ನನ್ನ ಊರಿನ ಗ್ರಾಮ ಪಂಚಾಯತ್ ಕಸ ವಿಲೇವಾರಿ ಅಭಿಯಾನ ಉತ್ಸಾಹಿ ಅಧ್ಯಕ್ಷರು, ಸದಸ್ಯರು ಮತ್ತು ಸಿಬ್ಬ೦ದಿ ವರ್ಗದ ಶ್ರಮದಿಂದ ಯಶಸ್ವಿ ಆಗಲಿದೆ
ಇವತ್ತು ಸಾಗರ ತಾಲ್ಲೂಕಿನ ಆನಂದಪುರಂ ಹೋಬಳಿಯ ಯಡೇಹಳ್ಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಗಣಪತಿ ಇರುವಕ್ಕಿ ಸದಸ್ಯರಾದ ಗೇರುಬೀಸು ಶಿವಾನಂದ, ಗೇರುಬೀಸು ನಟರಾಜ ಮಹಿಳಾ ಸದಸ್ಯರು, ಉತ್ಸಾಹಿ ಪಿಡಿಓ ಕುಮಾರ್, ಕಾರ್ಯದರ್ಶಿ ಕರಿಬಸಪ್ಪ, ಬಿಲ್ ಕಲೆಕ್ಟರ್ ಇರುವಕ್ಕಿ ಕುಮಾರ್ ಮತ್ತಿತರರೆಲ್ಲ ನೂತನ ಕಸ ಸಾಗಾಣಿಕೆ ವಾಹನದ ಜೊತೆ ಗ್ರಾಮದ ಪ್ರತಿ ಮನೆ ಮನೆಗೂ ಹೋಗಿ ಪ್ರತಿ ಸೋಮವಾರ ಮತ್ತು ಗುರುವಾರ ಗ್ರಾಮ ಪಂಚಾಯತ್ ನ ಕಸ ವಿಲೇವಾರಿ ವಾಹನ ಮತ್ತು ಸಿಬ್ಬಂದಿ ನಿಮ್ಮ ಮನೆ ಬಾಗಿಲಿಗೆ ಬರುತ್ತಾರೆ ಕಸ ಸಂಗ್ರಹಿಸಲು, ಒಣ ಕಸ ನೀಲಿ ಡಬ್ಬಿಗೆ ಹಾಕಿಡಿ ಮತ್ತು ಹಸಿ ಕಸ ಹಸಿರು ಡಬ್ಬಿಗೆ ಹಾಕಿಡಿ ಮುಂದಿನ ದಿನದಲ್ಲಿ ಯಡೇಹಳ್ಳಿ ಕಸ ರಹಿತ ಗ್ರಾಮವಾಗಿ ಆರೋಗ್ಯ ಕಾಪಾಡೋಣ ಅಂತ ಹೇಳಿ ಗ್ರಾಮ ಪಂಚಾಯತ್ ನಿಂದ ಒಂದೊಂದು ನೀಲಿ ಮತ್ತು ಹಸಿರು ಡಬ್ಬಿ ಉಚಿತವಾಗಿ ನೀಡುತ್ತಾ ಹೋದರು.
ಕೇಂದ್ರ ಮತ್ತು ರಾಜ್ಯ ಸರ್ಕಾರ #ಸ್ವಚ್ಚತಾ_ಸಂಕಿರ್ಣ ಅನ್ನುವ ಯೋಜನೆಯಲ್ಲಿ ಪ್ರತಿ ಗ್ರಾಮ ಪಂಚಾಯತ್ ಗೆ ಕಸ ವಿಲೇವಾರಿಗೆ ವಾಹನ ನೀಡುತ್ತಿದೆ ಈ ವಾಹನದ ಬೆಲೆ 5.60 ಲಕ್ಷ ಇದರಲ್ಲಿ 3 ಲಕ್ಷ ಗ್ರಾಮ ಪಂಚಾಯತ್ ಪಾವತಿಸಬೇಕು ಉಳಿದ ಹಣ ಸರ್ಕಾರದ್ದು, ಕಸ ಸಂಗ್ರಹಿಸುವ ಡಬ್ಬಿ ಮತ್ತಿತರ ಸಲಕರಣೆ, ಸಿಬ್ಬಂದಿ ಸುರಕ್ಷೆ, ವಾಹನ ಸ್ವಚ್ಚತೆ ಎಲ್ಲಾ ಗ್ರಾಮ ಪಂಚಾಯತ್ ನ 15ನೇ ಹಣಕಾಸು ಯೋಜನೆಯಲ್ಲಿ ಸುಮಾರು 1.5 ಲಕ್ಷ ವೆಚ್ಚ ಮಾಡುತ್ತಿದೆ ಎಂದು ಪಿಡಿಓ ಕುಮಾರ್ ಹೇಳಿದರು.
ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಗ್ರಾಮ ಪಂಚಾಯತ್ ಗಳು ಪೇಟೆ ಪ್ರದೇಶದ ತಳುಕಿರುವ ಹಳ್ಳಿಗಳು, ನಿತ್ಯ ಸಂಚರಿಸುವ ವಾಹನಗಳಲಿ ಪ್ರಯಾಣ ಮಾಡುವವರು ಎಲ್ಲೆಂದರಲ್ಲಿ ಚೆಲ್ಲುವ ಕಸ, ಪ್ಲಾಸ್ಟಿಕ್. ಕುರಿ ಕೋಳಿ ಮೀನು ತ್ಯಾಜ್ಯ, ಹೋಟೆಲ್ ಅಂಗಡಿಗಳ ತ್ಯಾಜ್ಯ, ಸತ್ತ ನಾಯಿ, ಬೆಕ್ಕು ಮತ್ತು ದನ ಎಮ್ಮೆ ವಿಲೇವಾರಿ ಇಂತಹ ಊರುಗಳಲ್ಲಿ ಈಗ ದೊಡ್ಡ ಸಮಸ್ಯೆ ಆಗಿದೆ.
ಇಂತಹ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯದ ಸಹಕಾರದಿಂದ ಸ್ಥಳಿಯ ಗ್ರಾಮ ಪಂಚಾಯತ್ ಗಳು ಕಸ ವಿಲೇವಾರಿಗೆ ಮುಂದಾಗುತ್ತಿರುವುದು ಅಭಿನಂದನೀಯ ಕೆಲಸವಾಗಿದೆ. ಪ್ರಾರಂಭದಲ್ಲಿ ಗ್ರಾಮ ಪಂಚಾಯತ್ ಗೆ ಅನೇಕ ಸವಾಲುಗಳು ಎದುರಾಗಲಿದೆ, ಟ್ರಯಲ್ & ಎರರ್ ಎಲ್ಲಾ ಪರಿಶೀಲಿಸಿ ಇದನ್ನು ಯಶಸ್ವಿಗೊಳಿಸಲು ಅಧ್ಯಕ್ಷರು, ಸದಸ್ಯರು ಮತ್ತು ಸಿಬ್ಬಂದಿ ವರ್ಗಕ್ಕೆ ಗ್ರಾಮಸ್ಥರು ಹೆಚ್ಚಿನ ಸಹಕಾರ ನೀಡಬೇಕು.
ನೂತನ ಕಸ ವಿಲೇವಾರಿ ಕಾರ್ಯ ಯಶಸ್ವಿ ಆಗಿ ಮುಂದುವರೆಯಲಿ ಎಂದು ಶುಭ ಹಾರೈಸಿದೆ
Comments
Post a Comment