ಅರವಿಂದ್ ಚೊಕ್ಕಾಡಿ ಕನ್ನಡದ ಖ್ಯಾತ ಲೇಖಕರು ಅವರು ನನ್ನ ಕಾದಂಬರಿಗೆ ವಿಮಷೆ೯ ಮಾಡಿರುವುದು ನನಗೆ ಹಷ೯ ಉಂಟು ಮಾಡಿದೆ, ಬೆಸ್ತರ ರಾಣಿ ಚಂಪಕಾ ವಿಮಷೆ೯ -1
ಖ್ಯಾತ ಲೇಖಕ ಹಾಗು ಶಿಕ್ಷಣ ತಜ್ಞ ಅರವಿಂದ ಚೊಕ್ಕಾಡಿಯವರು ನನ್ನ ಕಾದಂಬರಿ ಬೆಸ್ತರ ರಾಣಿ ಚಂಪಕಾ ಬಗ್ಗೆ ಮಾಡಿರುವ ವಸ್ತು ನಿಷ್ಟ ವಿಮಶೆ೯ .
#ಪುಸ್ತಕ
ಪ್ರೇಮ ಪತ್ರಗಳನ್ನು ಎಲ್ಲರೂ ಓದಬಹುದಾದ ಅಂಚೆ ಕಾರ್ಡಿನಲ್ಲಿ ಬರೆಯಬೇಕೆನ್ನುವುದು ನನ್ನ ವಾದ, ನಂಬಿಕೆ ಮತ್ತು ಆಚರಣೆಯಾಗಿತ್ತು. ಏಕೆಂದರೆ ಅನುಮಾನಕ್ಕೆ ಆಸ್ಪದವೆ ಇರುವುದಿಲ್ಲ. ಸಮಸ್ಯೆ ಇರುವುದು ಬರೆಯುವುದು ಹೇಗೆ? ಎಂಬ ಬಗ್ಗೆ. ಸಂಕೇತಾಕ್ಷರಗಳು, ಸಂಕೇತ ಪದಗಳಿಂದ ಇದು ಕಾರ್ಯ ಸಾಧ್ಯವಾಗುತ್ತದೆ. ಆದರೆ ನಮ್ಮ ಪೂರ್ವೀಕರು ನಮಗಿಂತಲೂ ಬುದ್ಧಿವಂತರಾಗಿದ್ದರು. ಯಾವ ಚಿತ್ರವನ್ನು ರಂಗೋಲಿಯಲ್ಲಿ ಬಿಡಿಸಲಾಗುತ್ತದೆ ಎನ್ನುವುದು ಪ್ರೇಮ ಒಪ್ಪಿಗೆಯೋ ಅಲ್ಲವೊ ಎಂಬುದಕ್ಕೆ ಸಾಕ್ಷಿಯಾಗಿತ್ತು ಎಂದು ಗೊತ್ತಾದದ್ದು ಸ್ನೇಹಿತ ಅರುಣ್ ಪ್ರಸಾದ್ ಅವರು ಕಳುಹಿಸಿಕೊಟ್ಟ 'ಬೆಸ್ತರ ರಾಣಿ ಚಂಪಕಾ' ಕಾದಂಬರಿಯನ್ನು ಓದಿದ ಮೇಲೆಯೇ. ರಂಗೋಲಿಯಲ್ಲಿ ಗಂಡ- ಭೇರುಂಡದ ಚಿತ್ರವನ್ನು ಬಿಡಿಸಿದರೆ ಪ್ರೇಮವನ್ನು ಒಪ್ಪಿಕೊಂಡ ಹಾಗೆಯೇ ಎನ್ನುವುದು ಈ ಇಡೀ ಕಾದಂಬರಿಯ ಕೇಂದ್ರ ವಿಚಾರವಾಗಿದೆ.
ಅನೇಕರು ಸತ್ಯ ಇತಿಹಾಸ ಯಾವುದು? ಎಂದು ಪ್ರಶ್ನಿಸುತ್ತಾರೆ. ಆದರೆ ಅದನ್ನು ಹೇಳಲು ಸಾಧ್ಯವಿಲ್ಲ. ರಾಜಲಾಂಛನವನ್ನು ಯಾವ ಕೋನದಿಂದ ನೋಡಿದರೂ ಮೂರು ಸಿಂಹಗಳೇ ಕಾಣುವುದು. ಆದರೆ ಅದರಲ್ಲಿರುವುದು ನಾಲ್ಕು ಸಿಂಹಗಳು. ಹಾಗೆಯೇ ಇತಿಹಾಸವೂ ಕೂಡ. ಒಬ್ಬ ಒಳ್ಳೆಯ ರಾಜ ಎಂದಾದರೆ ಅವನು ಕರೆ, ಕಾಲುವೆ ತೋಡಿಸಿದ್ದನು, ದಾನ-ದತ್ತಿಗಳನ್ನು ನೀಡಿದ್ದನು ಎಂದೂ, ಕೆಟ್ಟ ರಾಜ ಎಂದಾದರೆ ವಿಪರೀತ ತೆರಿಗೆ ಹಾಕಿ ಜನರನ್ನು ಶೋಷಿಸಿದನು ಎಂದು ಯಾರಿಗೆ ಬೇಕಾದರೂ ಬರೆಯಿರಿ ಎಂದು ಇತಿಹಾಸದಲ್ಲಿ ಅಂಕಗಳನ್ನು ಕೊಡಿಸಬಹುದಷ್ಟೆ. ಇತಿಹಾಸವೆಂದರೆ ರಾಜರ ಇತಿಹಾಸವಷ್ಟೆ ಆಗಿರುವುದಿಲ್ಲ. ರಾಜರ ಇತಿಹಾಸವೆ ಆದಾಗಲೂ ಯುದ್ಧ ಗೆಲ್ಲುವುದು, ಸೋಲುವುದು, ಕೋಟೆ ಕೊತ್ತಲ ಕಟ್ಟುವುದು ಇಷ್ಟೇ ಆ ರಾಜರುಗಳಾಗಿರುವುದಿಲ್ಲ. ಅವರೂ ಮನುಷ್ಯರೇ. ರಾಜರುಗಳೂ ಮಾನವ ಸಹಜವಾದ ಸಂತೋಷ ಪಟ್ಟಿರುತ್ತಾರೆ. ಯುದ್ಧ ಗೆದ್ದೂ ನೊಂದಿರುತ್ತಾರೆ. ಎಡವಟ್ಟು ಮಾಡಿರುತ್ತಾರೆ. ಅದನ್ನೆಲ್ಲ ಇತಿಹಾಸಕಾರರು ಅರ್ಥೈಸುವುದಿಲ್ಲ ಅಷ್ಟೆ.
ಇತಿಹಾಸಕಾರರು ಅರ್ಥೈಸದೆ ಬಿಟ್ಟದ್ದನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನವನ್ನು ಅರುಣ್ ಪ್ರಸಾದ್ ಮಾಡಿದ್ದಾರೆ. ಕತೆಯು ಕೆಳದಿಯ ರಾಜಾ ವೆಂಕಟಪ್ಪ ನಾಯಕನು ಚಂಪಕಾಳನ್ನು ಪ್ರೇಮಿಸಿ ಮದುವೆಯಾಗಿ ದುರಂತವೊಂದರ ಸೃಷ್ಟಿಯಾಗುವ ಐತಿಹಾಸಿಕ ಸಂಗತಿಯನ್ನು ಹೊಂದಿದೆ. "ಯುದ್ಧಕ್ಕೆ ಹೆದರದ ಹೃದಯ ಪ್ರೇಮಕ್ಕೆ ಹೆದರಿತಲ್ಲ" ಎಂದು ವೆಂಕಟಪ್ಪ ನಾಯಕನಿಂದ ಅರುಣ್ ಪ್ರಸಾದ್ ಹೇಳಿಸಿದ ಮಾತು ಇತಿಹಾಸ ವರ್ತಮಾನ ಮತ್ತು ಬಹುಶಃ ಭವಿಷ್ಯವನ್ನು ಸಾಮಾನ್ಯೀಕರಿಸುವ ಮಹತ್ವದ ಮಾತಾಗಿ ಬಂದಿದೆ.
ಬಲು ಪುಟ್ಟ ಪುಟ್ಟ ವಾಕ್ಯಗಳು ಮತ್ತು ಪುಟ್ಟ ಪುಟ್ಟ ಅಧ್ಯಾಯಗಳಲ್ಲಿ ಶಕ್ತಿಶಾಲಿ ಭಾಷೆಯ ಮೂಲಕ ಬರೆಯಲಾಗಿರುವ ಈ ಕೃತಿಯಲ್ಲಿ ರಾಮಕ್ಷತ್ರಿಯರ ವಿವರ, ಪೋರ್ಚುಗೀಸರು, ಅರಬ್ಬರು, ಜಮೋರಿನ್ ದೊರೆ, ವಿಜಯನಗರ, ಗೋವಾ, ಇಟಲಿಯ ಪ್ರವಾಸಿ ಮುಂತಾದ ಬಹಳ ಐತಿಹಾಸಿಕ ವಿಷಯಗಳು ಉದ್ದೇಶಿತ ಗುರಿಯನ್ನು ತಲುಪುವ ಸಾಧನಗಳಾಗಿ ಬರುತ್ತವೆ. ಆದ್ದರಿಂದ ಬೋರ್ ಎನಿಸುವುದಿಲ್ಲ. ಈ ವಿವರಗಳಲ್ಲಿ ಗಂಗಾಮತಸ್ಥ ಬೋವಿಯವರದೆ ಆದ ಒಂದು ಮಠ ಇತಿಹಾಸದ ಭಾಗವಾಗಿ ಬಂದಿರುವುದು ಆಸಕ್ತಿದಾಯಕ ವಿಷಯವಾಗಿದೆ.
ಅರುಣ್ ಪ್ರಸಾದ್ ಅವರ ಗೆಲುವು ವಸ್ತುವನ್ನು ವಸ್ತುವಿನ ಸಹಜತೆಯಿಂದ ಪ್ರತ್ಯೇಕಗೊಳಿಸದೆ ಇರುವುದರಲ್ಲಿದೆ. ವೆಂಕಟಪ್ಪ ನಾಯಕ ಮತ್ತು ಚಂಪಕಾಳ ದುರಂತ ಪ್ರೇಮ ಅವರ ವಸ್ತು. ಆದರೆ ರಾಜನ ಸಹಜ ಕಾರ್ಯಗಳಾದ ಆಡಳಿತ, ರಕ್ಷಣೆ,ವ್ಯಾಪಾರ ಮುಂತಾದ ಜವಾಬ್ದಾರಿಗಳ ಜೊತೆಯಲ್ಲಿಯೇ ಪ್ರೇಮ ಕತೆಯೂ ಬರುತ್ತದೆ ಹೊರತು ಸಹಜ ಕಾರ್ಯಗಳನ್ನು ಕಾದಂಬರಿಯು ಕಡೆಗಣಿಸಿಲ್ಲ. ಈ ಅಂಶವು ಕೆಳದಿ ಅರಸರ ಬೇಕಲ ಕೋಟೆ ಸಂಬಂಧ, ಕಡಲ್ ಕಾವಲು ಮುಂತಾದ ಇತಿಹಾಸವನ್ನೂ ಬಿಚ್ಚಿಡಲು ಯಶಸ್ವಿಯಾಗಿದೆ.ಹಾಗೆಂದು ಅದು ತಾನು ಬೆಳೆಯಿಸಬೇಕಾದ ಪ್ರೇಮದ ಕಥಾವಸ್ತುವನ್ನು ಬೆಳೆಯಿಸುವುದರಲ್ಲಿ ಎಲ್ಲಿಯೂ ವಿಫಲವಾಗುವುದಿಲ್ಲ.ಹಿನ್ನಡೆಯನ್ನೂ ಪಡೆಯುವುದಿಲ್ಲ. ಸಮಗ್ರತೆಯ ಒಡಲನ್ನು ತಟ್ಟಬಲ್ಲ ಕತೆಗಾರನಿಗೆ ಮಾತ್ರ ಈ ರೀತಿಯ ಕೌಶಲವು ಸಾಧ್ಯವಾಗುತ್ತದೆ.
ತಾಯಿಯನ್ನು ಕಳೆದುಕೊಂಡ ಬೆಸ್ತರ ಹುಡುಗಿ ಚಂಪಕಾಳನ್ನು ವೆಂಕಟಪ್ಪ ನಾಯಕ ಪ್ರೀತಿಸುವುದು, ಆತನ ಪಟ್ಟದ ರಾಣಿ ಭದ್ರಮ್ಮಾಜಿಗೆ ಈ ಸಂಬಂಧ ಇಷ್ಟವಾಗದೆ ಕಿರುಕುಳಗಳು ಸೃಷ್ಟಿಯಾಗುವುದು, ಈ ಸನ್ನಿವೇಶವನ್ನು ಸಾಮ್ರಾಜ್ಯವನ್ನು ದುರ್ಬಲಗೊಳಿಸುವುದಕ್ಕಾಗಿ ಬಳಸುವವರು ರೂಪಿಸುವ ಕಾರ್ಯತಂತ್ರಗಳು, ನೊಂದ ಚಂಪಕಾ ವಜ್ರದ ಹುಡಿಯನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದು, ವೆಂಕಟಪ್ಪ ನಾಯಕ ಆಕೆಗಾಗಿ ಸ್ಮಾರಕವನ್ನು ನಿರ್ಮಿಸುವುದು ಕಥೆ.
ಆದರೆ ಇಲ್ಲಿನ ಸಂಬಂಧಗಳು ತುಂಬ ಸಂವೇದನಾಶೀಲವಾದವುಗಳು. ಲಿಂಗಾಯಿತ ರಾಜ. ವೀರಶೈವ ರಾಣಿ ಭದ್ರಮ್ಮಾಜಿ. ಸಸ್ಯಾಹಾರಿಗಳು. ಭದ್ರಮ್ಮಾಜಿಗೆ ಸವತಿ ಮಾತ್ಸರ್ಯವಿಲ್ಲ. ಆಕೆಯೂ ಗಂಡನ ಶ್ರೇಯಸ್ಸನ್ನೆ ಬಯಸುವವಳು. ಇನ್ನೊಬ್ಬ ರಾಣಿಯ ಬಗ್ಗೆಯೂ ಆಕೆಯ ತಕರಾರುಗಳಿಲ್ಲ. 'ಜಾತಿ' ಆಕೆಯ ತಕರಾರಿನ ಕಾರಣ ಎಂಬಂತೆ ಕಂಡರೂ ಕತೆಯ ಒಡಲಿನಲ್ಲಿ ಮೂಡಿ ಬರುವ ಅನುಭವ ಶಿಲ್ಪವು ಜಾತಿಯೂ ತಕರಾರಿನ ಕಾರಣ ಅಲ್ಲ ಎಂಬುದನ್ನೆ ಹೇಳುತ್ತದೆ. ತಕರಾರಿನ ಮುಖ್ಯ ಕಾರಣ ಆಹಾರ ಪದ್ಧತಿಯೇ. ಆ ನಂಬಿಕೆಯು ಸರಿಯೋ ತಪ್ಪೋ ಎನ್ನುವುದಕ್ಕಿಂತ ಅದು ಭದ್ರಮ್ಮಾಜಿಯ ನಂಬಿಕೆ. ಆ ನಂಬಿಕೆಗೆ ಆಕೆ ನಿಷ್ಠಳು. ಅದಕ್ಕಾಗಿ ಆಕೆಯನ್ನು ಆರೋಪಿಯ ಸ್ಥಾನದಲ್ಲಿ ನಿಲ್ಲಿಸಲು ಬರುವುದಿಲ್ಲ. ಪಟ್ಟದ ರಾಣಿ ರಾಜನಿಗೆ,"ಇನ್ನು ಮುಂದೆಯೂ ನಿಮ್ಮೆಲ್ಲ ಕಾರ್ಯಗಳಲ್ಲಿ ಜೊತೆಯಾಗಿರುತ್ತೇನೆ. ಆದರೆ ವೈಯಕ್ತಿಕ ಸಂಬಂಧದಲ್ಲಿ ಮಾತ್ರ ನಿಮಗೆ ಮಗಳಾಗಿ ಇರುತ್ತೇನೆ" ಎನ್ನಬೇಕಾದರೆ ಆಕೆಗೆ ಆಗಿರಬಹುದಾದ ಆಘಾತ ಮತ್ತು ವೇದನೆಯ ಸ್ವರೂಪವನ್ನು ಅರ್ಥ ಮಾಡಿಕೊಳ್ಳಬೇಕು. ಭದ್ರಮ್ಮಾಜಿಯನ್ನು ಸುಲಭವಾಗಿ ವಿಲನೆಸ್ ಮಾಡಬಹುದಾಗಿದ್ದ ಸನ್ನಿವೇಶವನ್ನು ಭದ್ರಮ್ಮಾಜಿಯನ್ನು ಅರಿತುಕೊಳ್ಳುವ ಪ್ರಕ್ರಿಯೆಯಾಗಿ ರೂಪಿಸಿರುವಲ್ಲಿಯೇ ಅರುಣ್ ಪ್ರಸಾದ್ ಒಬ್ಬ ನಿಜವಾದ ಅರ್ಥದಲ್ಲಿ ಲೇಖಕ ಎನ್ನುವುದಕ್ಕೆ ಸಾಕ್ಷಿಯೂ ದೊರೆಯುತ್ತದೆ.
ಹಾಗಾದರೆ ರಾಜನದು ತಪ್ಪಾ? ಅಲ್ಲ. ಸಹಜ ಅದು. ಚಂಪಕಾಳದ್ದು ತಪ್ಪಾ?ಆಕೆ ಅತ್ಯಂತ ಪ್ರಾಮಾಣಿಕಳು. ಭದ್ರಮ್ಮಾಜಿಗಾಗಿ ನೊಂದುಕೊಳ್ಳುವ ಮನಸಿರುವ ಹೆಣ್ಣು. ಹಾಗಾದರೆ ತಪ್ಪು ಯಾರದು? ಯಾರದೂ ಅಲ್ಲ. ಆದರೂ ದುರಂತವೊಂದು ಘಟಿಸುತ್ತದೆ ಎನ್ನುವಲ್ಲಿ ಅರುಣ್ ಪ್ರಸಾದ್ ಅವರು ಗ್ರಹಿಸಿಕೊಂಡಿರುವ ಭವ್ಯ ಜೀವನದೃಷ್ಟಿಯ ಅನಾವರಣವು ನಡೆಯುತ್ತದೆ. ಇಲ್ಲಿ ಪ್ರಜ್ಞಾಪೂರ್ವಕವಾಗಿಯೆ ಭವ್ಯ ಜೀವನದೃಷ್ಟಿ ಎಂಬ ಪದವನ್ನು ಬಳಸಿದ್ದೇನೆ. ಯಾರದ್ದು ಸರಿ, ಯಾರದ್ದು ತಪ್ಪು ಎನ್ನುವವನು ನ್ಯಾಯಾಧೀಶನಾಗಿರುತ್ತಾನೆ. ಲೇಖಕನಿಗೆ ಅವರವರ ನೆಲೆಯಲ್ಲಿ ಪ್ರತಿಯೊಬ್ಬರೂ ಸರಿಯೇ ಎಂದು ಗೊತ್ತಿರುತ್ತದೆ. ಅವನ ಕಾಳಜಿ ಮತ್ತು ಚಡಪಡಿಕೆಗಳು ದುರಂತದ ಬಗ್ಗೆ ಇರುತ್ತದೆಯೆ ಹೊರತು ತಪ್ಪಿತಸ್ಥರನ್ನು ಗುರುತಿಸಿ ಶಿಕ್ಷೆ ಕೊಡಿಸುವುದರಲ್ಲಿ ಇರುವುದಿಲ್ಲ. ಇದು ಭವ್ಯ ಜೀವನ ದೃಷ್ಟಿ.
ಅಧಿಕಾರದ ಸಂವೇದನಾರಾಹಿತ್ಯವನ್ನು ಚಂಪಕಾಳ ಒಂದು ಮಾತಿನಲ್ಲಿ ಅರುಣ್ ಪ್ರಸಾದ ಎಷ್ಟು ಪರಿಣಾಮಕಾರಿಯಾಗಿ ಕಟ್ಟಿಕೊಡುತ್ತಾರೆಂದರೆ ಅದು ಸಾರ್ವಕಾಲಿಕ ಸತ್ಯ. "ಸುಖ-ದುಃಖ ಎರಡೂ ಅರಮನೆಯ ಅಂತಃಪುರದಲ್ಲಿ ಇಲ್ಲವೇ ಇಲ್ಲ" ಎಂಬ ಒಂದೇ ಮಾತು ಎಲ್ಲವನ್ನೂ ಹೇಳಿಬಿಡುತ್ತದೆ. ಈ ಮಾತನ್ನು ಹೇಳುವುದು ಭದ್ರಮ್ಮಾಜಿಯಲ್ಲ; ಚಂಪಕಾ. ಏಕೆಂದರೆ ಸ್ವತಂತ್ರ ಬದುಕಿನ ಅನುಭವವಿರುವ ಆಕೆ ಮಾತ್ರವೇ ಇದನ್ನು ಗುರುತಿಸಲು ಸಾಧ್ಯ. ಆದರೆ ಆಕೆಗೆ ಅನುಭವವೇದ್ಯವಾಗುವುದನ್ನು ಆಕೆಯ ತಂದೆ ಮಸ್ಯಾಬೋವಿ ಮೊದಲೇ ಗ್ರಹಿಸಿದ್ದಾನೆ. ಮಸ್ಯಾಬೋವಿಯೂ ಮದುವೆಗೆ ವಿರೋಧಿಯೇ. ರಾಜನ ಬಗ್ಗೆ ವಿರೋಧ ಅಲ್ಲ. ತನ್ನ ಮಗಳು ರಾಣಿಯಾಗಬಾರದೆಂದೂ ಅಲ್ಲ. ಆದರೆ ಮಗಳಿಗೆ ಮುಂದೆ ಆಗಲಿರುವ ಅನುಭವದ ಅರಿವು ಆತನಿಗಿದೆ. ಈ ಮುಖಾಂತರ ಅರುಣ್ ಪ್ರಸಾದ್ ತಮ್ಮ ಪಾತ್ರಗಳ ಸೈಕಾಲಜಿಯನ್ನು ಎಷ್ಟು ಚೆನ್ನಾಗಿ ಓದಿಕೊಂಡಿದ್ದಾರೆಂದರೆ ಅರುಣ್ ಪ್ರಸಾದ್ ಸುಮ್ಮನೇ ಇದ್ದರೂ ಪಾತ್ರಗಳೇ ಕತೆಯನ್ನು ನಿರೂಪಿಸಬಲ್ಲವು ಎನ್ನುವ ಹಾಗೆ.
ಇತಿಹಾಸವೆಂದರೆ ಘಟನಾವಳಿಗಳ ಸರಮಾಲೆ. ಯಾಂತ್ರಿಕ ನಿರೂಪಣೆ. ಒಳ್ಳೆಯವರು ಕೆಟ್ಟವರು ಎಂಬ ಕಪ್ಪು ಬಿಳುಪಿನ ಚಿತ್ರಣ ಎಂದುಕೊಂಡಿರುವ ಹೊತ್ತಿನಲ್ಲಿ ಇತಿಹಾಸದ ಮಾನವೀಕರಣವನ್ನು ಸಾಧಿಸಲು ತೊಡಗುವ ಅರುಣ್ ಪ್ರಸಾದ್ ಅವರಂತಹ ಲೇಖಕರು ಮುಖ್ಯರಾಗುತ್ತಾರೆ. ಇತಿಹಾಸದ ಅರಿವಿನೊಂದಿಗೆಯೇ ಮನುಷ್ಯನನ್ನು ಜೀವನ್ಮುಖಿಯಾಗಿ ಇಡಲು ತೊಡಗುವ ಈ ರಚನೆಗಾಗಿ ಅರುಣ್ ಪ್ರಸಾದ್ ಅವರನ್ನು ನಾನು ಅಭಿನಂದಿಸುತ್ತೇನೆ.
Comments
Post a Comment