Blog number 897. ಆನಂದಪುರಂ ಇತಿಹಾಸ ಭಾಗ-75. ಗೋಕಾಕ್ ಚಳವಳಿಯಲ್ಲಿ ಡಾ.ರಾಜ್ ಕುಮಾರ್ ನೇತೃತ್ವದಲ್ಲಿ ಇಡೀ ಕನ್ನಡ ಚಿತ್ರರಂಗದ ತಾರೆಗಳ ಯಾತ್ರೆ ಆನಂದಪುರಂ ಬಸ್ ನಿಲ್ದಾಣದಲ್ಲಿ ಕನ್ನಡ ಭಾಷೆ ರಾಜ್ಯದ ಅಧಿಕೃತ ಭಾಷೆಯಾಗಿ ಘೋಷಿಸಬೇಕೆಂಬ ಗೋಕಾಕ್ ವರದಿ ಜಾರಿಗಾಗಿ ಸಭೆ ನಡೆದಿತ್ತು.
#ಗೋಕಾಕ್_ಚಳವಳಿಯಲ್ಲಿ_ಆನಂದಪುರ೦ಗೆ_ರಾಜಕುಮಾರ್_ಸಿನಿತಂಡ
#ಆ_ದಿನ_3_ಜುಲೈ_1982.
#ವಿ_ಕೃ_ಗೋಕಾಕ್_ಸಾಗರದ_ಲಾಲ್_ಬಹದ್ದೂರ್_ಕಾಲೇಜಿನಲ್ಲಿ_ಅಲ್ಪಕಾಲ_ಬೋದನೆ_ಮಾಡಿದ್ದರು.
#ಆನಂದಪುರಂನ_ಈ_ಕಾಯ೯ಕ್ರಮಕ್ಕೆ_ಆಗಿನ_ರಾಜಕುಮಾರ್_ಆಭಿಮಾನಿ_ಸಂಘಕ್ಕೆ_ಆದ_ವೆಚ್ಚ_43_ರೂಪಾಯಿ
#ರಾಜಕುಮಾರರನ್ನು_ನೋಡಲು_ಸೇರಿದ_ಜನ_ಸಹಸ್ರಾರು
#ಶಿವಮೊಗ್ಗ_ಜಿಲ್ಲಾ_ರಾಜಕುಮಾರ್_ಅಭಿಮಾನಿ_ಸಂಘದ_ಆಗಿನ_ಗೌರವಾಧ್ಯಕ್ಷರು_ನೆಲ್ಲಿಲಾಡ್ಜ್_ವಿಠಲಮೂರ್ತಿ
#ಜಿಲ್ಲಾಧ್ಯಕ್ಷ_ಶ್ರೀನಿದಿ_ಟೆಕ್ಸಟೈಲ್ಸ್_ಶ್ರೀಧರಮೂರ್ತಿ
#ಸಾಗರ_ತಾಲ್ಲೂಕ್_ಅಧ್ಯಕ್ಷ_ಸಾಗರದ_SRS_ಮಿಲ್_ಮಹೇಶ್_ಮೂರ್ತಿ.
ಆನ೦ದಪುರಂ ಇತಿಹಾಸ ಪುಸ್ತಕದಲ್ಲಿ ಕನ್ನಡದ ಪ್ರಖ್ಯಾತ ಚಲನಚಿತ್ರ ನಟ ಡಾ.ರಾಜ್ ಕುಮಾರ್ ಎರೆಡು ಬಾರಿ ದಾಖಲಾಗುತ್ತಾರೆ ಒಂದು ಗೋಕಾಕ್ ಚಳವಳಿಯ ಭಾಗವಾಗಿ ಇನ್ನೊಂದು ಅವರ ಆಕಸ್ಮಿಕ ಚಲನಚಿತ್ರದ ಚಿತ್ರಿಕರಣದಲ್ಲಿ.
1980 ರ ದಶಕದಲ್ಲಿ ಡಾ.ರಾಜ್ ಕುಮಾರ್ ಕರ್ನಾಟಕದ ಆರಾಧ್ಯ ದೈವವೇ ಈ ಸಂದರ್ಭದಲ್ಲಿ ಅಂದರೆ 5- ಜುಲೈ -1980 ರಲ್ಲಿ ವಿ.ಕೃ.ಗೋಕಾಕರ ಅಧ್ಯಕ್ಷತೆಯಲ್ಲಿ ಕನಾ೯ಟಕ ಸಕಾ೯ರದ ಮುಖ್ಯಮಂತ್ರಿ ಗುಂಡೂರಾಯರು ಶಾಲಾ ಶಿಕ್ಷಣದಲ್ಲಿ ಬಾಷಾ ನೀತಿ ಮರು ಯೋಜನೆಗೆ ಸಮಿತಿ ರಚಿಸುತ್ತಾರೆ.
ತ್ರಿಬಾಷಾ ಸೂತ್ರದಡಿ ಕರ್ನಾಟಕ ರಾಜ್ಯದಲ್ಲಿನ ಶಾಲೆಯಲ್ಲಿ ಕನ್ನಡ ಮುಖ್ಯ ಬಾಷೆಯಾಗಿ ಪರಿಗಣಿಸುವಂತೆ ತಿದ್ದು ಪಡಿಗಾಗಿ ವಿ.ಕೃ.ಗೋಕಾಕ್ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸುತ್ತದೆ.
ಇದಕ್ಕೆ ಅನೇಕ ಭಾಷಾ ವ್ಯಾಸಂಗಸ್ಥರ ವಿರೋದ ವ್ಯಕ್ತವಾದ್ದರಿಂದ ಸರ್ಕಾರ ಯಾವುದೇ ನಿರ್ದಾರ ತೆಗೆದುಕೊಳ್ಳುವುದಿಲ್ಲ.
1956 ರಿಂದ ರಾಜ್ಯ ತ್ರಿಬಾಷಾ ಸೂತ್ರ ಅಳವಡಿಸಿಕೊಂಡು ಹಿಂದಿ-ಇಂಗ್ಲೀಷ್ ಕಡ್ಡಾಯ ಶಿಕ್ಷಣವಾಗಿ ಮಾಡಿತ್ತು ಇದಕ್ಕೆ ಕಾರಣ ರಾಜ್ಯದಲ್ಲಿ ಕನ್ನಡ ಅದಿಕೃತ ಭಾಷೆಯಾಗಿ ಸರ್ಕಾರ ಘೋಷಿಸಿರಲಿಲ್ಲ ಇದರಿಂದ ವಿದ್ಯಾರ್ಥಿಗಳು ಕನ್ನಡವನ್ನು ಒಂದು ಭಾಷೆ ಆಗಿ ಅಭ್ಯಸಿಸದೇ ಶಿಕ್ಷಣ ಮುಂದುವರಿಸುತ್ತಿದ್ದರು.
ಇವುಗಳಿಗೆ ಇತಿಶ್ರೀ ಹಾಡಲು ಗೋಕಾಕರ ಸಮಿತಿ ಸಿದ್ಧಪಡಿಸಿದ ವರದಿ ಅನುಷ್ಟಾನಕ್ಕಾಗಿ ನಡೆದ ಚಳವಳಿಯೇ ಗೋಕಾಕ್ ಚಳವಳಿ.
ಆಗ ಬೆಂಗಳೂರಿನ ಕಬ್ಬನ್ ಪಾರ್ಕ್ ನಿಂದ ಕನ್ನಡ ಚಳವಳಿಗಾರ ಜಿ.ನಾರಾಯಣ ಕುಮಾರ್ ವಿಧಾನ ಸೌದ ಮುತ್ತಿಗೆಯ ಕಾರ್ಯಕ್ರಮ ಹಮ್ಮಿಕೊಂಡಾಗ ಸರ್ಕಾರ ಲಾಠಿ ಛಾರ್ಜ್ ಮಾಡುತ್ತದೆ ಇದನ್ನು ವಿರೋದಿಸಿ ಅನೇಕ ಸಂಘ ಸಂಸ್ಥೆ ಚಳವಳಿಗೆ ಬೆಂಬಲಿಸುತ್ತದೆ.
ದಾರವಾಡದಲಿ ಚಂದ್ರಶೇಖರ ಪಾಟೀಲರು ಗೋಕಾಕ್ ವರದಿಗಾಗಿ ಚಳವಳಿ ಪ್ರಾರಂಬಿಸುತ್ತಾರೆ ಆಗಲೇ ಜಿ.ನಾರಾಯಣ ಕುಮಾರರು ಚೆನೈಗೆ ಹೋಗಿ ಕನ್ನಡ ಚಲನಚಿತ್ರರ೦ಗದ ಮೇರು ನಟ ಡಾ.ರಾಜ್ ಕುಮಾರರಿಗೆ ರಾಜ್ಯದಲ್ಲಿ ಕನ್ನಡ ಅಧಿಕೃತ ಭಾಷೆ ಆಗಿ ಸರ್ಕಾರ ಘೋಷಿಸುವ೦ತೆ ಗೋಕಾಕರ ವರದಿ ಅನುಷ್ಠಾನಕ್ಕೆ ಕನ್ನಡದ ನಟ ನಟಿಯರ ಭಾಗವಹಿಸುವಂತೆ ಒಪ್ಪಿಸಲು ಸಫಲರಾಗುತ್ತಾರೆ.
ಡಾ.ರಾಜ್ ಕುಮಾರ್ ಬೆಂಗಳೂರಿಂದ ಬೆಳಗಾವಿ ತನಕ ಹಮ್ಮಿಕೊಂಡ ಗೋಕಾಕ್ ಚಳವಳಿಗೆ ಇಡೀ ಕನ್ನಡ ಚಿತ್ರರಂಗ ಭಾಗವಹಿಸುತ್ತದೆ, ಸಾಹಿತಿಗಳು, ಪತ್ರಕರ್ತರೂ ಬೆಂಬಲಿಸುತ್ತಾರೆ ಇಡೀ ರಾಜ್ಯದ ಜನತೆ ಒಕ್ಕೊರಲಿನಿಂದ ರಾಜ್ ಹೋರಾಟಕ್ಕೆ ಬೆಂಬಲಿಸಿದ್ದರಿಂದ ಸರ್ಕಾರ ಕನ್ನಡ ಭಾಷೆ ರಾಜ್ಯದ ಅಧಿಕೃತ ಬಾಷೆ ಆಗಿ ಘೋಷಣೆ ಮಾಡುತ್ತದೆ, ಶಿಕ್ಷಣದಲ್ಲಿ ಕನ್ನಡ ಮೊದಲ ಭಾಷೆ ಆಗಲು ಇದು ದೊಡ್ಡ ಹೋರಾಟ.
ಆನಂದಪುರಂನಲ್ಲಿ ಹುಟ್ಟಿ ಇಲ್ಲಿನ ಕನ್ನಡ ಶಾಲೆಯಲ್ಲೆ ವ್ಯಾಸಂಗ ಮಾಡಿ, ದೇವರಾಜ ಅರಸರ ಸರ್ಕಾರದಲ್ಲಿ ರಾಜ್ಯದ ಶಿಕ್ಷಣ ಮತ್ತು ಸಂಸ್ಕೃತಿ ಮಂತ್ರಿಗಳಾಗಿದ್ದ ಬದರೀನಾರಾಯಣ ಅಯ್ಯಂಗಾರರು ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ನಾಮಕರಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಇತಿಹಾಸ ಇಂತಹ ಮಹತ್ವ ಇರುವ ಊರಿಗೆ ಗೋಕಾಕ್ ಚಳವಳಿಯ ಡಾ.ರಾಜ್ ಕುಮಾರ್ ರ ಕರೆಸುವಲ್ಲಿ ಸ್ಥಳಿಯ ಆ ಕಾಲದ ಯುವಕರ ಸಂಘಟನೆ ಮುಖ್ಯ ಕಾರಣವಾಗಿತ್ತು.
ಈಗಿನ ಆನಂದಪುರಂ ಕನ್ನಡ ಸಂಘದ ಅಂದಿನ ಹೆಸರು ರಾಜ್ ಕುಮಾರ್ ಅಭಿಮಾನಿ ಸಂಘ ಇದರ ಆಗಿನ ಅಧ್ಯಕ್ಷ ನನ್ನ ಸಹೋದರ ಕೆ.ನಾಗರಾಜ್, ಕಾಯ೯ದಶಿ೯ ಹಾ. ಮೊ. ಬಾಷಾ, A.S. ಪ್ರಾಣೇಶ್ ಆಚಾರ್, ಕೆ.ವಿ.ಸುರೇಶ್, ಮೇಷ ರಾಮಚಂದ್ರ ಜೋಯಿಸ್, ಹೆಚ್. ಮಂಜುನಾಥ ಶೇಟ್, J.J. ಕಾಮತ್, K. T. ತಿಮ್ಮೇಷ, N. K. ಸುರೇಶ್ ನಾಯಕ್, ಮೋಹನ್, ಗೋಪಾಲ್, R. ಶ್ರೀನಿವಾಸ್, Y. ರಾಮೋಜಿ ಸೇರಿ 69 ಜನ ಸದಸ್ಯರ ಸಂಘವಾಗಿತ್ತು.
ಇವರಿಗೆ ಆಗಿನ ಶಿವಮೊಗ್ಗ ಜಿಲ್ಲಾ ರಾಜ್ ಕುಮಾರ್ ಅಭಿಮಾನಿ ಸಂಘದ ಗೌರವಾಧ್ಯಕ್ಷರಾಗಿದ್ದ ನೆಲ್ಲಿ ಲಾಡ್ಜ್ ನ ವಿಠಲ್ ಮೂರ್ತಿ, ಅದ್ಯಕ್ಷರಾಗಿದ್ದ ಶ್ರೀನಿಧಿ ಟೆಕ್ಸಟೈಲ್ ಮಾಲಿಕರಾದ ಶ್ರೀಧರಮೂರ್ತಿ ಬೆಂಗಾವಲು.
ಆಗ ಸಾಗರದಲ್ಲಿ ರಾಜಕುಮಾರ್ ಅಭಿಮಾನಿ ಸಂಘದ ಅಧ್ಯಕ್ಷರು SRS ರೈಸ್ ಮಿಲ್ ನ ಮಹೇಶ್ ಕುಮಾರ್.
ಶಿವಮೊಗ್ಗ ಸಭೆ ನಂತರ, ರಿಪ್ಪನ್ ಪೇಟೆ ಸಭೆ ನಂತರ ಆನಂದಪುರಂ ಬಸ್ ಸ್ಟಾಂಡ್ ನಲ್ಲಿ ಸಭೆ ಮುಗಿಸಿ ಸಾಗರದ ನೆಹರೂ ಮೈದಾನದಲ್ಲಿ ಬೃಹತ್ ಸಭೆ ಆಯೋಜಿಸಲಾಗಿತ್ತು.
ಆನಂದಪುರಂ ಸಭೆಯ ಸ್ಥಳದಲ್ಲಿ ಗೋಕಾಕ್ ಚಳವಳಿಯ ಯಾತ್ರೆಯ ಗುರುತಿಗಾಗಿ ಸಂಪತ್ತಿಗೆ ಸವಾಲ್ ಚಿತ್ರದ ಪೋಸ್ಟರ್ ಬಿದಿರು ತಟ್ಟಿಗೆ ಅಂಟಿಸಿ ಕಟ್ಟಲಾಗಿತ್ತು.
ರಾಜ್ ಕುಮಾರ್ ನೋಡಲು ಅವತ್ತು ಅಂದರೆ 3ನೇ ತಾರೀಖು ಜುಲೈ ತಿಂಗಳು 1982ರ೦ದು ಆನಂದಪುರಂ ಬಸ್ ನಿಲ್ದಾಣದಲ್ಲಿ ಸೇರಿದ ಜನ ಕೆಲವು ಸಹಸ್ರ ಜನ.
ಬಸ್ ನಿಂದ ನಿಗದಿತ ಸ್ಥಳದಲ್ಲಿ ರಾಜ್ ಕುಮಾರ್ ಮೊದಲಿಗೆ ಇಳಿದರು ಅವರಿಗೆ ಗುಲಾಭಿ ಹೂವು ನೀಡಿ ಸ್ವಾಗತಿಸಿದವರು ನನ್ನ ಸಹೋದರ ಆನಂದಪುರಂನ ರಾಜ್ ಕುಮಾರ್ ಅಭಿಮಾನಿ ಸಂಘದ ಸ್ಥಾಪಕ ಅಧ್ಯಕ್ಷ ಕೆ.ನಾಗರಾಜ್ ಅವಾಗ ಅವರಿಗೆ 25 ವರ್ಷದ ಪ್ರಾಯ ಪ್ರೇಕ್ಷನಾಗಿದ್ದ ನನ್ನ ವಯಸ್ಸು 15.
ರಾಜ್ ಕುಮಾರ್ ರನ್ನು ಕೈ ಹಿಡಿದು ಬಸ್ಸಿನ ಹಿಂದಿನ ಏಣಿಯಲ್ಲಿ ಬಸ್ಸಿನ ಮೇಲ್ಬಾವಣಿಗೆ ಕರೆದೊಯ್ದು ಅವರ ಕೈಯಲ್ಲಿ ಮೈಕ್ ನೀಡಿ ಭಾಷಣ ಮಾಡಲು ಸಹಕರಿಸಿದವರು ಶಂಕರ್ ನಾಗ್, ಬಸ್ಸಿನಲ್ಲಿ ಇದ್ದವರು ವಿಷ್ಣುವರ್ಧನ್, ಅಂಬರೀಷ್, ಲೋಕೇಶ್ ಮುಂತಾದ ಆಕಾಲದ ನಟರು.
ಅವತ್ತಿನ ಕಾಯ೯ಕ್ರಮಕ್ಕೆ ಆನಂದಪುರಂನ ಜನ ನೀಡಿದ ದೇಣಿಗೆ 150 ರೂಪಾಯಿ ಅದರಲ್ಲಿ ಖಚಾ೯ಗಿದ್ದು 43 ರೂಪಾಯಿ ಎಂದು ಸಂಘದ ಲೆಕ್ಕ ಪತ್ರದಲ್ಲಿ ನಮೂದಾಗಿದೆ.
ನಂತರ ಸಾಗರದಲ್ಲಿ ನಡೆದ ಸಭೆಯಲ್ಲಿ ಮಳೆ ಬಂದರೂ ಜನ ಕದಲದೆ ರಾಜ್ ರ ಬಾಷಣ ಕೇಳಿದರು.
Comments
Post a Comment