ನನ್ನ 29 ಸಣ್ಣ ಕಥಾ ಸಂಕಲನ ಅಚ್ಚಿನ ಪೂರ್ವದಲ್ಲಿ ಓದಿದ ಮೂರನೆ ಓದುಗ ರಾಜ್ಯದ ಹಿರಿಯ ರಾಜಕೀಯ ವರದಿಗಾರ, ವಿಶ್ಲೇಷಕ ಆರ್.ಟಿ. ವಿಠಲ ಮೂರ್ತಿ ಬರೆದ ಅಭಿಪ್ರಾಯಗಳು
ನನ್ನ 29 ಸಣ್ಣ ಕಥೆಗಳು ಮುದ್ರಣ ಪೂರ್ವ ಓದಿದದವರು ಮೊದಲನೆಯದ್ದಾಗಿ ಪತ್ರಕರ್ತ ಶೃಂಗೇಶ್ ರು , ಎರಡನೆಯವರು ಖ್ಯಾತ ಲೇಖಕರು ಅಂಕಣಕಾರರಾದ #ಅರವಿಂದ_ಚೊಕ್ಕಾಡಿ,ಅವರು ಬರೆದದ್ದು ಈ ಹಿಂದೆ ಪೋಸ್ಟ್ ಮಾಡಿದ್ದೆ.
ನಿನ್ನೆ ಹಿರಿಯ ಪತ್ರಕರ್ತರಾದ #ಆರ್_ಟಿ_ವಿಠಲಮೂರ್ತಿ ಈ ಕಥಾ ಸಂಕಲನ ಅಚ್ಚಿನ ಪೂರ್ವದಲ್ಲಿ ಓದಿ ಅಭಿಪ್ರಾಯ ಬರೆದಿದ್ದಾರೆ ಅದನ್ನು ನಿಮಗಾಗಿ ಪೋಸ್ಟ್ ಮಾಡಿದ್ದೇನೆ. ಸಾಗರ ತಾಲ್ಲೂಕಿನವರು ಹಾಲಿ ವಿಧಾನ ಸೌಧದಿಂದ ರಾಜಕೀಯ ವರದಿ ವಿಶ್ಲೇಷಣೆ ಮಾಡುವವರಲ್ಲಿ ಇವರೇ ಹಿರಿಯರೆಂದು ಮೊನ್ನೆ #ವಿಷ್ವೇಶ್ವರ_ಭಟ್ಟರು ಅವರ ಕ್ಲಬ್ ಹೌಸ್ ನಲ್ಲಿ ಘೋಷಿಸಿದ್ದಾರೆ, ಸತತ 35 ವರ್ಷದಿಂದ ರಾಜಕೀಯ ವರದಿಗಾರರು ವಿಠಲಮೂರ್ತಿ ಅನ್ನುವುದು ನಮ್ಮ ತಾಲ್ಲೂಕಿಗೆ ಮತ್ತು ಜಿಲ್ಲೆಗೆ ಹೆಮ್ಮೆ.
#ನನ್ನ_ಓದಿಗೆ_ದಕ್ಕಿದ್ದು..
#ಇದು_ಕಥಾನಾಯಕನ_ಕತೆ!
ಇಲ್ಲಿನ ಎಲ್ಲ ಕತೆಗಳ ಒಳ ಹೊಕ್ಕರೆ,ಅವುಗಳ ಮೈ ತಡವುತ್ತಿದ್ದರೆ,ಅವುಗಳ ಎದೆಬಡಿತವನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ.
ಹೀಗಾಗಿಯೇ ಇದು ಕಥಾನಾಯಕನ ಕತೆ.ಇತ್ತೀಚಿನ ದಿನಗಳಲ್ಲಿ ತಮ್ಮ ಬರಹಗಳ ಮೂಲಕ ನಾಡಿನ ಗಮನ ಸೆಳೆಯುತ್ತಿರುವ ಅರುಣ್ ಪ್ರಸಾದ್ ಅವರ ಈ ಕಥಾಸಂಕಲನ ನನ್ನನ್ನು ಬಿಟ್ಟು ಬಿಡದಂತೆ ಕಾಡಿದ್ದು ಅದರಲ್ಲಿನ ಜೀವನ ಪ್ರೀತಿಗಾಗಿ.
ಇಲ್ಲಿರುವ ಕತೆಗಳಲ್ಲಿ ಸಾಮಾನ್ಯ ಜನರೇ ನಾಯಕರು.ಅವರ ಪ್ರೀತಿ,ಮೋಸ,ವಂಚನೆ,ತಂಟೆ,ತಕರಾರು,ಅಮಾಯಕತೆಯ ರೂಪಗಳನ್ನು ಅರುಣ್ ಪ್ರಸಾದ್ ಎಷ್ಟು ಆಪ್ತವಾಗಿ ಹೇಳುತ್ತಾರೆಂದರೆ,ಆ ಕತೆಗಳಲ್ಲಿ ನಾವೂ ಒಂದು ಪಾತ್ರವಾಗಿ ಬೆರೆತು ಹೋಗಿ ಹೋಗಿ ಬಿಡುತ್ತೇವೆ.
ಚುನಾವಣೆ ಮತ್ತು ರಮ್ಜಾದಳ ಟಿವಿ ಕತೆಯಲ್ಲಿ ಗಂಡನಿಲ್ಲದ ಹೆಣ್ಣಿನ ಬದುಕು ಎಷ್ಟು ಕಷ್ಟಕರ ಎಂದು ಹೇಳುತ್ತಲೇ ವಿಧವೆ ರಮ್ಜಾದಳ ಖಾಸಗಿ ಬದುಕಿನ ಕತೆ ಪಡೆಯುವ ತಿರುವುಗಳು ನಿಬ್ಬೆರಗು ಮೂಡಿಸುತ್ತವೆ.
ರಮ್ಜಾದ್ ಮತ್ತು ಡ್ರೈವರ್ ನಡುವಿನ ಖಾಸಗಿ ಘಟನೆಯೊಂದು ಆಚಾರಿಯ ಬಾಯಲ್ಲಿ ಡಬಲ್ ಮೀನಿಂಗ್ ಪದಗಳಾಗಿ ಹೊರಹೊಮ್ಮುವುದು,ಕೆರಳಿದ ರಮ್ಜಾದ್ ಅತನಿಗೆ ಬಾರಿಸುವುದು ಊರ ಮಧ್ಯೆ ಏನೇನೋ ರೂಪ ಪಡೆದು ಕಾಂಗ್ರೆಸ್-ಬಿಜೆಪಿಯ ಮಧ್ಯೆ ನಡೆದ ಗಲಾಟೆ ಎಂಬಂತೆ ಬಣ್ಣನೆಯಾಗುತ್ತಾ,ಊರ ಜನರ ಬಾಯಿಗೆ ತಾಂಬೂಲವಾಗುತ್ತದೆ.
ಆ ಊರಲ್ಲೊಂದು ಶಾಂತಿ ಸಭೆ ಕತೆಯಲ್ಲಿ ಬಲಿಷ್ಟರು ಸೇರಿ ಬಹುಸಂಖ್ಯಾತ ಬಡವರನ್ನು ಹೇಗೆ ಶೋಷಿಸುತ್ತಾರೆ ಎಂಬುದಕ್ಕೆ ಭಾಷಾ ಘಟನೆ ಉದಾಹರಣೆಯಾಗುತ್ತದೆ.
ಹೊಳೆ ಆಚೆಗಿನವರ ಜಾತ್ರಾ ಪ್ರಸಂಗ ಕತೆಯಲ್ಲಿ, ಬದುಕಬೇಕಾದ ಬಡವರು ನಾಲ್ಕು ದಿನದ ಮೋಜಿಗಾಗಿ ಇರುವುದನ್ನು ಮಾರಿಕೊಳ್ಳುವ ಘಟನೆ ಹೃದಯ ತಲ್ಲಣಗೊಳ್ಳುವಂತೆ ಮಾಡುತ್ತದೆ.
ಆಹಾ ಅವನಂತಹ ಯುವಕ ಕತೆಯ ನಾಯಕ ಬಹುತೇಕ ಎಲ್ಲ ಊರುಗಳಲ್ಲಿ ಕಾಣಲು ಸಿಗುತ್ತಾನೆ.ಆತನಿಗೆ ತಕ್ಷಣದ ಹಿರಿಮೆ ಬೇಕು.ಅದಕ್ಕಾಗಿ ಆತ ಹಾಕುವ ಸೋಗು ಹೊಸಬರನ್ನು ಪಿಗ್ಗಿ ಬೀಳಿಸುವುದೂ ಹೌದು.ಆದರೆ ಕಾಲ ಕ್ರಮೇಣ ಈ ಆದರ್ಶದ ಮುಖವಾಡ ಕಳಚಿ ಎದುರಿಗಿದ್ದವರಿಗೆ ಭ್ರಮನಿರಸನ ಉಂಟು ಮಾಡುವುದೂ ಹೌದು.
ಸಿಗಂದೂರು ಶ್ರೀ ದೇವಿ ಕತೆ ಎಷ್ಟು ಢಾಳಾಗಿ ಹೃದಯಕ್ಕೆ ರಾಚುತ್ತದೆ ಎಂದರೆ ಜನರ ಭಕ್ತಿಯನ್ನು ಭಯವಾಗಿ ಪರಿವರ್ತಿಸಿ ಲಾಭ ಪಡೆಯುವವರು ಯಾರು?ಅಂತ ಹೇಳಿಬಿಡುತ್ತದೆ.
ವಾಸ್ತವವಾಗಿ ಇದು ಭಕ್ತಿಯ ಲೋಲಕಕ್ಕೆ ಅಂಟಿಕೊಂಡವರ ಬಿಡುಗಡೆಗೆ ದಾರಿ ತೋರುವ ಕತೆ ಎಂಬುದು ನಿಸ್ಸಂಶಯ.
ಆಳವಾಗಿ ನೋಡಿದರೆ ಅರುಣ್ ಪ್ರಸಾದ್ ಅವರು ಕನ್ನಡದ ಕಥನ ಪರಂಪರೆಯ ಸಾಲಿನಲ್ಲಿ ಮೈಲುಗಲ್ಲುಗಳಾಗಿ ಉಳಿದ ಪಿ.ಲಂಕೇಶ್ ಹಾಗೂ ಪೂರ್ಣಚಂದ್ರ ತೇಜಸ್ವಿ ಅವರ ಕಸಿಗೊಂಡ ರೂಪ ಅನ್ನಿಸುತ್ತಾರೆ.
ಅವರ ಕತೆಯ ಪಾತ್ರಗಳನ್ನೇ ನೋಡಿ.ಬಡ್ಡಿ ದುಡ್ಡಿಗಾಗಿ ಹಪಹಪಿಸುವ ಶೀನಿ,ರಾಮಿಯಿಂದ ಹಿಡಿದು ಎಲ್ಲರೂ ಸರಳ,ಸಾಮಾನ್ಯರು.
ತೇಜಸ್ವಿ ಹಾಗೂ ಲಂಕೇಶರ ಕಥೆಗಳಲ್ಲೂ ಇಂತವರೇ ನಾಯಕರು.ಹೀಗಾಗಿ ಇಲ್ಲಿನ ಕಥನಗಳು ಓದುಗನನ್ನು ತನ್ನ ವ್ಯಾಪ್ತಿಗೆ ಎಳೆದುಕೊಂಡು ಹೃದಯಕ್ಕೆ ಹತ್ತಿರವಾಗಿ ಬಿಡುತ್ತವೆ.
ಅಂದ ಹಾಗೆ ನನಗನ್ನಿಸುವ ಪ್ರಕಾರ ಇಂತಹ ಸಶಕ್ತ ಪಾತ್ರಗಳನ್ನು ಸೃಷ್ಟಿಸಲು ಅರುಣ್ ಪ್ರಸಾದ್ ಯಾರ ಮೊರೆ ಹೋಗುವ ಅಗತ್ಯವೇ ಇಲ್ಲ.ಯಾಕೆಂದರೆ ಅವರ ಹೋರಾಟದ ಬದುಕೇ ಇಂತಹ ಪಾತ್ರಗಳನ್ನು ಅವರ ಮನೋಭೂಮಿಕೆಯ ಮೇಲೆ ತಂದು ನಿಲ್ಲಿಸಿದೆ.
ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ನನ್ನ ಸ್ನೇಹಿತರಾಗಿರುವ ಅರುಣ್ ಪ್ರಸಾದ್ ಅವರದು ಹೋರಾಟದ ಬದುಕು.
ನಾನು ಬೆಂಗಳೂರಿಗೆ ಬಂದು ಪತ್ರಿಕೋದ್ಯಮದ ತಿರುಗಣಿಯಲ್ಲಿ ರಣರಣ ಅಂತ ಸುತ್ತುತ್ತಿದ್ದ ಕಾಲದಲ್ಲಿ ಅರುಣ್ ಪ್ರಸಾದ್ ತಮ್ಮೂರು ಆನಂದಪುರವನ್ನೇ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡು ಜನರ ನಡುವೆ ಬಡಿದಾಡುತ್ತಿದ್ದರು.ಅಗವರು ಜಿಲ್ಲಾಪಂಚಾಯ್ತಿ ಸದಸ್ಯರಾಗಿ ಹೋರಾಡಿದ್ದನ್ನು ಬರೆದರೆ ಅದೇ ಒಂದು ಸಾಹಸ ಗಾಥೆ.
ಒಂದು ಸಲ ಕೃಷಿ ಹೊಂಡ, ನೀರಾವರಿ ಪಿಕ್ ಅಪ್ ನಿರ್ಮಾಣದ ಹೆಸರಿನಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳು ಕೋಟ್ಯಾಂತರ ರೂಪಾಯಿಗಳನ್ನು ಲೂಟಿ ಮಾಡಿದ್ದರು.
ಪುಸ್ತಕದಲ್ಲೇನೋ ಕೃಷಿಹೊಂಡಗಳನ್ನು ತೆರೆದ, ಪಿಕ್ ಅಪ್ ನಿರ್ಮಿಸಿದ ಲೆಕ್ಕವಿತ್ತು ಆದರೆ ವಾಸ್ತವದಲ್ಲಿ ಕಾಮಗಾರಿ ಮಾಡಿರಲೇ ಇಲ್ಲ.
ಕೃಷಿ ಅಧಿಕಾರಿಗಳ ಈ ವಂಚನೆಯ ವಿರುದ್ಧ ಹೋರಾಟ ಆರಂಭಿಸಿದ ಅರುಣ್ ಪ್ರಸಾದ್ ನನ್ನನ್ನು ಸ್ಥಳಕ್ಕೆ ಕರೆದುಕೊಂಡು ಹೋಗಿ ಸತ್ಯ ದರ್ಶನ ಮಾಡಿಸಿದರು.ನಾನೂ ಹೋಗಿ ಬಂದು ವೈಕುಂಠ ರಾಜು ರವರ ವಾರಪತ್ರಿಕೆಯಲ್ಲಿ ಅದನ್ನು ವರದಿ ಮಾಡಿದೆ.
ಅಷ್ಟೇ ಅಲ್ಲ,ಆಗ ಕೃಷಿ ಸಚಿವರಾಗಿದ್ದ ಸಿ.ಭೈರೇಗೌಡರ ಗಮನಕ್ಕೂ ತಂದೆ.ಅವರು ತಡ ಮಾಡದೆ ಸ್ಥಳಕ್ಕೆ ಭೇಟಿ ನೀಡಿದರು.ಎಲ್ಲಿದೆ ಕೃಷಿ ಇಲಾಖೆ ಮಾಡಿದ ಕಾಮಗಾರಿ ಅಂತ ಅವರು ಗುಡುಗಿದಾಗ ಅಧಿಕಾರಿಗಳು ಸುಸ್ತು.
ಅವತ್ತು ಭೈರೇಗೌಡರು ಸುಮಾರು ಒಂದು ಡಜನ್ ಅಧಿಕಾರಿಗಳನ್ನು ಸಾಗರದ ಜೈಲಿಗೆ ಕಳಿಸಿ ಅಮಾನತು ಮಾಡಿ, ಭೂಸಾರ ಸಂರಕ್ಷಣ ಇಲಾಖೆಯನ್ನೇ ಕೃಷಿ ಇಲಾಖೆಯಲ್ಲಿ ವಿಲೀನ ಮಾಡಿ ತನಿಖೆಗೆ ಆದೇಶಿಸಿದಾಗ ಇಡೀ ರಾಜ್ಯ ಅದನ್ನು ಬೆರಗುಗಣ್ಣಿನಿಂದ ನೋಡಿತು.ಆ ಮೂಲಕ ಭ್ರಷ್ಟಾಚಾರದ ವಿರುದ್ಧದ ಅರುಣ್ ಪ್ರಸಾದ್ ಹೋರಾಟ ಯಶಸ್ವಿಯಾಗಿತ್ತು.
ಈ ಹೋರಾಟದ ಬದುಕೇನಿದೆ?ಇದೇ ಕತೆಗಾರ ಅರುಣ್ ಪ್ರಸಾದ್ ಅವರಿಗೆ ನಿಕ್ಷೇಪವಾಗಿ ದಕ್ಕಿದೆ.
ಹೀಗಾಗಿಯೇ ಒಂದು ಕತೆ ಹೇಳಲು ಹೊರಟಾಗ ಮನಸ್ಸಿನಲ್ಲುಳಿಯುವ ಪಾತ್ರಗಳನ್ನು ಸೃಷ್ಟಿಸಲು ಅವರಿಗೆ ಸಾಧ್ಯವಾಗಿದೆ.
ಹೋರಾಟಗಾರ-ಕತೆಗಾರ ಬೇರೆ-ಬೇರೆಯಲ್ಲದ ಕಾರಣಕ್ಕಾಗಿ ಇಲ್ಲಿರುವ ಎಲ್ಲ ಕತೆಗಳು ನಮ್ಮನಡುವೆಯೇ ನಡೆದಂತೆ ಭಾಸವಾಗುತ್ತಾ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದುಬಿಡುತ್ತವೆ,ಬಹುಕಾಲ ಕಾಡುತ್ತವೆ.
ಕತೆಗಾರರಾಗಿ ಹೋರಾಟಗಾರ ಅರುಣ್ ಪ್ರಸಾದ್ ಗೆದ್ದಿರುವುದು ಈ ಕಾರಣಕ್ಕಾಗಿ.ಇದಕ್ಕಾಗಿ ನಾನು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ.
ಆರ್.ಟಿ.ವಿಠ್ಠಲಮೂರ್ತಿ
ಪತ್ರಕರ್ತರು
Comments
Post a Comment