ನನಗೆ ಮನೆ ಎದರು ಮಲ್ಲಿಗೆ ಹೂ ಬಳ್ಳಿಯ ಚಪ್ಪರ ಮಾಡಬೇಕೆಂದು ತುಂಬಾ ವರ್ಷದ ಆಸೆ ಇತ್ತು, ಹೊಸ ಮನೆ ನಿರ್ಮಿಸಿದ ಮೇಲೆ ಜಾಗದ ಬಳಕೆ ಅಂದಾಜಿಸಿ ಮನೆ ಮತ್ತು ಗೇಟಿನ ಮಧ್ಯೆ ಕಬ್ಬಿಣದ ಕಮಾನು ನಿರ್ಮಿಸಿ ಒಂದು ಕಡೆ ಚೆನ್ನಗಿರಿ ಕಡೆಯ ಕಾಡು ಮಲ್ಲಿಗೆ ಇನ್ನೊಂದು ಕಡೆ ಮಲೆನಾಡ ಊರು ಮಲ್ಲಿಗೆ ನೆಟ್ಟು ಮೂರು ವರ್ಷದಿಂದ ಎರೆಡೂಬಳ್ಳಿ ಒಂದಾಗಲು ಕಾದಿದ್ದೆ.
ಮುಂಗಾರು ಪ್ರಾರಂಭದಲ್ಲಿ ಎರೆಡೂ ಮಲ್ಲಿಗೆ ಬಳ್ಳಿ ಸೇರಿದೆ, ನಿತ್ಯ ಅರ್ಧ ಬುಟ್ಟಿ ಮಲ್ಲಿಗೆ ಹೂವು ಪಾರ್ಕಿಂಗ್ ದಾರಿ ತುಂಬ ಉದಿರಿ ಬಿದ್ದಿರುತ್ತದೆ, ಬಳ್ಳಿಯಲ್ಲಿ ತಿಳಿಗಾಳಿಗೆ ಒಲಾಡುವ ಮಲ್ಲಿಗೆಯ ಹೂಗೊಂಚಲಿಂದ ಮಲ್ಲಿಗೆಯ ಸುವಾಸನೆ ಪಸರಿಸಿದೆ, ಜೇನು, ಪತಂಗ ಮತ್ತು ಸಣ್ಣ ಹಕ್ಕಿಗಳು ಅಲ್ಲಿ ಕಲರವವಿದೆ.
ನನ್ನ ಆಸೆ ಈಡೇರಿದೆ ಈಗ ಮಲ್ಲಿಗೆಯ ಸುವಾಸನೆಯಲ್ಲಿ, ಮಲ್ಲಿಗೆಯ ಬನದಲ್ಲಿ, ಮಲ್ಲಿಗೆಯ ಹೂವಿನ ಹಾಸಿಗೆ ಮೇಲೆ ನನ್ನ ತೂಕ ಇಳಿಸುವ, ದೇಹದ ಸಕ್ಕರೆ ನಿಯಂತ್ರಿಸುವ ವಾಕಿಂಗ್ ನಡೆದಿದೆ.
ಶಿಶುನಾಳದಲ್ಲಿ ಶಿಶುನಾಳ ಷರೀಪರು ತಮ್ಮ ತಂದೆ ತಾಯಿ ಸಮಾದಿ ಮೇಲೆ ಹಾಕಿರುವ ಮಲ್ಲಿಗೆ ಹೂವಿನ ಬಳ್ಳಿ ಶತಮಾನ ಕಳೆದರೂ ನಿತ್ಯ ಮಲ್ಲಿಗೆ ಹೂವು ಚೆಲ್ಲುತ್ತಲೇ ಇದೆ ಇದು ಮಲ್ಲಿಗೆ ಅಂದಾಗೆಲ್ಲ ನನಗೆ ನೆನಪಾಗುತ್ತದೆ.
Comments
Post a Comment