ಸದ್ಯದಲ್ಲೇ ಬಿಡುಗಡೆ ಆಗಲಿರುವ ನನ್ನ 29 ಸಣ್ಣ ಕಥಾ ಸಂಕಲನದಲ್ಲಿ ಶೃಂಗೇಶರ ಶುಭ ನುಡಿಗಳು ಮುದ್ರಣ ಆಗಿದೆ, ನನ್ನ ಅವರ ಗೆಳೆತನಕ್ಕೆ ಬೆಳ್ಳಿಹಬ್ಬವೂ ಹೌದು
#ಮೊದಲ_ಕಾದಂಬರಿಯಂತೆ_ಮೊದಲ_ಕಥಾ_ಸಂಕಲನಕ್ಕೂ_ಅವರ_ಸಹಕಾರವಿದೆ.
#ಗೆಳೆತನಕ್ಕೆ_ಬೆಳ್ಳಿ_ಹಬ್ಬ.
ಗೆಳೆತನ ಪರಿಚಯ ಪ್ರಾರಂಭ ಆಗಿದ್ದು ನನ್ನ ರಾಜಕೀಯ ಮತ್ತು ಅವರ ಪತ್ರಕರ್ತ ಜೀವನದಿಂದ,ಈಗ ರಾಜಕೀಯದಿಂದ ನಾನು ದೂರ ಆದಂತೆ ಶೃಂಗೇಶರು ಪತ್ರಿಕೋದ್ಯಮದಿಂದ ಒಂದು ಕಾಲು ತೆಗೆದಾಗಿದೆ.
ಜಿಲ್ಲಾ ಪಂಚಾಯತ್ ನಲ್ಲಿ ಸದಸ್ಯನಾಗಿ ಭ್ರಷ್ಟಾಚಾರ ವಿರೋದದ ನನ್ನ ಹೋರಾಟದ ದಿನಗಳವು..... ಜೆ.ಹೆಚ್.ಪಟೇಲರು ಮುಖ್ಯಮಂತ್ರಿ, ಯಡೂರಪ್ಪ ವಿರೋದ ಪಕ್ಷದ ನಾಯಕರು, ಈಶ್ವರಪ್ಪ, ಕಾಗೋಡು, ಆರಗ ಜ್ಞಾನೇಂದ್ರ, ಮಂತ್ರಿ ಬಸವಣ್ಯಪ್ಪ, ಸಂಸದ ಡಿ.ಬಿ.ಚಂದ್ರೇಗೌಡರೆಲ್ಲ ಜಿಲ್ಲಾ ಪಂಚಾಯತ್ ಸಭೆಯಲ್ಲಿ ಭಾಗವಹಿಸುತ್ತಿದ್ದ ಕಾಲ ಅದು.
ಬಡವರಿಗೆ ಖರೀದಿಸಿದ ಕೋಟ್ಯಾಂತರ ರೂಪಾಯಿ ಔಷದಿ ಕಳಪೆ ಅಂತ ಜಿಲ್ಲಾ ಸರ್ಜನರು ನೀಡಿದ ಗುಪ್ತ ಮಾಹಿತಿ ಹಿಡಿದು ಸಭೆಯಲ್ಲಿ ತನಿಖೆಗೆ ಒತ್ತಾಯಿಸಿದ ಮರುದಿನ ಬಡವರ ಔಷದಿ ವಿದ್ಯುತ್ ಶಾರ್ಟ್ ಸರ್ಕೂಟ್ ನಿಂದ ಭಸ್ಮ ಅಯಿತೆಂಬ ಅಧಿಕಾರಿಗಳ ಪತ್ರಿಕಾ ಹೇಳಿಕೆ ನೋಡಿ ಗೊತ್ತಾಯಿತು ಉದ್ದೇಶ ಪೂರ್ವಕವಾಗಿ ಕಳಪೆ ಔಷದಿ ಸುಟ್ಟಿದ್ದಾರಂತ.
ಈ ಬಗ್ಗೆ ಸಿಓಡಿ ತನಿಖೆಗಾಗಿ ಹಠ ಹಿಡಿದಾಗ ಮುಖ್ಯ ಕಾರ್ಯ ನಿರ್ವಾಹಕರಾಗಿದ್ದ ಉಮಾಶಂಕರ್ (ಈಗ ಸರ್ಕಾರದಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ) ನೀಡಿದ ಸುಳ್ಳು ದೂರಿನಲ್ಲಿ ನನ್ನ ಜೈಲಿಗೆ ಹಾಕಿದ್ದರು (ಅವತ್ತಿನ ಸಭೆಯಲ್ಲಿ ಹಾಲಿ ಜಿಲ್ಲಾ ಮಂತ್ರಿ ಈಶ್ವರಪ್ಪ, ಹಾಲಿ ಗೃಹ ಸಚಿವರಾದ ಆರಗ ಜ್ಞಾನೇಂದ್ರ ಕೂಡ ಇದ್ದರು) ಒಂದು ಕೇಸಿನಲ್ಲಿ ಜಾಮೀನಾದರೂ ಇನ್ನೊಂದು ಕೇಸು ಸೃಷ್ಟಿಸಿ ಮತ್ತೆ ಜೈಲು.
ಈ ಸಂದರ್ಭದಲ್ಲಿ ಆ ಕಾಲದ ಪ್ರಭಲ ಪತ್ರಿಕೆ ಆಗಿದ್ದ ಹಾಯ್ ಬೆಂಗಳೂರಲ್ಲಿ ಶೃಂಗೇಶರು ವೈಯಕ್ತಿಕ ಪರಿಚಯ ಇಲ್ಲದಿದ್ದರೂ ನನ್ನ ಹೋರಾಟ ಬೆಂಬಲಿಸಿ ಬರೆದ ಲೇಖನ ನನಗೆ ಆತ್ಮವಿಶ್ವಾಸ ಉಂಟು ಮಾಡಿತ್ತು ಹೀಗೆ ಶೃಂಗೇಶರ ಗೆಳೆತನ ಬೆಳ್ಳಿಹಬ್ಬ ದಾಟಿ ಮುಂದುವರಿಯುತ್ತಿರುವುದು ನನಗೂ ಸೋಜಿಗವೇ.
ಕಳೆದ ವರ್ಷ ಇವರ ಮುದ್ರಣ ಸಂಸ್ಥೆಯಿಂದ ನನ್ನ ಮೊದಲ ಕಾದಂಬರಿ "ಬೆಸ್ತರ ರಾಣಿ ಚಂಪಕಾ" ಮುದ್ರಣ ಆಗಿ ಶೃಂಗೇಶ್ ರಿಂದ ಬಿಡುಗಡೆ ಆಗಿ ಅನೇಕ ದಾಖಲೆಗೆ ಕಾರಣ ಆಯಿತು, ಈಗ 29 ಕಥೆಗಳ ಕಥಾ ಸಂಕಲನ ಕೂಡ ಇವರ ಸಂಸ್ಥೆಯಿಂದಲೇ ಮುದ್ರಣ ಆಗುತ್ತಿದೆ ಈ ಪುಸ್ತಕಕ್ಕೆ ನಮ್ಮಿಬ್ಬರ ಗೆಳೆತನ ಮತ್ತು ಮುದ್ರಣ ಶ್ರಮಕ್ಕಾಗಿ ತಾವು ಶುಭ ಹಾರೈಕೆಯನ್ನು ಬರೆಯಲೇ ಬೇಕೆಂದು ಒತ್ತಾಯಿಸಿದ್ದಕ್ಕೆ ಶುಭ ಹಾರೈಕೆ ಬರೆದಿದ್ದಾರೆ.
#ಶೃಂಗೇಶ್_ಬರೆದಿದ್ದು_ಕಥಾ_ಸಂಕಲದಲ್ಲಿ
ಇವು ಕಥಾಪಾತ್ರಗಳಷ್ಟೇ ಅಲ್ಲ...
ಆತ್ಮೀಯರಾದ ಅರುಣ್ ಪ್ರಸಾದ್ ರವರ ಮತ್ತೊಂದು ಪುಸ್ತಕ ಮುದ್ರಣಗೊಂಡು ಓದುಗರ ಕೈಸೇರುತ್ತಿದೆ. ನನ್ನ ನೂರೆಂಟು ಉಪದ್ವ್ಯಾಪಗಳ ನಡುವೆ ವಹಿಸಬೇಕಾದಷ್ಟು ಆಸಕ್ತಿ ವಹಿಸಲಾರದ್ದಕ್ಕೆ ಪುಸ್ತಕದ ಮುದ್ರಣ ತಡವಾಯಿತಾದರು ಒಂದು ಉತ್ತಮ ಕಥಾಸಂಕಲನ ಓದುಗಾಸಕ್ತರ ಕೈಸೇರುತ್ತಿರುವುದರ ಖುಷಿ ಇದೆ.
ಸಿದ್ಧಮಾದರಿಯ ಅನುಭವಲೋಕವನ್ನು ಮೀರಿ ಓದುಗರನ್ನು ಲವಲವಿಕೆಯ ವಿಸ್ತಾರ ಜಗತ್ತಿಗೆ ಕರೆದೊಯ್ಯುವ ಕತೆಗಳು ಇಲ್ಲಿವೆ.ಓದುತ್ತ ಹೋದರೆ ಇವು ಕತೆಯೋ, ಪ್ರಬಂಧಗಳೊ,ಅನುಭವ ಕಥನವೋ ಗೊತ್ತಾಗದಂತೆ ಒಂದಕ್ಕೊಂದು ಬೆಸೆದುಕೊಂಡ ಜನಜೀವನವನ್ನು ಅನಾವರಣಗೊಳಿಸುವ ಇಲ್ಲಿನ ಬರವಣಿಗೆ ಆಪ್ತ ಭಾವ ಮೂಡಿಸುತ್ತದೆ.
ಅರುಣ್ ಪ್ರಸಾದ್ ಜೊತೆ ಗಂಟೆಗಟ್ಟಲೆ ಹರಟೆ ಹೊಡೆಯುವಾಗ ಇಲ್ಲಿನ ಪಾತ್ರಗಳು ಪ್ರತ್ಯಕ್ಷವಾದದ್ದು ಇದೆ.ಸ್ವಾರಸ್ಯಕರವಾಗಿ ಅವರ ಬಾಯಲ್ಲಿ ಕೇಳಿದ ಘಟನಾವಳಿಗಳು ಇಲ್ಲಿ ಕಥೆಯ ಸ್ವರೂಪ ಪಡೆದುಕೊಂಡಿವೆ.ಅಂದರೆ ಅರುಣ್ ಪ್ರಸಾದ್ ತಮ್ಮದೇ ಅನುಭವಗಳನ್ನು,ತಾವು ಕೇಳಿದ ಕತೆಗಳನ್ನು ಇಲ್ಲಿ ಚಂದವಾಗಿ ಕಟ್ಟಿಕೊಟ್ಟಿದ್ದಾರೆ.ಅವು ಯಾವುವೂ ಹೋರಾಗಿನದಲ್ಲ.
ಇವತ್ತು ಸಾಮಾಜಿಕ ಜಾಲತಾಣಗಳಲ್ಲಿ ಅವರ ಬರವಣಿಗೆ ತುಂಬಾ ಜನರನ್ನು ತಲುಪುತ್ತಿವೆ.ಆದರೆ ಅವರ ಪ್ರಕಟಿತ ಕಾದಂಬರಿ ಮತ್ತು ಇಲ್ಲಿನ ಕತೆಗಳೆಲ್ಲವು ಅವರು ಈ ಮೊದಲೇ ಬರೆದಂತಹವುಗಳೇ ಆಗಿವೆ ಎಂಬುದನ್ನು ಮನದಲ್ಲಿ ಇಟ್ಟುಕೊಂಡು ಓದಿದರೆ ಇಲ್ಲಿನ ಕತೆಗಳನ್ನು ಗ್ರಹಿಸಲು ಅನುಕೂಲವಾಗಲಿದೆ.
ಅರುಣ್ ಪ್ರಸಾದ್ ರ ಜೀವನಾನುಭವವು ತುಂಬಾ ವೈವಿಧ್ಯ ಮಯವಾದುದು.ಜನಪರ ಹೋರಾಟ,ರಾಜಕೀಯ ಚಟುವಟಿಕೆಗಳಲ್ಲಿ ಅವರು ತೊಡಗಿಸಿಕೊಂಡಾಗಿನ ಅನುಭವಗಳು ಮಲೆನಾಡಿನ ರಾಜಕೀಯ,ಸಾಮಾಜಿಕ ದಾಖಲೆಯಾಗಿಯೂ ಮಹತ್ವದವು ಎಂಬುದನ್ನು ಗ್ರಹಿಸಿ ಹೇಳುವುದಾದರೆ ಅವರಿಂದ ಒಂದು ಅನುಭವ ಕಥನ ಅಥವಾ ಆತ್ಮ ಚರಿತ್ರೆ ಪುಸ್ತಕ ಬರಲಿ ಎಂಬುದು ನನ್ನಂತಹ ಗೆಳೆಯರ ಅಪೇಕ್ಷೆ.
ಅರುಣ್ ಪ್ರಸಾದ್ ತಮ್ಮ ಬರವಣಿಗೆಯನ್ನು ಹೀಗೆಯೇ ಮುಂದುವರಿಸಲಿ....
ಶೃಂಗೇಶ್
ಪತ್ರಕರ್ತ
Comments
Post a Comment