Blog number 909. ನಮ್ಮ ಊರಿನ ಸುಡುಗಾಡು ಸಿದ್ದ ಅಲೆಮಾರಿ ಬುಡಕಟ್ಟು ಜನಾಂಗದ ಹಿರಿಯರಾದ ಜೇಡಿಸರದ ದೊಡ್ಡ ಗೂರಪ್ಪರು ನನ್ನ ಸಣ್ಣ ಕಥಾ ಸಂಕಲನ ಭಟ್ಟರ ಬೊಂಡಾ ಬಾಂಡ್ಲಿಯಲ್ಲಿ ಬಿಲಾಲಿ ಬಿಲ್ಲಿ ಅಭ್ಯಂಜನದ ಓದುಗ ವಿಮರ್ಷಕರು ಆಗಿದ್ದು ಕಥೆ ಬರೆದ ನನಗೆ ಸಾರ್ಥಕತೆ ಆಯಿತು
#ಸುಡುಗಾಡುಸಿದ್ದ_ಅಲೆಮಾರಿ_ಜನಾಂಗದ_ದೊಡ್ಡಗೂರಪ್ಪಣ್ಣರಿಂದ_ನನ್ನ_ಕಥಾಸಂಕಲದ_ಬಗ್ಗೆ_ಮಿಮರ್ಷೆ.
#ನಾಲ್ಕನೇ_ತರಗತಿವರೆಗೆ_ಓದಿರುವ_ಇವರು_ಓದಿದ_ಕಾದಂಬರಿ_ಎರೆಡು_ಸಾವಿರಕ್ಕೂ_ಮಿಕ್ಕಿದೆ.
#ಯಾವ_ಯಾವ_ಸಾಹಿತಿ_ಮತ್ತು_ಪುಸ್ತಕ_ಎಂಬುದು_ಈ_ವಿಡಿಯೋದಲ್ಲೇ_ನೋಡಿ.
#ನನ್ನ_ಕಥಾಸಂಕಲನ_ಭಟ್ಟರ_ಬೊಂಡಾ_ಬಾಂಡಲಿಯಲ್ಲಿ_ಬಿಲಾಲಿ_ಬಿಲ್ಲಿ_ಅಭ್ಯಂಜನ
ನಿನ್ನೆ ನಮ್ಮ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಶ್ರೀಮತಿ ಇಂದಿರಮ್ಮ ನನ್ನ ಆಫೀಸಿಗೆ ಬಂದು ನೀವು ಬರೆದ ಪುಸ್ತಕ ತಮ್ಮ ತಂದೆಗೆ ಬೇಕಂತೆ ಅಂದಾಗ ಕೊಟ್ಟು ಕಳಿಸಿದ್ದೆ.
ಬೆಳಿಗ್ಗೆ ದೊಡ್ಡ ಗೂರಪ್ಪ ಪೋನ್ ಮಾಡಿ ನಿಮ್ಮ ಪುಸ್ತಕ ಬಂದಿದೆ ಮೊದಲಕಥೆ ಪೂರ್ತಿ ಓದಿದೆ, ಎರಡನೆ ಕಥೆ ಅದ೯ ಓದಿದ್ದೀನಿ ತುಂಬಾ ಚೆನ್ನಾಗಿದೆ ಅಂದರು, ಪೇಟೆಗೆ ಬಂದರೆ ಬನ್ನಿ ಅಂದೆ, ಆಸ್ಪತ್ರೆಗೆ ಹೋಗಬೇಕು ಬರುತ್ತೇನೆ ಅಂದವರು ಬೆಳಿಗ್ಗೆ 11 ಗಂಟೆಗೆ ಬಾರೀ ಮಳೆಯಲ್ಲೇ ರಿಕ್ಷಾದಲ್ಲಿ ಬಂದಿಳಿದರು.
ಇವರು ಆಂದ್ರ ಮಾತೃ ಬಾಷೆಯ ಆಂದ್ರ ಮೂಲದ ಅಲೆಮಾರಿ ಬುಡಕಟ್ಟು ಜನಾಂಗದ ಸುಡುಗಾಡು ಸಿದ್ಧ ಜಾತಿಯವರು, ಆಂದ್ರದಿಂದ ಚಿತ್ರದುಗ೯ ಅಲ್ಲಿಂದ ಶಿವಮೊಗ್ಗ ಜಿಲ್ಲೆಯ ಹೊಸನಗರ, ಅಲ್ಲಿಂದ ಕೆಂಚನಾಲ ನಂತರ ನಮ್ಮ ಆನಂದಪುರಂನ ಜೇಡಿಸರದಲ್ಲಿ ಬಂದು ನೆಲೆಸಿದ ಇವರ ತಂದೆ ಪರಶುರಾಮಣ್ಣ ತಮ್ಮ ವಂಶಪಾರಂಪರ್ಯ ವೃತ್ತಿ ಆದ ಜೋತಿಷ ಹೇಳುವುದು, ಬಿಕ್ಷೆ ಬೇಡುವುದನ್ನು ಇಷ್ಟ ಪಡದೆ ಕೃಷಿ ಮೇಲೆ ಅವಲಂಬಿತರಾದವರು.
ಸುಡುಗಾಡ ಸಿದ್ಧರೆಂದರೆ ಶಿವನ ಅನುಯಾಯಿಗಳು, ಶಿವನ ಕೋಪಕ್ಕೆ ತುತ್ತಾಗಿ ಅಲೆಮಾರಿಗಳಾದರೂ ಎಂಬ ಪ್ರತೀತಿ ನಂಬಿಕೆ ಇವರಲ್ಲಿದೆ, ಇವರು ಶಾಲೆಗಳಲ್ಲಿ ಅತಿ ಹೆಚ್ಚು ಅಂಕ ಪಡೆಯುವ ಬುದ್ಧಿವಂತರು, ಕುಡಿತಕ್ಕೆ ಇವರಲ್ಲಿ ಯಾವುದೇ ನಿರ್ಬಂದವಿಲ್ಲ, ಅತ್ಯಂತ ಬುದ್ದಿವಂತರಾಗಿರುವ ಇವರು ಜಗಳ ಹೊಡೆದಾಟಗಳು ಮಾಡುವುದು ಕಡಿಮೆ, ಸೌಜನ್ಯ ಮತ್ತು ಸಂಸ್ಕಾರ ಈ ಅಲೆಮಾರಿ ಪಂಗಡದಲ್ಲಿ ಬೇರೆ ಅಲೆಮಾರಿ ಬುಡಕಟ್ಟು ಹೋಲಿಸಿದರೆ ಹೆಚ್ಚು.
ಹೊಸನಗರದಲ್ಲಿ 10 ಎಕರೆ ಗೇಣಿ ಜಮೀನು ಮಾಡಿದ್ದಾರಂತೆ ನಂತರ ಭೂಮಾಲಿಕರು ಜಮೀನು ಬಿಡಿಸಿಕೊಂಡರಂತೆ ಹಾಗಾಗಿ ಹೊಸನಗರ ಬಿಡುತ್ತಾರೆ.
ಈ ಜನಾಂಗದವರು ಹಸ್ತ ಸಾಮುದ್ರಿಕೆ, ಒಲೆಗರಿಯ (ಚಿಂತಾಮಣಿ) ಕಟ್ಟಿನಲ್ಲಿ ಜೋತಿಷ ಕೇಳುವವ ಕಡ್ಡಿ ಹಾಕಿ ಗುರುತು ಮಾಡಿದ ಒಲೆಗರಿ ತೆಗೆದು ಅದರಲ್ಲಿನ ಚಿತ್ರದ ಪ್ರಖಾರ ಜೋತಿಷ ಹೇಳುವುದು, ಇನ್ನೊಂದು ವಿಧಾನ ಇವರು ಸಾಕುವ ಗಿಳಿ ಪಂಜರದಿಂದ ಬಂದು ಕಚ್ಚಿ ಕೊಡುವ ಒಲೆಗರಿಯ ನೋಡಿ ಹೇಳುವುದು ಇದು ಇವರ ತಲಾತಲಾಂತರದ ವೃತ್ತಿ ಆಗಿತ್ತು, ಆಗ ಇವರು ಕುದುರೆ ಸಾಕುತ್ತಿದ್ದರು ಕುದುರೆ ಅಲೆಮಾರಿ ಜೀವನದ ಸರಕು ಸಾಗಾಣಿಕೆ ಮತ್ತು ಇವರ ಪ್ರಯಾಣಕ್ಕೂ ಬಳಕೆ ಆಗುತ್ತಿದ್ದ ವಾಹನ ಆಗಿತ್ತು ಆ ಕಾಲದಲ್ಲಿ.
ಪರಶುರಾಮಪ್ಪ ಮತ್ತು ಅಜ್ಜಮ್ಮ (ಮಂಜಮ್ಮ) ದಂಪತಿಗೆ ಈ ದೊಡ್ಡ ಗೂರಪ್ಪ ಮತ್ತು ಲಚ್ಚಿರಾಮ ಎಂಬ ಇಬ್ಬರು ಗಂಡು ಮಕ್ಕಳು, ಪರುಶುರಾಮಪ್ಪರ ಎರಡನೆ ಪತ್ನಿ ಎಲ್ಲಮ್ಮರಿಗೆ ಸಣ್ಣಗೂರಪ್ಪ ಮತ್ತು ಸಿದ್ಧಿ, ಕಮಲಿ ಎಂಬ ಇಬ್ಬರು ಹೆಣ್ಣು ಮಕ್ಕಳು.
ಈ ದೊಡ್ಡ ಗೂರಪ್ಪರಿಗೆ 73 ವರ್ಷ ಅನ್ನುತ್ತಾರೆ (ಜಾಸ್ತಿಯೂ ಇರಬಹುದು) ಇವರು ಈಗ ವಾಸ ಇರುವ ಜೇಡಿಸರಕ್ಕೆ ಬಂದಾಗ ಹಾಲಿ ಇವರು ಸಾಗು ಮಾಡಿರುವ ಜಮೀನಿನಲ್ಲಿ 320 ದೊಡ್ಡ ಗಾತ್ರದ ಬಿದಿರು ಮೆಳೆಗಳು ಇತ್ತಂತೆ ಆಗ ಆ ಹಳ್ಳಿಯಲ್ಲಿ ಕೃಷ್ಣ ಬಳೆಗಾರರು, ಮುತ್ತು ಬಳೆಗಾರರು, ಇಮಾಂ ಸಾಹೇಬರು, ಸೈಯದ್ ಅಹಮದ್ ಸಾಹೇಬರ ನಾಲ್ಕು ಮನೆಗಳು ಮಾತ್ರ ಇತ್ತಂತೆ, ಸಾಗರದ ಪಂಡರಿ ಹೆಗ್ಗಡೆ ಎಂಬುವವರಿಗೆ ಸೇರಿದ ಖಾತೆ ಜಮೀನು ಈ ಕುಟುಂಬಗಳು ಗೇಣಿ ಮಾಡಿಕೊಂಡಿದ್ದರಂತೆ.
ಇದು ತಾವರೇಹಳ್ಳಿ ಎಂಬ ರೆವಿನ್ಯೂ ಗ್ರಾಮವಾಗಿದ್ದರೂ ಇಲ್ಲಿನ ಹಳ್ಳದಲ್ಲಿ ಜೇಡಿ ಮಣ್ಣು ಯಥೇಚ್ಛವಾಗಿ ಸಿಗುತ್ತಿದ್ದರಿಂದ ಸುತ್ತಮುತ್ತಲಿನ ಹಳ್ಳಿ ಜನ ಜೇಡಿ ಮಣ್ಣು ಸಂಗ್ರಹಿಸಿ ಪುಟ್ ಬಾಲ್ ನಂತ ಉಂಡೆ ಕಟ್ಟಿ ಒಯ್ಯುತ್ತಿದ್ದರಿಂದ ಈ ಹಳ್ಳಿಗೆ ಜೇಡಿಸರ ಅಂತಾಯಿತಂತೆ.
ಆಗ ಮನೆಗಳಿಗೆ ಬಣ್ಣ ಬಳಿಯುವ, ಸಿಮೆಂಟ್ ಬಳಕೆ ಇಲ್ಲದ ಕಾಲ ಆದ್ದರಿಂದ ಪ್ರತಿ ಮನೆಗೂ ಜೇಡಿ ಉಂಡೆ, ಕೆಮ್ಮಣ್ಣು ಉಂಡೆ, ನೆಲಕ್ಕೆ ಸಗಣಿ ಜೊತೆ ಸಾರಿಸಲು ಕಬ್ಬಿನ ಸಿಪ್ಪೆ ಸುಟ್ಟು ಮಾಡುತ್ತಿದ್ದ ಕರಿ ಉಂಡೆ ಅದನ್ನು ಸಾರಿಸಲು ಅಡಿಕೆ ಹಾಳೆ, ಗುಡಿಸಲು ತೆಂಗಿನ ಕಡ್ಡಿ ಹಿಡಿ ಇಂತವೆಲ್ಲ ಸಂಗ್ರಹಿಸಬೇಕಾಗಿತ್ತು.
ಆಗ ಆನಂದಪುರಂ ಕೋಟೆ ಶಿಥಿಲ ಆಗಿರಲಿಲ್ಲವಂತೆ ಅಲ್ಲಿ ಒಂದು ದೊಡ್ಡ ಉಡಾ ಇತ್ತಂತೆ ಅದು ಕೋಟೆ ಗೋಡೆ ಮೇಲೆ ಓಡಾಡುತ್ತಿತ್ತು ಅದರ ಒಂದು ಕಿವಿಗೆ ಬಂಗಾರದ ಕಡಗ ಹಾಕಿದ್ದರಂತೆ ಅದನ್ನು ಗೂರಪ್ಪ ಮತ್ತು ಆ ಕಾಲದ ಎಲ್ಲರೂ ನೋಡಿದಾರೆ ಅಂತಾರೆ.
ಗೂರಪ್ಪ ನನ್ನ ತಂದೆ ಗೆಳೆಯರು ನನ್ನ ರಬ್ಬರ್ ತೋಟದ ಬಾಜುದಾರರು ಹಾಗಾಗಿ ನನಗೂ ಅವರ ಗೆಳೆತನ ಮುಂದುವರಿದಿದೆ.
ಇವತ್ತು ಇದೆಲ್ಲ ಮಾತಾಡುತ್ತಾ ಹೋದಾಗ ತುಂಬಾ ಆಶ್ಚರ್ಯವಾದ ವಿಚಾರ ತಿಳಿದಿದ್ದೇನೆಂದರೆ ದೊಡ್ಡ ಗೂರಪ್ಪ ಸುಮಾರು 2000 ಕಾದಂಬರಿ ಓದಿದ್ದಾರೆ, ಇವರು ಶಿವರಾಂ ಕಾರಂತರ ಮೂಕಜ್ಜಿ ಕನಸು, ಕುವೆಂಪುರವರ ರಾಮಾಯಣ ದರ್ಶನ೦, ಕಾನೂರು ಸುಬ್ಬಮ್ಮ ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು, ಮಾಸ್ತಿಯವರ ಸಿದ್ದ ವೀರ ರಾಜೇಂದ್ರ, ದಾರಾ ಬೇಂದ್ರೆಯವರ ನಾಕು ತಂತಿ, ಗುಲ್ಷನ್ ನಂದಾರ ಎಲ್ಲಾ ಕಾದಂಬರಿ, ಯಂಡಮುರಿ .... ಹೀಗೆ ಒಂದೊಂದೆ ತಾವು ಓದಿದ ಕಾದಂಬರಿ ನೆನಪು ಮಾಡಿಕೊಳ್ಳುವುದು ಕೇಳಿ ಆಶ್ಚಯ೯ವೊ ಆಶ್ಚಯ೯.
ಇಂತಹ ಹಿನ್ನೆಲೆಯ ಅಲೆಮಾರಿ ಜನಾಂಗದ ದೊಡ್ಡ ಗೂರಪ್ಪಣ್ಣ ನನ್ನ ಎರಡನೆ ಪುಸ್ತಕ ಸಣ್ಣ ಕಥಾ ಸಂಕಲನ "ಭಟ್ಟರ ಬೊಂಡಾ ಬಾಂಡ್ಲಿಯಲ್ಲಿ" #ಬಿಲಾಲಿ_ಬಿಲ್ಲಿ_ಅಭ್ಯಂಜನ ಮತ್ತು 28 ಕಥೆಗಳು ಎಂಬ ಪುಸ್ತಕ ಈಗ ಓದುತ್ತಿದ್ದಾರೆ ಮತ್ತು ಮೊದಲ ಎರೆಡು ಕಥೆ ಓದಿ ಶಬಾಷ್ ಅಂದಿದ್ದಾರೆ.
ವಿಡಿಯೋದಲ್ಲಿ ಕೊನೆಯದಾಗಿ ಅವರು ಕಳೆದ ವರ್ಷ ನಾನು ನೀಡಿದ ಉಡುಗೊರೆ ಬಗ್ಗೆ ಸೆನ್ಸಾರ್ ಮಾಡಿಲ್ಲ ಹೊಟ್ಟೆಯಲ್ಲಿ ಹಾಕಿಕೊಳ್ಳಿ.
ಪುಸ್ತಕ ಓದುಗರಿಗೆ ಪುಸ್ತಕ ತಲುಪಿಸಲು ಮೊದಲಿಗಿಂತ ಈಗ ಕಷ್ಟವಾಗಿದೆ, ಓದದವರ ಎದುರು ಪುಸ್ತಕದ ಮೆರವಣಿಗೆ ಮಾತ್ರ ಮಾಡುತ್ತಿದ್ದೇವೆ ಅನ್ನಿಸುತ್ತಿದೆ ಇವತ್ತು ಗೂರಪ್ಪರ ಬೇಟಿ ನಂತರ.
Comments
Post a Comment