Blog number 943. ಇಪ್ಪತ್ತೈದು ವರ್ಷದ ಹಿಂದೆ ಜಿಲ್ಲಾ ಪಂಚಾಯತ್ ಸದಸ್ಯನಾಗಿ ಅತಿ ಹೆಚ್ಚು ತೆರೆದ ಬಾವಿ ನಿರ್ಮಿಸಿದ್ದಕ್ಕೆ ಪಂಚಾಯತ್ ರಾಜ್ ಇಲಾಖೆ ತನಿಖೆ ಮಾಡಿತ್ತು, ರೈತರ ಕುಡಿಯುವ ನೀರಿನ ಮೂಲವಾಗಿದ್ದ ಕೆಸರು ಹೊಂಡಗಳಿಗೆ ಕಡಿಮೆ ವೆಚ್ಚದಲ್ಲಿ ಚಿಕ್ಕ ಗಾತ್ರದ ಕಡಿಮೆ ಆಳದ ಕಾಂಕ್ರಿಟ್ ರಿಂಗ್ ಬಾವಿ ನಿರ್ಮಿಸಿದ್ದು ಹೆಚ್ಚು ಉಪಯೋಗವಾಗಿತ್ತು
#ರೈತರು_ತಮ್ಮ_ಕೃಷಿ_ಗದ್ದೆಯ_ಹೊಂಡದ_ಕೆಸರು_ನೀರು_ಕುಡಿಯುವ_ಕಾಲ
#ಮಲೆನಾಡಿನಲ್ಲಿ_ದೂರ_ದೂರಕ್ಕೊಂದು_ಮನೆ_ಬಯಲುಸೀಮೆಯಂತೆ_ಗುಂಪು_ಮನೆಗಳು_ಇರುವುದಿಲ್ಲ.
#ಕೆಸರು_ಗದ್ದೆ_ಹೊಂಡಗಳಿಗೆ_ರಿಂಗ್_ಇಳಿಸಿ_ತುಂಡು_ಬಾವಿ_ನಿರ್ಮಾಣ
#ಇಪ್ಪತ್ತೈದು_ವಷ೯ವಾದರೂ_ಈ_ಬಾವಿಗಳು_ಗಟ್ಟಿಮುಟ್ಟಾಗಿದೆ
ನಾನು 1995 - 2000 ಇಸವಿ ಶಿವಮೊಗ್ಗ ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ (ಆನಂದಪುರಂ ಕ್ಷೇತ್ರ) ನನ್ನ ಕ್ಷೇತ್ರದಲ್ಲಿ ಕುಡಿಯುವ ನೀರಿನ ಬಾವಿಗಳು ಇಲ್ಲದೆ ಜನ ಕಷ್ಟ ಪಡುತ್ತಿದ್ದರು, ಮಲೆನಾಡಿನಲ್ಲಿ ಕಿಲೋ ಮೀಟರ್ ಗೊಂದು ಮನೆ, ಬೊರ್ ವೆಲ್ ವಿಫಲವಾಗುತ್ತಿದ್ದ ಕಾಲ ಆದು.
ನಾನು ಇಡೀ ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ಕಾಲು ನಡಿಗೆಯಲ್ಲಿ ಪ್ರತಿ ಮನೆಗಳನ್ನು ಸಂದರ್ಶಿಸಿದ್ದರಿಂದ ಈ ಸಮಸ್ಯೆ ಅರಿತುಕೊಳ್ಳಲು ಸಾಧ್ಯವಾಗಿತ್ತು.
ಆಗಿನ ಚೆನ್ನಗಿರಿ - ಹೊನ್ನಾಳಿ - ಭದ್ರಾವತಿ - ಶಿವಮೊಗ್ಗ - ಶಿಕಾರಿಪುರ ತಾಲ್ಲೂಕಿನಲ್ಲಿ ಅಂತರ್ಜಲ ತುಂಬಾ ತಳಮಟ್ಟ ಮುಟ್ಟಿರುವುದರಿಂದ ಅಲ್ಲಿ ತೆರೆದ ಬಾವಿಗೆ ಬರುತ್ತಿದ್ದ ಅನುದಾನ ಬಳಕೆ ಆಗುತ್ತಿರಲಿಲ್ಲ, ಅದನ್ನೆಲ್ಲ ನನ್ನ ಕ್ಷೇತ್ರದಲ್ಲಿ ಬಳಸಿ ನನ್ನ 5 ವರ್ಷದ ಅವಧಿಯಲ್ಲಿ ಸುಮಾರು 700 ತೆರೆದ ಬಾವಿ ಮತ್ತು ಸುಮಾರು 400ಕ್ಕೂ ಹೆಚ್ಚು ತುಂಡು ಬಾವಿ ಅಂದರೆ ಗದ್ದೆಯಲ್ಲಿ ನೆಲಮಟ್ಟದಲ್ಲಿ ಜಲ ಇರುವಲ್ಲಿ ಗರಿಷ್ಟ 10ಅಡಿ ಆಳದ ಬಾವಿಗಳನ್ನು ನಿರ್ಮಿಸಿದ್ದೆ.
ಆಗ ಒಂದು ಬಾವಿ ನಿಮಿ೯ಸಲು ಗರಿಷ್ಟ 20 ಸಾವಿರ ಮತ್ತು ಕಡಿಮೆ ಆಳದ ತುಂಡು ಬಾವಿಗೆ ಗರಿಷ್ಟ 4 ರಿಂದ 5 ಸಾವಿರ ರೂಪಾಯಿ ಖರ್ಚಾಗುವ ಕಾಲ.
ಇಡೀ ಗ್ರಾಮದವರನ್ನು ಸೇರಿಸಿ ಅವರೆಲ್ಲರಿಗೂ ಸಮಾನ ದೂರದ ಊರ ಮಧ್ಯದ ಜಾಗದಲ್ಲಿ ಬಾವಿ ತೆಗೆಸುವ ಗುದ್ದಲಿ ಪೂಜೆ ಆ ಊರ ಹಿರಿಯರಿಂದ ಮಾಡಿಸುತ್ತಿದ್ದರಿಂದ ಯಾರೂ ತಕರಾರು ಮಾಡುತ್ತಿರಲಿಲ್ಲ.
ಆಗಿನ ಬಾವಿ ಕೆಲಸದವರು ಮಾಡುತ್ತಿದ್ದ ಕಾಂಕ್ರಿಟ್ ರಿಂಗ್ ಗಟ್ಟಿ ಮುಟ್ಟಾಗಿರುತ್ತಿತ್ತು ಲಾರಿಯಿಂದ ಕೆಳಗೆ ಹಾಕಿದರೆ ಮುರಿಯುತ್ತಿರಲಿಲ್ಲ.
ಅತ್ಯುತ್ತಮ ಗುಣಮಟ್ಟದ ಬಾವಿಗಳನ್ನು ಆ ಕಾಲದಲ್ಲಿ ನಿರ್ಮಿಸಿಕೊಟ್ಟ #ಇಕ್ಕೇರಿ_ನಾರಾಯಣಶರ್ಮ, #ಬೇಬಿ ಎಂಬ ಗುತ್ತಿಗೆದಾರರು, ಬಾವಿ ತೆರೆದು ರಿಂಗ್ ಇಳಿಸುತ್ತಿದ್ದ ಹೊಸ ನಗರ ತಾಲ್ಲುಕಿನ ಪುರಪ್ಪೆಮನೆಯ ಹೂವಪ್ಪ ಮತ್ತವರ ಕಾರ್ಮಿಕರ ತಂಡಗಳು ಇವತ್ತು ನನಗೆ ನೆನಪಾಗುತ್ತಾರೆ.
ಸಣ್ಣ ಸಣ್ಣ ಕೃಷಿಕರ ಒಂಟಿ ಮನೆಯ ಅವರ ಜಮೀನಿನಲ್ಲಿ ಕೆಸರು ಹೊಂಡಗಳಿಗೆ ಕಾಂಕ್ರಿಟ್ ರಿಂಗ್ ಇಳಿಸಿ ನಿಮಿ೯ಸಿದ ಕಡಿಮೆ ಆಳದ ತುಂಡು ಬಾವಿಗಳು, ಶಾಲಾ ಆವರಣದಲ್ಲಿ, ದಲಿತರ ಕೇರಿಗಳಲ್ಲಿ, ಕೂಲಿ ಕಾರ್ಮಿಕರ ಕೇರಿಗಳಲ್ಲಿ ನಿಮಿ೯ಸಿದ ದೊಡ್ದದಾದ ಆಳವಾದ ಬಾವಿಗಳು ಈಗಲೂ ಸುಸ್ಥಿತಿಯಲ್ಲಿದ್ದು ನೀರು ನೀಡುತ್ತಿದೆ.
ನನಗೆ 25 ವಷ೯ದ ಹಿಂದಿನ ಅವರೆಲ್ಲರ ಹೆಸರು ಮರೆತರು ಅವರು ನನ್ನ ಹೆಸರು ನೆನಪಿಸುವುದೇ ನನಗೆ ಸಂತೋಷದ ವಿಚಾರ ಕೂಡ.
ಈ ಬಾವಿ ರಿಂಗ್ ಸಾಗಾಣಿಕೆ ಆ ಕಾಲದಲ್ಲಿ ತುಂಬಾ ಕಷ್ಟ ಮಲೆನಾಡಿನ ಜನರ ಮನೆ ಇರುವಲ್ಲಿ ಅನೇಕ ಕಡೆ ಕಿಲೋಮಿಟರ್ ನಷ್ಟು ದೂರ ಜನರೆ ಹೊತ್ತೊಯ್ಯಬೇಕಾಗಿತ್ತು.
ಒಂದು ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ಇಷ್ಟು ಬಾವಿ ನಿರ್ಮಿಸಲು ಅಸಾಧ್ಯ!! ಅಂತ ತನಿಖೆಗೆ ಬೆಂಗಳೂರಿ೦ದ ಪಂಚಾಯತ್ ರಾಜ್ ಇಲಾಖೆ ಉನ್ನತ ಅಧಿಕಾರಿಗಳು ಕಾರಿನಲ್ಲಿ ಬಂದವರು ನಂತರ ಕಾರು ಹೋಗದ ಸ್ಥಳಕ್ಕೆ ಜೀಪು ತರಿಸಿಕೊಂಡು ಹೋದರಂತೆ, ಕೆಲ ಕಡೆ ಜೀಪು ಹೋಗಲು ರಸ್ತೆ ಇಲ್ಲದ ಕಡೆ ಇಂಜಿನಿಯರ್ ಬೈಕ್ ಲ್ಲಿ ಹೋದರಂತೆ, ಬೈಕ್ ಕೂಡ ಹೋಗದ ಜಾಗಕ್ಕೆ ಗದ್ದೆಗಳ ಬದುಗಳ ಮೇಲೆ ನಡೆದು ಹೋದರಂತೆ ಎಲ್ಲಾ ಕಡೆ ಬಾವಿಗಳನ್ನು ನೋಡಿ ಅವರು ಉದ್ಘರಿಸಿದ್ದು ಈ ಎಲ್ಲಾ ರಿಮೋಟ್ ಏರಿಯಾದಲ್ಲೂ ಬಾವಿ ಮಾಡಿದ ವ್ಯಕ್ತಿನ ನೋಡಬೇಕಂತ ನನ್ನ ಮನೆ ಹುಡುಕಿ ಬಂದಿದ್ದರು ಆದರೆ ನಾನು ಊರಲ್ಲಿ ಇರಲಿಲ್ಲ ಬೇಟಿ ಆಗಲಿಲ್ಲ.
ಆಗಿನ ಜಿಲ್ಲಾ ಪಂಚಾಯತ್ ನ ಯೋಜನಾ ಇಲಾಖೆ ಮತ್ತು ಫೈನಾನ್ಸ್ ಡಿಪಾರ್ಟ್ಮೆಂಟನ ಡೆಪ್ಯುಟಿ ಸೆಕ್ರೆಟರಿಗಳೆಲ್ಲ ಈ ಘಟನೆ ನೆನಪು ಮಾಡುತ್ತಾರೆ.
ಆದರೆ ನನ್ನ ಅವಧಿ ನಂತರ ಇದೇ ಬಾವಿಗಳಿಗೆ ಪುನಃ ಪುನಃ ಬಿಲ್ ಮಾಡಿಕೊಂಡು ಹಣ ಹಂಚಿಕೊಂಡಿದ್ದ ಅನೇಕ ಪ್ರಕರಣಗಳು ಮುಚ್ಚಿ ಹೋಯಿತು.
Comments
Post a Comment