#ಇತಿಹಾಸ_ಆಸಕ್ತರು_ತಪ್ಪದೇ_ಓದಿ
#ಕರ್ನಲ್_ಕಾಲಿನ್_ಮೆಕೆಂಜೆ
#ಭಾರತದ_ಭೂಪಟ_ದಾಖಲಿಸಿದವರು
#ಮೆಕೆಂಜೆಯು_ಹೆಚ್ಚು_ಕಡಿಮೆ_ಗೆಜೆಟಿಯರ್_ಕೆಲಸವನ್ನೆ_ಮಾಡಿದ್ದಾರೆ.
#ಕೈಪಿಯತ್_ಎಂದರೆ_ಸ್ಥಳ_ಪುರಾಣ,
#ಮೆಕೆಂಜೆ_ದಾಖಲೆಯಲ್ಲಿ_ಶಿವಮೊಗ್ಗ_ಜಿಲ್ಲೆಯಲ್ಲಿ_ಏನೇನು_ದಾಖಲಾಗಿದೆ?
#colonelmechenje #kaifiyath #shivamogga #map #survey #history
ಕರ್ನಲ್ ಕಾಲಿನ್ ಮೆಕೆಂಜೆ ದಾಖಲಿಸಿದ ಶಿವಮೊಗ್ಗದ ನಕ್ಷೆ ಹಿಡಿದು ಕೊಂಡು ಶಿವಮೊಗ್ಗದ ಕೆಲ ಇತಿಹಾಸ ಸಂಶೋದಕರು ಕೆಲ ಪ್ರದೇಶಗಳ ಸಂಶೋದನೆ ಮಾಡಿದ್ದಾರೆ.
ಆ ಸ್ಥಳಗಳು ದೇಶದ ಇತಿಹಾಸ ಆಸಕ್ತರಿಗೆ ಅತ್ಯಾಮೂಲ್ಯವಾದ ಮಾಹಿತಿಗಳು ಹೆಚ್ಚು ಕಡಿಮೆ ಅವುಗಳು ಜನಮಾನಸ ಮರೆತಿರುವ ಅಥವ ಕಾಲನ ಹೊಡೆತಕ್ಕೆ ಅಸ್ತಿತ್ವ ಕಳೆದು ಕೊಂಡಂತವು.
ಭಾರತದ ಇತಿಹಾಸ ಸಂಸ್ಕೃತಿಯ ಜ್ಞಾನ ಕೋಶವೇ ಆದ ಕರ್ನಲ್ ಕಾಲಿನ್ ಮೆಕೆಂಜಿ ಬಗ್ಗೆ ನಾವು ತಿಳಿಯದಿದ್ದರೆ ಭಾರತೀಯ ಇತಿಹಾಸವೇ ನಮಗೆ ತಿಳಿಯಲು ಸಾಧ್ಯವಿಲ್ಲ.
ಆದ್ದರಿಂದಲೇ ಕರ್ನಲ್ ಮೆಕೆಂಜಿಯ ವಿವರಗಳು ದೀರ್ಘವಾದರೂ ಇದನ್ನು ತಪ್ಪದೇ ಓದಿ.
ಮುಂದಿನ ದಿನಗಳಲ್ಲಿ ಕರ್ನಲ್ ಮೆಕಿಂಜೆ ನಕ್ಷೆ ಹಿಡಿದು ಶಿವಮೊಗ್ಗ ಜಿಲ್ಲೆಯ ಕೆಲ ಪ್ರಮುಖ ಸ್ಥಳ ಸಂಶೋಧನೆ ಮಾಡಿದ ಸಂಶೋಧಕರ ಅನುಭವದ ಸಾಹಸ ತಿಳಿಯಲು ಸಹಾಯ ಆಗಲಿದೆ.
ಕರ್ನಲ್ ಮೆಕೆಂಜಿ : ಕರ್ನಾಟಕದ ಇತಿಹಾಸ ಮತ್ತು ಕನ್ನಡ ಸಾಹಿತ್ಯದ ಅಭ್ಯುದಯದಲ್ಲಿ ಅಪಾರ ಕೊಡುಗೆ ನೀಡಿದ ಪಾಶ್ಚಿಮಾತ್ಯ ವಿದ್ವಾಂಸರಲ್ಲಿ ಒಬ್ಬರು.
ಇವರು ಒಬ್ಬ ಗಣಿತ ತಜ್ಞನಾಗಿದ್ದವರು, ಭಾರತಕ್ಕೆ ಬಂದು ನಂತರ ಬ್ರಿಟಿಷ್ ಸೈನ್ಯದ ಅಧಿಕಾರಿಯಾಗಿ ಸೇವೆಗೆ ಸೇರಿ ಸ್ವಾಮಿಕಾರ್ಯದ ಜೊತೆಗೆ ತಾವು ಸೇವೆ ಸಲ್ಲಿಸುತ್ತಿರುವ ಪ್ರದೇಶದಲ್ಲಿನ ಸಮಾಜದ ಹಲವು ಆಯಾಮಗಳನ್ನು ದಾಖಲಿಸಿದ ಹೆಗ್ಗಳಿಕೆ ಕರ್ನಲ್ ಮೆಕೆಂಜಿಯದು.
ಕರ್ನಲ್ ಕಾಲಿನ್ ಮೆಕೆಂಜಿಯವರ ಕಾರ್ಯ ವೈಖರಿ ಅಮೂಲ್ಯ ಎಂಬುದಕ್ಕೆ ಆವರು ಕನ್ನಡದ ಹಸ್ತಪ್ರತಿಗಳು, ಶಾಸನಗಳು,ಕೈಫಿಯತ್ತು, ಬಖೈರು ಮತ್ತು ಕಡತಗಳಗಳ ಸಂಗ್ರಹಕ್ಕೆ ತೊಡಗುತ್ತಾರೆ.
ಇವರ ಈ ಕೆಲಸದಿಂದಾಗಿ ದಕ್ಷಿಣಭಾರತದ ಮಧ್ಯಕಾಲೀನ ಇತಿಹಾಸ, ಜನ ಜೀವನ ಮತ್ತು ಆಚರಣೆಗಳ ಸ್ಪಷ್ಟ ಚಿತ್ರಣ ಹಾಗೂ ಒಳನೋಟವು ಲಭ್ಯವಾಗುವುದು
ಕಾಲಿನ್ ಮೆಕೆಂಜಿ ಸ್ಕಾಟಲೇಂಡಿನವರು ಅಲ್ಲಿನ ಲೀವೀಸ್‌ದ್ವೀಪದ ಸ್ಟಾರ್ನವೇಯಲ್ಲಿ 1754 ರಲ್ಲಿ ಜನಿಸಿದರು.
ಇವರ ತಂದೆ ಮರ್ಡೋಕ್ ಮೆಕೆಂಜಿ ಸ್ಥಿತಿವಂತ ವ್ಯಾಪಾರಿ ಮೆಕೆಂಜೆಯ ಪ್ರಾರಂಭಿಕ ಶಿಕ್ಷಣ ಹುಟ್ಟಿದೂರಿನಲ್ಲಿಯೇ ಆಯಿತು.
ಹೆಸರಾಂತ ಟ್ಯೂಟರ್ ಅಲೆಕ್ಜಾಂಡರ್ ಆಂಡರ್ಸನ್‌ನಿಂದ ಖಾಸಗಿಯಾಗಿ ಕಲಿಕೆ,ವಿಜ್ಞಾನ ಮತ್ತು ಗಣಿತದಲ್ಲಿ ವಿಶೇಷ ಆಸಕ್ತಿ.
ಅವರ ಸಹಪಾಠಿಯೂ ಹೆಸರಾಂತ ಸಂಶೋಧಕನಾದ ಅಲೆಕ್ಜಾಂಡರ್ ಮೆಕೆಂಜಿ.
ಮೆಕೆಂಜಿ ತನ್ನ ವಿದ್ಯಾಭ್ಯಾಸ ಮುಗಿದ ಕೂಡಲೇ ಹೆಸರಾಂತ ಗಣಿತಜ್ಞ ಜಾನ್‌ನೇಪಿಯರ್‌ನ ಜೀವನ ಚರಿತ್ರೆಗೆ ಅಗತ್ಯವಾದ ಮಾಹಿತಿ ಸಂಗ್ರಹಿಸಲು ಭಾರತಕ್ಕೆ ಬರಬೇಕಾಯಿತು.
ನೇಪಿಯರನ ಜೀವನ ಚರಿತ್ರೆ ಬರೆಯುತಿದ್ದವರು ಫ್ರಾನ್ಸಿಸ್. ಅವರು ಭಾರತದಲ್ಲಿನ ಲಘು ಗಣಿತ, ಖಗೋಳ ಶಾಸ್ತ್ರ ಮತ್ತು, ರೇಖಾಶಾಸ್ತ್ರಗಳ ವಿವರ ಸಂಗ್ರಹಿಸಲು ಮೆಕೆಂಜಿಯನ್ನು ಭಾರತಕ್ಕೆ ಕಳುಹಿಸಿದರು.
ಅದಕ್ಕಾಗಿ ಭಾರತಕ್ಕೆ ಬಂದ ಮೆಕೆಂಜಿ ಮದ್ರಾಸಿನ ಗವರ್ನರನ ಹೆಂಡತಿಯಾದ ನೇಪಿಯರ್‌ನ ಸಹೋದರಿಯ ಸಹಾಯದಿಂದ ಮಾಹಿತಿ ಸಂಗ್ರಹಕ್ಕೆ ಮುಂದಾದರು.
ದಕ್ಷಿಣ ಭಾರತದಲ್ಲಿ ಗಣಿತ ಶಾಸ್ತ್ರಕ್ಕೆ ಹೆಸರಾದ ಕುಂಭಕೋಣಂ, ಚಿದಂಬರಂ, ಮಧುರೈ ಮೊದಲಾದ ಸ್ಥಳಗಳಲ್ಲಿನ ವಿದ್ವಾಂಸರನ್ನು ಸಂಪರ್ಕಿಸುತ್ತಾರೆ.
ಆಗ ಅವರಿಗೆ ಸಂಪರ್ಕ ಸಮಸ್ಯೆ ಎದುರಾಯಿತು. ಮೆಕೆಂಜಿಗೆ ಸ್ಥಳೀಯ ಭಾಷೆ ಬಾರದು, ವಿದ್ವಾಂಸರಿಗೆ ಇಂಗ್ಲಿಷ್ ಭಾಷೆ ತಿಳಿಯದು.
ಆಗ ಅವರಿಗೆ ಭಾಷಾಂತರಕಾರರ ಅಗತ್ಯಬಿದ್ದಿತು ಆಗ ಅವರಿಗೆ ನೇಮಕವಾದವರೇ ಕಾವಲಿ ವೆಂಕಟ ಬೋರಯ್ಯ.
ಕಾವಲಿ ವೆಂಕಟ ಬೋರಯ್ಯನವರಿಗೆ ಇಂಗ್ಲಿಷ್,ಸಂಸ್ಕೃತ ಮತ್ತು ಸ್ಥಳೀಯ ಭಾಷೆಗಳಾದ ತೆಲುಗು, ಕನ್ನಡ ಭಾಷೆಗಳ ಪರಿಚಯ ಚೆನ್ನಾಗಿಯೇ ಇತ್ತು.
ಇವರ ಸಹಾಯದಿಂದ ಮಾಹಿತಿ ಸಂಗ್ರಹದ ಕೆಲಸ ಸುಗಮವಾಯಿತು ಅವರಿಬ್ಬರ ಈ ಸಂಬಂಧ ಮುಂದೆ ಬಹು ವರ್ಷದವರೆಗೆ ಮುಂದುವರಿಯಿತು.
ಆದರೆ ಕೆಲಸ ಶುರುಮಾಡಿದ ಕೆಲವೇ ತಿಂಗಳಲ್ಲಿ ಪ್ರಾಯೋಜಕರು ನಿಧನರಾದ್ದರಿಂದ ಮೆಕೆಂಜಿಯ ಪರಿಸ್ಥಿತಿ ಬಿಗಡಾಯಿಸಿತು.
ಅನಿವಾರ್ಯವಾಗಿ ಬೇರೆ ನೌಕರಿ ಹುಡಕಿಕೊಳ್ಳಬೇಕಾಯಿತು ಈಸ್ಟ್ ಇಂಡಿಯಾ ಕಂಪನಿಯ ಕಚೇರಿಯನ್ನು ಸಂಪರ್ಕಿಸಿದರು.
ಸೈನ್ಯದಲ್ಲಿ ಕಿರಿಯ ಅಧಿಕಾರಿಯ ಹುದ್ದೆ ದೊರೆಯಿತು,ಚಿಕ್ಕ ಅಧಿಕಾರಿಯಾಗಿ ಸೇರಿ ಕರ್ನಲ್ ಹುದ್ದೆಯವರೆಗೆ ಏರಿದರು.
ದೇಶೀಯ ರಾಜರ ವಿರುದ್ಧದ ಅನೇಕ ಯುದ್ಧgಳಲ್ಲಿ ಭಾಗವಹಿಸಿದರು ಅದರಲ್ಲೂ ಟಿಪ್ಪುಸುಲ್ತಾನರ ಜೊತೆಗಿನ ನಾಲ್ಕನೆ ಮೈಸೂರು ಯುದ್ದದಲ್ಲಿ ತನ್ನ ನಿಷ್ಠೆ ಮತ್ತು ಸಾಹಸದಿಂದ ಕಂಪನಿಯ ಮೆಚ್ಚುಗೆ ಗಳಿಸಿದರು.
ಯುದ್ಧ ಮುಗಿದ ನಂತರ ಶತೃಗಳಿಂದ ವಶಪಡಿಸಿಕೊಂಡ ಪ್ರದೇಶದದ ಸಮೀಕ್ಷಾ ಕಾರ್ಯಕ್ಕೆ ನೇಮಕವಾದರು.
ಮೆಕೆಂಜಿ ಸೇವೆಯಲ್ಲಿ ಪ್ರಧಾನವಾಗಿ ಕಂಡು ಬರುವುದು ಕೈಫಿಯತ್ತುಗಳು.
ಸರ್ವೆಯರ್ ಆಗಿ ನೇಮಕ
ಬದಲಾಯಿಸಿ
ಮೆಕೆಂಜಿ 1783 ರಿಂದ 1821ರ ವರೆಗೆ 38 ವರ್ಷ ಭಾರತದ ವಿವಿಧ ಪ್ರಾಂತ್ಯಗಳನ್ನು ಸುತ್ತಿ ಸರ್ವೇಕ್ಷಣ ಪರಣಿತನೆನಿಸಿದರು.
ಸುಮಾರು 79 ನಕ್ಷೆಗಳನ್ನು ರಚಿಸಿದರು ಅವರ ಕಾರ್ಯ ವೈಖರಿ ಮೆಚ್ಚಿದ ಕಂಪನಿಯು ಅವನ್ನು ಭಾರತದ ಪ್ರಥಮ ಸರ್ವೇಯರ್ ಜನರಲ್ ಆಗಿ ನೇಮಕಮಾಡಿತು.
ಮೆಕೆಂಜಿ ಬರಿ ಭೂಮಾಪನ ಅಧಿಕಾರಿಯಾಗಿದ್ದರೆ ಸಾವಿರಾರು ಅಧಿಕಾರಿಗಳಲ್ಲಿ ಒಬ್ಬರಾಗುತ್ತಿದ್ದರು ಇತಿಹಾಸದಲ್ಲಿ ಅವರ ಹೆಸರು ಅಜರಾಮರವಾಗುತ್ತಿರಲಿಲ್ಲ.
ಅವರು ಬರಿ ಭೂಮಿಯನ್ನು ಮೋಜಣಿ ಮಾತ್ರ ಮಾಡದೆ ಅಲ್ಲಿನ ಜನ ಜೀವನವನ್ನು ದಾಖಲೆ ಮಾಡಿದರು.
ಅಲ್ಲಿನ ಪ್ರತಿ ಊರಿನ ಜನರ ಆಚಾರ-ವಿಚಾರ, ಜಾತಿ -ಜನಾಂಗ, ನಂಬಿಕೆ ಆಚರಣೆ, ಇತಿಹಾಸ - ಐತಿಹ್ಯ ಅಂದಂದೇ ಸ್ಥಳಿಯ ಲಿಪಿಕಾರರಿಂದ ಬರೆಸಿ ದಾಖಲೆ ಮಾಡಿ ಸಂಗ್ರಹಿಸಿದರು.
ಕಾಗದದ ಬಳಕೆ ಅದೇ ತಾನೆ ಪ್ರಾರಂಭವಾಗಿತ್ತು ತಮ್ಮ ಸಹಾಯಕ್ಕಾಗಿ ಅಲ್ಲಿನ ಜನ ಹೇಳಿದುದನ್ನು ಬರೆದುಕೊಳ್ಳಲು ದೇಶೀಯ ಭಾಷೆ, ಸಂಸ್ಕೃತ ಮತ್ತು ಇಂಗ್ಲಿಷ್ ಬಲ್ಲ ವಿದ್ಯಾವಂತ ಬ್ರಾಹ್ಮಣ ನೌಕರರನ್ನು ನೇಮಿಸಿಕೊಂಡರು.
ಹಗಲಿನಲ್ಲಿ ಸರ್ವೆ ಕೆಲಸ ಮುಗಿಸಿಕೊಂಡು ರಾತ್ರಿ ಡೇರೆಯಲ್ಲಿ ಕುಳಿತು ಹಲವಾರು ವಿದ್ಯಾವಂತ ಸಹಾಯಕರ ಒಡಗೂಡಿ ಕೈಫಿಯತ್ತುಗಳ ಬರವಣಿಗೆಗೆ ತೊಡಗುತ್ತಿದ್ದರು.
ಅವರಿಗೆ ತನ್ನ ವೇತನದಿಂದಲೇ ಸಂಬಳ ನೀಡಿ ದಾಖಲೆ ಕಾರ್ಯಮುಂದುವರೆಸಿದರು.
ಆ ದಾಖಲೇಗಳೇ ಅತ್ಯಮೂಲ್ಯವಾವಾದ, ವಿಶಿಷ್ಟವಾದ ಐತಿಹಾಸಿಕ ಆಕರಗಳಾದ ಕೈಫಿಯತ್‌ಗಳೆನಿಸಿವೆ.
ಮೆಕೆಂಜಿಯ ಪ್ರಕಾರ #ಕೈಫಿಯತ್ ಎಂದರೆ ಸ್ಥಳ ಪುರಾಣ,ಐತಿಹ್ಯ,ಜಾನಪದ ಮತ್ತು ಇತಿಹಾಸಗಳನ್ನು ಒಳಗೊಂಡ ಅದರ ಮೂಲ ಸ್ಥಳೀಯ ಅಧಿಕಾರಿಗಳು, ಪಟೇಲರು,ಶಾನುಭೋಗರು,ಪಂಡಿತರು ಸ್ವತಃ ಬರೆದು ಕೊಟ್ಟಿದ್ದು.
ಇದುವರೆಗೆ ಇತಿಹಾಸದ ಆಧಾರ ಶಾಸನಗಳು, ನಾಣ್ಯ ಮತ್ತು ಅದಕ್ಕೆ ಪೂರಕವಾಗಿ ಕೆಲಮಟ್ಟಿಗೆ ಸಾಹಿತ್ಯವಿರುವ ತಾಳೆಯೋಲೆ.
ಮೆಕಂಜಿಯು 1790-1821ರವರೆಗೆ ಸಂಗ್ರಹಿಸಿದ, ಬರೆಸಿದ ಪ್ರಾಚೀನ,ಮಧ್ಯಕಾಲೀನ ಸಮಕಾಲೀನ ಭೌಗೋಲಿಕ, ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಧಾರ್ಮಿಕ ಸ್ಥೀತಿಗತಿಗಳ ನೈಜ ಚಿತ್ರಣವಾಗಿದೆ.
ಹೀಗೆ ಸಂಗ್ರಹಿಸುವಾಗ ಅವರಲ್ಲಿ ಮಾನವ ಶಾಸ್ತ್ರಜ್ಞ, ಸಮಾಜ ಶಾಸ್ತ್ರಜ್ಞ ಮತ್ತು ಇತಿಹಾಸಕಾರರ ಮೂರೂ ಗುಣಗಳೂ ಅವರಲ್ಲಿ ಮುಪ್ಪರಿಗಂಡಿದ್ದವು.
ಈ ದಾಖಲೆಗಳ ಅಧ್ಯಯನ ಇಂದು ನಾಲ್ಕಾರು ವಿದ್ವಾಂಸರಿಂದ ಮಾತ್ರ ಆಗಿದೆ.
ಇತಿಹಾಸ ವಿಚಾರಗಳ ಸಂಗ್ರಹ
ಬದಲಾಯಿಸಿ
ಮೆಕೆಂಜಿಯು ಸುಮಾರು 4200 ಮೈಲು ಸುತ್ತಾಡಿ ಸಂಗ್ರಹಿಸಿದ 2070 ಕೈಫಿಯತ್‌ಗಳ ರಚನೆಗೆ ಕಾರಣರಾದರು.
ಕೈಫಿಯತ್‌ಗಳು ವಿಜಯನಗರ,ಹೊಯ್ಸಳ ಅರಸರ, ಹಾಗೂ ಅನೇಕ ಕಿರಿಯ ಸಂಸ್ಥಾನಿಕರ ವಿವರ ಸಂಗ್ರಹಿಸಲಾಯಿತು.
ಕಂಪಿಲ, ಮುಸ್ಲಿಂ,ಮರಾಠ ಮತ್ತು ವಿಜಯನಗರದ ರಾಜ #ಕೆಳದಿ ಮತ್ತು ಇತರೆ ಮನೆತನದ ಇತಿಹಾಸದ ಮೇಲೆ ಅವು ಬೆಳಕು ಚೆಲ್ಲುತ್ತವೆ.
ಅವರ ಗಮನ ಬರಿ ಅರಸರ, ರಾಜರ ಮತ್ತು ಇನಾಂದಾರ ಮತ್ತು ಜಾಗೀರುದಾರರ ಮಾಹಿತಿ ಸಂಗ್ರಹಕ್ಕೆ ಮಾತ್ರ ಮೀಸಲಾಗಿರಲಿಲ್ಲ ಜನಸಾಮಾನ್ಯರ ನಡೆ ನುಡಿ, ಆಚಾರ ವಿಚಾರ,ವೃತ್ತಿ ಉದ್ಯೋಗ, ಮನರಂಜನೆ ಜೀವನ ವಿಧಾನವೂ ಅವರಿಗೆ ಅತಿ ಮುಖ್ಯವಾಗಿತ್ತು.
ಆದುದರಿಂದಲೇ #ಚನ್ನಯ್ಯಕುಲದ ಕೈಫಿಯತ್ತು, ಜಾತಿರಿವಾಜು ಕೈಫಿಯತ್ತು, #ವಕ್ಕಲಿಗರಕೈಫಿಯತ್ತು ಮೊದಲಾದ ಹಲವು ಕೈಫಿಯತ್ತು ಅಂದಿನ ಸಾಮಾಜಿಕ, ಧಾರ್ಮಿಕ ಜೀವನದಮೇಲೆ ಬೆಳಕು ಚೆಲ್ಲುತ್ತವೆ.
ಸೂಪಶಾಸ್ತ್ರ-ಬಾಣ ಬಿರುಸು ಕ್ರಮ-ಶಿಲ್ಪಶಾಸ್ತ್ರ-ಧನ್ವಂತರಿ ನಿಘಂಟು-ವೈದ್ಯ ನಿಘಂಟು ಸಂಸ್ಕೃತದಲ್ಲಿದ್ದರೆ ಅದರ ಕನ್ನಡ ಟೀಕೆಯೂ ಇತ್ತು.
ವೈದ್ಯಕೀಯದಲ್ಲಿ ಬಳಸುವ ಗಿಡ ಮೂಲಿಕೆಗಳ ಆಕಾರಾದಿ ಪಟ್ಟಿ -ಜ್ಯೋತಿಷ್ಯ ಸಂಗ್ರಹ, ಶಕುನ ಶಾಸ್ತ್ರ,ಹಾಲಕ್ಕಿ ಶಕುನ,ಗಣಿತ ಸಂಗ್ರಹ- ಭೂಮಿತಿ, ತತ್ವಶಾಸ್ತ್ರ, ವೈದ್ಯ, ಜ್ಯೋತಿಷ್ಯ, ವಿವಿಧ ವೃತ್ತಿಗಾರ ಕೆಲಸದ ವಿಧಾನ, ಬಳೆ ಮಾಡುವ ವಿಧಾನ-ಬಣಜಿಗರ ಪೂರ್ವೋತ್ತರ, ತಾವು ಭೇಟಿ ನೀಡಿದ ಸ್ಥಳಗಳ ವರ್ಣನೆ, ಅಲ್ಲಿನ ಸಸ್ಯಸಂಪತ್ತು ಮತ್ತು ಪ್ರಾಣಿವೈವಿಧ್ಯದ ವಿವರ, ಬಿದುನೂರ ಮೃಗಗಳು- ಸ್ಥಳ ವರ್ಣನೆ ಅಲ್ಲಿ ದೊರೆವ ಶಾಸನಗಳ ಪಟ್ಟಿ, ಶಾಸನಗಳು, ಶಾಸನ ಪ್ರತಿಗಳು, ರಾಮಾಯಣ, ಮಹಾಭಾರತ, ಭಾಗವತ ಹಲವು ಹನ್ನೊಂದು ಕೃತಿಗಳ ಅನೇಕ ಪ್ರತಿಗಳನ್ನು ಅಲ್ಲಿ ಕಾಣಬಹುದು.
ಜೊತೆಗೆ ರಾಜವಂಶೀಯರ ವಿವರ, ಗ್ರಾಮಚರಿತ್ರೆ, ಆಡಳಿತ ಸಂಬಂಧಿ ದಾಖಲೆಗಳನ್ನೂ ಬರೆಸಿದ ಅವರ ಸಹಾಯಕರಾದ ದೇಶೀಯ ವಿದ್ವಾಂಸರು ಹಲವುದಾಖಲೆಗಳ ಇಂಗ್ಲಿಷ್ ಅನುವಾದವನ್ನು ಮಾಡಿದರು.
ಅದರ ಜೊತೆಯಲ್ಲಿಯೇ ಅಲ್ಲಿರುವ ವಿಶೇಷ ವಿಗ್ರಹಗಳು, ಚಲಾವಣೆಯಲ್ಲಿರುವ ನಾಣ್ಯಗಳು ಹೀಗೆ ಮೆಕೆಂಜಿ ಮುಟ್ಟದ ಪ್ರಾಚ್ಯ ವಸ್ತುವೇ ಇಲ್ಲ ಎನ್ನಬಹುದು.
ಮೆಕೆಂಜಿಯು ಹೆಚ್ಚು ಕಡಿಮೆ ಈಗಿನ ಗೆಜೆಟಿಯರ್‌ಗಳ ಕೆಲಸವನ್ನೇ ಮಾಡಿದರು.
ಯಾವುದೇ ಪ್ರದೇಶದ ಸರ್ವೆ ಮಾಡಿದರೆ ಅಲ್ಲಿನ ಎಲ್ಲ ಮಾಹಿತಿಯೂ ದಾಖಲುಮಾಡಿರುವುದರಿಂದ ಒಂದು ರೀತಿಯಲ್ಲಿ ವಿಶ್ವ ಕೋಶವೇ ನಿರ್ಮಿಸುತ್ತಿದ್ದರೆನ್ನಬಹುದು.
ವಿವಿಧ ಕ್ಷೇತ್ರಗಳಲ್ಲಿ ಮೆಕೆಂಜಿ ಸೇವೆ ಬದಲಾಯಿಸಿ
ಕರ್ನಲ್‌ಮೆಕೆಂಜಿ ಲಿಪಿಕಾರರರೊಂದಿಗೆ ಈ ಕೈಫಿಯತ್ತುಗಳು ವಿಶೇಷವಾಗಿ ಧಾರ್ಮಿಕ ಕೇಂದ್ರಗಳ ದೈನಂದಿನ ಆಚರಣೆಯ ವಿವರವನ್ನು ಕೊಡುತ್ತವೆ.
ಪೇಜಾವರ, ಪುತ್ತಿಗೆ, ಮೊದಲಾದ ಅಷ್ಟ ಮಠಗಳ ಕೈಫಿಯತ್ತುಗಳಲ್ಲಿ ಅಲ್ಲಿ ದೈನಂದಿನ ಆಚರಣೆಯ ಮಾಹಿತಿ ದೊರೆಯುವುದು.
ಮೆಕಂಜಿಯವರ ಸಂಗ್ರಹದಲ್ಲಿ ಕನ್ನಡ, ತುಳು, ಮರಾಠಿ, ತೆಲುಗು, ತಮಿಳು ಮೊದಲಾದ 14 ಭಾಷೆಗಳ ಮತ್ತು 17 ಲಿಪಿಗಳಲ್ಲಿ ಕೈಫಿಯತ್ತುಗಳು ಇವೆ.
ಅವರು ಬಹುಬಾಷೆ ಬಲ್ಲವರಾಗಿರುವುದು ಇದರಿಂದ ವಿದಿತವಾಗಿತ್ತದೆ.
ಇಪ್ಪತ್ತಕ್ಕೂ ಹೆಚ್ಚುವರ್ಷದ ದುಡಿಮೆಯ ಫಲವಾಗಿ 2000ಕ್ಕೂ ಮಿಕ್ಕಿ ಶಾಸನಗಳು, ನಾಣ್ಯಗಳು, ಶಾಸನ ಪ್ರತಿ ವಿಗ್ರಹಗಳ ಶೋಧನೆ ಮತ್ತು ಸಂಗ್ರಹವಾಯಿತು.
1807ರಲ್ಲಿ ಏಷಿಯಾಟಿಕ್ ರಿಸರ್ಚ್ ನ ಸಂಚಿಕೆಯಲ್ಲಿನ 9ನೆಯ ಸಂಪುಟದಲ್ಲಿ ಬರೆದ ಲೇಖನಗಳು ದಕ್ಷಿಣ ಭರತದ ರಾಜವಂಶಗಳ ಕುರಿತಾದ ಬಹುಮುಖ್ಯ ದಾಖಲೆಯಾಗಿದೆ.
#ಬಖೈರುಗಳು ಎಂದರೆ ಸಂಭಾಷಣೆಗಳ ದಾಖಲೆ, ಟಿಪ್ಪುಸುಲ್ತಾನರು ಆಂಗ್ಲ ಅಧಿಕಾರಿಯೊಡನೆ ನಡೆಸಿದ 587 ಪುಟಗಳ ಸಂಭಾಷಣೆ ಈ ಸಂಗ್ರಹದಲ್ಲಿದೆ.
ಮರಾಠ ಮನೆತನ, ಸಮಕಾಲಿನರ ನೆನಪಿನ ದಾಖಲೆ, ಚೋಳರಾಜಾಂಚೆಕಥಾ, ಘೋರ್ಪಡೆಯಾಂಚಿ ಕೈಫಿಯತ್ತು, ಲೋಹಾಚಲ ಮಹಾತ್ಮೆಗಳು ದಕ್ಷಿಣ ಭಾರತದ ಇತಿಹಾಸದ ಮಹತ್ವದ ಆಕರ ಸಾಮಗ್ರಿಗಳಾಗಿವೆ.
ಚರಿತ್ರೆ ಹೇಳುವ ಅವರ ಟಿಪ್ಪಣಿಗಳು ಅಗಾಧ ಕಾರ್ಯದ ಮೇಲೆ ಬೆಳಕು ಬೀರುವುದು.
ಕಡಿಮೆ ಕಾಲದಲ್ಲಿ ಶ್ರೇಷ್ಠ ಸಾಧನೆ ಮಾಡಿದ ಹಿರಿಮೆ ಅವರದು.
1800ರಿಂದ 1821ರ ಮಧ್ಯದ ಅವಧಿಯಲ್ಲಿ 8000 ಶಾಸನ,ಸುಮಾರು 1500 ಹಸ್ತಪ್ರತಿಗಳು, 6218 ವಿಗ್ರಹಗಳು 106ನಾಣ್ಯಗಳು ಮತ್ತು ಸಾವಿರಾರು ಶಾಸನ ಪ್ರತಿಗಳನ್ನು ಸಂಗ್ರಹಿಸಲಾಯಿತು.
ಈ ಎಲ್ಲ ಅಗಾಧ ಕೆಲಸವು ವೈಜ್ಞಾನಿಕ ಉಪಕರಣಗಳು ಇಲ್ಲದ, ಆಧುನಿಕ ಸಾರಿಗೆ ಸಂಪರ್ಕವಿಲ್ಲದ ಕಾಲದಲ್ಲಿ ಮಾಡಲಾಗಿರುವುದು ಅವರ ಶ್ರಮ, ಶ್ರದ್ಧೆ ಮತ್ತು ಬದ್ಧತೆಯ ಸೂಚಕವಾಗಿದೆ.'
ಕರ್ನಲ್‌ಮೆಕೆಂಜಿ ಬಹು ಭಾಷಾವಿದ್ವಾಂಸರು ಅದರಿಂದಲೇ ಅವರ ಸಂಗ್ರಹದಲ್ಲಿ ವಸ್ತುಗಳ ವೈವಿದ್ಯತೆ ಅಪಾರ,ದಾಖಲೆಗಳಂತೂ ಹಲವು ಹತ್ತು ಭಾಷೆಗಳಲ್ಲಿವೆ.
ಅವರ ಸಂಗ್ರಹದಲ್ಲಿನ ದಾಖಲೆಗಳ ಸೂಚಿ 1893ರಲ್ಲಿ ಮದ್ರಾಸಿನಲ್ಲಿ ಪ್ರಾರಂಭವಾಯಿತು.
ಅದು 1952ರ ವರಗೆ ಮುಂದುವರೆಯಿತು ಎಂದರೆ ಅದರ ಅಗಾಧತೆಯ ಅರಿವಾಗುವುದು.
ಮೆಕೆಂಜಿ ಸಂಗ್ರಹಗಳ ವಿವರವನ್ನು ಅರಿಯಲು ಅನೇಕ ವಿದ್ವಾಂಸರು ವರ್ಷಾನುಗಟ್ಟಲೆ ಶ್ರಮಿಸುತ್ತಿದ್ದಾರೆ.
ಅವರ ದುಡಿಮೆಯ ಫಲವಾಗಿ ಸಂಪಾದಿಸಿದ ಏಳು ಸಂಪುಟಗಳು ಈಗಾಗಲೇ ಹೊರ ಬಂದಿವೆ.
ಕುಪ್ಪುಸ್ವಾಮಿ, ಶಂಕರರಾವ್, ಟಿ.ವಿ.ಚಂದ್ರಶೇಖರ ಶಾಸ್ತ್ರಿ ಮತ್ತು ಇತರರು ಅವಿರತ ದುಡಿದಿದ್ದಾರೆ.
ಆದರೆ ಇನ್ನೂ ಅವರ ಸಂಗ್ರಹದ ಹಲವು ಆಯಾಮಗಳ ಅಧ್ಯಯನ ಆಗ ಬೇಕಿದೆ.
ಕನ್ನಡದ ವಿವಿಧ ಕೃತಿಗಳನ್ನು ಪುರಾಣ, ಕಾವ್ಯಕಥನ, ಶಾಸ್ತ್ರ, ಜೈನ ವಾಙ್ಮಯವೆಂದು ವಿಂಗಡನೆ ಮಾಡಿದ್ದಾರೆ.
ಅವರ ಸಂಗ್ರಹದಲ್ಲಿನ ಬಾಣ ಬಿರುಸು ಕಾರ್ಯಕ್ರಮ ಮತ್ತು ಸೂಪಶಾಸ್ತ್ರ ಎಂಬ ಕೃತಿಗಳು ಇವೆ.
ಅವುಗಳು ಅನನ್ಯವಾಗಿದ್ದು ಬೇರೆ ಇನ್ನಾವ ಭಾಷೆಯಲ್ಲೂ ಅವು ದೊರೆಯುವುದಿಲ್ಲ ಎಂದರೆ ಅವರದ ಸಂಗ್ರಹದ ಸೂಕ್ಷ್ಮತೆಯ ಮಹತ್ವದ ಅರಿವಾಗುವುದು.
ಅದರಿಂದ ಮೆಕಂಜಿಯ ಕನ್ನಡ ಇತಿಹಾಸ ಮತ್ತು ಸಾಹಿತ್ಯಕ್ಕೆ ಕೊಡುಗೆಯ ಅಗಾಧತೆ ಅರಿವಾಗುವುದು.
ಅವರ ಕೊಡುಗೆ ಬರಿ ದಕ್ಷಿಣ ಭಾರತಕ್ಕ ಮಾತ್ರ ಸೀಮಿತವಾಗಿರಲಿಲ್ಲ ಸೈನಿಕ ಸೇವೆಗೆಂದು ಎರಡು ವರ್ಷ ಜಾವಾಕ್ಕೆ ಮತ್ತು ಬರ್ಮಕ್ಕೆ ಹೋದಾಗ ವೃತ್ತಿಯ ಜೊತೆ ತನ್ನ ಪ್ರವೃತ್ತಿಯನ್ನು ಯಶಸ್ವಿಯಾಗಿ ನಿಭಾಯಿಸಿ ಅಲ್ಲಿನ ಪುರಾತತ್ವ ವಸ್ತುಗಳನ್ನು ತನ್ನ ಸಂಗ್ರಹಕ್ಕೆ ಸೇರ್ಪಡೆ ಮಾಡಿದ್ದರು.
"ಭಾರತದ ನಕ್ಷೆ ನಿರ್ಮಿಸಿದ ಮೊದಲ ವ್ಯಕ್ತಿ "ಎಂಬ ಹೆಗ್ಗಳಿಕೆಯ ಜೊತೆ ದಕ್ಷಿಣ ಭಾರತದ ಅದರಲ್ಲೂ ಕರ್ನಾಟಕದ ಪುರಾತತ್ವ ಸಂಪತ್ತನ್ನು ಸಂಶೋಧಿಸಿ ಅನಾವರಣಮಾಡಿದ ಏಕಮೇವಾದ್ವೀತೀಯ ಸಂಶೋಧಕರೆಂಬ ಹಿರಿಮೆಗೂ ಪಾತ್ರರಾದರು.
ಮೆಕೆಂಜಿ ಕಲೆಕ್ಷನ್ 1928 ರಲ್ಲಿ ಮೊದಲ ಬಾರಿಗೆ ಪ್ರಕಟವಾಯಿತು.
ಅದು ಹಸ್ತ ಪ್ರತಿಗಳು ಸಾಹಿತ್ಯ, ಇತಿಹಾಸ, ಪುರಾತತ್ವ ವಸ್ತುಗಳು ಮತ್ತು ಇತರೆ ಐತಿಹಾಸಿಕ ಆಕರಗಳ ವರ್ಣನಾತ್ಮಕ ಕ್ಯಾಟಲಾಗ್,-ಎಚ್‌ಎಚ್ ವಿಲ್ಸನ್‌ನಿಂದ ಪ್ರಫ್ರಥಮವಾಗಿ ಕಲ್ಕತ್ತಾದಲ್ಲಿ ಪ್ರಕಟವಾಯಿತು ನಂತರ ಆ ಕಾರ್ಯ ಚೆನ್ನೈನಲ್ಲಿ ಮುಂದುವರಿಯಿತು.
ಬ್ರಿಟಿಷ್‌ಮ್ಯೂಜಿಯಂ ಮತ್ತು ಲೈಬ್ರರಿಯಲ್ಲಿರುವ ಮೆಕೆಂಜಿಯ ಸಂಗ್ರಹವು ಇಂದಿಗೂ ಸಂಶೋದಕರ ಪಾಲಿಗೆ ಅಮೂಲ್ಯ ನಿಧಿ.
ತೆಲುಗು, ಒರಿಯಾ, ಮರಾಠಿ, ಹಿಂದಿ, ಅರಾಬಿಕ್, ತಮಿಳು ಭಾಷೆಯ, ಸ್ಥಳೀಯ ಇತಿಹಾಸ, ಜೀವನ ಚರಿತ್ರೆ ಅಧ್ಯಯನ ಮಾಡುವವರು ಮೊದಲು ಮೆಕೆಂಜಿಯನ್ನು ನೆನೆಯಬೇಕಾಗಿದೆ.
"ಭಾರತದ ಭೂಪಟವನ್ನು ರಚಿಸಿದ ವ್ಯಕ್ತಿ' ಎಂದು ಗುರುತಿಸುವರು ಮೆಕೆಂಜಿ ತನ್ನ ಕರ್ಮಭೂಮಿಯಾದ ಭಾರತಲ್ಲೇ 1821ರಲ್ಲಿ ಕೊನೆಯುಸಿರು ಎಳೆದರು.
ಕಲಕತ್ತಾದಲ್ಲಿನ ಸೌತ್‌ಪಾರ್ಕ ರಸ್ತೆಯ ಸ್ಮಶಾನದಲ್ಲಿ ಅವನ ಸಮಾಧಿ ಮಾಡಲಾಯಿತು.
ಅವರ ಪ್ರಾಚ್ಯವಸ್ತುಗಳ ಸಂಗ್ರಹ ಅವರ ಮಡದಿಗೆ ಸೇರಿತು ಅದನ್ನು ಬ್ರಿಟಷ್ ಸರ್ಕಾರ ಬರಿ 1೦,೦೦೦ ಪೌಂಡು ಬೆಲೆ ನೀಡಿ ಖರೀದಿಸಿತು ಅವುಗಳಲ್ಲಿ ಬಹುಪಾಲನ್ನು ಇಂಗ್ಲೆಂಡಿಗೆ ಸಾಗಿಸಿತು.
ಅವರ ಸಂಗ್ರಹದ ಹೆಚ್ಚಿನ ದಾಖಲೆಗಳು, ಹಸ್ತಪ್ರತಿಗಳು, ಕಲಾಕೃತಿಗಳು ಈಗ ಬ್ರಿಟಿಷ್‌ಮ್ಯೂಜಿಯಂ ಮತ್ತು ಬ್ರಿಟಿಷ್‌ಲೈಬ್ರರಿಯ ಓರಿಯಂಟಲ್ ಮತ್ತು ಇಂಡಿಯಾ ಆಫೀಸ್‌ನಲ್ಲಿವೆ.
ಸ್ವಲ್ಪಭಾಗ ಚೆನ್ನೈನ ಸರ್ಕಾರಿ ಪೌರಾತ್ಯ ಹಸ್ತಪ್ರತಿ ಲೈಬ್ರರಿಯಲ್ಲೂ ಇವೆ.
ರಾಜ್ಯ ಪುನರ್‌ವಿಂಗಡಣೆ ನಂತರ ಅವನ್ನು ಮೈಸೂರಿನ ಕನ್ನಡ ಅಧ್ಯಯನ ಸಂಸ್ಥೆಗೆ ವರ್ಗಾಯಿಸಲಾಗಿದೆ.
ಪುರಾತತ್ವ ಇಲಾಖೆ ಧಾರವಾಡದ ಕನ್ನಡ ಅಧ್ಯಯನ ಸಂಸ್ಥೆಗಳಲ್ಲಿ ಅವುಗಳ ಪ್ರತಿಗಳು ಇವೆ.
ಮೆಕೆಂಜಿಯ ಪುರಾತತ್ವ ವಸ್ತುಗಳ ಸಂಗ್ರಹ ಮಧ್ಯಕಾಲೀನ ಇತಿಹಾಸ ಆಕರಗಳ ಸಾಗರವೆನ್ನಬಹುದು.
ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತದ ಹಾಗೂ ಬರ್ಮಾ ಮತ್ತು ಜಾವಗಳ ಇತಿಹಾಸ, ಸಾಹಿತ್ಯ,ಮಧ್ಯಕಾಲೀನ ಜನಜೀವನ ಮತ್ತು ರಾಜಕೀಯ ಅಧ್ಯಯನ ಮಾಡುವವರು ಮೆಕೆಂಜಿಯನ್ನು ಮರೆಯುವ ಮಾತಿಲ್ಲ.ಮೆಕೆಂಜಿಯ ಸಂಗ್ರಹವೇ ಅವರಿಗೆ ಅತಿ ಮುಖ್ಯ ಆಕರ.
Comments
Post a Comment