#ಡಾಕ್ಟರ್_ಎಂ_ಸಿ_ಮೋದಿ_ಅವರ_106ನೆ_ಹುಟ್ಟು_ಹಬ್ಬ.
#ಮುರಿಗೆಪ್ಪ_ಚೆನ್ನಬಸಪ್ಪ_ಮೋದಿ
#ಹಳ್ಳಿ_ಹಳ್ಳಿಗಳಲ್ಲಿ_ಉಚಿತ_ನೇತ್ರ_ಚಿಕಿತ್ಸಾ_ಶಿಭಿರ_ಏರ್ಪಡಿಸಿ_ಚಿಕಿತ್ಸೆ_ನೀಡಿದವರು.
#ನಮ್ಮೂರಲ್ಲಿ_ಅವರ_ಎರೆಡು_ನೇತ್ರ_ಚಿಕಿತ್ಸಾ_ಶಿಬಿರ
#ಸ್ಥಳಿಯ_ಕನ್ನಡ_ಸಂಘ_ಏರ್ಪಡಿಸಿತ್ತು.
#DrMCModi #eyesurgeon #mahatmaghandi #birthanniversery #modihospital
ಇವತ್ತು ದಿನಾಂಕ 4-ಅಕ್ಟೋಬರ್ ಉಚಿತ ಕಣ್ಣಿನ ತಪಾಸಣಾ ಮತ್ತು ಶಸ್ತ್ರಚಿಕಿತ್ಸಾ ಶಿಭಿರ ಏರ್ಪಡಿಸಿ ಸುಮಾರು 40 ವರ್ಷ ಕಣ್ಣಿನ ಪೊರೆಯಿಂದ ದೃಷ್ಟಿ ಕಳೆದುಕೊಂಡವರಿಗೆ ಪುನಃ ದೃಷ್ಟಿ ಬರುವಂತೆ ಮಾಡುತ್ತಿದ್ದ ಡಾಕ್ಟರ್ ಎಂ.ಸಿ. ಮೋದಿ ಅವರ 109ನೇ ಹುಟ್ಟುಹಬ್ಬ.
ಡಾಕ್ಟರ್ ಎಂ.ಸಿ. ಮೋದಿ ಮಹಾತ್ಮಾ ಗಾಂದೀಜಿಯಿಂದ ಪ್ರೇರಿತರಾಗಿ ಕುಗ್ರಾಮಗಳಲ್ಲಿ ಉಚಿತವಾಗಿ ಮಾಡಿರುವ ಕಣ್ಣಿನ ಆಪರೇಷನ್ ಗಳು ಯಾರೂ ಅಳಿಸಲಾರದ ವಿಶ್ವ ದಾಖಲೆ.
ಡಾ.ಎಂ.ಸಿ. ಮೋದಿಯವರ ಕಣ್ಣಿನ ಶಸ್ತ್ರ ಚಿಕಿತ್ಸೆಯ ದಾಖಲೆ ಯಾರೂ ಮುರಿಯಲು ಸಾಧ್ಯವಿಲ್ಲ ಅದು ಸರ್ವಕಾಲಿಕ ವಿಶ್ವ ದಾಖಲೆ.
1968 ರಲ್ಲಿ ತಿರುಪತಿಯಲ್ಲಿ ಸತತ 14 ಗಂಟೆ ಕಣ್ಣಿನ ಚಿಕಿತ್ಸೆ ಮಾಡಿದ್ದರು.
ಒಂದೇ ದಿನ 833 ಜನರ ನೇತೃ ಶಸ್ತ್ರಚಿಕಿತ್ಸೆಗಾಗಿ1986 ರಲ್ಲಿ ಇವರ ಹೆಸರು ಗಿನ್ನೆಸ್ ದಾಖಲೆಯಲ್ಲಿದೆ.
ಒಮ್ಮೆಗೆ 4 ಜನರ೦ತೆ ಗ೦ಟೆಗೆ 40 ಶಸ್ತ್ರಚಿಕಿತ್ಸೆ ಮಾಡುತ್ತಿದ್ದರು.
ಇವರು ಮಾಡಿರುವ ಒಟ್ಟು ಕಣ್ಣಿನ ಶಸ್ತ್ರಚಿಕಿತ್ಸೆ 5 ಲಕ್ಷದ 79 ಸಾವಿರ, ತಪಾಸಣೆ ಮಾಡಿದ ಸಂಖ್ಯೆ 50 ಲಕ್ಷ, 45 ಸಾವಿರಕ್ಕೂ ಹೆಚ್ಚು ಹಳ್ಳಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಇವರ ಕಣ್ಣಿನ ಶಸ್ತ್ರಚಿಕಿತ್ಸೆ ಯಶಸ್ಸಿನ ಶೇಕಡವಾರು 99.5%.
ಇದಕ್ಕಾಗಿ ಇವರಿಗೆ ಬಂದ ದೇಶ ವಿದೇಶಗಳ ಪ್ರಶಸ್ತಿ ಅಸಂಖ್ಯ, ಪದ್ಮಶ್ರೀ, ಪದ್ಮಭೂಷಣ, ಹೆಲೆನ್ ಕೆಲರ್ ಹೀಗೆ ಆ ಪಟ್ಟಿ ದೊಡ್ಡದಿದೆ.
ಆದರೆ ಡಾ.ಎಂ.ಸಿ.ಮೋದಿ ಗ್ರಾಮೀಣ ಪ್ರದೇಶದ ಬಡ ಜನರ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಅವರು ಮುಂದಾಗಲು ಕಾರಣ ಮಹಾತ್ಮಾ ಗಾಂದೀಜಿ.
1942 ರಲ್ಲಿ ಮುಂಬೈನಲ್ಲಿ ನಡೆದ ಕ್ರಿಟ್ ಇಂಡಿಯಾ ಚಳವಳಿಯ ಸಮಾವೇಶದಲ್ಲಿ ಗಾಂದೀಜಿ ಪ್ರೇರಣೆಯಿಂದ ಡಾ.ಮೋದಿ ಕನಾ೯ಟಕದ ಹಳ್ಳಿಗಳ ಬಡ ಜನರ ನೇತೃ ಚಿಕಿತ್ಸೆಗೆ ತೀಮಾ೯ನ ಮಾಡುತ್ತಾರೆ.
ಪ್ರಾರಂಭದ ದಿನದಲ್ಲಿ ತಮ್ಮ ಚಿಕಿತ್ಸೆಯ ಬ್ಯಾಗ್ ನೊಂದಿಗೆ ಬಸ್ಸು, ಎತ್ತಿನಗಾಡಿ ಮತ್ತು ಸೈಕಲ್ ನಲ್ಲಿ ಹಳ್ಳಿ ತಲುಪಿ ತಮ್ಮ ಚಿಕಿತ್ಸೆ ನೀಡುತ್ತಿದ್ದರು.
ವರ್ಷಕೊಮ್ಮೆ ಕೂಡ ಇವರಿಗೆ ಇವರ ಸ್ವಂತ ಊರಿಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ.
ರೋಗಿ ದೇವತೆ -ವೈದ್ಯ ಪೂಜಾರಿ ಅನ್ನುತ್ತಿದ್ದ ಡಾ.ಮುರುಘಪ್ಪ ಚನ್ನವೀರಪ್ಪ ಮೋದಿ ಬಾಗಲಕೋಟೆ ಜಿಲ್ಲೆಯ ಬಿಳಗಿಯಲ್ಲಿ ದಿನಾಂಕ 4 - ಅಕ್ಟೋಬರ್ -1916 ರಲ್ಲಿ ಜನಿಸಿ ದಿನಾ೦ಕ 11- ನವೆಂಬರ್ -2005 ರಲ್ಲಿ ಬೆಂಗಳೂರಲ್ಲಿ ಮರಣಿಸಿದರು.
ಡಾ.ಎಂ.ಸಿ.ಮೋದಿ 89 ವಷ೯ದ ತಮ್ಮ ಸಾಥ೯ಕ ಜೀವನದಲ್ಲಿ ಸಿಂಗಲ್ ಮ್ಯಾನ್ ಆಮಿ೯ಯಾಗಿ ಸತತ 45 ವರ್ಷ ಗ್ರಾಮೀಣ ಭಾರತದ ಕಣ್ಣು ಕಾಣದ ಬಡ ಜನರಿಗೆ ದೃಷ್ಟಿ ನೀಡಿದ ಸೇವೆ ಅನನ್ಯ.
ಇಂತಹ ಮೋದಿಯವರನ್ನ ಎರೆಡು ಸಾರಿ ಆನಂದಪುರಂಗೆ ಕರೆ ತಂದು ಉಚಿತ ಕಣ್ಣಿನ ಚಿಕಿತ್ಸೆ ಮಾಡಿಸಿದ ಹಿರಿಮೆ ಆನಂದಪುರಂನ ಕನ್ನಡ ಸಂಘದ್ದು.
ಆನಂದಪುರಂನಲ್ಲಿ ನಡೆದ ಡಾಕ್ಟರ್ ಎಂ.ಸಿ. ಮೋದಿ ಅವರ ಉಚಿತ ಕಣ್ಣಿನ ಚಿಕಿತ್ಸಾ ಶಿಬಿರದ ಸಮಿತಿಯ ಉಪಾದ್ಯಕ್ಷನಾಗಿ ಸೇವೆ ಮಾಡಿದ ಹೆಮ್ಮೆ ನನಗಿದೆ.
ಡಾ. ಮೋದಿಯವರ ಕೈ ಚಳಕದ ನೇತೃ ಚಿಕಿತ್ಸೆ ಕಣ್ಣಾರೆ ನೋಡುವ ಸದವಕಾಶ ಕೂಡ ನನಗೆ ಸಿಕ್ಕಿದ್ದು ನನ್ನ ಪುಣ್ಯ.
ಅವರ ಬಲಕೈ ಹಸ್ತ ಮತ್ತು ಬೆರಳು ಸ್ಪಶಿ೯ಸಿ ಇದು ಅಸಾಧ್ಯ ಕೈಗುಣದ ಹಸ್ತ ಅಂದಾಗ ಡಾ.ಮೋದಿ ನಗುತ್ತಾ ತಮ್ಮ ಎಡ ಗೈ ಎತ್ತಿ ಹಿಡಿದು " ನಾನು ಎಡಚ, ನನ್ನ ಎಡಗೈಯಲ್ಲೇ ನಾನು ಆಪರೇಷನ್ ಮಾಡುವುದು " ಎಂದಾಗ ನಾವೆಲ್ಲ ದಿಗ್ಬ್ರಾಂತರಾಗಿದ್ದೆವು.
ಇವತ್ತು 4 - ಅಕ್ಟೋಬರ್ -2025 ಡಾಕ್ಟರ್ ಎಂ.ಸಿ. ಮೋದಿ ಅವರ 109ನೇ ಹುಟ್ಟು ಹಬ್ಬದಲ್ಲಿ ಇದೆಲ್ಲ ನೆನಪುಗಳಾಯಿತು.
ಅವತ್ತು ನಮ್ಮ ಊರಲ್ಲಿ ನಡೆದ ಎಂ.ಸಿ.ಮೋದಿ ಸನ್ಮಾನ ಸಮಾರಂಭದಲ್ಲಿ ನನ್ನದು ಸ್ವಾಗತ ಭಾಷಣ ವೇದಿಕೆಯಲ್ಲಿ ಎಂ.ಸಿ.ಮೋದಿ, ಕಾಗೋಡು ತಿಮ್ಮಪ್ಪನವರು ಮತ್ತು ಪಾದರ್ ಜೋಸೆಫ್ ಉಪಸ್ಥಿತರಿದ್ದರು.
Comments
Post a Comment