ಮಂಗಳೂರಿನ ನಾಲ್ಕು ದಶಕಗಳ ಕಾಲ ಪ್ರಸಿದ್ದವಾಗಿದ್ದ ಅತ್ರಿ ಬುಕ್ ಸೆಂಟರ್ ( ಎ.ಬಿ.ಸಿ.) ಮಾಲಿಕ ದಂಪತಿಗಳಿಂದ ಚಂಪಕ ಸರಸ್ಸು ದರ್ಶನ
#ಕ್ರಿಯಾಶೀಲ_ಸಾಧಕರು_ಆತ್ರಿ_ಬುಕ್_ಸೆಂಟರ್_ಎನ್_ಅಶೋಕವದ೯ನ್
ಮಂಗಳೂರಿನ ABC ಅಂದ್ರೆ ಅತ್ರಿ ಬುಕ್ ಸೆಂಟರ್ ಮಾಲಿಕರಾದ ಎನ್.ಅಶೋಕವದ೯ನರು 2012ರಲ್ಲಿಯೇ ತಮ್ಮ ಬುಕ್ ಸೆಂಟರ್ ನ್ನು ಕನ್ನಡ ಪುಸ್ತಕ ಓದುವ ಕೊಳ್ಳುವ ಹವ್ಯಾಸ ಜನರಲ್ಲಿ ಕಡಿಮೆ ಆದ್ದರಿಂದ ಮುಚ್ಚಿದ್ದಾರೆ.
ಇವರ ಹವ್ಯಾಸ ಪ್ರವಾಸ - ಡ್ರೈವಿಂಗ್ - ಓದು -ಪೋಟೋಗ್ರಪಿ ಜೊತೆಗೆ ಖಾಸಾಗಿ ವನ್ಯ ಸಂರಕ್ಷಣೆ ಕೂಡ, ಇದಕ್ಕಾಗಿ ಬಿಸಲೆ ಸಮೀಪ ಇವರ ಖಾಸಾಗಿ ಜಮೀನಿನ ವನ್ಯ ಸಂರಕ್ಷಣೆಗಾಗಿ ಇವರ ಅಶೋಕ ವನ ಮಾಡಿದ್ದಾರೆ.
ಇವರ ಬ್ಲಾಗ್ ಗಳು ಆಕಷ೯ಕ ಬರವಣಿಗೆ ಮತ್ತು ಚಿತ್ರಗಳಿಂದ ಎಲ್ಲರಿಗೂ ಆಕಷಿ೯ಸುತ್ತದೆ ಅದರಲ್ಲಿ ಇವರ ಅಶೋಕವನದಲ್ಲಿ ನಿರ್ಮಿಸಿದ #ಕಪ್ಪೆಗೂಡಿನ ಬಗ್ಗೆ ಬರೆದಿರುವ ಲೇಖನ ನನಗೆ ತುಂಬಾ ಇಷ್ಟ, ಇವರ ಪುತ್ರ ಚಲನ ಚಿತ್ರ ನಿದೇ೯ಶಕ ವೃತ್ತಿ ಮಾಡುತ್ತಿದ್ದಾರೆ.
ಅನೇಕ ಪುಸ್ತಕ ಕೂಡ ಬರೆದು ಪ್ರಕಟಿಸಿದ್ದಾರೆ, ಮೊನ್ನೆ ಹೆಗ್ಗೋಡಿನ ನಿನಾಸಂಗೆ ಬೈಕ್ ನಲ್ಲಿ #ಅಶೋಕವರ್ಧನ್ ದಂಪತಿ ಬಂದಾಗ ಗೆಳೆಯ #ಶೈಲೇಂದ್ರಬಂದಗದ್ದೆ ಚಂಪಕ ಸರಸ್ಸುವಿನ ಬಗ್ಗೆ ಹೇಳಿದ್ದರಿಂದ ದಂಪತಿಗಳು ನಮ್ಮ ಊರಿನ ನಾನೂರು ವರ್ಷದ ಸ್ಮಾರಕ ಚಂಪಕ ಸರಸ್ಸು ಸಂದರ್ಶಿಸಿ ಅವರ FB ಯಲ್ಲಿ ಬರೆದ ಲೇಖನ ಇಲ್ಲಿ ಶೇರ್ ಮಾಡಿದ್ದೇನೆ ಮತ್ತು ಅವರಿಗೆ ನನ್ನ ಕಾದಂಬರಿ " ಬೆಸ್ತರ ರಾಣಿ ಚಂಪಕಾ " ಅಂಚೆಯಲ್ಲಿ ಗೌರವ ಪ್ರತಿಯಾಗಿ ಕಳಿಸಿದ್ದೇನೆ ಮತ್ತು ಸ್ಮಾರಕ ಸಂದರ್ಶಿಸಿದ ಅವರಿಗೆ ಕಾದಂಬರಿ ಓದಿ ವಿಮರ್ಶೆ ಬರೆಯಲು ವಿನ೦ತಿಸಿದ್ದೇನೆ.
ಚಂಪಕ ಸರಸಿ ಉರುಫ್ ಮೇರ್ತಿಮಠ
ರಂಗಪುರುಷನ ಸಾಕ್ಷಾತ್ಕಾರ ನೋಡುವ ನೆಪದಲ್ಲಿ - ೯
"ನಾನು ಶೈಲೇಂದ್ರ ಬಂದಗದ್ದೇಂತ...." ನಾವು ಮಳ್ಳ ಗಿಂಪೆಲ್ಲನ್ನು ಕಾದಿದ್ದಾಗ, ಪಕ್ಕದಲ್ಲಿ ಬಂದು ಕುಳಿತ ಮಹನೀಯರು ಹೀಗೆ ಪರಿಚಯಿಸಿಕೊಂಡರು. ಪುಣ್ಯಾತ್ಮ ಹಿಂದೆ ಸಂಸ್ಕೃತಿ ಶಿಬಿರದಲ್ಲೂ ಪರಿಚಯಿಸಿಕೊಂಡಿದ್ದರಂತೆ, ನನ್ನ ಮರೆವಿಗೆ ಮದ್ದಿಲ್ಲ! ಅವರು ಕೆಳದಿ ಸಮೀಪದವರು. ನಮ್ಮ ಓಡಾಟ ತಿಳಿದ ಮೇಲೆ, ಆ ಬೆಳಿಗ್ಗೆ ತಮ್ಮಲ್ಲಿಗೇ ಬರಬೇಕಿತ್ತು ಎಂದೂ ಆಶಿಸಿದರು. ಅದಕ್ಕೂ ಮುಖ್ಯವಾಗಿ ನಮ್ಮ ತಿರುಗಾಡಿತನಕ್ಕೆ ಹೊಸತೊಂದು ಎರೆ ಕೊಟ್ಟರು - ಚಂಪಕ ಸರಸಿ (ಅಥವಾ ಎಂದು ಇನ್ನೇನೋ ಒಂದು ಮಠದ ಹೆಸರೂ ಹೇಳಿದ್ದರು). "ಹಿಂದಿರುಗುವ ದಾರಿಯಲ್ಲಿ ಬಟ್ಟೆಮಲ್ಲಪ್ಪದಿಂದ ನೇರ ಆನಂದಪುರಕ್ಕೆ ಹೋಗಿ. ಅಲ್ಲಿಂದ ಒಂದು ಕಿಮೀ ಅಂತರದಲ್ಲಿದೆ ಈ ಕೆರೆ ದೇವಳ..." ಎಂದು ಸಾಕಷ್ಟು ಸೂಚನೆಗಳನ್ನು ಕೊಟ್ಟದ್ದಲ್ಲದೆ, ಅವರ ಚರವಾಣಿಯಲ್ಲಿದ್ದ ಆಕರ್ಷಕ ಒಂದೆರಡು ಚಿತ್ರಗಳನ್ನೂ ತೋರಿಸಿದ್ದಕ್ಕೆ ನಮ್ಮ ದಿಕ್ಕು ನಿಶ್ಚಿತವಾಗಿತ್ತು.
ನಾವು ರಾತ್ರಿಯೇ ಅಕ್ಷರ ಶಿಶಿರಾದಿಗಳಿಂದ ಬೀಳ್ಕೊಂಡಿದ್ದೆವು. "ಎರಡು ಕಾಫಿಯಲ್ಲೊಂದು ಚಪ್ಪೆಗೂ ನಿಲ್ಲಲ್ಲ" ಅಂತ ನಾಗಾಭರಣರಿಗೆ ಖಾತ್ರಿ ಪಡಿಸಿದ್ದೆವು. ಎಲ್ಲಕ್ಕೂ ಮುಖ್ಯವಾಗಿ ವಠಾರದ ಉಸ್ತುವಾರಿ ಮುಖ್ಯರಾದ ಪ್ರಭಾ ಹಾಗೂ ಕೃಷ್ಣಮೂರ್ತಿಗಳಿಗೂ ತಿಳಿಸಿದ್ದಂತೆ, ಆರು ಗಂಟೆಗೇ ಕೋಣೆಯ ಬಾಗಿಲೆಳೆದಿಟ್ಟು ಬೈಕ್ ಹೊರಡಿಸಿದ್ದೆವು. ಬೆಳಕು ಅರಳುತ್ತಿದ್ದಂತೆ, ತೆಳು ಮಂಜು ಹರಿದು, ನಸು ಚಳಿಯ ಕುಶಿ ಇಳಿಯುವ ಮೊದಲು ಬಟ್ಟೆಮಲ್ಲಪ್ಪದಲ್ಲಿ ಕಾಫಿಗೆ ನಿಂತೆವು. ಚಟ್ನಿ ಇನ್ನೂ ಕಡೆದಿರಲಿಲ್ಲ. ಬರಿಯ ಸಾಂಬಾರಿನಲ್ಲೇ ಎರಡೆರಡು ತಟ್ಟೆ ಬಿಸಿ ಇಡ್ಲಿ ಏರಿಸಿ, ಆನಂದವಾಗಿ (ಆನಂದ)ಪುರದತ್ತ ಸಾಗಿದೆವು. ಊರ ಪ್ರವೇಶದಲ್ಲೇ ಚಂಪಕ ಸರಸಿ ಹೆಸರಿನ ಬೋರ್ಡೇನೋ ಕಾಣಿಸಿತು, ಕೆರೆ ದೇವಳದ ದಾರಿ ಸಿಕ್ಕಲಿಲ್ಲ. ಅವರಿವರ ಅಂದಾಜಿಗೆ ದಾಸಕೊಪ್ಪದ ದಾರಿಯಲ್ಲಿ ಒಂದು ಕಿಮೀ ಮೇಲೆ ಕೆಳಗೆ ಓಡಾಡಿದ್ದೇ ಬಂತು. ಕೊನೆಗೆ ನಮ್ಮ ಬಹುತರದ ವಿವರಣೆ ಕೇಳಿದ ಯಾರೋ ಪ್ರಾಯದ ಹೆಂಗಸು "ಅಯ್ಯೋ ಮೇರ್ತಿ ಮಠ ಅನ್ನಿ, ಚಂಪ್ಕಾ ಗಿಂಪ್ಕಾ..." ನಗುತ್ತಾ ತೋರಿದ ತೀರಾ ಕಚ್ಚಾ ಮಣ್ಣದಾರಿಗೆ ನುಗ್ಗಿದೆವು. ನೀರುಳ್ಳಿ ಮೂಟೆಗಳ ದಾಸ್ತಾನಿಟ್ಟಿದ್ದ ಹೊಲದ ಪಕ್ಕದಲ್ಲಾಗಿ ಕುರುಚಲು ಕಾಡಿನ ನಡುವೆ ಅಪ್ಪಟ ಸವಕಲು ಜಾಡು. ಆ ಕೊನೆಯಲ್ಲಿ ಐತಿಹಾಸಿಕ ಪ್ರಾಯದ ಮುರಕಲ್ಲಗೋಡೆಯ ಬಳಿ ಬೈಕಿಳಿದೆವು. ಗೋಡೆಗಿದ್ದ ಓಬವ್ವನ ಕಿಂಡಿಯಲ್ಲಿ ತೂರಿದಾಗ ಈ ಹಳೆಗಾಲದ ಸುಂದರಿ - ಚಂಪಕ ಸರಸಿ, ಅರ್ಥಾತ್ ಸಂಪಿಗೆ ಕೊಳ, ಬೆಳಗ್ಗಿನ ಸೂರ್ಯರಶ್ಮಿಯಲ್ಲಿ ಮಿಂದುಕೊಂಡಿತ್ತು. ಅನಂತರ ಕಂಡಂತೆ ದಾಸಕೊಪ್ಪದ ಮಸೀದಿ ಎದುರಿನಿಂದ, ಇಗರ್ಜಿ ಪಕ್ಕದಿಂದ ಅದಕ್ಕೆ ವಾಹನಯೋಗ್ಯ ಮಣ್ಣದಾರಿಯೂ ಇತ್ತು.
ನಿರ್ಜನ, ನೀರವ, ಹಾಳುಬಿದ್ದ ಸ್ಥಳ ಎನ್ನಲಾಗದಂತೆ, ಶಿವಮೊಗ್ಗದಿಂದ ಬಂದ ಒಂದು ತಂಡ ಅಲ್ಲಿ ಪ್ರಿ-ವೆಡ್ ಶೂಟಿಂಗ್ ನಡೆಸಿತ್ತು. ಭರ್ಜರಿ ಮೂರು ಕಾರಿನಲ್ಲಿ ಆರೆಂಟು ಮಂದಿ ಕ್ಯಾಮರಾ ಡ್ರೋನ್ ಸಜ್ಜಿತರಾಗಿದ್ದರು. ಅವರ ಟಚ್ಚಿಂಗೂ ಪೊಸಿಶನಿಂಗೂ ಲೈಟಿಂಗೂ ಯಾಕ್ಟಿಂಗೂ ಕ್ಯಾಮರಾ ಸೆಟ್ಟಿಂಗೂಗಳು ನಡೆದೇ ಇತ್ತು. ಅವುಗಳ ಎಡೆ ಎಡೆಯಲ್ಲಿ ನಾವು ಸ್ವಲ್ಪ ಎಕ್ಸ್ಕ್ಯೂಸ್ಮಿಗಳನ್ನು ಬಿಟ್ಟು ಕೆರೆಗೆ ಸುತ್ತು ಹಾಕಿ, ಕಲ್ಲ ಸೇತುವಿನಲ್ಲಿ ನಡುಗಡ್ಡೆಯ ಮಂಟಪಕ್ಕೇರಿ, ಅದಕ್ಕೂ ಒಂದು ಪ್ರದಕ್ಷಿಣೆ ಬಂದು, ಶಿವಲಿಂಗದ ದರ್ಶನ ಪಡೆದು, ಕೆರೆಯಿಂದಾಚೆಗಿದ್ದ ಮೂಲ ಲಿಂಗದೇವರನ್ನೂ ಸಂದರ್ಶಿಸಿ ಮುಗಿಸಿಕೊಂಡೆವು. ಹೊರಗೆ ಸುತ್ತಲೂ ಕಾಣುತ್ತಿದ್ದ ಭಣಭಣ ಹೊಲದ ನಡುವೆ, ಮಾರ್ಚ್ ತಿಂಗಳ ಉರಿಯಲ್ಲೂ ಅಷ್ಟು ನೀರ ಸಮೃದ್ಧಿಯ ಕೆರೆ, ಸಣ್ಣ ಜೀರ್ಣೋದ್ಧಾರದಲ್ಲೂ ಅದ್ಭುತ ದೃಶ್ಯಾವಳಿಗಳನ್ನೇ ಕೊಡುವ ರಚನೆ ಕಂಡ ಧನ್ಯತೆಯಲ್ಲಿ ಮತ್ತೆ ‘ಓಬವ್ವನಕಿಂಡಿ’ಗಾಗಿಯೇ ಬೈಕಿಗೆ ಮರಳಿದೆವು.
ಹದಿನೇಳನೇ ಶತಮಾನದ ಇಕ್ಕೇರಿಯರಸ ವೆಂಕಟಪ್ಪ ನಾಯಕನ ಕೊಡುಗೆಯಂತೆ ಈ ಕೆರೆ ದೇವಳ. ಮೊಗಲರ ತಾಜಮಹಲಿನಂತೇ ಇದಕ್ಕೂ ಪ್ರೇಮ ಕತೆಯ ಸ್ಪರ್ಷವಿದೆ. ಸಾಲದೆಂಬಂತೆ ಸವತಿ ಸಂಘರ್ಷದ ರೋಚಕತೆ, ಇಂದಿನ ಲೆಕ್ಕದಲ್ಲಿ ಹೇಳುವುದಿದ್ದರೆ ಧರ್ಮರಾಜಕಾರಣದ ಕಿಡಿಯೂ ಇದೆ. ದೇವಳದ ಜೀರ್ಣೋದ್ಧಾರ ಹಾಗೂ ಇತಿಹಾಸದ ಕುರಿತು ಹೆಚ್ಚಿನ ಕೆಲಸ ಮಾಡಿದ, ಸ್ಥಳೀಯರೇ ಆದ (ಯಡೆಹಳ್ಳಿ) ಅರುಣ್ ಪ್ರಸಾದ್ ಅವರ ಹೆಸರನ್ನು ಶೈಲೇಂದ್ರ ನನಗೆ ತಿಳಿಸಿದ್ದರು. ಅರುಣ್ ಇತಿಹಾಸ, ವದಂತಿಗಳನ್ನು ಹೊಸೆದು ರಮ್ಯ ಪುಸ್ತಕ ರೂಪ ಕೊಟ್ಟಿರುವುದೂ ನನಗೆ ತಿಳಿಯಿತು. ಆದರೆ ನನ್ನ ಶೋಧ ಹಾಗೂ ಸಂಪರ್ಕ ಪ್ರಯತ್ನಗಳು ಇಂದಿನವರೆಗೂ ಫಲಕಾರಿಯಾಗಿಲ್ಲ. ನಿಮಗೇನಾದರೂ ತಿಳಿದಿದ್ದರೆ ಇಲ್ಲೇ ಹಂಚಿಕೊಳ್ಳಿ.
ದೇವಳ ವಠಾರದ ಪೌಳಿಯ ಮಗ್ಗುಲಿನಲ್ಲಿ ಮತ್ತಷ್ಟು ಸವಕಲು ಜಾಡಿನಲ್ಲಿ ಬೈಕ್ ನುಗ್ಗಿಸಿ, ಪ್ರಿ ವೆಡ್ಡಿನವರ ಕಾರುಗಳ ಬಂದಿದ್ದ ನಿಜ ದಾರಿ ಸೇರಿದೆವು. ಭಾರೀ ಲಾರಿ ಓಡಾಟದ ಲಕ್ಷಣವಿದ್ದ ಕೆಮ್ಮಣ್ಣ ದಾರಿ. ಅರ್ಧದಾರಿಯಲ್ಲೇ ಶೈಲೇಂದ್ರರು ಹೇಳಿದ್ದ ಮುರಕಲ್ಲ ಭಾರೀ ಕೋರೆಯನ್ನೂ ಮೇಲೆಂದ ಮೇಲೆ ನೋಡಿಕೊಂಡೆವು. ನಿಜ, ಶೈಲೇಂದ್ರರು ಹೇಳಿದಂತೆ ಅಲ್ಲಿನ ಮುರಕಲ್ಲ ಸೂರೆ ನಿಲ್ಲದೇ ಚಂಪಕಸರಸಿಯ ಅಭಿವೃದ್ಧಿಗೆ ಅರ್ಥ ಬರುವುದಿಲ್ಲ. ಶೈಥಿಲ್ಯ ಕಳೆದು, ಸುಂದರೀಕರಣ ಪೂರೈಸುವ ಕಾಲಕ್ಕೆ ಕೆರೆಯಲ್ಲಿ ನೀರಿಲ್ಲವಾಗುವ ಅಪಾಯಗಳು ಸ್ಪಷ್ಟವಿವೆ. (ಚಂಪಕ ಸರಸಿ ಕುರಿತ ಯೂಟ್ಯೂಬ್ ಕೃಪೆ: https://www.youtube.com/watch?v=k5Rf4N_RmxA)
(ಮುಂದುವರಿಯಲಿದೆ)
Comments
Post a Comment