ಐವತ್ತು ವರ್ಷದ ಹಿಂದೆ ತೀರ್ಥಹಳ್ಳಿಯ ಎಳ್ಳಮಾಸ್ಯೆಯಂದು ರಥೋತ್ಸವದಲ್ಲಿ ನಾನು ಕಳೆದು ಹೋಗಿದ್ದ ನೆನಪು ಪ್ರತಿ ಎಳ್ಳಮಾಸ್ಯೆಯ ಸಂದಭ೯ದಲ್ಲಿ ನೆನಪಾಗುತ್ತದೆ.
#ಐವತ್ತು_ವರ್ಷದ_ಹಿಂದೆ_ಈ_ಜಾತ್ರೆಯಲ್ಲಿ_ನಾನು_ಕಳೆದು_ಹೋಗಿದ್ದೆ.
#ಅವತ್ತಿನ_ಆತಂಕ_ಭಯ_ಜೀವಮಾನದಲ್ಲಿ_ಮರೆಯುವಂತಿಲ್ಲ.
ನಮ್ಮ ತಂದೆಯ ತಾಯಿಯ (ಅಜ್ಜಿಯ) ಅಕ್ಕನ ಮಗಳ ಮನೆ ತೀರ್ಥಹಳ್ಳಿಯ ಸೊಪ್ಪುಗುಡ್ಡೆಯಲ್ಲಿತ್ತು ಅವರ ಪತಿ ಆಗಿನ ಕಾಲದಲ್ಲಿ ತೀರ್ಥಹಳ್ಳಿಯ ಪ್ರಸಿದ್ಧ ಮಾರಿಗುಡಿಯ ಪಾತ್ರಿಗಳಾಗಿದ್ದ ರಾಮಣ್ಣ ಪಾತ್ರಿಗಳು ಅವರ ಮೂಲ ಕಾಪು.
ಕಾಪುವಿನ ಪ್ರಸಿದ್ಧ ಮಾರಿಗುಡಿ ಕಡೆಯಿಂದ ಇಲ್ಲಿಗೆ ಕರೆಸಿಕೊಂಡವರು.
ಪ್ರತಿ ವರ್ಷ ತೀರ್ಥಹಳ್ಳಿಯ ಎಳ್ಳಾಮಸ್ಯೆಗೆ ಅತ್ತೆ ಮಾವರ ಮನೆಗೆ ನಮ್ಮ ಮನೆಯಿಂದ ಯಾರಾದರೂ ಹೋಗಿ ರಾಮಕುಂಡದಲ್ಲಿ ಸ್ನಾನ ಮಾಡಿ, ರಥೋತ್ಸವ ಜಾತ್ರೆಯಲ್ಲಿ ಭಾಗವಹಿಸುವ ಕ್ರಮ ಇತ್ತು.
1970 ರಲ್ಲಿ ನಾನಿನ್ನೂ ಒಂದನೆ ತರಗತಿಗೆ ಸೇರಿರಲಿಲ್ಲ ನನ್ನ ತಾಯಿ, ತೀರ್ಥಹಳ್ಳಿ ಎಳ್ಳು ಅಮಾವಸ್ಯೆಯ ಪವಿತ್ರ ದಿನದಂದು ರಾಮ ತೀರ್ಥದ ಪವಿತ್ರ ರಾಮ ಕೊಂಡದಲ್ಲಿ ಪರುಶುರಾಮ ತನ್ನ ಮಾತೃ ಹತ್ಯೆಯ ರಕ್ತವಂಟಿದ ಕೊಡಲಿ ತೊಳೆದು ಪರಿಹಾರ ಪಡೆದ ಪುರಾಣ ಕಥೆಯ ರಾಮ ಕೊಂಡದಲ್ಲಿ ನನ್ನನ್ನು ಸ್ನಾನ ಮಾಡಿಸಬೇಕೆಂಬ ಭಕ್ತಿಯ ಬಯಕೆಯಿಂದ ನನ್ನನ್ನು ಕರೆದೊಯ್ದಿದ್ದರು.
ನಸುಕಿನಲ್ಲೇ ಅರೆ ನಿದ್ದೆಯಲ್ಲೇ ರಾಮಕುಂಡಕ್ಕೆ ಕರೆದುಕೊಂಡು ಹೋಗಿದ್ದರು,ಅಲ್ಲಿ ಖಾಕಿ ಸಮವಸ್ತ್ರದ ದೊಗಳೆ ಖಾಕಿ ಚೆಡ್ಡಿಯ ಇಬ್ಬರು ಪೋಲಿಸರ ನೋಡಿ ನಿದ್ದೆ ಓಡಿ ಹೋಗಿತ್ತು. ಅವರು ರಾಮಕುಂಡದಲ್ಲಿ ಸ್ನಾನಕ್ಕೆ ಬಂದವರ ಎರೆಡೂ ಕೈ ಹಿಡಿದು ಮುಳುಗಿಸಿ ಎತ್ತಿ ಬಿಡುತ್ತಿದ್ದರು ಇದು ಆ ಕಾಲದ ಜನರ ರಕ್ಷಣೆಗಾಗಿ ಸ್ಥಳಿಯ ಸಕಾ೯ರದ ವ್ಯವಸ್ಥೆ ಆಗಿರಬೇಕು.
ತೀರ್ಥಹಳ್ಳಿಯ ಅತ್ತೆ ಮಾವನ ಮನೆಯಲ್ಲಿ ಅವರ ಮೊಮ್ಮಕ್ಕಳು ಅಂದಾಜು 20 ಕ್ಕೂ ಹೆಚ್ಚು ಮಕ್ಕಳು ಆ ದಿನ ರಾತ್ರಿ ಹೇಳುತ್ತಿದ್ದ ವಿಷಯ ರಸವತ್ತಾಗಿತ್ತು, ರಥಬೀದಿಯಲ್ಲಿ ಮರುದಿನ ನಡೆಯುವ ರಥೋತ್ಸವ ನೋಡಲು ಹೋಗೋಣ ಅಲ್ಲಿ ರಥಕ್ಕೆ ಬಾಳೆ ಹಣ್ಣು, ಕಿತ್ತಳೆ ಹಣ್ಣು ಎಸೆಯುತ್ತಾರೆ ಅದೆಲ್ಲ ಎಷ್ಟು ತಿಂದರು ಖಾಲಿ ಆಗುವುದಿಲ್ಲ ಎಂಬೆಲ್ಲ ಮಾತು ಕೇಳಿ ನನಗೂ ಹೋಗಬೇಕೆನ್ನಿಸಿತ್ತು ಆದರೆ ನನ್ನಮ್ಮ ಬೇಡ ಅಂದಿದ್ದರು.
ಮರುದಿನ ಮಕ್ಕಳೆಲ್ಲ ನನ್ನಮ್ಮನಿಗೆ ನನ್ನನ್ನು ಜೋಪಾನವಾಗಿ ಕರೆದೊಯ್ದು ತರುವ ಭರವಸೆಯಿಂದ ನನ್ನ ಕೈ ಜೋಪಾನವಾಗಿ ಹಿಡಿದುಕೊಂಡು ರಥಬೀದಿಗೆ ಕರೆದುಕೊಂಡು ಹೋದರು.
ರಥ ಬರುವ ತನಕ ಎಲ್ಲರೂ ಗುಂಪಲ್ಲಿದ್ದೆವು,ನಂತರ ಅಲ್ಲಿನ ನೂಕುನುಗ್ಗಲಿನಿಂದ ಮತ್ತು ಕರೆದೊಯ್ದ ಸಂಬಂದಿ ಮಕ್ಕಳು ರಥಕ್ಕೆ ಎಸೆಯುತ್ತಿದ್ದ ಹಣ್ಣು ಆಯಲು ದಿಕ್ಕಪಾಲಾದ್ದರಿಂದ ನನ್ನ ಕೈ ಬಿಟ್ಟು ಬಿಟ್ಟರು! ನನಗೆ ಏನೂ ತೋಚಲಿಲ್ಲ ಅಲ್ಲೇ ನಿಂತಿದ್ದೆ ನಂತರ ರಥ ಹೋದ ಮೇಲೂ ನನ್ನ ಕರೆದುಕೊಂಡು ಹೋದವರು ಸಿಗಲೇ ಇಲ್ಲ.
ಮದ್ಯಾಹ್ನದ ತನಕ ನಾನು ಅತಂತ್ರ ಆಗಿದ್ದೆ, ಅತ್ತೂ ಅತ್ತೂ ಕಣ್ಣಿನ ನೀರು ಬತ್ತಿತ್ತು, ಗಂಟಲು ಒಣಗಿತ್ತು, ಪದೇ ಪದೇ ನನ್ನ ತಾಯಿ ನೆನಪುಗಳಿಂದ ನನಗೆ ದಿಗಿಲಾಗಿತ್ತು.
ಕೆಲವರು ದಾರಿ ತಪ್ಪಿದೆ ಮಗು ಅಂತ ತಿಳಿದು ಮನೆಗೆ ಸೇರಿಸಲು ಪ್ರಯತ್ನಿಸಿದರೂ 5 ವಷ೯ದ ನನಗೆ ವಿಳಾಸವಾದರೂ ಎಲ್ಲಿ ಗೊತ್ತು?.
ಅದು ಹೇಗೋ ಸೊಪ್ಪುಗುಡ್ಡೆ ಅಂತ ದೊಡ್ಡವರು ಮಾತಾಡುತ್ತಾ ಇದ್ದಿದ್ದು ನೆನಪಿಗೆ ಬಂತು, ಸಹಾಯ ಮಾಡಲು ಬಂದವರು ಮತ್ತೊಮ್ಮೆ ಕೇಳಿದಾಗ ಸೊಪ್ಪುಗುಡ್ಡೆ ಅಂದೆ ನನ್ನ ಮಾವನವರ ಹೆಸರು ರಾಮಣ್ಣ ಪಾತ್ರಿಗಳು ಅಂತ ನೆನಪಾಗಿ ಅದನ್ನೂ ಹೇಳಿದೆ,ಅಲ್ಲಿದ್ದವರೆಲ್ಲ ನಿರಾಳರಾದರು ಅವರಿಗೆಲ್ಲ ಸೊಪ್ಪು ಗುಡ್ಡೆ ರಾಮಣ್ಣ ಪಾತ್ರಿಗಳು ಪರಿಚಿತರು ಯಾರೋ ಒಬ್ಬರನ್ನು ಜೊತೆ ಮಾಡಿ ಕಳಿಸಿದರು ಅವರು ನನ್ನ ಕೈ ಹಿಡಿದು ಮನೆ ಮುಟ್ಟಿಸಿದರು.
ಕರೆದೊಯ್ದವರೆಲ್ಲ ನಾನು ಜಾತ್ರೆಯಲ್ಲಿ ಕಳೆದು ಹೋದ ಬಗ್ಗೆ ಆತಂಕವಾಗಿತ್ತು, ಅವರೆಲ್ಲ ಹುಡುಕಿ ಹುಡುಕಿ ಹತಾಷರಾಗಿ ಆಗಷ್ಟೇ ಮನೆ ತಲುಪಿದ್ದರು. ನನ್ನ ತಾಯಿಗೆ ವಿಷಯ ಇನ್ನೂ ತಿಳಿದಿರಲಿಲ್ಲ ಅಷ್ಟರಲ್ಲಿ ನಾನು ಮನೆ ತಲುಪಿ ಎಲ್ಲಾ ಸುಖಾಂತ್ಯ ಆಯಿತು.
ನಂತರ ತೀರ್ಥಹಳ್ಳಿ ಚಿರಪರಿಚಿತ ಆಯಿತು, ರಾಮ ಮಂಟಪದ ಪಕ್ಕದ ನೈಸರ್ಗಿಕ ಈಜು ಕೊಳದಲ್ಲಿ ಹರಿಯುವ ನೀರಿಗೆ ವಿರುದ್ದವಾಗಿ ಈಜಿ ಈಜಿ ಸುಸ್ತಾಗುವ ಆಟ ನಿರಂತರ ಆಯಿತು.
Comments
Post a Comment