#ನನ್ನ_ಬಾಲ್ಯದ_ರೋಲ್_ಮಾಡೆಲ್_ಆಗಿದ್ದ_ಡುಮಿಂಗ್_ರೆಬೆಲೋ_ಕ್ರಿಸ್ತ_ಪಾದ_ಸೇರಿದರು
#ಅವರ_ಆತ್ಮಕ್ಕೆ_ಸದ್ಗತಿ_ಸ್ವರ್ಗ_ಪ್ರಾಪ್ತಿಗೆ_ದೇವರಲ್ಲಿ_ಪ್ರಾರ್ಥಿಸುತ್ತೇನೆ.
ನಮ್ಮ ಊರಲ್ಲಿ ದೇವಸ್ಥಾನ ಮಸೀದಿ ಇರಲಿಲ್ಲ ಆದರೆ ಚರ್ಚ್ ಇತ್ತು ಅಂದರೆ ಆಗ 13 ಮನೆ ಕ್ರಿಸ್ತರದ್ದೆ,6 ಮನೆ ಹಿಂದುಗಳದ್ದು ಮತ್ತು 5 ಮನೆ ಮುಸ್ಲಿಂ ಜನದ್ದು ಇದು 1960 - 70 ರ ಕಾಲದಲ್ಲಿ.
ಈಗ ಸುಮಾರು 200 ಹಿಂದೂ ದಮಿ೯ಯರ ಮನೆಗಳಿದೆ, 120 ಮುಸ್ಲಿಂ ಮನೆಗಳಿದೆ, ಕ್ರಿಶ್ಚಿಯನ್ನರ ಮನೆಗಳು 25 ಮೀರಿಲ್ಲ.
ಈಗ ಯೋಹವನ ಸಾಕ್ಷಿಗಳ ಇನ್ನೊಂದು ಚಚು೯ ಆಗಿದೆ, ಮಸೀದಿ ಆಗಿದೆ ಮತ್ತು ಸಿದ್ದಿ ವಿನಾಯಕ ದೇವಸ್ಥಾನ ಆಗಿದೆ.
ಪೆಟ್ರೋಲ್ ಪಂಪ್ ಇದೆ, ಎರೆಡು ಬ್ಯಾಂಕ್ ಇದೆ, ಎರೆಡು ಮೋಟಾರ್ ಸೈಕಲ್ ಶೋ ರೂಂ ಆಗಿದೆ, 3 ಅಕ್ಕಿ ಗಿರಣಿ ಇದೆ, ಪದವಿ ಕಾಲೇಜ್ ತನಕ ಇದೆ.
ಆದರೆ ನಮ್ಮ ಬಾಲ್ಯದ ಸವಿ ನೆನಪಿನ ಅಂಗಳದಲ್ಲಿ ಇದ್ಯಾವುದೂ ಇರಲಿಲ್ಲ ಆ ಕಾಲದಲ್ಲಿ ನಿಜವಾದ ಮನಷ್ಯತ್ವದ ಸಮಾಜ ಇತ್ತು.
ದಮ೯ಗಳ ಮಧ್ಯ ದ್ವೇಷ ಇರಲಿಲ್ಲ ಅಪನಂಬಿಕೆ ಇರಲಿಲ್ಲ.
ಇವತ್ತು ಸಂಜೆ ನಮ್ಮ ಪ್ರೀತಿಯ ಡುಮಿಂಗಣ್ಣ ತಮ್ಮ ಇಹ ಲೋಕ ತ್ಯಜಿಸಿ ಕ್ರಿಸ್ತ ಪಾದ ಸೇರಿದ್ದಾರೆ ಇವರನ್ನು ಅತ್ಯಂತ ಪ್ರೀತಿಯಿಂದ ಕೊನೆ ತನಕ ನೋಡಿ ಕಂಡ ಪತ್ನಿ ತೀರ್ಥಹಳ್ಳಿಯ ರೋಜಿನ ಬಾಯಮ್ಮ ಮತ್ತು ಹೆಣ್ಣು ಮಕ್ಕಳಾದ ಸಿಲ್ವಿಯಾ,ನ್ಯಾನ್ಸಿ ಮತ್ತು ಅವರ ಅಳಿಯಂದಿರು ಮೊಮ್ಮಕ್ಕಳನ್ನು ಅಗಲಿದ್ದಾರೆ.
ಅವರ ಆತ್ಮಕ್ಕೆ ಸದ್ಗತಿ ಸ್ಟಗ೯ ಪ್ರಾಪ್ತಿಗಾಗಿ ದೇವರಲ್ಲಿ ಪ್ರಾರ್ಥಿಸುತ್ತೇನೆ.
#ಅವರ_ನೆನಪಿಗಾಗಿ_ಕೆಲವಷ೯ದ_ಹಿಂದಿನ_ಈ_ಪೋಸ್ಟ್_ಇನ್ನೊಮ್ಮೆ.
ಡುಮಿಂಗ್ ರೆಬೆಲೋ ಯಾನೆ ಡುಮಿಂಗಣ್ಣ ಯಾನೆ ದುಮುಗ ಎಂದು ಸ್ಥಳಿಯರು ಕರೆಯುವ ಇವರು ನನ್ನ ಬಾಲ್ಯದಲ್ಲಿ ರೋಲ್ ಮಾಡೆಲ್ ಆಗಿದ್ದರು.
ನನಗೆ ಯಾರಾದರು ದೊಡ್ಡವನಾದ ಮೇಲೆ ಏನಾಗುತ್ತೀಯ ಅಂದರೆ "ನಾನು ಸಿನಿಮಾ ಟಾಕೀಸಿನ ಗೇಟ್ ಕೀಪರ್ ಆಗುತ್ತೀನಿ ಅಂತಿದ್ದೆ" ಕೇಳಿದವರೆಲ್ಲ ನಗಾಡುತ್ತಿದ್ದದ್ದು ಯಾಕೆಂದು ಅಥ೯ ಆಗುತ್ತಿರಲಿಲ್ಲ ಆಗ.
ಇದಕ್ಕೆ ಕಾರಣ ನಮ್ಮ ಡುಮಿಂಗಣ್ಣ ಆನಂದಪುರದ ಟೂರಿಂಗ್ ಸಿನಿಮಾ ಟಾಕೀಸಿನಲ್ಲಿ ರಾತ್ರಿ ಗೇಟ್ ಕೀಪರ್ ಆಗಿ ಬೆಳಿಗ್ಗೆ ಹೊಸ ಬಾಡಿಗೆ ಸೈಕಲ್ ನಲ್ಲಿ ಸಿನಿಮಾ ಪೋಸ್ಟರ್ ತಟ್ಟಿ ಕಟ್ಟಿಕೊಂಡು ಆ ಸೈಕಲ್ ಚಕ್ರದ ಪ್ರಿವಿಲ್ ಗೆ ಕತ್ತದ ಹಗ್ಗ ಕಟ್ಟಿ ಅದನ್ನು ತಗಡಿನ ಡಬ್ಬದಿಂದ ಹಾಯಿಸಿ ಸೈಕಲ್ ಹ್ಯಾಂಡಲ್ ಕೆಳಗಿನ ಪ್ರೇಮ್ ಗೆ ಕಟ್ಟುತ್ತಿದ್ದರು ಇದು ಸೈಕಲ್ ವೇಗವಾಗಿ ತುಳಿದಂತೆ ಬೊಂವ್ ಎಂಬ ಶಬ್ದ ಕಿವಿಯ ತಮಟೆ ಕೊಯ್ಯುವಂತೆ ಶಬ್ದ ಉಂಟು ಮಾಡುವುದರಿಂದ ಹಳ್ಳಿಯಲ್ಲಿ ಈ ಸಿನಿಮಾ ಸೈಕಲ್ ಬಂದಾಗ ಜನರ ಗಮನ ಸೆಳೆದು ಯಾವ ಸಿನಿಮಾ ಅಂತ ಗೊತ್ತಾಗುವಂತೆ ಡುಮಿ೦ಗಣ್ಣ ಕೆಲಸ ಮಾಡುವುದು ನನಗೆ ಅವರಂತೆ ಸಿನಿಮಾ ಗೇಟ್ ಕೀಪರ್ ಆಗಲು ಪ್ರೇರಣೆ ಆಗಿತ್ತು.
ಸಿನಿಮಾ ಆಪರೇಟರ್ ರೀಲ್ ಕಟ್ಟು ಆದಾಗ ಅದನ್ನು ಸೇರಿಸಲು ಎರೆಡೂ ಕಡೆಯ ಕೆಲವು ರೀಲ್ ಕಟ್ ಮಾಡಿ ಒಗಾಯಿಸುತ್ತಿದ್ದದ್ದರು. ಆ ಕಾಲದಲ್ಲಿ ಸಿನಿಮಾ ರೀಲಿನ ತುಣುಕುಗಳಿಗೆ ಬಾರೀ ಬೇಡಿಕೆ, ಅದನ್ನು ತಂದು ಸಂತೆಯಲ್ಲಿ ಸಿಗುತ್ತಿದ್ದ ಸಣ್ಣ ಬೂತ ಕನ್ನಡಿಯ ಸಿನಿಮಾ ಪ್ರೋಜೆಕ್ಟರ್ (ಸ್ಟಿಲ್ ಮಾತ್ರ) ನಲ್ಲಿ ಹಾಕಿ ಸಿನಿಮಾದ ಕೆಲ ಸೀನ್ ನೋಡುವುದು ಆ ಕಾಲದ ಮಕ್ಕಳಲ್ಲಿ ಶೋಕಿ ಆಗಿತ್ತು.
ಡುಮಿಂಗಣ್ಣ ಆಗಿನ ನಮ್ಮ ಬಾಲ್ಯದ ಪ್ರೊಜೆಕ್ಟರ್ ಡಬ್ಬಿಗಳಿಗ ಅಂತಹ ಸಿನಿಮಾ ರೀಲಿನ ತುಣುಕು ತಂದು ಕೊಡುತ್ತಿದ್ದರು ಅದನ್ನು ಹಾಕಿ ನಾವೂ ನೋಡಿ ಗೆಳೆಯರಿಗೂ ತೋರಿಸಿ ಸಂತೋಷ ಪಡುತ್ತಿದ್ದೆವು.
ತಿಂಗಳಿಗೊಮ್ಮೆ ಆನಂದಪುರದ ಮಾದಣ್ಣನ (ಮಾದವ ಪ್ರಭು) ಅಂಗಡಿ ಪಕ್ಕದ ರಾಮಣ್ಣನ ಹೇರ್ ಕಟಿಂಗ್ ಸೆಲೂನ್ ಗೆ ಡುಮಿಂಗಣ್ಣ ನನ್ನನ್ನು ಕರೆದುಕೊಂಡು ಹೋಗಬೇಕಾಗಿತ್ತು, ನಾನು ತಲೆ ಚೌರ ಮಾಡುವಾಗ ಆ ಕಾಲದ ಮೆಷಿನ ಬಳಸುವಾಗ ನೋವಾಗುತ್ತಿದ್ದರಿಂದ ಅಳುತ್ತಿದ್ದೆ ಮತ್ತು ಚೌರ ಮಾಡುವ ರಾಮಣ್ಣನಿಗೆ ಸಹಕರಿಸುತ್ತಿರಲಿಲ್ಲ ಆದ್ದರಿಂದ ನನ್ನ ತಲೆ ಗಟ್ಟಿಯಾಗಿ ಡುಮಿ೦ಗಣ್ಣ ಹಿಡಿದುಕೊಳ್ಳುತ್ತಿದ್ದರು.ಆಗ ಈಗಿನಂತೆ ಚೌರ ಅಲ್ಲ ಆ ಮೆಷಿನ್ ನಲ್ಲಿ ಅಂತಿಮವಾಗಿ ತಲೆ ಸುತ್ತ ಹೊಡೆಯದಿದ್ದರೆ ಚೌರ ಪೂಣ೯ ಆಗುತ್ತಿರಲಿಲ್ಲ.
ಆ ರಾಮಣ್ಣ ಆನಂದಪುರದಲ್ಲಿ ಆ ಕಾಲದ ಡಿಲಕ್ಸ್ ಎನ್ನುವಂತ ಸಲೂನ್ ಮಾಲಿಕ, ಬಿಳಿ ಖಾದಿ ಷಟ೯ ಪಂಚೆ ಮತ್ತು ಕೈಯಲ್ಲಿ ಬಕ೯ಲಿ ಸಿಗರೇಟ್. ಯಾವಾಗಲೂ ಅಲ್ಲಿ ನಿತ್ಯ ಪೇಪರ್ ಓದುವ ಕೆಲ ರಾಜಕೀಯ ಮಾತಾಡುವವರು ಮತ್ತು ಸಿನಿಮಾ ಪ್ರಿಯರು ಇರುತ್ತಿದ್ದರು, ನನ್ನನ್ನು ಕುಚಿ೯ ಮೇಲೆ ಕೂರಿಸಿ ಎದುರಿನ ಕನ್ನಡಿ ಮೇಲಿನ ವಿವಿದ ಬಾಂಡ್ ಮೀಸೆಯ ಹಲವಾರು ಪೋಟೊ ತೋರಿಸಿ "ಪಾಪು ನಿನಗೆ ಇದರಲ್ಲಿ ಹೆಂಗೆ ಇದ್ದಂಗೆ ಮಾಡಬೇಕು ತೋರಿಸು ನೋವಾಗದಂತೆ ಕಟಿಂಗ್ ಮಾಡುತ್ತೇನೆ" ಅಂತ ರಮಿಸುತ್ತಿದ್ದರು, ನಾನು ಒಳ್ಳೇ ಮೀಸೆ ಮತ್ತು ಬಾಂಡ್ ಇರುವ ಚಿತ್ರ ತೋರಿಸುತ್ತಿದ್ದೆ, ಅಲ್ಲಿದ್ದವರೆಲ್ಲ ನಗುತ್ತಿದ್ದರು ನಂತರ ಕನ್ನಡಿಯಲ್ಲಿ ನೋಡಿದರೆ ನನಗೆಲ್ಲಿ ಬಾಂಡ್ ಮೀಸೆ ಅಂತ ಹುಡುಕುತ್ತಿದ್ದೆ.
ಕರಾವಳಿಯ ಬೈಂದೂರಿನ ಮೂಲದ ಡುಮಿಂಗಣ್ಣನ ತಂದೆ ತಾಯಿ ನಮ್ಮ ಊರಿಗೆ ಜಂಬಿಟ್ಟಿಗೆ ಕಡಿಯಲು ಬಂದವರು, ನಮ್ಮ ಊರ ಚಚಿ೯ಗೆ ಸಂಬಂದ ಪಟ್ಟ ಕ್ರಿಸ್ತ್ ಮತಸ್ಥರಲ್ಲಿ ಏಕೈಕ ರೆಬೆಲೋ ಕುಟುಂಬದವರು.
ಇತ್ತೀಚೆಗೆ ಪಾಶ್ವ೯ವಾಯು ಪೀಡಿತರಾಗಿ ಹಾಸಿಗೆ ಹಿಡಿದಿದ್ದಾರೆ, ನನ್ನ ಬಾಲ್ಯದಲ್ಲಿ ಇವರ ಪ್ರಭಾವ ನನಗಷ್ಟಾಗಿತ್ತೆಂದರೆ ಇವರನ್ನು ನಾನೆಷ್ಟು ಅವಲಂಬಿಸಿದ್ದೆನೆಂದು ತಿಳಿಯಬಹುದು.
ಜೀವನದಲ್ಲಿ ಪ್ರಸಿದ್ದಿ ಪಡೆದವರ ಒಡನಾಟದ ಬರಹ ಬರೆಯುವ ಕಾಲ ಕಳೆಯುವಾಗ ಬಾಲ್ಯದ ನನ್ನ ಪ್ರಭಾವಿ ಸಾಮಾನ್ಯ ವ್ಯಕ್ತಿಯಾದ ಡುಮಿಂಗ್ ರೆಬೆಲೋ ಮರೆತು ಬಿಟ್ಟಿದ್ದೆ.
ಸಿನಿಮಾ ಟಾಕೀಸ್ ಗೇಟ್ ಕೀಪರ್ ಆಗಲಿಲ್ಲ ಆದರೆ ಸಿನಿಮಾ ಟಾಕೀಸ್ ಮಾಲಿಕನಾಗಿದ್ದು ಇತಿಹಾಸ.
Comments
Post a Comment