ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಮೆಮೋರಿಯಲ್ ರೀಸಚ್೯ ಸೆಂಟರ್ ನಲ್ಲಿ ಪಿ ಹೆಚ್ ಡಿ ಮಾಗ೯ದಶ೯ಕರಾದ ಡಾ. ಜನಾದ೯ನ ಭಟ್ಟರು ಮಾಡಿರುವ ಬೆಸ್ತರ ರಾಣಿ ಚ೦ಪಕಾ ವಿಮಷೆ೯ - 10
#ನಾನೆಲ್ಲಿ_ನನ್ನ_ಚೊಚ್ಚಲ_ಕಾದಂಬರಿ_ಎಲ್ಲಿ_ಇದನ್ನು_ವಿದ್ವಾ೦ಸರು_ವಿಮಷಿ೯ಸುತ್ತಾರೆಂದರೆ
ನನಗೆ ನನ್ನನ್ನೇ ನಂಬಲಾಗುತ್ತಿಲ್ಲ?!
#ಡಾ_ಜನಾದ೯ನ_ಭಟ್ಟರು ಬರಹಗಾರರು, ವಿಮಷ೯ಕರು ಅವರ ಬಳಗ ದೊಡ್ಡದು ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಮೆಮೋರಿಯಲ್ ರೀಸಚ್೯ ಸೆಂಟರ್ ನಲ್ಲಿ ಪಿ.ಹೆಚ್.ಡಿ. ಮಾಗ೯ದಶ೯ಕರಾಗಿ ದೊಡ್ಡ ಹುದ್ದೆ ನಿವ೯ಹಿಸುತ್ತಿದ್ದಾರೆ.
ತಮ್ಮ ಕಾಯಾ೯ಭಾರದ ಸಮಯ ಅಭಾವದಲ್ಲೂ ಸಮಯ ಹೊಂದಿಸಿ ಓದಿ ವಿಮಷೆ೯ ಮಾಡಿದ್ದು ನನಗೆ ಸಂತೋಷ ಆಗಿದೆ.
ಕುಂಬಳೆಯ ಅನಂದಪುರದ ಕೊಳದಲ್ಲಿ ರಹಸ್ಯವಾಗಿ ನಿಧಿ ಇದೆ ಎಂಬ ಬಗ್ಗೆ ಕೇಂದ್ರದ ಪ್ರಾಚ್ಯ ವಸ್ತು ಸಂಶೋಧನಾ ಇಲಾಖೆ ಸಂಶೋದನೆಗಾಗಿ 15 ಲಕ್ಷ ಹಣ ಮಂಜೂರು ಮಾಡಿದೆ ಅಂತ ಕುಂಬಳೆಯ ಅರಮನೆ ವಂಶಸ್ಥರಾದ ರಮಾಕಾಂತ ಕುಂಬಳೆ ಈ ಪುಸ್ತಕದ ಬಗ್ಗೆ ಅವರಲ್ಲಿ ಹೋಗಿ ಚಚಿ೯ಸಿದಾಗ ತಿಳಿಸಿದ್ದರು.
ಸಂಶೋದಕರಿಗೆ ಕೆಳದಿ ಇತಿಹಾಸದ ಇನ್ನೊಂದು ಆಸಕ್ತಿಕರ ವಿಷಯ ಇದೆ ಅದೇನೆಂದರೆ ಕೆಳದಿ ರಾಜ ಮನೆತನ ಲಿಂಗಾಯಿತ ವೀರಶೈವರಾಗಿದ್ದದ್ದು ಅಂತ್ಯದಲ್ಲಿ ರಾಮಕ್ಷತ್ರಿಯರಾಗುತ್ತದೆ ಇದು ಇನ್ನೊಂದು ಪುಸ್ತಕ ಬರೆಯುವಷ್ಟು ಇದೆ.
ಅವರ ವಸ್ತು ನಿಷ್ಟ ವಿಮಷೆ೯ ನಿಮಗಾಗಿ
#ಶಿವಮೊಗ್ಗ_ಜಿಲ್ಲೆಯ_ಆನಂದಪುರಂನ_ಕೆ_ಅರುಣಪ್ರಸಾದ್_ಅವರು_ಬರೆದ_ಬೆಸ್ತರರಾಣಿ_ಚಂಪಕಾ ಎನ್ನುವ ಐತಿಹಾಸಿಕ ಕಾದಂಬರಿಯನ್ನ ಓದಿದೆ. ಗೆಳೆಯ ಅರವಿಂದ ಚೊಕ್ಕಾಡಿಯವರು ಈ ಕಾದಂಬರಿಯ ಬಗ್ಗೆ ಬರೆದುದನ್ನು ಓದಿ, ಕಾದಂಬರಿಯನ್ನು ಓದುವ ಆಸೆಯಾಗಿ ತರಿಸಿಕೊಂಡೆ.
ಕಾದಂಬರಿ ನನಗೆ ತುಂಬಾ ಇಷ್ಟವಾಯಿತು. ಕೆಳದಿ ನಾಯಕರು ನಮ್ಮ ಕರಾವಳಿಯನ್ನೂ ಆಳಿ ಸಾಕಷ್ಟು ನೆನಪುಗಳನ್ನು ಉಳಿಸಿದ್ದಾರೆ. ಹಾಗಾಗಿ ಈ ಕಾದಂಬರಿಯಲ್ಲಿ ರಾಜಾ ವೆಂಕಟಪ್ಪ ನಾಯಕ ಮತ್ತು ಚಂಪಕಾರಾಣಿ ಅವರ ದುರಂತ ಪ್ರೇಮಕಥೆಯ ಜತೆಗೆ ನಮಗೆ ಹೊಸ ವಿಚಾರಗಳೂ ಸಿಗಬಹುದು ಎನ್ನುವ ನಿರೀಕ್ಷೆ ಇತ್ತು. ಈ ಕಾದಂಬರಿ ನನ್ನ ನಿರೀಕ್ಷೆಗಳನ್ನೆಲ್ಲ ತೃಪ್ತಿಪಡಿಸಿದೆ. ಹೊಸ ಅಧ್ಯಯನಗಳಿಗೆ, ಕ್ಷೇತ್ರಕಾರ್ಯಕ್ಕೆ ಪ್ರೇರಣೆ ನೀಡಿದೆ. ಉದಾಹರಣೆಗೆ, ಕುಂಬಳೆ ಸಮೀಪದ ಅನಂತಪುರದ ದೇವಸ್ಥಾನದ ಕೆರೆಯಲ್ಲಿ ಕೆಳದಿ ಅರಸರ ನಿಧಿಯಿದೆ ಎಂದು ಈ ಪುಸ್ತಕದಲ್ಲಿದೆ. ಅಲ್ಲಿ ಈಗಲೂ ಇರುವ, ಅರ್ಚಕರ ಕೈಯಿಂದ ನೈವೇದ್ಯ ಸ್ವೀಕರಿಸುವ ಬಬಿಯಾ ಮೊಸಳೆಯನ್ನು ನಿಧಿಯ ಕಾವಲಿಗೆ ಇಟ್ಟದ್ದು ಎಂದಿದೆ. (ಇದು ಆನುಷಂಗಿಕ ವಿಚಾರ ಅಷ್ಟೆ. ನನ್ನ ಕುತೂಹಲ ಕೆರಳಿಸಿದ್ದರಿಂದ ಉಲ್ಲೇಖಿಸಿದೆ. ಅಲ್ಲಿಗೆ ಹೋಗಿದ್ದಾಗ ಈ ವಿಚಾರವನ್ನು ಯಾರೂ ಹೇಳಿಲ್ಲ).
ಈ ಕಾದಂಬರಿಯ ಕೇಂದ್ರದಲ್ಲಿ ರಾಜಮನೆತನದ ಒಂದು ಅಂತರ್ಜಾತೀಯ ವಿವಾಹದ ದುರಂತ ಕತೆಯಿದೆ. ಆನಂದಪುರದ ಗಂಗಾಮತಸ್ಥ (ಬೆಸ್ತ) ಸುಂದರಿ ಚಂಪಕಾಳನ್ನು ರಾಜಾ ವೆಂಕಟಪ್ಪ ನಾಯಕರು ಪ್ರೀತಿಸಿ ಮದುವೆಯಾಗುತ್ತಾರೆ. ರಾಜರು ಒಂದಕ್ಕಿಂತ ಹೆಚ್ಚು ಮದುವೆಯಾಗುವುದು ಸಾಮಾನ್ಯ ಆದರೂ ಸಸ್ಯಾಹಾರಿ ರಾಜಮನೆತನಕ್ಕೆ ಮಾಂಸಾಹಾರಿ ಹುಡುಗಿ ಪ್ರವೇಶಿಸುವುದು ಹಿರಿಯ ರಾಣಿಗೆ ಇಷ್ಟವಾಗುವುದಿಲ್ಲ. ಅವರು ತಮ್ಮಿಂದಾದ ಪ್ರಯತ್ನವನ್ನು ಮಾಡಿದರೂ ಈ ಮದುವೆಯನ್ನು ತಪ್ಪಿಸಲಾಗದೆ ವಿರಕ್ತಿಯನ್ನು ತಾಳುತ್ತಾರೆ. ಹೆಚ್ಚು ಸಮಯ ಬದುಕದೆ ಪ್ರಾಣತ್ಯಾಗ ಮಾಡುತ್ತಾರೆ. ಚಂಪಕಾ ವಜ್ರ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ.
ಅವಳ ನೆನಪಿಗೆ ರಾಜರು ಕಟ್ಟಿಸಿದ್ದೇ ಚಂಪಕ ಸರಸ್ಸು. ಈ ಸ್ಮಾರಕವೂ ಜನೋಪಯೋಗಿ ಆಗಿರುವುದು ಕನ್ನಡ ನಾಡಿನ ಅರಸರ ಪ್ರಜಾವಾತ್ಸಲ್ಯವನ್ನು ಸೂಚಿಸುತ್ತದೆ.
ಈ ಕಾದಂಬರಿಯಲ್ಲಿ ಆ ಕಾಲದ ರಾಜಕೀಯ, ಪೋರ್ಚುಗೀಸರ ಉಪಟಳ, ವಿದೇಶ ವ್ಯಾಪಾರ ಇತ್ಯಾದಿ ಹಲವು ವಿಷಯಗಳು ಬರುತ್ತವೆ. ರಾಜ ಸಾಂಸಾರಿಕ ತುಡಿತಗಳ ಜತೆಗೆ ಇಂತಹ ಹಲವು ಸಂಗತಿಗಳನ್ನು ಗಮನಿಸಬೇಕಾದ್ದನ್ನು ಹೀಗೆ ತೋರ್ಪಡಿಸಲಾಗಿದೆ. ಆ ಕಾಲದ ಚಿತ್ರಣ ಇದರಿಂದ ಪರಿಪುಷ್ಟವಾಗಿದೆ.
ಇಷ್ಟು ಅಧ್ಯಯನಪೂರ್ಣ ಕಾದಂಬರಿಯನ್ನು ಬರೆದರೂ ಅರುಣಪ್ರಸಾದ್ ಈ ಕಾದಂಬರಿಯಲ್ಲಿ ಚಿತ್ರಿಸಿದ ವಿಚಾರಗಳಲ್ಲಿ ಮಾಹಿತಿಯ ಕೊರತೆ ಇದ್ದರೆ ತಮ್ಮ ಗಮನಕ್ಕೆ ತರಲು ಕೋರಿದ್ದಾರೆ.
ನನ್ನ ಸಂಗ್ರಹದಲ್ಲಿ ಈ ಕಾದಂಬರಿಯನ್ನು ಸೇರಿಸಿಕೊಳ್ಳಲು ಸಂತೋಷವಾಗಿದೆ. ನನಗೆ ಲೇಖಕರು ಈ ಕೃತಿಯನ್ನು ರಚಿಸಿದ ಹಿನ್ನೆಲೆ ಇಷ್ಟವಾಗಿದೆ. ಚಂಪಕಾ ಎನ್ನುವ ವೇಶ್ಯೆಗಾಗಿ ರಾಜರು ಕಟ್ಟಿಸಿದ ಸರಸ್ಸು ಇದು ಎಂದು ಒಮ್ಮೆ ಪತ್ರಿಕೆಗಳು ಇದರ ಬಗ್ಗೆ ಬರೆದಿದ್ದವಂತೆ. ಆಗ ಅರುಣಪ್ರಸಾದ್ ಅದಕ್ಕೆ ಪ್ರತಿಕ್ರಿಯಿಸಿ ನಿಜವಾದ ಇತಿಹಾಸವನ್ನು ತಿಳಿಸಿದ್ದರಂತೆ. ಇಂತಹ ತಪ್ಪು ಅಭಿಪ್ರಾಯವನ್ನು ದೂರಮಾಡಲು ಅವರು ಈ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿ ಒಂದು ಕಾದಂಬರಿಯನ್ನೇ ಬರೆದಿದ್ದಾರೆ. ಈ ಊರಿನ ಯುವಕರು ಈ ಸರಸ್ಸಿನ ಬಗ್ಗೆ ಇಟ್ಟುಕೊಂಡಿರುವ ಅಭಿಮಾನವೂ ಮಾದರಿಯಾಗಿದೆ. ಆನಂದಪುರಂನ ಇತಿಹಾಸ ಪರಂಪರೆ ಉಳಿಸಿ ಅಭಿಯಾನ ಸಮಿತಿ ಪ್ರತಿವರ್ಷ ಚಂಪಕರಾಣಿ ನೆನಪಿಗೆ ಸರೋವರ ಸ್ವಚ್ಛ ಮಾಡುತ್ತಾರಂತೆ. ಆನಂದಪುರಂ ಕನ್ನಡ ಯುವಕ ಸಂಘ ಈ ಪುಸ್ತಕವನ್ನು ಪ್ರಕಟಿಸಿದೆ.
ಈ ಪುಸ್ತಕದ ಲೇಖಕ ಅರುಣಪ್ರಸಾದ್ ಅವರಿಗೆ ಅಭಿನಂದನೆಗಳು. ಅವರ ದೂರವಾಣಿ ಸಂಖ್ಯೆ: 9449253788
Comments
Post a Comment