ಭಾಗ-59, ಆನಂದಪುರಂ ಇತಿಹಾಸ, ರಾಯರ ಪ್ರತಿನಿದಿ ಆಗಿ ಅವರ ವಾಕಿಂಗ್ ಸ್ಟಿಕ್ ಜೊತೆ ಎತ್ತಿನಗಾಡಿಯಲ್ಲಿ ಕೊಳಗ ಮತ್ತು ಗೋಣಿ ಚೀಲದ ಜೊತೆ ಗೇಣಿ ಬತ್ತದ ವಸೂಲಿಗೆ ಹೋಗುತ್ತಿದ್ದ ಆನಂದಪುರಂನ ಪೈಲ್ವಾನರ ಪಡೆ
#ಆನಂದಪುರಂ_ಇತಿಹಾಸ.
#ರಾಮಕೃಷ್ಣಯ್ಯ0ಗಾರರ_ಕಟ್ಟಾಳುಗಳು.
#ಗೇಣಿ_ಬತ್ತ_ವಸೂಲಿ_ಪಡೆ
#ಆ_ಕಾಲದ_ಬೌನ್ಸರ್ಗಳು.
#ರಾಮಕೃಷ್ಣಾಯ್ಯ೦ಗಾರರ_ವಾಕಿಂಗ್_ಸ್ಪಿಕ್_ಅವರ_ಪ್ರತಿನಿದಿ,
#ಕಾಗೋಡು_ಚಳವಳಿಯಲ್ಲಿ_ಸಾವ೯ಜನಿಕ_ಸಭೆಗಳಲ್ಲಿ_ಗಣಪತಿಯಪ್ಪ_ಶಾಂತವೇರಿಗೋಪಾಲಗೌಡರಿಂದ_ವಿರೋದ
ಆನಂದಪುರ0ನ ರಾಮಕೃಷ್ಣಾಯ್ಯಂಗಾರರು ಇನಾಂದಾರರು, ಜಮೀನ್ದಾರರು, ದೈವಭಕ್ತರು, ಕೊಡುಗೈ ದಾನಿಗಳು ಹೌದು ಅಷ್ಟೇ ಕುಟುಂಬದಲ್ಲಿ ಚಾಣಕ್ಷಮತಿಗಳು ಆಗಿದ್ದರು.
ಸಾವಿರಾರು ಎಕರೆ ಜಮೀನು ಪ್ರತಿ ವರ್ಷ ಗೇಣಿದಾರರಿಗೆ ನೀಡಿ ಗೇಣಿ ಬತ್ತ ವಸೂಲಿ ಮಾಡುವುದು ಆ ಕಾಲದಲ್ಲಿ ಸುಲಭದ ಕೆಲಸ ಆಗಿರಲಿಲ್ಲ, ಗೇಣಿದಾರರ ಕುಟುಂಬಗಳು ಗೇಣಿ ಜಮೀನುಗಳು ಒಂದೇ ಕಡೇ ಇರುತ್ತಿರಲಿಲ್ಲ.
ಸಂಬಾವಿತ ಗೇಣಿದಾರರು ಕಾಲ ಕಾಲಕ್ಕೆ ಸರಿಯಾಗಿ ಗೇಣಿ ಬತ್ತ ತಂದು ರಾಯರ ಅಕ್ಕಿ ಮಿಲ್ಲಿಗೆ ಜಮ ಮಾಡುತ್ತಿದ್ದರಾದರೂ ನೈಸಗಿ೯ಕ ವಿಕೋಪದಿಂದಲೋ, ಇನ್ನಾವುದೋ ಕಾರಣದಿಂದ ಗೇಣಿ ಪಾವತಿ ಮಾಡಲಾರದವರು ರಾಯರನ್ನು ಕಂಡು ವಿಶೇಷ ಅನುಮತಿ ಪಡೆಯುತ್ತಿದ್ದರು.
ಈ ರೀತಿ ಅನುಮತಿ ಪಡೆಯದ ಬಾಕಿದಾರರಿ೦ದ ಬತ್ತ ವಸೂಲಿ ಮಾಡಿಸಲು ಆ ಕಾಲದಲ್ಲಿ ಭೂ ಮಾಲಿಕರ ವಸೂಲಿ ಪಡೆ ಇರುತ್ತಿತ್ತು ಅವರ ಕೆಲಸ ಮಾಲಿಕರ ಗುಮಸ್ತರು ನೀಡುವ ಪಟ್ಟಿಯಂತೆ ಬಾಕಿದಾರನ ಮನೆಗೆ ಹೋಗಿ ಬೆದರಿಸುವ ಅಥವ ಮನೆಯಲ್ಲಿನ ದವಸ ಧಾನ್ಯ ಅಪಹರಿಸುವ ದಬ್ಬಾಳಿಕೆ ಮಾಡುವವರಾಗಿರುತ್ತಿದ್ದರು.
ಆದರೆ ಆನಂದಪುರಂನ ಭೂ ಮಾಲಿಕರು ಬಾಕಿದಾರರಿಗೆ ಬೇರೆ ರೀತಿಯಲ್ಲಿ ವಸೂಲಿ ಪಡೆ ವ್ಯವಸ್ಥೆ ಮಾಡಿದ್ದು ವಿಶೇಷ ಅದೇನೆಂದರೆ ಪ್ರತಿ ಬಾಕಿದಾರನಿಗೆ ಮೂರು ಅವಕಾಶ ನೀಡುವುದು ಅಷ್ಟರಲ್ಲಿ ಗೇಣಿ ಬಾಕಿ ನೀಡದೇ ಇದ್ದರೆ ಒಂದು ಎತ್ತಿನಗಾಡಿಯಲ್ಲಿ ರಾಯರ ವಾಕಿಂಗ್ ಸ್ಟಿಕ್, ಗೋಣಿ ಚೀಲ ಮತ್ತು ಬತ್ತ ಅಳತೆ ಮಾಡುವ ಕೊಳಗದ ಜೊತೆ ವಸೂಲಿ ತಂಡದ ಪ್ರಮುಖರಾದ ಮಂಜುನಾಥಪ್ಪ ಇವರು ಆನಂದಪುರಂನ ಗಿಡ್ದ ರಾಮಣ್ಣರ ತಂದೆ ಮತ್ತು ಹೋಟೆಲ್ ಕೃಷ್ಣಣ್ಣರ ದೊಡ್ಡಪ್ಪ, ಯಡೇಹಳ್ಳಿ ಅಮೀನ್ ಸಾಬ್ ಇವರು ಯಡೇಹಳ್ಳಿಯ ವಿ.ಎಸ್.ಎನ್ ಶ್ಯಾಮಿಯಾನದ ಮಾಲಿಕರಾದ ಜಪರುಲ್ಲಾ (ಮಾಪೀರ್ ) ಅಜ್ಜ, ಆನಂದಪುರಂನ ಸಾಬ್ಜಿ ಸಾಬ್ ಹಾಲಿ ಯಡೇಹಳ್ಳಿ ವಾಸಿ ವಲೀಫೀರ್ ತಂದೆ, ಮಸಾಲ್ತಿ ಮುಕುಂದಣ್ಣ ಯಡೇಹಳ್ಳಿಯ ಶ್ರೀ ವರಸಿದ್ದಿ ವಿನಾಯಕ ಸ್ವಾಮಿ ದೇವಾಲಯದಲ್ಲಿ ಪಾರಪತ್ಯೆದಾರರಾದ ಲಾರಿ ಮಾಲಿಕರಾದ ಸೋಮಶೇಖರ್ ತಂದೆ ಬಾಕಿದಾರನ ಮನೆಗೆ ಹೋಗುತ್ತಿದ್ದರು.
ರಾಯರ ವಾಕಿಂಗ್ ಸ್ಟಿಕ್ ಮನೆ ಬಾಗಿಲಿಗೆ ಬಂದಿದೆ ಅಂದರೆ ರಾಯರೇ ಬಂದಂತೆ ಹಾಗಾಗಿ ಗೇಣಿ ಬಾಕಿದಾರ ಯಾವುದೇ ಸಬೂಬು ಹೇಳದೆ ಬತ್ತ ಅಳತೆ ಮಾಡಿ ಕೊಡುತ್ತಿದ್ದರು ಅಥವ ಸಾದ್ಯವೇ ಆಗದಿದ್ದರೆ ಇದೇ ಗಾಡಿಯಲ್ಲಿ ರಾಯರ ವಾಕಿಂಗ್ ಸ್ಟಿಕ್ ಜೊತೆ ರಾಯರ ಮನೆಗೆ ಹೋಗಿ ವಿಚಾರಣೆ ಎದುರಿಸಬೇಕಿತ್ತು.
ಇದೊಂದು ರೀತಿ ವಾರೆಂಟ್ ಆಗಿತ್ತು ಆಕಾಲದ ಈ ವಸೂಲಿಗಾರರು ಕುಸ್ತಿ ಪೈಲ್ವಾನರು ಆಗಿದ್ದವರು, ಯಾವುದೇ ಭಯ ಇಲ್ಲದ ರಾಯರ ರಾಜಾಶ್ರಯ ಬೇರೆ ಇವರಿಗೆ ಇತ್ತು ಹಾಗಾಗಿ ಭೂ ಮಾಲಿಕರ ಕಾನೂನು ಮಾತ್ರ ಇವರ ಜಾರಿ ವಿಷಯ ಆಗಿರುತ್ತಿತ್ತು.
ಇದನ್ನೂ ಮೀರಿ ಭೂ ಮಾಲಕರಿಗೆ ತಿರುಮಂತ್ರ ಮಾಡುವ ಗೇಣಿದಾರನಿಗೆ ರಾಯರು ಕೋರ್ಟ್ ಕಾನೂನು ಜಾರಿ ಮಾಡಲು ಆಗಿನ ಪ್ರಖ್ಯಾತ ವಕೀಲರಾದ ಕಡಿದಾಳು ಮಂಜಪ್ಪರನ್ನು ನೇಮಿಸಿಕೊಂಡಿದ್ದರು ಮುಂದೆ ಕಡಿದಾಳು ಮಂಜಪ್ಪರು ಮಂತ್ರಿ ಮುಖ್ಯಮಂತ್ರಿ ಆದದ್ದು ಇತಿಹಾಸ.
ಇದು ದಬ್ಬಾಳಿಕೆ ಎಂಬ ವಿರೋದವೂ ಇತ್ತು, ಕಾಗೋಡು ಸತ್ಯಾಗ್ರಹದ ಸಂದರ್ಭದಲ್ಲಿ ಕಾಗೋಡು ಹೋರಾಟದ ನೇತಾರ ಗಣಪತಿಯಪ್ಪ ಮತ್ತು ಶಾಂತವೇರಿ ಗೋಪಾಲಗೌಡರು ಸಾರ್ವಜನಿಕ ಸಭೆಯಲ್ಲಿ ರಾಮಕೃಷ್ಣಾಯ್ಯಂಗಾರರ ಈ ವಸೂಲಿ ಕ್ರಮ ವಿರೋದಿಸಿ ಮಾತಾಡಿದ್ದರಂತೆ.
ಹಾಗಾಗಿ ಈ ಕುಟುಂಬದ ನಂತರದ ತಲೆಮಾರಿನ ಯಜಮಾನರಾದ ವೆಂಕಟಾಚಲಯ್ಯಂಗಾರ್ ಮತ್ತು ಬದರಿನಾರಾಯಣಾಯ್ಯಂಗಾರ್ ಕಾಲದಲ್ಲಿ ಇವರ ಪ್ರತಿನಿದಿ ಆಗಿ ವಾಕಿಂಗ್ ಸ್ಟಿಕ್ ಕಳಿಸಿ ಕೊಡುವ ದೀರ್ಘ ಕಾಲದ ಈ ಪ್ರಕ್ರಿಯೆ ನಿಲ್ಲಿಸಿದರು.
(ನಾಳೆ ಭಾಗ-60)
Comments
Post a Comment