Blog number 884. ಹಂದಿಗೋಡು ನಿಗೂಡ ಕಾಯಿಲೆ ಜಗತ್ತಿಗೆ ಮೊದಲು ದಾಖಲೆ ಮಾಡಿದ, ಸುಮಾರು 50 ವರ್ಷದಿಂದ ಹಂದಿಗೋಡು ನಿಗೂಡ ಕಾಯಿಲೆ ಸಂತ್ರಸ್ಥರ ನಿಸ್ವಾರ್ಥ ಸೇವೆ ಮಾಡುತ್ತಿರುವ ಹೆಚ್.ಎಂ.ಚಂದ್ರಶೇಖರ್ ರವರಿಗೆ ಪದ್ಮ ಪ್ರಶಸ್ತಿ ದೊರೆಯಲಿ.
#ಅವರ_ಸಂಪೂರ್ಣ_ಜೀವನ_ಹಂದಿಗೋಡು_ಕಾಯಿಲೆ_ಪೀಡಿತರಿಗೆ_ಮೀಸಲಿಟ್ಟವರು
#ಇಂತವರಿಗೆ_ಕೇಂದ್ರ_ಸರ್ಕಾರದ_ಪದ್ಮ_ಪ್ರಶಸ್ತಿ_ಕೊಡಬಾರದೇಕೆ?
#ಪ್ರಪಂಚದ_ಎರೆಡು_ನಿಗೂಡ_ಕಾಯಿಲೆ_ಶಿವಮೊಗ್ಗ_ಜಿಲ್ಲೆಯಲ್ಲಿ_ಪ್ರಥಮವಾಗಿ_ಗೋಚರಿಸಿತ್ತು
#ಹಂದಿಗೋಡುಕಾಯಿಲೆ_ಮತ್ತು_ಮಂಗನಕಾಯಿಲೆ.
#ಐವತ್ತು_ವರ್ಷವಾದರೂ_ಹಂದಿಗೋಡು_ಕಾಯಿಲೆಗೆ_ಔಷದಿ_ಕಂಡು_ಹಿಡಿಯಲಾಗಲಿಲ್ಲ
#ಕುಮಾರಸ್ವಾಮಿ_ಮುಖ್ಯಮಂತ್ರಿ_ಆಗಿದ್ದಾಗ_ಹಂದಿಗೋಡಿನಲ್ಲಿ_ಗ್ರಾಮ_ವಾಸ್ತವ್ಯ_ಮಾಡಿದ್ದರು.
ಹಂದಿಗೋಡು ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣಕ್ಕೆ ಸಮೀಪದ ಒಂದು ಸಣ್ಣ ಹಳ್ಳಿ, ಹಳ್ಳಿಯ ಮೇಲು ಬಾಗದಲ್ಲಿ ಪರಿಶಿಷ್ಟರ ಕಾಲೋನಿ ಕೆಳಗೆ ಹವ್ಯಕ ಬ್ರಾಹ್ಮಣರ ಬೀದಿ.
ಅಡಿಕೆ ಬೆಳೆಗಾರರಾದ ಹವ್ಯಕ ಬ್ರಾಹ್ಮಣರ ಕೃಷಿ ಕಾರ್ಮಿಕರು ಪರಿಶಿಷ್ಟ ಕಾಲೋನಿ ವಾಸಿಗಳು 1974ರಲ್ಲಿ ಈ ಕಾಲೋನಿಯ ಕೆಲವರಿಗೆ ಮೂಳೆಯ ಸಂದುಗಳಲ್ಲಿ ವಿಪರೀತ ನೋವು ಗೋಚರಿಸಿತ್ತು ಅಂತಹ ನಾಲ್ಕು ರೋಗಿಗಳನ್ನು ಹಂದಿಗೋಡಿನ ಹೆಚ್.ಎಂ.ಚಂದ್ರಶೇಖರ್ ಸಾಗರದ ಸರ್ಕಾರಿ ಆಸ್ಪತ್ರೆಗೆ ಅಡ್ಮಿಟ್ ಮಾಡಿಸುತ್ತಾರೆ ಆದರೆ ಕಾಯಿಲೆ ಏನಂತ ವೈದ್ಯರಿಗೆ ಗೊತ್ತಾಗುವುದಿಲ್ಲ ಇದು ಹಂದಿಗೋಡು ನಿಗೂಡ ಕಾಯಿಲೆ ಪ್ರಪಂಚಕ್ಕೆ ಮೊದಲ ಬಾರಿ ಗೋಚರಿಸಿದ ಘಟನೆ.
ನಿಮಾಃನ್ಸ್ ನ ಡಾ.ಕೆ.ಎಸ್.ಮಣಿ ಇದು ನರ ಸಂಬಂದಿತ ಕಾಯಿಲೆ ಅಲ್ಲ ಮೂಳೆ ಸಂದುಗಳಲ್ಲಿ ಮೂಳೆಗಳ ಅಸ್ವಾಭವಿಕ ಬೆಳವಣಿಗೆ ಎಂದು ಮೊದಲು ಗುರುತಿಸಿದರು.
ನ್ಯಾಷನಲ್ ಇನ್ಸ್ಟಿಟ್ಯೂಟ್ ಆಪ್ ನ್ಯೂಟ್ರೀಷನ್ ಹೈದ್ರಾಬಾದ್ ಇದು ಹಂದಿಗೋಡಿನ ದಲಿತ ಕಾಲೋನಿಗೆ ಮಾತ್ರ ಸೀಮಿತವಾಗಿದೆ, ಎಲ್ಲಾ ವಯಸ್ಸಿನವರಿಗೆ ಬರುವಂತಾದ್ದು ಮತ್ತು ಸಾಂಕ್ರಮಿಕವಲ್ಲದ ಕಾಯಿಲೆ ಎಂದು ವರದಿ ನೀಡಿತ್ತು.
1984 - 88 ರವರೆಗೆ ICMR ಸಂಶೋದನೆ ನಡೆಸಿತ್ತು, ಹಂದಿಗೋಡು ನಿಗೂಡ ಕಾಯಿಲೆ ಹುಟ್ಟಿನಿಂದಲೇ ಬಂದರೂ ಅದು ಗೋಚರಿಸುವುದು ಹುಟ್ಟಿದ 7 ವರ್ಷದ ನಂತರ ಅಂಗ ವೈಪಲ್ಯದ ಮುಖಾಂತರ, ಹುಟ್ಟಿದ 25 ರಿಂದ 30 ವರ್ಷದಲ್ಲಿ ಹೆಚ್ಚಿನ ಸಾವುಗಳಾಗುತ್ತದೆ.
ಇಲ್ಲಿಯವರೆಗೆ ಇಂತಹ ಸಾವುಗಳು ಸಾವಿರಕ್ಕೂ ಮಿಕ್ಕಿದೆ, ಅಂಗವೈಪಲ್ಯ ಆದವರ ಸಂಖ್ಯೆ ಇದರ ದುಪ್ಪಟ್ಟು.
ಇದು ಶಿವಮೊಗ್ಗ ಜಿಲ್ಲೆಯ 64 ಹಳ್ಳಿಗಳಲ್ಲಿದೆ, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲ್ಲೂಕನ ಕೊಪ್ಪ , ಎನ್.ಆರ್ ಪುರ ತಾಲ್ಲೂಕ್ ಗಳಲ್ಲೂ ದಾಖಲಾಗಿದೆ.
ಮೊದಲೆಲ್ಲ ಜನ ಭಾವಿಸಿದ್ದು ಬತ್ತದ ಗದ್ದೆಯಲ್ಲಿ ರಾಸಾಯನಿಕ ಗೊಬ್ಬರ ಮತ್ತು ಕ್ರಿಮಿನಾಶಕ ಬಳಕೆಯಿಂದ ಅಲ್ಲಿನ ಮೀನು ತಿನ್ನುವ ಕೃಷಿ ಕಾರ್ಮಿಕ ದಲಿತರಿಗೆ ಈ ಕಾಯಿಲೆ ಬರುತ್ತಿದೆ ಅಂತ.
ಯಾವುದೋ ವಿದೇಶಿ ವಿಜ್ಞಾನಿಗಳು ಪ್ರಯೋಗಕ್ಕಾಗಿ ಇಂತಹ ವೈರಸ್ ತಂದು ಹರಡಿದ್ದಾರೆ ಅಂತೆಲ್ಲ ಪ್ರಚಾರ ಆಗಿತ್ತು.
ಹಂದಿಗೋಡಿನ ಈ ಕಾಲೋನಿಯ ಅಕ್ಕ ಪಕ್ಕದಲ್ಲೇ ಇರುವ ಹವ್ಯಕ ಬ್ರಾಹ್ಮಣರಲ್ಲಿ ಯಾರಲ್ಲೂ ಈ ಕಾಯಿಲೆ ಕಂಡು ಬರದಿದ್ದರಿಂದ ಕೆಲ ಕಾಲ ಇದು ಸತ್ಯವೇ ಎಂಬ ಬಾವನೆ ಇತ್ತಾದರೂ ನಂತರ ಈ ವಾದ ಸುಳ್ಳು ಎಂಬಂತೆ ಬೇರೆ ಪ್ರದೇಶದಲ್ಲಿ ಬೇರೆ ಬೇರೆ ಜಾತಿಯ ಜನರಲ್ಲೂ ಕಂಡು ಬಂದಿದೆ.
1999 ರಲ್ಲಿ ನಾನು ದೆಹಲಿಯ ಕೇಂದ್ರ ಸರ್ಕಾರದ ಗಮನ ಸೆಳೆಯಲು ಒಬ್ಬ ಹಂದಿಗೋಡು ಕಾಯಿಲೆ ಪೀಡಿತ ಯುವಕನನ್ನು ಕರೆದುಕೊಂಡು ಹೋಗಿದ್ದೆ ಆತ ವಿಶ್ವಕಮ೯ ಆಚಾರರು.
ಸಾಗರ ತಾಲ್ಲೂಕಿನಾದ್ಯಂತ ನಾನು ನನ್ನ ಗೆಳೆಯರು ಸಾಗರ ತಾಲ್ಲೂಕ್ ಅಭಿವೃದ್ದಿಗಾಗಿ ಒತ್ತಾಯಿಸಿ ನಡೆಸಿದ 13 ದಿನದ ಪಾದಯಾತ್ರೆಯಲ್ಲಿ ರೈಲ್ವೆ ಬ್ರಾಡ್ ಗೇಜ್ - ಜೋಗ್ ಜಲಪಾತ ಅಭಿವೃದ್ದಿ ಜೊತೆಗೆ ಇದು ಪ್ರಮುಖ ವಿಷಯ ಆಗಿತ್ತು.
ಪಾದಯಾತ್ರೆಯ ಜನಸಂಪರ್ಕ ಸಭೆಯ ಪ್ರಾರಂಭದಲ್ಲಿ ಸಭಿಕರನ್ನು "ಪ್ರಪಂಚದಲ್ಲಿ ಔಷದಿ ಕಂಡು ಹಿಡಿಯದ ಕಾಯಿಲೆ ಯಾವುದು?" ಅಂತ ಪ್ರಶ್ನಿಸಿದರೆ ಏಡ್ಸ್ ಅನ್ನುತ್ತಿದ್ದರು. ನಮ್ಮ ತಾಲ್ಲೂಕಿನ ನಮ್ಮ ಪಕ್ಕದ ಹಳ್ಳಿ ಹಂದಿಗೋಡಿನಲ್ಲಿ ಪ್ರಥಮವಾಗಿ ಗೋಚರಿಸಿದ್ದರಿಂದ ಅದೇ ಹಳ್ಳಿಯ ಹೆಸರಾದ ಹಂದಿಗೋಡು ನಿಗೂಡ ಕಾಯಿಲೆಗೆ ಈವರೆಗೆ ಕಾರಣವೂ ಗೊತ್ತಿಲ್ಲ ಮತ್ತು ಔಷದಿಯೂ ಕಂಡು ಹಿಡಿದಿಲ್ಲ ಎಂದಾಗ ಆಶ್ಚಯ೯ ಚಕಿತರಾಗುತ್ತಿದ್ದರು.
ಮೂರು ವರ್ಷದ ಹಿಂದೆ 2019 ಜೂನ್ ನಲ್ಲಿ ಹಂದಿಗೋಡು ಹೆಚ್.ಎಂ.ಚಂದ್ರಶೇಖರ್ ಅಚಾನಕ್ಕಾಗಿ ಸಾಗರದ ನೊಂದಾವಣೆ ಕಛೇರಿಯಲ್ಲಿ ಸಿಕ್ಕಿದಾಗ ಅವರು ಹೇಳಿದ್ದು ಕೇಳಿ ಆಶ್ವಯ೯ವಾಯಿತು ಅದೇನೆಂದರೆ ಈಗ ಹೊಸದಾಗಿ ಹಂದಿಗೋಡು ಕಾಯಿಲೆ ಕಂಡು ಬರುತ್ತಿಲ್ಲ !? ಎ೦ಬ ಮಾಹಿತಿ, ಬಹುಶಃ ಮನುಷ್ಯ ಪ್ರಯತ್ನ ಮಾಡದೇ ಇದ್ದಾಗ ಪ್ರಕೃತಿಯೇ ಇದಕ್ಕೊಂದು ಪರಿಹಾರ ಕಂಡು ಹಿಡಿದಿದೆ ಅದನ್ನು ನಾವು ಈ ತಲೆಮಾರಿನ ಜನರಲ್ಲಿ ರೋಗ ನಿರೋದಕ ಶಕ್ತಿ ಹೆಚ್ಚಾಯಿತು ಎನ್ನುವುದು ಸರಿಯೋ ತಪ್ಪೊ ಗೊತ್ತಿಲ್ಲ.
ನಮ್ಮ ಸರ್ಕಾರಗಳು ಹಂದಿಗೋಡು ಕಾಯಿಲೆಯಿಂದ ಅಂಗವಿಕಲರಾದವರಿಗೆ ಅಂಗವಿಕಲರ ವೇತನ ನೀಡಲು ಒಪ್ಪಿದ್ದು ಜಗತ್ತಿಗೆ ಕಾಯಿಲೆ ಗೊಚರಿಸಿದ 25 ವರ್ಷದ ನಂತರ!! ಈಗಲೂ ಹಂದಿಗೋಡಿನ ಪರಿಶಿಷ್ಟ ಜಾತಿಯ ಈ ಸಂತ್ರಸ್ಥರಿಗೆ ವಿಶೇಷ ಕೋಟದಲ್ಲಿ ಸರ್ಕಾರದ ಉದ್ಯೋಗ ನೀಡಿದೆಯಾ? ಎ೦ದರೆ ಅದೂ ಇಲ್ಲ.
2025 ಕ್ಕೆ ಹಂದಿಗೋಡು ಕಾಯಿಲೆ ಜಗತ್ತಿಗೆ ಬಂದು 50 ವರ್ಷವಾಗುತ್ತೆ, ಅವತ್ತಿನಿಂದ ಇವತ್ತಿನವರೆಗೆ ಹಂದಿಗೋಡಿನ ಕಾಯಿಲೆ ಪೀಡಿತರ ಬಗ್ಗೆ ನಿಸ್ವಾರ್ಥ ಸೇವೆ ಮಾಡುತ್ತಿರುವ ಹಂದಿಗೋಡು ಚಂದ್ರಶೇಖರರಿಗೆ ಯಾವ ಸಹಾಯ ಸವಲತ್ತು ಸರ್ಕಾರವಾಗಲೀ ಸಾವ೯ಜನಿಕ ಸಂಸ್ಥೆಯಾಗಲಿ ಕಲ್ಪಿಸಿಲ್ಲ.
ನಾನು 1995ರಲ್ಲಿ ಜಿಲ್ಲಾ ಪಂಚಾಯತ್ ಸದಸ್ಯನಾದಾಗ ಮೊದಲ ಸಭೆಯಲ್ಲಿ ಆಗಿನ ಉಪ ಮುಖ್ಯಮಂತ್ರಿ ಜೆ.ಹೆಚ್.ಪಟೇಲರು, ವಿರೋದ ಪಕ್ಷದ ಮುಖಂಡರಾದ ಯಡೂರಪ್ಪ, ಈಶ್ವರಪ್ಪ, ಆರಗ ಜ್ಞಾನೇಂದ್ರ (ನಮ್ಮ ಜಿಲ್ಲೆಯಿಂದ ಆಯ್ಕೆ ಆದ ಶಾಸಕರಾಗಿದ್ದರಿಂದ) ಭಾಗವಹಿಸಿದ್ದಾಗ ನನಗೆ ಮೊದಲು ಮಾತಾಡುವ ಅವಕಾಶದಲ್ಲಿ ಹಂದಿಗೋಡು ನಿಗೂಡ ಕಾಯಿಲೆ ಉಲ್ಲೇಖಿಸಿ ಮಾತಾಡಿದ್ದೆ, ಪಟೇಲರು ಮತ್ತು ಯಡೂರಪ್ಪ ಚೆನ್ನಾಗಿ ವಿಷಯ ಮಂಡನೆ ಮಾಡಿದ್ದೀರೆಂದು ಅಭಿನಂದಿಸಿದ್ದರು ಮರುದಿನದ ಪತ್ರಿಕೆಗಳಲ್ಲಿ ಮೊದಲ ಜಿಲ್ಲಾ ಪಂಚಾಯತ್ ಸಭೆಯಲ್ಲಿ ಮಿಂಚಿದವರು ಎಂಬ ಹೆಡ್ಡಿಂಗ್ ನೊಂದಿಗೆ ಸುದ್ದಿಯೂ ಆಗಿತ್ತು.
ಜಿಲ್ಲಾ ಪಂಚಾಯತ್ ಮುಖ್ಯ ಕಾಯ೯ನಿರ್ವಾಹಕಾಧಿಕಾರಿ ಐಎಎಸ್ ಅಧಿಕಾರಿ ಅನಿಲ್ ಕುಮಾರ್ ಝಾ ರನ್ನು ಹಂದಿಗೋಡಿಗೆ ಕರೆದೊಯ್ದಿದ್ದೆ ಆಗ ಚಂದ್ರಶೇಖರ ಮನೆಗೂ ಅವರು ಬೇಟಿ ನೀಡಿದ್ದರು ಆಗ ಚಂದ್ರಶೇಖರರ ಮನೆ ನೆಲ ಕೆಂಪು ಮಣ್ಣಿನ ಅಡಿಕೆ ಚಿಗುರು ಸೇರಿಸಿ ಒರೆದ ತಂಪಾದ ನೆಲ ಹುಲ್ಲಿನ ಮೇಲ್ಚಾವಣೆ ಐಎಎಸ್ ಅಧಿಕಾರಿಗಳ ಗಮನ ಸೆಳೆದಿತ್ತು, ತಮ್ಮ ಅತ್ಯಲ್ಪ ಅಡಿಕೆ ತೋಟದ ಆದಾಯದಲ್ಲಿ ಈ ಸಮಾಜ ಸೇವೆ ಸಲ್ಲಿಸುತ್ತಿರುವ ಚಂದ್ರಶೇಖರರ ಜೀವನವೇ ಅಂತಹದ್ದು ಈಗ ಮಕ್ಕಳ ಕಾಲದಲ್ಲಿ ಅವರ ಉದ್ಯೋಗದಿಂದ ಕೆಲ ಬದಲಾವಣೆ ಆಗಿದೆ.
ನಮ್ಮ ಯಾವ ಹೋರಾಟ - ವರದಿಗಳೂ ಆಡಳಿತ ಮಾಡುವವರ ಕಿವಿಗೆ ತಲುಪಿದರೂ ಮೆದುಳಿಗೆ ತಲುಪದ ವಿಷಾದವಿದೆ ಆದ್ದರಿಂದ 2005ರಲ್ಲಿ ಹಂದಿಗೋಡಿನ ಚಂದ್ರಶೇಖರಲ್ಲಿ ನೋವು ಹಂಚಿಕೊಂಡಾಗ ಅವರು ನನಗೊಂದು ಹಳೇ TVS ಸರ್ಕಾರ ಕೊಟ್ಟಿದ್ದರೆ ಈ ಜನರ ಸೇವೆಗಾಗಿ ನಿತ್ಯ ಸಾಗರ ಹೋಗಿ ಬರಲು ಅನುಕೂಲ ಇತ್ತು ಆದರೆ ಅದೂ ಸಾಧ್ಯವಾಗಿಲ್ಲ ಎಂದಾಗ ಅದಕ್ಕೆ ಎಷ್ಟು ಹಣ ಬೇಕು ಅಂದಾಗ ಹತ್ತು ಸಾವಿರ ಅಂದಿದ್ದರು.
ಮರುದಿನವೇ ಹತ್ತು ಸಾವಿರ ಹಣ ಅವರಿಗೆ ತಲುಪಿಸಿದಾಗ ನಿರಾಕರಿಸಿದ್ದರು, ಒತ್ತಾಯಿಸಿ ನೀಡಿದ್ದೆ ಮತ್ತು ಯಾರಿಗೂ ಹೇಳಬಾರದಾಗಿ ವಿನಂತಿಸಿದ್ದೆ, ಅವರಿಗೆ ಅನುಕೂಲವಾಗುವ TVS- 50 ಖರೀದಿಸಿ ಇವತ್ತಿನವರೆಗೂ ಬಳಸುತ್ತಿದ್ದಾರೆ ಮತ್ತು ಎಲ್ಲರಿಗೂ ಇದು ಹಂದಿಗೋಡು ಜನರ ಸೇವೆಗಾಗಿ ಅರುಣ್ ಪ್ರಸಾದ್ ನೀಡಿದ ವಾಹನ ಅನ್ನುತ್ತಾರೆ.
ಪ್ರಕೃತಿ ಇಲ್ಲಿ ಬಾಳಿ ಬದುಕುವ ಎಲ್ಲಾ ಜೀವಿಗಳಿಗೆ ಅನುಕೂಲವೂ ಮಾಡುತ್ತದೆ ಮತ್ತು ಕಂಟಕ ಮಾಡುವವರಿಗೆ ಸಂಹಾರವೂ ಮಾಡುತ್ತದೆ ಎನ್ನುವುದಕ್ಕೆ ಅದಾಗೆ ನಿಯಂತ್ರಣವಾಗಿರುವ ಹಂದಿಗೋಡು ನಿಗೂಡ ಕಾಯಿಲೆ ಒಂದು ಉದಾಹರಣೆ ಆದರೂ ಇತ್ತೀಚೆಗೆ ನಿಯಂತ್ರಣ ತಪ್ಪಿ ಸಾವು ನೋವಿಗೆ ಕಾರಣವಾಗುತ್ತಿರುವ ಮಂಗನ ಕಾಯಿಲೆಯಿಂದ ಯಾರೂ ಮೈ ಮರೆಯುವಂತೆ ಇಲ್ಲ.
ಮುಂದಿನ ದಿನದಲ್ಲಾದರೂ ಈ ಕಾಯಿಲೆಗೆ ಸಂಶೋದನೆ - ಔಷದಿ ಕಂಡು ಹಿಡಿಯಲಿ, ಸಂತ್ರಸ್ಥರಿಗೆ ವಿಶೇಷ್ ಪ್ಯಾಕೇಜ್ ದೊರೆಯಲಿ, ಸ್ಥಳಿಯ ಸಂತ್ರಸ್ಥ ಕುಟುಂಬದವರಿಗೆ ಸರ್ಕಾರಿ ಉದ್ಯೋಗ ನೀಡಲಿ ಈ ಜನರ ಸೇವೆಗಾಗಿ ಜೀವನ ಮೀಸಲಿಟ್ಟ ಸಮಾಜ ಸೇವಕ ಹಂದಿಗೋಡು ಹೆಚ್.ಎಂ.ಚಂದ್ರಶೇಖರ ಭಟ್ಟರಿಗೆ ಪದ್ಮ ಪ್ರಶಸ್ತಿಯೂ ಸಿಗಲಿ ಎಂದು ಹಾರೈಸುತ್ತೇನೆ ಮತ್ತು ಒತ್ತಾಯಿಸುತ್ತೇನೆ.
ಇವರ ಸೆಲ್ ಫೋನ್ ನಂಬರ್ 95357 16903
Comments
Post a Comment