#ಪ್ರಶಸ್ತಿ_ಹೆಸರಲ್ಲಿ_ನೀಡುವ_ಪ್ಲೇವುಡ್_ಹಲಗೆ_ಬೇಕಾ?
#ಉಪಯೋಗಕ್ಕೆ_ಬಾರದ_ಛದ್ಮವೇಷದಾರಿ_ಶಾಲು_ಹಾರ_ಕಿರೀಟ_ಪೇಟಾ_ಖಡ್ಗಾ
ನಿಜಕ್ಕೂ ಇದು ಆರೋಗ್ಯಕರ ಚರ್ಚೆ ಈ ಬಗ್ಗೆ ವಿಚಾರವಂತರು ಯೋಚಿಸಬೇಕು.
ಪ್ರಖ್ಯಾತ ಉಚಿತ ನೇತ್ರ ಚಿಕಿತ್ಸಕರಾಗಿದ್ದ ಡಾಕ್ಟರ್ ಮೋದಿ ಕಾರ್ಯಕ್ರಮಕ್ಕೆ ಮೊದಲೇ ಕೆಲ ಕಂಡೀಷನ್ ಹಾಕುತ್ತಿದ್ದರು ಅವರು ಮತ್ತು ಅವರ ಸಿಬ್ಬಂದಿಗಳಿಗೆ ಊಟ- ವಾಸ್ತವದ ಬಗ್ಗೆ ಮೊದಲೇ ಖಚಿತ ಪಡಿಸಿಕೊಳ್ಳುತ್ತಿದ್ದರು ಮತ್ತು ಉಚಿತ ನೇತ್ರ ಚಿಕಿತ್ಸೆಯ ಪ್ರಾಯೋಜಕರ ಅಸಲಿಯತ್ತು ವಿಚಾರಿಸಿಕೊಂಡೇ ನಂತರ ಕಾರ್ಯಕ್ರಮ ಒಪ್ಪಿಕೊಳ್ಳುತ್ತಿದ್ದರು.
ಪ್ರಖ್ಯಾತ ಹೋರಾಟಗಾರ ಜಾರ್ಜ್ ಪರ್ನಾಂಡಿಸ್ ರು ಹಾರ ತುರಾಯಿ ಪ್ರಶಸ್ತಿಗಳಿಂದ ಕೊನೆಯ ತನಕ ದೂರ ಇದ್ದರು, ಆದರೆ ಪ್ರೀತಿಯಿಂದ ನೀಡಿದ ಶಾಲು ಸ್ವೀಕರಿಸುತ್ತಿದ್ದರು ಆದರೆ ಶಾಲುಗಳನ್ನು ವಿಶೇಷ ಕಾಳಜಿಯಿಂದ ಸಂಗ್ರಹಿಸಿ ನೂರರ ಬಂಡಲ್ ಮಾಡಿ ಅವರ ಆಯ್ಕೆಯ ವೃದ್ಧಾಶ್ರಮ ಅಥವ ವಿದ್ಯಾರ್ಥಿಗಳಿಗೆ ತಲುಪಿಸುತ್ತಿದ್ದರು.
ಮೊನ್ನೆ ನನ್ನ ಕಥಾ ಸಂಕಲನ ಬಿಡುಗಡೆಗೆ ನಾನು ಯಾವುದೇ ಹಾರ ಶಾಲು ತರಲಿಲ್ಲ, ಅತಿಥಿಗಳು ಎಲ್ಲರೂ ಕುಳಿತೇ ಬಾಷಣ ಮಾಡಿದರು, ಪುಸ್ತಕದ ಜೊತೆ ಬಂಗಾಲಿ ಚಂ-ಚಂ ಸಿಹಿ ಪೊಟ್ಟಣ ನೀಡಿದೆ, ಕೆಲವೇ ಆಹ್ವಾನಿತರು ಮತ್ತು ಸ್ಥಳಿಯ ಪತ್ರಕರ್ತರು ಒಂದಾಗಿ ಹಲಸಿನ ಎಲೆ ಕಡಬು ಚಹಾ ಕಾಫಿ ಸೇವಿಸಿ ಕಾರ್ಯಕ್ರಮ ಬರ್ಖಾಸ್ತು ಮಾಡಿದೆ.
ಗೆಳೆಯರು ಪೇಸ್ ಬುಕ್ ಲೈವ್ ಮಾಡಿದರು, ಶೇರ್ ಮಾಡಿದರು, ಪತ್ರಿಕೆಗಳಲ್ಲಿ ಸುದ್ದಿ ಮಾಡಿದರು.
#ಕಾರ್ಯಕ್ರಮ_ಪ್ರಾಯೋಜಕರು_ಅತಿಥಿಗಳು_ಯೋಚಿಸಲಿ
ಕಾರ್ಯಕ್ರಮಗಳು ಮುಂದಿನ ದಿನಗಳಲ್ಲಿ ಸಂಕ್ಷಿಪ್ತ ಸ್ವರೂಪಕ್ಕೆ ತರಬೇಕು, ವೇದಿಕೆ ಇತ್ಯಾದಿಗೆ ಆಗುವ ಅನಾವಶ್ಯಕ ವೆಚ್ಚ ತಡೆಯಬೇಕು, ಪ್ರತ್ಯಕ್ಷ ಪ್ರೇಕ್ಷಕರ ಹಾಜರಾತಿ ಆಯ್ಕೆಯ ಮಾನದಂಡದಂತೆ 20ಕ್ಕೂ ಕಡಿಮೆ ಇರಲಿ, ಅತಿಥಿಗಳಾಗಿ ಸಂಪನ್ಮೂಲ ವ್ಯಕ್ತಿಗಳಾಗಿ ಬರುವವರಿಗೆ ಅವರ ಪ್ರಯಾಣ ವೆಚ್ಚ ಭರಿಸಿಯೂ ಉಳಿಯುವಷ್ಟು ಸಂಭಾವನೆ ಹಣದ ರೂಪದಲ್ಲೇ ಕೊಡಬೇಕು.
ನೆನಪಿನ ಕಾಣಿಕೆ, ಶಾಲು, ಹಾರ, ಮೈಸೂರು ಪೇಟ ಮತ್ತು ಯಾವುದೋ ಸಿಕ್ಕಿದ ಪುಸ್ತಕ ನಿಷೇದಿಸಬೇಕು.
ಅತಿಥಿ ಆಗಿ ಬಂದವರಿಗೆ ಅವರು ಬಂದ ಸಂದರ್ಭಕ್ಕೆ ಅನುಗುಣ ಆಗಿ ಊಟ-ಉಪಹಾರ ವ್ಯವಸ್ಥೆ ಕಡ್ಡಾಯ ಆಗಿರಲಿ, ದೂರದಿಂದ ಬಂದವರಿಗೆ ವಸತಿ ವ್ಯವಸ್ಥೆ ಕೂಡ.
ಎಂತೆಂತಹ ಖ್ಯಾತರನ್ನು ಪ್ರಶಸ್ತಿ ಕೊಡುವುದಾಗಿ ಘೋಷಿಸಿ (ಅವರೂ ಕೀರ್ತಿ ಶನಿಯ ಶಾಪಗ್ರಸ್ತರು) ಆ ಕಾರ್ಯಕ್ರಮಕ್ಕೆ ರೋಲ್ ಕಾಲ್ ಹಣ ಸಂಗ್ರಹಿಸಿ, ಇಂತಹ ತಗಡು ಪ್ರಶಸ್ತಿ - ಪ್ಲಾಸ್ಟಿಕ್ ನ ಬೆಳ್ಳಿ ಕೊಟಿಂಗ್ ಖಡ್ಗಾ - ಮೈಸೂರು ಪೇಟಾದ ತದ್ರೂಪಿ ಗಿಲೀಟು ಪೇಟ -ಜರಿ ಶಾಲಿನ ನಕಲಿ ಶಾಲು - ಪ್ಲಾಸ್ಟಿಕ್ ಮಣಿಹಾರ ಹಾಕಿ ಮದ್ಯರಾತ್ರಿಯಲ್ಲಿ ಅತಿಥಿ ಮಹೋದಯರನ್ನು ರಸ್ತೆ ಮೇಲೆ ಅನಾಥರನ್ನು ಮಾಡುವ ಈ ಕಾಲದಲ್ಲಿ ಭಾಗವಹಿಸುವ ಅತಿಥಿ ಮಹೋದಯರೂ ಕಾರ್ಯಕ್ರಮದ ಆಯೋಜಕರ ಅಸಲಿಯತ್ತು ಅರಿತಿರಬೇಕು.
ಈಗಷ್ಟೆ ಒಂದು ಪೋಸ್ಟ್ ನೋಡಿದೆ ಪ್ರತಿಷ್ಟಿತ ವಿದ್ಯಾ ಸಂಸ್ಥೆಯ ಪ್ರಾಂಶುಪಾಲರದ್ದು ನಿನ್ನೆ ಅವರಿಗೆ 212 ನೇ ಸನ್ಮಾನ ಆಯಿತಂತೆ!?.
ಕೆಲವರ೦ತು ಪ್ರಶಸ್ತಿ ಸನ್ಮಾನಕ್ಕಿಂತ ಮುಂದಕ್ಕೆ ಓಡುತ್ತಿರುತ್ತಾರೆ ಇಂತವರಿಗೆ ಸನ್ಮಾನ ಪ್ರಶಸ್ತಿ ಕೊಡಲು ರೋಲ್ ಕಾಲ್ ಸಂಘಟನೆಗಳೂ ಅಷ್ಟೆ ಇದೆ.
ಸರಿಯಾಗಿ ಸಾಮಾಜಿಕ ತಾಣ ಬಳಕೆ ಮಾಡಿಕೊಂಡರೆ ಸರಿಯಾದ ವಿಚಾರ ಸರಿಯಾದ ಜನರಿಗೆ ತಲುಪುತ್ತದೆ.
Comments
Post a Comment