ ರಾಜ್ಯವಾಳಿದವರು.
ಯುರೋಪಿನ ಆ ಕಾಲದ ಅನೇಕ ದೇಶಗಳಿಗೆ ಪಶ್ಚಿಮ ಘಟ್ಟದ ಮಲೆನಾಡಿನಿಂದ ಕಾಳುಮೆಣಸು ಸಂಗ್ರಹಿಸಿ ಅರಬೀ ಸಮುದ್ರದ ಮೂಲಕ ರಪ್ತು ವ್ಯಾಪಾರ ಮಾಡುತ್ತಿದ್ದ ಏಕೈಕ ರಾಣಿ.
ಪೋರ್ಚುಗೀಸರು ಈ ಕಾರಣದಿಂದಲೇ #ಕಾಳು_ಮೆಣಸಿನ_ರಾಣಿ ಎಂದು ಬಿರುದು ನೀಡಿದ್ದರು.
ಚೆನ್ನಭೈರಾದೇವಿಯು ಸಾಳುವ ವಂಶಕ್ಕೆ ಸೇರಿದ ರಾಣಿ 16ನೇ ಶತಮಾನದಲ್ಲಿ ಆಳ್ವಿಕೆ ನಡೆಸಿದ ಈ ರಾಣಿಯು 54 ವರ್ಷಗಳ ಕಾಲ ರಾಜ್ಯಭಾರ ಮಾಡಿದ್ದಳು.
ಪ್ರಸ್ತುತ ಭಟ್ಕಳ ತಾಲೂಕಿನಲ್ಲಿರುವ ಹಾಡವಳ್ಳಿ (ಸಂಗೀತಪುರ) ಮತ್ತು ಗೇರುಸೊಪ್ಪ ಪ್ರಾಂತ್ಯವನ್ನು ಆಳುತ್ತಿದ್ದ ಈಕೆಯನ್ನು ಗೇರುಸೊಪ್ಪೆಯ ರಾಣಿ ಎಂದು ವರ್ಣಿಸಲಾಗಿದೆ.
ಕರಾವಳಿ ಮತ್ತು ಮಲೆನಾಡಿನ ಪ್ರದೇಶದಲ್ಲಿ ವ್ಯಾಪಕವಾಗಿ ಬೆಳೆಯುತ್ತಿದ್ದ ಕಾಳುಮೆಣಸನ್ನು ಯುರೋಪಿಗೆ ರಫ್ತು ಮಾಡುತ್ತಿದ್ದ ಈಕೆಗೆ ಕರಿಮೆಣಸಿನ/ಕಾಳುಮೆಣಸಿನ ರಾಣಿ ಎಂದೂ ಕರೆಯಲಾಗಿದೆ.
ಪೋರ್ಚುಗೀಸರು, ಕೆಳದಿ ಅರಸರು ಮತ್ತು ಬಿಜಾಪುರದ ಸುಲ್ತಾನರ ನಡುವಿನ ಯುದ್ಢಗಳನ್ನು ತನ್ನ ಜಾಣ್ಮೆಯಿಂದ ನಿರ್ವಹಿಸಿದ ಈಕೆ 1552-1606 ರ ನಡುವಿನ ಐವತ್ನಾಲ್ಕು ವರ್ಷಗಳ ಕಾಲ ರಾಜ್ಯಭಾರ ನಡೆಸಿದಳು.
ಗೇರುಸೊಪ್ಪೆಯಲ್ಲಿ ಅಲ್ಲಿನ ನಾಡವರು ಮತ್ತು ಖಾರ್ವಿಗಳು "ಅವ್ವರಸಿ" ಎಂದು ಪೂಜಿಸುವ ರಾಣಿ ಚೆನ್ನಭೈರಾದೇವಿಯ ದೇವಸ್ಥಾನವಿದೆ.
ಈಕೆಗೆ ಪೋರ್ಚುಗೀಸರು "ರೈನಾ ದೆ ಪಿಮೆಂಟಾ" ಎಂಬ ಹೆಸರು ಕೊಟ್ಟಿದ್ದರು.
ರಾಣಿ ಚೆನ್ನಬೈರಾದೇವಿ ಜನನ
1 ಜನವರಿ 1536
ಹಾಡವಳ್ಳಿ, ಭಟ್ಕಳ, ಕರ್ನಾಟಕ, ಭಾರತ.
ಮರಣ 1ಜನವರಿ 1606 ವಯಸ್ಸು 70
ಕೆಳದಿ, ಶಿವಮೊಗ್ಗ ಜಿಲ್ಲೆ ಎಂದು ಇತಿಹಾಸದ ದಾಖಲೆಗಳಲ್ಲಿ ನಮೂದಾಗಿದೆ.
ಇಂತಹ ಪ್ರಖ್ಯಾತ ರಾಣಿ ಸಮಾದಿ ಮಂದಿರ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆವಿನಹಳ್ಳಿಯಲ್ಲಿದೆ ಮತ್ತು ಈ ಸ್ಥಳ ಸ್ಥಳೀಯರಿಂದ ಪೂಜಿಸಲ್ಪಡುತ್ತಿದೆ ಎಂಬುದು ವಿಶೇಷವಾಗಿದೆ.
ಸಾಗರ ತಾಲೂಕಿನ ಆವಿನಹಳ್ಳಿ ಆಗ ಗೇರುಸೊಪ್ಪೆ ಸಂಸ್ಥಾನಕ್ಕೆ ಸೇರಿತ್ತು ಮತ್ತು ಇಕ್ಕೇರಿ ಕೆಳದಿ ಅರಸರ ರಾಜದಾನಿ ಆಗಿತ್ತು.
ಕೆಳದಿ ಅರಸರಾದ ರಾಜ ವೆಂಕಟಪ್ಪ ನಾಯಕ ರಾಣಿ ಚೆನ್ನಬೈರಾದೇವಿಯನ್ನು ಬಂಧಿಸಿ ಕರೆತಂದು ಆನಂದಪುರಂ ಕೋಟೆಯಲ್ಲಿ ನಂತರ ಇಕ್ಕೇರಿ ಕೋಟೆಯಲ್ಲಿ ಬಂದನದಲ್ಲಿಡುತ್ತಾರೆ.
ಇಕ್ಕೇರಿ ಕೋಟೆಯಲ್ಲಿ ತನ್ನ ಜೈನ ಧರ್ಮದ ಆಚರಣೆಯಾದ ಸಲ್ಲೇಖನ ವೃತ ಪಾಲಿಸಿ ಜಿನಕೈಳಾಗುವ ರಾಣಿ ಚೆನ್ನಬೈರಾದೇವಿ ಸಮಾದಿಯನ್ನು ಇಕ್ಕೇರಿ ಸಮೀಪದ ಆವಿನಹಳ್ಳಿಯಲ್ಲಿ ಮಾಡುತ್ತಾರೆ.
ಜೈನ ಸಮಾದಿ ಎಂದರೆ ಜೈನ ಧರ್ಮದಲ್ಲಿರುವ ಸಲ್ಲೇಖನ ವ್ರತ, ಇದನ್ನು ಸಮಾಧಿ ಮರಣ ಅಥವಾ ಸಂತಾರ ಎಂದೂ ಕರೆಯುತ್ತಾರೆ.
ಇದು ಮುಪ್ಪು, ರೋಗ ಅಥವಾ ಪ್ರತೀಕಾರವಿಲ್ಲದ ಇತರೆ ಸಮಸ್ಯೆಗಳು ಬಂದಾಗ, ಧರ್ಮಪೂರ್ವಕವಾಗಿ ಆಹಾರ ಮತ್ತು ಪಾನೀಯಗಳನ್ನು ಕ್ರಮೇಣ ಕಡಿಮೆಗೊಳಿಸಿ, ದೇಹವನ್ನು ತ್ಯಜಿಸುವ ಅಂತಿಮ ಕ್ರಿಯೆಯಾಗಿದೆ.
ಇದು ಆತ್ಮಹತ್ಯೆಯಲ್ಲ, ಏಕೆಂದರೆ ಇದು ಆಯುಧ ಅಥವಾ ವಿಷವನ್ನು ಬಳಸುವುದಕ್ಕೆ ಬದಲಾಗಿ, ಎಲ್ಲ ಭಾವೋದ್ರೇಕಗಳನ್ನು ತ್ಯಜಿಸಿ, ಶಾಂತಿಯಿಂದ ಸಾವು ಎದುರಿಸುವ ವಿಧಾನವಾಗಿದೆ.
ರಾಣಿ ಚೆನ್ನಬೈರಾದೇವಿ ಈ ವಿಧಾನದಿಂದಲೇ ಸ್ವ ಇಚ್ಚೆಯಿಂದ ಜಿನೈಕ್ಯರಾಗಿದ್ದು ಇತಿಹಾಸ
ಈ ಸಮಾಧಿ ಮಾಡಿದ ಸುಮಾರು 200 ವರ್ಷದ ನಂತರ ಕರ್ನಲ್ ಕಾಲಿನ್ ಮೆಕಿಂಜಿ ಇಲ್ಲಿಗೆ ತಲುಪಿದ್ದರು.
ರಾಣಿ ಚೆನ್ನಬೈರಾದೇವಿ ಸಮಾದಿ ಸ್ಥಳದ ಮಾರ್ಗವನ್ನು ದಾಖಲಿಸಿ ನಕ್ಷೆ ಮಾಡಿದ್ದಾರೆ.
ನಂತರದ 200 ವರ್ಷಗಳಲ್ಲಿ ರಾಣಿ ಚೆನ್ನಬೈರಾದೇವಿ ಸಮಾದಿ ಸ್ಥಳದ ಮಾಹಿತಿ ಜನಮಾನಸದಿಂದ ಮರೆತೆ ಹೋಗಿದೆ.
ಈ ಬಗ್ಗೆ ನಿಖರವಾದ ಸಂಶೋದನೆ ಯಾರೂ ಮಾಡಲೇ ಇಲ್ಲ ಆದ್ದರಿಂದ ರಾಣಿ ಚೆನ್ನಬೈರಾದೇವಿ ಸಮಾದಿ ಮರೆತು ಹೋದ ಅಧ್ಯಾಯವೇ ಆಗಿತ್ತು.
ನನಗೆ ಕೆಲವರಿಂದ ಮಾಹಿತಿ ಬಂದಿತ್ತು ಅದೇನೆಂದರೆ ರಾಣಿ ಚೆನ್ನಬೈರಾದೇವಿ ಸಮಾದಿ ನಿಮ್ಮ ಸಾಗರ ತಾಲೂಕಿನ ಆವಿನಹಳ್ಳಿಯಲ್ಲಿದೆ ಅಂತ.
ಈ ಬಗ್ಗೆ ನಾನು ಸ್ಥಳೀಯರಿಗೆ ಕೇಳಿದ್ದೆ ಆದರೆ ಅವರಾರಿಗೂ ಈ ಬಗ್ಗೆ ಮಾಹಿತಿ ಇರಲಿಲ್ಲ.
ಜೈನ ಸಮಾಜದ ಸ್ಥಳೀಯರಿಗೆ ಮತ್ತು ರಾಜ್ಯದ ಪ್ರಮುಖ ಜೈನ ಮಠಗಳಿಗೂ ಈ ಬಗ್ಗೆ ನಿಖರವಾದ ಮಾಹಿತಿ ಇಲ್ಲವಾಗಿತ್ತು.
ಜೈನ ಸಮುದಾಯದವರೂ ತಮ್ಮ ಸಮುದಾಯದ ಪ್ರಖ್ಯಾತ ಏಕೈಕ ವಿದೇಶದ ಜೊತೆ ಕಾಳುಮೆಣಸು ವ್ಯವಹಾರ ನಡೆಸಿದ ರಾಣಿ ಚೆನ್ನಬೈರಾದೇವಿ ಸಮಾದಿ ಸ್ಥಳ ರಾಷ್ಟ್ರೀಯ ಸ್ಮಾರಕ ಮಾಡುವ ಮತ್ತು ಅದನ್ನು ಸಂರಕ್ಷಣೆ ಮಾಡಿ ದೇಶದ ಪ್ರಖ್ಯಾತ ಪ್ರವಾಸಿ ಸ್ಥಳವನ್ನಾಗಿ ಮಾಡುವಲ್ಲಿ ಸರಿಯಾದ ಪ್ರಯತ್ನ ಕಂಡು ಬಂದಿಲ್ಲ.
ಅವಿಭಜಿತ ಶಿವಮೊಗ ಜಿಲ್ಲೆಯ ಚೆನ್ನಗಿರಿ ತಾಲ್ಲೂಕಿನ ಹೊದಿಗೆರೆಯಲ್ಲಿ (ಈಗ ದಾವಣಗೆರೆ ಜಿಲ್ಲೆಗೆ ಸೇರಿದೆ) ಛತ್ರಪತಿ ಶಿವಾಜಿ ಮಹಾರಾಜರ ತಂದೆ ಛತ್ರಪತಿ ಶಹಾಜಿ ಮಹಾರಾಜರ ಸಮಾಧಿ ರಾಷ್ಟ್ರೀಯ ಸ್ಮಾರಕವಾಗಿದೆ ಅಲ್ಲಿಗೆ ಮಹಾರಾಷ್ಟ್ರದ ಎಲ್ಲಾ ಮಹನೀಯರೂ ಬೇಟಿ ಮಾಡುತ್ತಾರೆ.
ಹೀಗಿರುವಾಗ ನಮ್ಮ ಜಿಲ್ಲೆಯ ಹೊಂಬುಜ ಮಠ, ಶ್ರವಣ ಬೆಳಗೊಳದ ಮಠ ಮತ್ತು ದರ್ಮಸ್ಥಳದ ವೀರೇಂದ್ರ ಹೆಗ್ಗಡೆ ಈ ಬಗ್ಗೆ ಆಸಕ್ತಿ ವಹಿಸ ಬಹುದಾಗಿದೆ.
ಶ್ರವಣ ಬೆಳಗೊಳದ ಈಗಿನ ಸ್ವಾಮಿಗಳು ಸಾಗರ ಮೂಲದ ಇಂದ್ರ ಕುಟುಂಬದವರು ಅವರು ಈ ಬಗ್ಗೆ ಹೆಚ್ಚಿನ ಜವಾಬ್ದಾರಿ ವಹಿಸುವ ಆಶಾ ಭಾವನೆ ನನ್ನದು.
ಗೇರುಸೊಪ್ಪೆಯ ರಾಣಿ ಚೆನ್ನಬೈರಾದೇವಿ ಸಮಾದಿ ಸ್ಥಳದ ಸಂಶೋದನೆಗೆ ಕರ್ನಲ್ ಕಾಲಿನ್ ಮೆಕೆಂಜಿ ನಂತರ ಮೆಕೆಂಜಿಯ ನಕ್ಷೆ ಹಿಡಿದು ಮೆಕಿಂಜಿ ಹೆಜ್ಜೆಯಲ್ಲಿ ಸಾಗಿದವರು ಶಿವಮೊಗ್ಗದ ಇತಿಹಾಸ ಸಂಶೋಧಕ #ದಿಲೀಪ್_ನಾಡಿಗರು.
ಇವರು ಐದು ವರ್ಷದ ಹಿಂದೆ ಈ ಸ್ಥಳಕ್ಕೆ ತಲುಪುತ್ತಾರೆ ಕರ್ನಲ್ ಕಾಲಿನ್ ಮೆಕಿಂಜಿ ಈ ಸ್ಥಳದ ಮೊದಲಿಗೆ ಸಿಗುವ ಮೂರು ಕೆರೆಗಳನ್ನ ಉಲ್ಲೇಖಿಸಿದ್ದಾರೆ ಅದೇ ಮಾರ್ಗದಲ್ಲಿ ದಿಲಿಪ್ ನಾಡಿಗರು ನಡೆದು ರಾಣಿ ಚೆನ್ನಬೈರಾದೇವಿ ಸಮಾದಿ ನೋಡುತ್ತಾರೆ.
ಈಗ ಈ ಸ್ಥಳ ಸ್ಥಳೀಯರು ಈಶ್ವರ ದೇವಾಲಯ ಎಂದು ಪೂಜಿಸುವ ಆವಿನಹಳ್ಳಿಯ ಈಶ್ವರ ದೇವಸ್ಥಾನ ಆಗಿದೆ.
ಹೀಗೆ ಆಗಲೂ ಕಾರಣ ಇದೆ ಕೆಳದಿ ಅರಸರು ತಮ್ಮ ರಾಜಧಾನಿ ಇಕ್ಕೇರಿಯಿಂದ ಬಿದನೂರಿಗೆ ಬದಲಿಸಿದ ನಂತರ ಈ ಪ್ರದೇಶ ಜನವಸತಿಯೇ ಇಲ್ಲದೆ ಅನೇಕ ದಶಕಗಳಿಂದ ಅರಣ್ಯ ಪ್ರದೇಶವಾಯಿತು ನಂತರ ಜನ ವಸತಿ ಪ್ರಾರಂಭ ಆದಾಗ ಸ್ಥಳೀಯರು ಈ ಮಂದಿರವನ್ನು ನೋಡಿದಾಗ ಅವರಿಗೆ ಚೆನ್ನಬೈರಾದೇವಿ ಸಮಾದಿ ಎಂಬ ಮಾಹಿತಿ ಇರಲಿಲ್ಲ.
ಆದ್ದರಿಂದ ಅವರು ಇದೊಂದು ದೇವಾಲಯ ಎಂದೇ ಭಾವಿಸಿ ಮಂದಿರ ಮಾದರಿಯ ಈ ಗುಡಿಯನ್ನು ಈಶ್ವರ ದೇವಾಲಯ ಎಂದೇ ಪೂಜಿಸಲು ಪ್ರಾರಂಬಿಸಿದರು.
ಈ ರೀತಿ ಪೂಜೆ ಆರಾದನೆ ಪ್ರಾರಂಭವಾದ್ದರಿಂದಲೇ ಈ ರಾಣಿ ಚೆನ್ನ ಬೈರಾದೇವಿ ಸಮಾದಿ ಹಾಳಾಗದೆ ಇವತ್ತಿನ ತನಕ ಉಳಿಯಲು ಒಂದು ಕಾರಣವೂ ಆಯಿತು.
ಜೈನ ಧರ್ಮದ ಸಂಪ್ರದಾಯದ ಸಮಾದಿ ಸ್ಥಳದ ರಚನೆ ಮತ್ತು ಕೆತ್ತನೆಗಳು ಈ ಮಂದಿರದಲ್ಲಿದೆ.
ಈ ಸಮಾದಿ ಮಂದಿರಕ್ಕೆ ಮೇಲ್ಚಾವಣೆ ಮೇಲೆ ಒಂದು ಅಂತಸ್ತಿನ ಕೋಣೆಯೂ ಇದೆ ಅದರ ಬಾಗಿಲು ದೇವಾಲಯದ ಆಡಳಿತ ಮಂಡಳಿ ತತ್ಕಾಲಿಕವಾಗಿ ಪ್ರವೇಶ ನಿರ್ಬಂದಿಸಿ ಮುಚ್ಚಿದೆ.
ಈ ಪ್ರದೇಶದಲ್ಲಿ ರಾಣಿ ಚೆನ್ನ ಬೈರಾದೇವಿ ಸಲ್ಲೇಖನ ವೃತ ಪಾಲಿಸಿ ಜಿನೈಕ್ಯಳಾದ ನಿಶಿದಿ ಶಾಸನ ಹುಡುಕಿದರೆ ಸಿಗಬಹುದು ಈ ಬಗ್ಗೆ ಸಂಶೋಧನೆ ಆಗಬೇಕು.
ಕೆಳದಿ ಅರಸರ ಬಂದನದಲ್ಲಿದ್ದ ಗೇರುಸೊಪ್ಪೆ ರಾಣಿಯ ಸಮಾದಿ ಮಂದಿರ ಬಹುಶಃ ಕೆಳದಿ ಅರಸೊತ್ತಿಗೆಯಿಂದಲೇ ನಿರ್ಮಾಣ ಆಗಿರಬೇಕು.
ಗೇರುಸೊಪ್ಪೆ ಜೈನ ರಾಣಿ ಕಾಳು ಮೆಣಸಿನ ರಾಣಿ ಎಂದೇ ಪ್ರಖ್ಯಾತಳಾದ ರಾಣಿ ಚೆನ್ನಬೈರಾದೇವಿ ಸಮಾದಿ ಆಗಿ 200 ವರ್ಷದ ನಂತರ ಕರ್ನಲ್ ಕಾಲಿನ್ ಮೆಕೆಂಜಿ ಸ್ಥಳ ಪರಿಶೀಲನೆ ಮಾಡಿ ದಾಖಲಿಸಿದ್ದರು.
ಅವರ ನಂತರ ಸುಮಾರು 220 ವರ್ಷದ ನಂತರ ಶಿವಮೊಗ್ಗದ ಇತಿಹಾಸ ಸಂಶೋದಕ ದಿಲೀಪ್ ನಾಡಿಗರು ಕರ್ನಲ್ ಕಾಲಿನ್ ಮೆಕಿಂಜಿ ದಾರಿಯಲ್ಲಿ ಸಾಗಿ ಸಂಶೋಧಿಸಿದ್ದಾರೆ.
ಈ ವಿಶೇಷ ಸುದ್ದಿ ಈ ಮೂಲಕ ಜಗತ್ತಿಗೆ ಅಧಿಕೃತವಾಗಿ ಬಹಿರಂಗ ಮಾಡುವ ಭಾಗ್ಯ ನನ್ನದಾಗಿದೆ, ಇದಕ್ಕೆ ಇತಿಹಾಸ ಸಂಶೋದಕ ದಿಲೀಪ್ ನಾಡಿಗರು ಅನುಮತಿ ನೀಡಿರುವುದು ನನ್ನ ಸೌಬಾಗ್ಯವೇ ಆಗಿದೆ.
ಇದರಿಂದ ಈವರೆಗೆ ಪೂಜಿಸಿಕೊಂಡು ಬಂದ ಆವಿನಳ್ಳಿಯ ಜನತೆಗೆ ಪ್ರತ್ಯೇಕ ದೇವಾಲಯ ನಿರ್ಮಾಣ ಮಾಡಿಕೊಡುವ ಜವಾಬ್ದಾರಿ ಜೈನ ಸಮಾಜ ಮಾಡಬೇಕು.
ಸ್ಥಳೀಯರೂ ಕೂಡ ಇಡೀ ವಿಶ್ವದಲ್ಲೇ ಪ್ರಖ್ಯಾತಳಾಗಿದ್ದ ಇದೇ ಆವಿನಹಳ್ಳಿ ಪ್ರದೇಶ ಸೇರಿ ಗೇರುಸೊಪ್ಪೆ ಸಂಸ್ಧಾನವನ್ನು ದೀರ್ಘ ಕಾಲ ಆಳಿದ ರಾಣಿ ಚೆನ್ನಬೈರಾದೇವಿ ಸಮಾದಿ ಮಂದಿರವನ್ನ ರಾಷ್ಟ್ರೀಯ ಸ್ಮಾರಕವನ್ನಾಗಿ ಮಾಡಿ ಇದು ದೇಶದ ಪ್ರಸಿದ್ಧ ಪ್ರವಾಸಿ ತಾಣವಾಗಲು ಸಹಕರಿಸಬೇಕು.
ಈ ಬಗ್ಗೆ ಸ್ಥಳೀಯ ಜೈನ ಸಮುದಾಯ ಮತ್ತು ಆ ಸಮುದಾಯದ ಮಠಗಳು ಸರ್ಕಾರದ ಜೊತೆ ಮಾತುಕತೆ ಮಾಡಬೇಕು.
ಖ್ಯಾತ ಇತಿಹಾಸ ಸಂಶೋಧಕ ಕರ್ನಲ್ ಕಾಲಿನ್ ಮೆಕಿಂಜಿ ಮತ್ತು ಅವರ ಮಾಹಿತಿ ನಕ್ಷೆಯಲ್ಲಿ ಸುಮಾರು 220 ವರ್ಷದ ನಂತರ ಅವರ ಹೆಜ್ಜೆಯಲ್ಲಿ ಸಾಗಿ ಪ್ರಖ್ಯಾತ ಗೇರುಸೊಪ್ಪೆಯ ಕಾಳುಮೆಣಸಿನ ರಾಣಿ ಚೆನ್ನಬೈರಾದೇವಿ ಸಮಾದಿ ಮಂದಿರ ಜಗತ್ತಿಗೆ ಮತ್ತೊಮ್ಮೆ ಹುಡುಕಿ ಕೊಟ್ಟ ಶಿವಮೊಗ್ಗದ ಖ್ಯಾತ ಇತಿಹಾಸ ಸಂಶೋಧಕ #ದಿಲೀಪ್_ನಾಡಿಗರಿಗೆ ಸಮಸ್ತ ಕನ್ನಡಿಗರ ಪರವಾಗಿ ಅಭಿನಂದಿಸುತ್ತೇನೆ.
ಇತಿಹಾಸ ಸಂಶೋಧಕರಾದ ದಿಲೀಪ್ ನಾಡಿಗರ ಸಂದರ್ಶನ ಮುಂದಿನ ಭಾಗದಲ್ಲಿ ನಿರೀಕ್ಷಿಸಿ
Comments
Post a Comment