ಭಾಗ -34, ಆನಂದಪುರಂ ಇತಿಹಾಸ, ಆನಂದಪುರಂನ ಶೈಕ್ಷಣಿಕ -ಸಾಂಸ್ಕೃತಿಕ ಮತ್ತು ಸಾಮಾಜಿಕ ಅಭಿವೃದ್ದಿಗೆ ಮಹತ್ತರ ಕೊಡುಗೆ ನೀಡಿದ ಡಾಕ್ಟರ್ ಸುಸೇನಾಥನ್
#ಭಾಗ_34.
#ಆನಂದಪುರಂ_ಇತಿಹಾಸ.
#ಆನಂದಪುರಂನ_ಶೈಕ್ಷಣಿಕ_ಸಾಮಾಜಿಕ_ಮತ್ತು_ಸಾಂಸ್ಕೃತಿಕ_ಕ್ಷೇತ್ರಕ್ಕೆ_ಅಪಾರ_ಕೊಡುಗೆ_ನೀಡಿದ_ಮಹಾನ್_ವ್ಯಕ್ತಿ.
#ಡಾಕ್ಟರ್_ಸುಸೇನಾಥನ್
#ಸೌಮ್ಯ_ಶಿಸ್ತು_ತಾಳ್ಮೆ_ಪ್ರತಿರೂಪದವರು
#ಆನಂದಪುರಂನ_ಅಗ್ರಹಾರದಲ್ಲಿ_ಎಲ್ಲರಿಗೂ_ಬೇಕಾದವರು.
#ಆನಂದಪುರಂನ_ಶಾಲೆಗಳಲ್ಲಿ_ಬ್ಯಾಂಡ್_ತರಬೇತಿ_ನೀಡುತ್ತಿದ್ದರು.
#ಸಂಗೀತ_ಸಾಧನ_ನುಡಿಸುವುದರಲ್ಲಿ_ಎತ್ತಿದ_ಕೈ.
ಆನಂದಪುರಂನಲ್ಲಿ ಬದರಿನಾರಾಯಣ್ ಅಯ್ಯ೦ಗಾರರ ತಂದೆ ಜಮೀನ್ದಾರ್ ರಾಮಕೃಷ್ಣ ಅಯ್ಯಂಗಾರರು ಸಾರ್ವಜನಿಕರಿಗಾಗಿ ಕಟ್ಟಿಸಿದ್ದ ಸುಸಜ್ಜಿತ ಆಸ್ಪತ್ರೆ (ತಮ್ಮ ಪತ್ನಿ ಶ್ರೀಮತಿ ಕನಕಮ್ಮಾಳ್ ಸ್ಮಾರಕ) ಆ ಕಾಲದಲ್ಲೇ ಎಷ್ಟು ಸುಸಜ್ಜಿತ ಎಂದರೆ ಈ ಆಸ್ಪತ್ರೆ ಅವರಣದಲ್ಲಿ ವೈದ್ಯರು ಮತ್ತು ಮಹಿಳಾ ವೈದ್ಯರಿಗೆ ಎರೆಡು ಪ್ರತ್ಯೇಕ ಮನೆಗಳು, ರೋಗಿಗಳಿಗೆ ಆಹಾರ ತಯಾರಿಸಲು ಅಡುಗೆಮನೆ, ದಾಸ್ತಾನು ಕೊಠಡಿ, ನರ್ಸ್ ಕೌಟರ್ಸ್ಗಳು, ರೈಲ್ವೆ ಸ್ಟೇಷನ್ ಹತ್ತಿರ ಸಿಬ್ಬಂದಿಗಳಿಗಾಗಿ ಎರೆಡು ಹೆಚ್ಚುವರಿ ಮನೆಗಳು, ಶವ ಪರೀಕ್ಷೆಗಾಗಿ ಸಂತೆ ಮಾಕೆ೯ಟ್ ಮೂಲೆಯಲ್ಲಿ ಶವಾಗಾರ ಹೀಗಿದ್ದ ಆಸ್ಪತ್ರೆ ಒಳಗೆ ಸುಸಜ್ಜಿತ ಆಪರೇಷನ್ ಥಿಯೇಟರ್ ಕೂಡ ನಿರ್ಮಿಸಿದ್ದರು.
ಉಚಿತ ಔಷದಕ್ಕಾಗಿ ಒ0ದು ಲಕ್ಷ ರೂಪಾಯಿ ನಿಶ್ಚಿತ ಠೇವಣಿ ಇಟ್ಟಿದ್ದರು (ಅದರ ಬಡ್ಡಿ ಹಣದಲ್ಲಿ ಹೆಚ್ಚುವರಿ ಔಷದಿ ಖರೀದಿಸಲಿಕ್ಕಾಗಿ), ಆನಂದಪುರಂ ಆಸ್ಪತ್ರೆಗೆ ಅತ್ಯುತ್ತಮ ಸಿಬ್ಬಂದಿಗಳನ್ನು ತಮ್ಮ ಪ್ರಭಾವದಿಂದ ವರ್ಗಾಯಿಸಿಕೊಳ್ಳುತ್ತಿದ್ದರು.
ಹೀಗಾಗಿಯೇ ಆನಂದಪುರಂ ಆಸ್ಪತ್ರೆಗೆ ಕಂಪೌಂಡರ್ ಆಗಿ ಕೋಲಾರದ ಕೆಜಿಎಪ್ ನಲ್ಲಿ ಜನಿಸಿ ಶಿವಮೊಗ್ಗದಲ್ಲಿ ಶಿಕ್ಷಣ ಮುಗಿಸಿ ಭದ್ರಾವತಿ ಮತ್ತು ಜೋಗ ಆಸ್ಪತ್ರೆಯಲ್ಲಿ ಕಾಯ೯ನಿರ್ವಹಿಸಿ ಅಲ್ಲಿಂದ ಸುಸೇನಾಥನ್ ಬರುತ್ತಾರೆ. ಬಂದವರು ಕೆಲ ದಶಕಗಳ ಆನಂದಪುರಂ ಜನತೆಗೆ ಅತ್ಯುತ್ತಮ ಸೇವೆ ನೀಡಿ ಪ್ರಸಿದ್ಧರಾಗುತ್ತಾರೆ, ಇವರ ಶಿಸ್ತುಬದ್ದ ಜೀವನ ಎಂತವರನ್ನು ಆಕರ್ಷಿಸುತ್ತಿತ್ತು, ಇವರಿಗಿದ್ದ ತಾಳ್ಮೆ ವೈದ್ಯ ವೃತ್ತಿಗೆ ಹೇಳಿ ಮಾಡಿಸಿದ್ದು, ಬಡವ ಬಲ್ಲಿದ ಸಣ್ಣವ ದೊಡ್ಡವ ಎಂಬ ಬೇದಬಾವವಿಲ್ಲದ ಇವರ ಸ್ವಭಾವ ಇವರನ್ನು ಜನ ಸ್ನೇಹಿ ಆಗಿಸಿತ್ತು.
ಎಲ್ಲರಲ್ಲೂ ಗೌರವದಿಂದ ವರ್ತಿಸುತ್ತಿದ್ದರು ಅವರು ಸಿಟ್ಟಾಗಿದ್ದು ಅಥವ ಜಗಳಾವಾಡಿದ್ದು ಯಾರೂ ನೋಡೇ ಇಲ್ಲ.
ಆನಂದಪುರಂನ ಅಗ್ರಹಾರದಲ್ಲಿ ಆ ಕಾಲದಲ್ಲಿ ಬ್ರಾಹ್ಮಣರನ್ನು ಹೊರತು ಪಡಿಸಿ ಬೇರಾರು ಇರಲಿಲ್ಲ, ಅಲ್ಲಿ ಕ್ರೈಸ್ತ ಅನುಯಾಯಿ ಕುಟುಂಬ ನೆಲೆಸಲು ಅಯ್ಯಂಗಾರರ ಕುಟುಂಬ ಮನೆ ನೀಡಬೇಕೆಂದರೆ ಸುಸೇನಾಥನ್ ಮತ್ತು ಅವರ ಪತ್ನಿ ಸರೋಜಮ್ಮ ಅಂತಹ ಸುಸ೦ಸ್ಕೃತರಿದ್ದದ್ದೇ ಕಾರಣ.
ಸರ್ಕಾರಿ ಉದ್ಯೋಗ ತೊರೆದು, ರಿಜಿಸ್ಟರ್ಡ ಮೆಡಿಕಲ್ ಪ್ರಾಕ್ಟಿಷನರ್ ಆಗಿ ತಮ್ಮ ಮನೇನಲ್ಲೆ ಖಾಸಾಗಿ ಕ್ಲೀನಿಕ್ ತೆರೆದ ನಂತರವೂ ಇವರು ಕೆಲ ದಶಕ ಆನಂದಪುರಂನಲ್ಲಿ ಸೇವೆ ಸಲ್ಲಿಸಿದರು, ಅಯ್ಯಂಗಾರ್ ಕುಟು೦ಬಕ್ಕೂ ಚಿಕಿತ್ಸೆ ನೀಡಿದರು.
ಇವರ ಮನೆ ಎದುರಿನಲ್ಲೇ ಇದ್ದ ರಾಮ ಮಂದಿರದಲ್ಲಿ ಭಜನಾ ಕಾರ್ಯಕ್ರಮದಲ್ಲಿ ವೇದನಾರಾಯಣ ಭಟ್ಟರು ತಬಲ, ಗಣೇಶ್ ಭಟ್ಟರ ಅಣ್ಣ ಚಂದ್ರಶೇಖರ ಭಟ್ಟರು ಹಾರ್ಮೋನಿಯಂ, ಅಣ್ಣಪ್ಪ ಎಂಬ ಅಯ್ಯಂಗಾರ್ ಕುಟುಂಬದ ಮತ್ತು ಅಗ್ರಹಾರದ ಕ್ಷೌರಿಕ ವೃತ್ತಿಯವರು ಕೊಳಲು ಇವರ ಜೊತೆಗೆ ಸುಸೇನಾಥನ್ ರವರ ಬುಲ್ ಬುಲ್ ತರಂಗದ ಜೊತೆ ಅಗ್ರಹಾರದ ಎಲ್ಲರೂ ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದರು.
ಸುಸೇನಾಥನ್ ಕೊಳಲು, ಪಿಯಾನೊ, ಬೀಗಲ್,ಡ್ರಂ ಹೀಗೆ ಎಲ್ಲಾ ಸಂಗೀತ ಸಾಧನ ನುಡಿಸುವ ಕಲೆ ಕರತಲಾಮಲಕ ಆಗಿತ್ತು, ಇವರಿಗೆ 1962 ರಿಂದ ಜೊತೆ ಆದ ದೈಹಿಕ ಶಿಕ್ಷಕರಾದ ಎಸ್ ಆರ್.ಕೃಷ್ಣಪ್ಪ ಸೇರಿ ಆನಂದಪುರಂ ನಲ್ಲಿ ಸೇವಾದಳದ ತಂಡಗಳ ಬ್ಯಾಂಡ್ ಸೆಟ್ ತಂಡಗಳಿಗೆ ತಯಾರಿ ನೀಡಿ ರಾಷ್ಟ್ರೀಯ ಹಬ್ಬದಲ್ಲಿ ನಡೆಯುತ್ತಿದ್ದ ಪೆರೇಡ್ ಗಳು ಇಡೀ ರಾಜ್ಯದ ಗಮನ ಸೆಳೆಯುತ್ತಿತ್ತು.
ಇಡೀ ದೇಶದಲ್ಲೇ ಮೊದಲ ಗ್ರಾಮೀಣ ಬ್ಯಾಂಕ್ ರಿಸರ್ವಬ್ಯಾಂಕಿನಿಂದ ಆನಂದಪುರಂಗೆ ಮಂಜೂರು ಮಾಡಿ ಅದರ ಉದ್ಘಾಟನೆಗೆ ಬಂದಿದ್ದ ಆಗಿನ ಮುಖ್ಯಮಂತ್ರಿ ನಿಜಲಿಂಗಪ್ಪನವರಿಗೆ ಆನಂದಪುರಂ ಜನತೆ ಪರವಾಗಿ ನೀಡಿದ ಗೌರವ ಪೆರೇಡ್ ನಿಜಲಿಂಗಪ್ಪನವರಿಗೆ ತುಂಬಾ ಸಂತೋಷ ಉಂಟು ಮಾಡಿತ್ತಂತೆ.
ಈ ಪೆರೇಡ್ ಯಶಸ್ವಿಗೆ ಎಸ್.ಆರ್.ಕೃಷ್ಣಪ್ಪ ಮತ್ತು ರಿಚಡ್೯ ಲೋಬೋರಿಗೆ ಡಾಕ್ಟರ್ ಸುಸೇನಾಥರ ಹೆಚ್ಚಿನ ಸಹಕಾರವೂ ಮುಖ್ಯವಾಗಿತ್ತು ಎಂದು ಈ ಘಟನೆಯನ್ನು ಎಸ್.ಆರ್ ಕೃಷ್ಣಪ್ಪ ಅವರ ಅಭಿನಂದನಾ ಗ್ರಂಥದಲ್ಲಿ ಬರೆದಿದ್ದಾರೆ.
ಆರ್.ಸುಸೇನಾಥನ್ (ಆರ್ ಅಂದರೆ ಅವರ ತಂದೆ ರಾಜೇಂದ್ರನ್) ಮತ್ತು ಅರಸೀಕೆರೆ ಮೂಲದ ಅವರ ಪತ್ನಿ ಸರೋಜಮ್ಮ ದಂಪತಿಗಳಿಗೆ ಆನಂದರಾಜ್, ಜೋಸೆಪ್, ಫೀಟರ್, ಫ್ರಾನ್ಸಿಸ್, ಜಯಶೀಲನ್, ಲಾರೆನ್ಸ್ ಮತ್ತು ವಿನ್ಸೆಂಟ್ ಎಂಬ ಏಳು ಗಂಡು ಮಕ್ಕಳು.
ಆನಂದಪುರಂನ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದ ಅಭಿವೃದ್ಧಿಯಲ್ಲಿ ಡಾಕ್ಟರ್ ಸುಸೇನಾಥರ ಸೇವೆ ಒಂದು ದೊಡ್ಡ ಕೊಡುಗೆ, ಇವರು ರೋಗಿಗಳಿಗೆ ನೀಡುತ್ತಿದ್ದ ಚಿಕಿತ್ಸೆಯಿಂದ ಪರಿಣಾಮಕಾರಿ ಆಗಿ ಗುಣಮುಖರಾಗುತ್ತಿದ್ದರಿಂದ ಇವರ ಕೈಗುಣದ ಗುಣಗಾನ ಈಗಲೂ ಆನಂದಪುರಂ ನಿವಾಸಿಗಳಲ್ಲಿದೆ.
ಅತ್ಯುತ್ತಮ ಬ್ಯಾಡ್ಮಿಂಟನ್ ಆಟಗಾರರೂ ಆಗಿದ್ದ ಡಾಕ್ಟರ್ ಸುಸೇನಾಥನ್ ಅವರ 'ಸಮಾದಿ ಶಿವಮೊಗ್ಗದ ಬಸ್ ಸ್ಟಾಂಡ್ ಎದುರಿನ ಕ್ರೈಸ್ತರ ಸ್ಮಶಾನದಲ್ಲಿದೆ.
ನಾಳೆ ಭಾಗ- 35
Comments
Post a Comment