#ತೇಜ್_ಕುಮಾರ್_ಕೆ_ಆರ್_ಸುಳ್ಯ
ಕೃಷಿಕರು, ಬರಹಗಾರರು ಮತ್ತು ಅರಬಾಸೆ, ಕನ್ನಡ, ಇಂಗ್ಲೀಷ್, ತುಳು ಮತ್ತು ಮಲೆಯಾಳ ಬಾಷೆ ಅರಿತವರು, ಇವರು ಮುಖತಃ ಬೇಟಿ ಆಗಿಲ್ಲ ಆದರೆ ಪೇಸ್ ಪುಸ್ತಕ ಗೆಳೆಯರನ್ನಾಗಿಸಿ ನನ್ನ ಕಾದಂಬರಿ ಇವರು ಓದಿ ವಿಮಷೆ೯ ಮಾಡುವಂತೆ ಮಾಡಿದೆ, ಇವರ ಮನೆ ಸುಂದರ ಪರಿಸರದಲ್ಲಿ ಕಲಾತ್ಮಕವಾಗಿ ನಿಮ೯ಣಗೊಂಡಿರುವುದರ ಚಿತ್ರ ಲಗತ್ತಿಸಿದ್ದೇನೆ ನೋಡಿ, ಒಮ್ಮೆ ನೋಡಲೇ ಬೇಕು ಅನ್ನಿಸುತ್ತದೆ.
ತಮ್ಮ ಇತರೆ ಕಾಯ೯ಗಳ ನಡುವೆ ಓದಿ ವಿಮಷಿ೯ಸಿದ ತೇಜ್ ಕುಮಾರರಿಗೆ ಕೃತಜ್ಞತೆಗಳೊಂದಿಗೆ ಅವರ ವಿಮರ್ಷೆ ನಿಮಗಾಗಿ
#ನನ್ನ_ಮುಖ_ಪುಸ್ತಕದ_ಗೆಳೆಯ_ಅರುಣ್_ಪ್ರಸಾದ್ ರವರು ಅವರ ಮೊದಲ ಪುಸ್ತಕ "ಬೆಸ್ತರ ರಾಣಿ ಚಂಪಕಾ" ಕಳುಹಿಸಿದ್ದರು. ಓದಿ ಮುಗಿಸಿದೆ. ಒಂದು ಒಳ್ಳೆಯ ಪುಸ್ತಕ. ನಮ್ಮ ರಾಜಪರಂಪರೆಗಳಲ್ಲಿ,ಜಾನಪದ ಕತೆಗಳಲ್ಲಿ ಹೆಚ್ಚಾಗಿ ಹೆಣ್ಣು ಶೋಷಿತಳಾಗಿಯೇ ಉಳಿಯುತ್ತಾಳೆ.ಮನಸ್ಸು ಭಾರವಾಗುತ್ತದೆ. ಅಂತಹ ಕತೆಯೊಂದನ್ನ ಲೇಖಕರು ನಮಗಿತ್ತಿದ್ದಾರೆ. ಕರುನಾಡ ಇತಿಹಾಸದಲ್ಲಿ ಕೆಳದಿ ಒಂದು ವಿಶಿಷ್ಟ ರಾಜ್ಯ. ವಿಜಯನಗರದ ಸಾಮಂತರಾಗಿದ್ದು ವಿಜಯನಗರದ ಫತನದ ನಂತರ ಸ್ವತಂತ್ರ ರಾಜರಾಗಿ ಅಷ್ಟ ದಿಕ್ಕುಗಳ ಶತ್ರುಗಳನ್ನು ಮೆಟ್ಟಿ ನಿಂತು ಆಳಿದ ಕೀರ್ತಿ ಅವರದ್ದು.ಅವರಲ್ಲಿ ಪಡುಗಡಲೊಡೆಯನೆಂಬ ಬಿರುದಾಂಕಿತ ರಾಜಾ ವೆಂಕಟಪ್ಪನಾಯಕ ಕಲಾವಂತಿಕೆಯ ಬೆಸ್ತರ ಹುಡುಗಿ ಚಂಪಕಾಳಿಗೆ ಮರುಳಾಗುತ್ತಾನೆ ಮದುವೆಯಾಗುತ್ತಾನೆ. ಕೀಳುಜಾತಿಯ ಹೆಣ್ಣೆಂಬ ನೆಲೆಯಲ್ಲಿ ಆಡುಗರ ಬಾಯಿಗೆ ಈಡಾದ ಚಂಪಕಾ ಇಲ್ಲಸಲ್ಲದ ಅಪವಾದಗಳಿಗೆ ಈಡಾಗಿ ಅರಸನ ಧೀಮಂತಿಕೆಗೆ ತಾನು ಅಡ್ಡಿಯಾದೆನೋ ಎಂದುಕೊಂಡು ಪ್ರಾಣತ್ಯಾಗ ಮಾಡುತ್ತಾಳೆ. ಇದು ಸಾರಾಂಶ. ಲೇಖಕರು ಅರಸನೊಬ್ಬನ ಜೀವನದ ಜನರರಿಯದ ಪಾತ್ರವನ್ನು ಹೇಳುತ್ತಾರಲ್ಲದೆ ಪ್ರೇಮಕತೆಯನ್ನು ವೈಭವೀಕರಿಸಲಿಲ್ಲ.ಪ್ರೇಮ ಕತೆಯೊಂದರ ದುರಂತದಲ್ಲಿ ಚಂಪಕಾಳಿಗಾಗಿ ಮನ ಕರಗುವಂತೆ ಮಾಡುವಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ. ಇದೊಂದು ಇತಿಹಾಸದ ಭಾಗ.ಚೌಡಪ್ಪ,ಭದ್ರಪ್ಪ ನಾಯಕ ಸಹೋದರರು ಕಟ್ಟಿದ ಸಾಮ್ರಾಜ್ಯ. ಸನ್ಯಾಸಿ ವೇಷದಲ್ಲಿ ದೆಹಲಿಯಲ್ಲಿ ಕತ್ತಿಯೊಂದರ ಕೆಳಗೆ ತಲೆಬಗ್ಗಿಸಿ ನಡೆಯದೇ ಹೋರಾಟದಲ್ಲಿ ತನ್ನ ಸುರಿಗೆ ನಾಗರಮರಿಯಿಂದ ಆಗಾಂಖಾನನ ತಲೆತರಿದ ದೊಡ್ಡ ಸಂಕಣ್ಣ ನಾಯಕ,ಅವನ ಮಗ ರಾಜಾವೆಂಕಟಪ್ಪ ನಾಯಕ, ಕಂದಾಯ ನಿಖರತೆಯ ಶಿಸ್ತನ್ನು ತಂದ ಶಿವಪ್ಪ ನಾಯಕ,ತನ್ನಾಳ್ವಿಕೆಯ ಬಸರೂರಿಗೇ ಧಾಳಿಯಿಟ್ಟಿದ್ದ ಶಿವಾಜಿಯ ಮಗ ರಾಜಾರಾಮ ಪ್ರಾಣಭಯದಿಂದ ತನ್ನಲ್ಲಿ ಅಭಯ ಬಿಕ್ಷೆ ಬೇಡಿದಾಗ ಜಿಂಜಿಯಲ್ಲಿ ಆಶ್ರಯ ನೀಡಿ ಮೊಗಲರನ್ನೇ ಎದುರಿಸಿ ಹಿಮ್ಮೆಟ್ಟಿಸಿದ ದಿಟ್ಟೆ ಕೆಳದಿಯ ಚೆನ್ನಮ್ಮರಾಣಿ, ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಮೊದಲೇ ನಡೆದ ನಗರ ಬಂಡಾಯ,ಕೆನರಾ ಬಂಡಾಯಗಳು ಸಹಿತ ಇದೇ ವಂಶದ ಕವಲು/ನಿಷ್ಟರ ಪರಂಪರಾ ಇತಿಹಾಸವಿರಬೇಕಾದರೆ ಬೆಸ್ತರ ನೀಲಮ್ಮನ ಮುಖಾಂತರ ರಾಜಮನೆತನದ ಇತಿಹಾಸವನ್ನು ಕೇವಲ ಒಂದೆರಡು ಪುಟಗಳಲ್ಲಿ ಹೇಳಿಸಿದ್ದು ಯಾಕೋ ಕಡಿಮೆಯೆನಿಸಿತು. ಬಹಳಷ್ಟು ಸಾಮಗ್ರಿಗಳ ಶೇಖರಣೆಯಿಂದ ಇಂತಹ ಪುಸ್ತಕವೊಂದನ್ನು ಹೊರತಂದ ಅರುಣರ ಇತಿಹಾಸ ವೀಕ್ಷಣಾ ದೃಷ್ಟಿ ಸಂತೋಷ ತರುತ್ತದೆ. ಇದರಲ್ಲಿ ಬರುವ ನನ್ನೂರ ಕಾಂತಮಂಗಲ,ಬೆಳ್ಳಾರೆ,ಬಂದ್ಯಡ್ಕ ಮುಂತಾದ ಊರುಗಳ ಉಲ್ಲೇಖ ಕಂಡಾಗ ಅವರ ಪರಿಶ್ರಮದ ವ್ಯಾಪ್ತಿಯ ಅರಿವಾಯಿತು. ಒಟ್ಟಿನಲ್ಲಿ ಒಂದು ಒಳ್ಳೆಯ ಕೃತಿ ಮುಂದಿಟ್ಟಿದ್ದೀರ.ಮೊದಲ ಕೃಷಿಯಾದರೂ ಮನದೊಳಗೆ ತಲುಪಿದ್ದೀರಿ. ಕೆಲವಂತೂ ಕುತೂಹಲವೆನಿಸಿತು. ತಾವರೆಕೆರೆಯ ನೀರು ಇಬ್ಬದಿಗೆ ಸಾಗಿ ಅರಬ್ಬಿ ಸಮುದ್ರ ಹಾಗೂ ಬಂಗಾಳ ಕೊಲ್ಲಿ ಸೇರುವುದು, ಅರಮನೆಯಲ್ಲಿ ನಿಂತು ನಕ್ಷತ್ರಗಳ ರಾಶಿಯಲ್ಲಿ ತಂದೆಯನ್ನರಸುವ ಚಂಪಕಾ,ಕೆಳದಿಯ ಸಂಪತ್ತು ಕುಂಬಳೆಯಲ್ಲಿರುವ ನಿಗೂಢತೆ ಎಲ್ಲವೂ ಅಪೂರ್ವವೆನಿಸಿತು. ಇಷ್ಟೆಲ್ಲಾ ಬರೆಯುವ ಬಂಡವಾಳವಿದ್ದೂ ಯಾಕೋ ಸಾಕಿಷ್ಟೆಂದು ವಿಸ್ತರಿಸದೆ ಮುಗಿಸಿದಿರೆನಿಸಿತು. All the Best ಅರುಣ್.
Comments
Post a Comment