Blog number 914. ಮದ್ಯಾಹ್ನ ಊಟ ಆಯಿತಾ ಎಂದು ಕೇಳುವ ಸಂಪ್ರದಾಯದಂತೆ ಮುಂಗಾರಿನ ಮಳೆಗಾಲದ ಮಧ್ಯದಲ್ಲಿ ನಿಮ್ಮಲ್ಲಿ ಜಲ ಒಡಿತಾ? ಒರತೆ ಎದ್ದಿದಿಯಾ? ಎಂಬ ಪ್ರಶ್ನೆ ಸಹಜ ಯಾಕೆ?
#ತಣ್ಣನೆಯ_ಸುಳಿ_ಗಾಳಿ_ಬೀಸುತ್ತಿದೆ.
#ಜಲದ_ಬುಗ್ಗೆ_ಒಡೆದಿದೆ.
#ಪರಸ್ಪರವಾಗಿ_ಸಂಪ್ರದಾಯಿಕವಾಗಿ_ಕೇಳುವ_ಪ್ರಶ್ನೆ
#ನಿಮ್ಮಲ್ಲಿ_ಜಲದ_ಕಣ್ಣು_ಒಡೆಯಿತಾ?
#ನೀರಿನ_ಒರತೆ_ಎದ್ದಿದಿಯಾ?
ಜಲ-ಬುಗ್ಗೆ - ಒರತೆ ಮುಂತಾದ ಪ್ರಾದೇಶಿಕ ಭಾಷೆಯಲ್ಲಿ ಕರೆಯುವ ಮಳೆಗಾಲದ ನೀರಿನ ಒರತೆ ಎದ್ದಿತೂ ಅಂದರೆ ಆ ವರ್ಷದ ಮಳೆ ಭೂಮಿಗೆ ಹದವಾಗಿ ತಲುಪಿತು ಅಂತಲೇ ಅರ್ಥ, ಇತ್ತೀಚಿಗೆ ಎಷ್ಟೋ ಮಳೆಗಾಲದಲ್ಲಿ ಮಳೆ ಪ್ರಮಾಣ ಕಡಿಮೆಯಿಂದ ಜಲ ಒಡೆಯುವುದಿಲ್ಲ.
ಮಳೆ ಜಾಸ್ತಿ ಆಗಿ ಚಳಿಯ ಸುಳಿಗಾಳಿ ಪ್ರಾರಂಭ ಆಯಿತೆಂದರೆ ಜಲದ ಬುಗ್ಗೆಗಳು ಎದ್ದಿದೆ ಎಂದೇ ಅರ್ಥ.
ಭೂಮಿಯು ಸರಿಯಾದ ಮಳೆ ನೀರು ದಾರಣೆ ಆದರೆ ನೈಸರ್ಗಿಕ ಒತ್ತಡದಿಂದ ಭೂಮಿಯಲ್ಲಿನ ಹೆಚ್ಚು ಪ್ರಮಾಣದ ಸೀಪೇಜ್ ನೀರು ಭೂಮಿ ಒಡೆದು ಹೊರ ಬರುತ್ತದೆ.
ಒತ್ತಡ ಹೆಚ್ಚಿದ್ದಲ್ಲಿ ಬುಗ್ಗೆಯಾಗಿ ಚಿಮ್ಮುತ್ತದೆ, ಇದು ಆಯಾ ಪ್ರದೇಶದಲ್ಲಿ ಕೆಲವು ವಾರ - ತಿಂಗಳು ಹರಿಯುತ್ತದೆ, ಇನ್ನೂ ಕೆಲವು ವರ್ಷ ಪೂರ್ತಿ, ಕೆಲವು ಕಡೆ ಬಿಸಿ ನೀರಿನ ಬುಗ್ಗೆಗಳೂ ಇದೆ.
ಇಂಗ್ಲೀಷ್ ನಲ್ಲಿ Spring ಎನ್ನುವ ಈ ನೀರು ರಸ್ತೆ ಬದಿಯಲ್ಲಿ ಬುಗ್ಗೆಯಾಗಿ ಬಂದರೆ ಕುಡಿಯುವುದು ಸೂಕ್ತವಲ್ಲ ಅದರಲ್ಲಿ ತ್ಯಾಜ್ಯದ ವಿಷದ ಅಂಶ ಇರುತ್ತದೆಂದು ನ್ಯೂಯಾರ್ಕಿನ ಆರೋಗ್ಯ ಇಲಾಖೆ ಎಚ್ಚರಿಸಿದೆ.
ಪಶ್ಚಿಮ ಘಟ್ಟ ಪ್ರದೇಶದಲ್ಲಿ ಈ ವರ್ಷದ ಮಳೆಗಾಲ ತಡವಾಗಿ ಆರಂಭವಾಗಿ ಈಗ ಅತಿ ಹೆಚ್ಚು ಮಳೆ ಸುರಿಯುತ್ತಿದೆ ಆದ್ದರಿಂದ ಎಲ್ಲಾ ಕಡೆ ಜಲ ಒಡೆದಿದೆ.
ಗುಡ್ಡ ಪ್ರದೇಶದಲ್ಲಿ ಜನವಸತಿಯಿಂದ ದೂರ ಇರುವ ಈ ಒರತೆ ನೀರಿನಲ್ಲಿ ಮ್ಯಾಗ್ನೆಸಿಯಂ, ಪೊಟಾಸಿಯಂ, ಕ್ಯಾಲ್ಸಿಯಂ ಮತ್ತು ಸೋಡಿಯಂ ಯಥೇಚ್ಛವಾಗಿ ಇರುತ್ತದೆ ಮತ್ತು ಎಲ್ಲಾ ರೀತಿಯ ಮೈಕ್ರೋನ್ ಮತ್ತು ಕಲ್ಮಷಗಳು ನಿವಾರಣೆ ಆಗಿ ಈ ನೀರು ಕುಡಿಯಲು ಯೋಗ್ಯ, Ph ವ್ಯಾಲ್ಯೂ ಜಾಸ್ತಿ, ಆಲ್ಕಾಲೆನ್ ನೀರು ಎಂಬಿತ್ಯಾದಿ ಹೇಳುತ್ತಾರೆ.
ಈ ರೀತಿಯ ಬುಗ್ಗೆಯ ನೀರು ಸಂಗ್ರಹಿಸಿ ಮಾರಾಟ ಮಾಡುವ ದೊಡ್ಡ-ದೊಡ್ಡ ಸಂಸ್ಥೆಗಳಿದೆ.
ಸಾಗರ ತಾಲ್ಲೂಕಿನ ವರದಳ್ಳಿಯ ಶ್ರೀಧರ ತೀರ್ಥವರ್ಷ ಪೂರ್ತಿ ನೀರು ನೀಡುತ್ತದೆ, ತುಮರಿ ಭಾಗದಲ್ಲಿ ಅಬ್ಬಿ ನೀರು ಅನೇಕರ ಮನೆ ತೋಟಗಳಿಗೆ ನೀರಿನ ಆಸರೆ ಆಗಿದೆ.
ನಮ್ಮ ಭಾಗದಲ್ಲಿ ಮಳೆಗಾಲದಲ್ಲಿ ಮಾತ್ರ ಪ್ರಾರಂಭ ಆಗಿ ಮಳೆ ನಿಂತಾಗ ನಿಂತು ಹೋಗುವ ಒರತೆಯ ಜಲದ ಬುಗ್ಗೆಗಳು ಇದೆ.
ನಮ್ಮ ಭಾಗದಲ್ಲಿ ಮಧ್ಯಾಹ್ನ ಎದರು ಸಿಕ್ಕಿದರೆ ಊಟ ಆಯಿತಾ ಎಂಬ ಪ್ರಶ್ನೆಯಂತೆ ನಡು ಮಳೆಗಾಲದಲ್ಲಿ ಪರಸ್ಪರ ಪ್ರಶ್ನಿಸಿಕೊಳ್ಳುವುದು "ನಿಮ್ಮಲ್ಲಿ ಜಲ ಒಡಿತಾ " , ಜಲದ ಕಣ್ಣು ಒಡಿತಾ?, ಒರತೆ ಎದ್ದಿದಿಯಾ? ಅಂತೆಲ್ಲ ಈ ಮೂಲಕ ಮಳೆಯ ಸಾಂದ್ರತೆ ಅಂದಾಜಿಸುವ ಕ್ರಮ ಇದು.
Comments
Post a Comment