ಮಲೆನಾಡಿನ ಅಪ್ಪೆಮಿಡಿಗೆ ಜಿಯೋಗ್ರಾಪಿಕಲ್ ಟ್ಯಾಗ್ ಸಿಕ್ಕಿ ಹತ್ತು ವರ್ಷವಾಯಿತು, ನಿನ್ನೆ ಅಂಚೆ ಇಲಾಖೆ ಅಪ್ಪೆ ಮಾವಿನ ಮಿಡಿಯ ಚಿತ್ರದ ಅಂಚೆ ಲಕೋಟೆ ಬಿಡುಗಡೆ ಮಾಡಿದೆ, ಸ್ವಾದಿಷ್ಟ ವಿಶೇಷ ಪರಿಮಳದ ಮಲೆನಾಡ ಅಪ್ಪೆಮಿಡಿಗಳ ಕಥೆ.
#ಮಲೆನಾಡಿನ_ವಿವಿಧ_ಸ್ವಾದದ_ಅಪ್ಪೆಮಿಡಿ_ಉಪ್ಪಿನಕಾಯಿ_ಸವಿದವರೇ_ಬಲ್ಲರು.
#ಹತ್ತು_ವರ್ಷದ_ಹಿಂದೆ_ಜಿಯೋಗ್ರಾಪಿಕಲ್_ಇಂಡಿಕೇಷನ್_ಟ್ಯಾಗ್_ಸಿಕ್ಕಿದೆ.
#ನಿನ್ನೆ_ಅಂಚೆ_ಇಲಾಖೆ_ಅಪ್ಪೆಮಿಡಿ_ಅಂಚೆ_ಲಕೋಟೆ_ಬಿಡುಗಡೆ_ಮಾಡಿದೆ.
#ಏನಿದು_ಜಿಐ_ಟ್ಯಾಗ್?
ಒಂದು ಪ್ರದೇಶದ ಕೃಷಿ ಉತ್ಪನ್ನ, ವಿಶೇಷ ತಿನಿಸು, ವಿಶೇಷ ಕುಸುರಿ ವಸ್ತುಗಳು ಆಯಾ ಬೌಗೋಳಿಕ ಹವಾಮಾನ, ಮಣ್ಣು ಮತ್ತು ಸ್ಥಳಿಯರ ಪಾರಂಪರಿಕ ಕಲೆಗಳಿಂದ ವಿಶೇಷ ಉತ್ಪನ್ನ ಅನ್ನಿಸುತ್ತದೆ.
ಇವುಗಳಿಗೆ ಒ0ದು ಸಿಗ್ನೇಚರ್ ಬ್ರಾಂಡ್ ನೀಡಿ ಅದಕ್ಕೆ ಗುಣಮಟ್ಟ ಮತ್ತು ರೆಪ್ಯೂಟೇಷನ್ ಮೂಲಕ ಮಾರಾಟಕ್ಕೆ ಪ್ರೋತ್ಸಾಹ ನೀಡಲು ಜಿಯೋಗ್ರಾಪಿಕಲ್ ಇಂಡಿಕೇಷನ್ ಟ್ಯಾಗ್ ನೀಡುವ ವ್ಯವಸ್ಥೆ ವಿಶ್ವದ ಮುಂದುವರಿದ ದೇಶಗಳಲ್ಲಿದೆ.
ಬಾಸುಮತಿ ಅಕ್ಕಿ ಜಿಐ ಟ್ಯಾಗ್ ಪಾಕಿಸ್ತಾನ ಪಡೆದಿದೆ ನಂತರ ಭಾರತ ಈ ಬಗ್ಗೆ ಯುರೋಪಿಯನ್ ಒಕ್ಕೂಟದ ಸಂಬಂದ ಪಟ್ಟ ಸಂಸ್ಥೆಯೊಂದಿಗೆ ನಡೆಸಿದ ಹೋರಾಟದಿಂದ 11 ಸೆಪ್ಟೆಂಬರ್ 2020 ರಲ್ಲಿ ನವೀಕೃತ ಆದೇಶದಲ್ಲಿ ಭಾಸುಮತಿ ಅಕ್ಕಿ ಎರೆಡೂ ದೇಶಕ್ಕೆ GI tag ಸಿಕ್ಕಿದೆ.
ಜರ್ಮನಿ ದೇಶ ಇಂತಹ ಅನೇಕ ಉತ್ಪನ್ನಗಳಿಗೆ ವಿಶ್ವದಲ್ಲಿ ಅತಿ ಹೆಚ್ಚು ಜಿಐ ಟ್ಯಾಗ್ (9499) ಪಡೆದಿದೆ, ನಂತರದ ಸ್ಥಾನ ಚೀನಾದ್ದು.
ನಮ್ಮ ದೇಶದಲ್ಲಿ ನಮ್ಮ ರಾಜ್ಯ ಅತಿ ಹೆಚ್ಚು ಜಿಐ ಟ್ಯಾಗ್ ಪಡೆದು (42) ಅಗ್ರ ಸ್ಥಾನದಲ್ಲಿದೆ ಇದರಲ್ಲಿ ಉಡುಪಿ ಬದನೆಕಾಯಿ ಗುಳ್ಳಾ (ಕ್ರ.ಸ. 177, ಸಂಖ್ಯೆ 199), ದಾರವಾಡ ಪೇಡಾ, ಬಾಬಾ ಬುಡನ್ ಗಿರಿ ಕಾಫಿ, ಚಿಕ್ಕಮಗಳೂರು ಕಾಫಿ, ಕೂರ್ಗ್ ಕಾಪಿ, ಉಡುಪಿ ಸೀರೆ, ಕಮಲಾಪುರದ ಕೆಂಪು ಬಾಳೆ, ಸಂಡೂರು ಲಂಬಾಣಿ ಎಂಬ್ರಾಯಿಡರಿ, ಬೆಂಗಳೂರಿನ ಗುಲಾಬಿ ಬಣ್ಣದ ನೀರುಳ್ಳಿ, ಕಿನ್ನಾಳದ ಆಟಿಕೆ, ಮೈಸೂರಿನ ಗಂಜೀಫಾ ಕಲೆ ಮತ್ತು ಮಲೆನಾಡಿನ ಪ್ರಖ್ಯಾತಿ ಹೊಂದಿರುವ ಮಾವಿನ ಮಿಡಿ ಉಪ್ಪಿನಕಾಯಿಗೆ ಸಾಂಪ್ರದಾಯಿಕ ಅಪ್ಪೆಮಿಡಿ (ಕ್ರ.ಸ.117 ಸಂಖ್ಯೆ 132 ) ಸೇರಿ 42 ಜಿಯಾಗ್ರಫಿಕಲ್ ಇಂಡಿಕೇಷನ್ ಟ್ಯಾಗ್ ಹೊಂದಿದೆ.
ಈ ವಸ್ತು ಬಳಸಿ ಉತ್ಪನ್ನ ತಯಾರಿಸಿ ಮಾರಾಟ ಮಾಡುವವರು ಇದಕ್ಕಾಗಿ 10 ವಷ೯ ಅವಧಿಗೆ ನವೀಕರಣ ಮಾಡಿಕೊಳ್ಳುವ ಅವಕಾಶದ ಲೈಸೆನ್ಸ್ ಪಡೆದು ತಮ್ಮ ಉತ್ಪನ್ನದ ಬಾಟಲ್ / ಪ್ಯಾಕ್ ಮೇಲೆ ಅಚ್ಚಿಸಬಹುದು ಇದರಿಂದ ಅವರ ಉತ್ಪನ್ನಕ್ಕೊಂದು ಗರಿ ಇದ್ದಂತೆ.
ದಾರವಾಡದ ಪೇಡಾದ ಜಿಐ ಟ್ಯಾಗ್ ಬಾಬು ಸಿಂಗ್ ಠಾಕೂರ್ ಪೇಡಾದವರು, ಉಡುಪಿ ಮಟ್ಟು ಗುಳ್ಳಾದ ಟ್ಯಾಗ್ ಉಡುಪಿ ಮಟ್ಟು ಎಂಬ ಹಳ್ಳಿಯ ಬದನೆಕಾಯಿ ಬೆಳೆಗಾರರ ಸಹಕಾರಿ ಸಂಘ ವ್ಯವಸ್ಥಿತವಾಗಿ ಬಳಸುತ್ತಿದ್ದಾರೆ.
ನಮ್ಮ ದೇಶದ ಡಾರ್ಜಲಿಂಗ್ ಚಹಾ ಮೊದಲ ಜಿಐ ಟ್ಯಾಗ್ ಪಡೆದದ್ದು, ನಮ್ಮಲ್ಲಿ ಕೇಂದ್ರ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯದ ಇಂಡಸ್ಟ್ರಿಯಲ್ ಪ್ರೋಮೋಷನ್ & ಇಂಟರ್ನಲ್ ಟ್ರೇಡ್ ಡಿಪಾರ್ಟ್ಮೆ೦ಟ್ ಇದನ್ನು ನಿವ೯ಹಿಸುತ್ತದೆ.
ದೇಶದ ಅಂಚೆ ಇಲಾಖೆ ಇಂತಹ ಜಿಐ ಟ್ಯಾಗ್ ಹೊಂದಿದ ಉತ್ಪನ್ನಗಳ ಹೆಸರಲ್ಲಿ ಅಂಚೆ ಲಕೋಟೆ ಮುದ್ರಿಸಿ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದೆ ಅದರಂತೆ ನಿನ್ನೆ ಶಿವಮೊಗ್ಗದಲ್ಲಿ ಅಪ್ಪೆಮಿಡಿ ಅಂಚೆ ಲಕೋಟೆ ಬಿಡುಗಡೆ ಮಾಡಿದೆ.
ನಮ್ಮ ಜಿಲ್ಲೆಯಲ್ಲಿ ಶಿರಾಳಕೊಪ್ಪದ ಎಂ.ಎನ್ ಪಿಕಲ್ಸ್ ನಮ್ಮ ರಾಜ್ಯ ದಾಟಿ ನೆರೆಯ ರಾಜ್ಯಗಳಲ್ಲೂ ತನ್ನ ಉಪ್ಪಿನಕಾಯಿ ಮಾರಾಟದಲ್ಲಿ ಪ್ರಸಿದ್ಧಿ ಪಡೆದಿದೆ ಅದೇ ಹಾದಿಯಲ್ಲಿ ಹೆಗ್ಗೋಡಿನ ಕಾಕಲ್ ಉಪ್ಪಿನಕಾಯಿ ನಡೆದಿದೆ, ಅನೇಕರು ಸಾಂಪ್ರದಾಯಿಕ ಉಪ್ಪಿನಕಾಯಿ ತಯಾರಿ ಮತ್ತು ಮಾರಾಟದಲ್ಲಿ ತೊಡಗಿದ್ದಾರೆ.
ಮಲೆನಾಡಿನ ಅಪ್ಪೆಮಿಡಿಗಳಲ್ಲಿ ಮೂಲ ತಳಿ ಸಂರಕ್ಷಣೆ ಮತ್ತು ಸಂವರ್ದನೆ ಕಾಯ೯ದಲ್ಲಿ ಶಿರಸಿಯ ಅರಣ್ಯ ಮಹಾವಿದ್ಯಾಲಯ ಅಮೂಲ್ಯ ಕೆಲಸ ಮಾಡುತ್ತಿದೆ, ಉತ್ತರ ಕರ್ನಾಟಕದಲ್ಲಿ 300 ಕ್ಕೂ ಹೆಚ್ಚು ವೈವಿಧ್ಯ ಮಿಡಿಗಳನ್ನು ಗುರುತಿಸಿದೆ.
ನಮ್ಮ ಸಾಗರ ತಾಲ್ಲೂಕಿನ 84 ರ ವಯೋವೃದ್ಧರಾದ ಬೇಳೂರಿನ ಸುಬ್ಬಣ್ಣ ಹೆಗ್ಗಡೆ (B.V. ಸುಬ್ಬರಾವ್) ನೂರಕ್ಕೂ ಹೆಚ್ಚಿನ ಅಪ್ಪೆಮಿಡಿ ತಳಿ ಗುರುತಿಸಿ ಸಸಿ ಮಾಡಿದ್ದಾರೆ ಅಷ್ಟೆ ಅಲ್ಲ ಈ ಎಲ್ಲಾ ಮೂಲ ತಳಿಯ ಸೊನೆ ಸಂಗ್ರಹಿಸಿದ್ದಾರೆ ಮಾಹಿತಿಯೊಂದಿಗೆ ಇದಕ್ಕಾಗಿ ಪ್ರತ್ಯೇಕ ರೆಪ್ರಿಜೇಟರ್ ಲ್ಲಿ ಕಾಪಿಟ್ಟಿದ್ದಾರೆ.
ಈ ವಿಚಾರದಲ್ಲಿ ವಿಶೇಷವಾಗಿ ಸಾಗರ ತಾಲ್ಲೂಕಿನಲ್ಲಿ ಎಲೆ ಮರೆಯ ಕಾಯಿಯಂತೆ ಮೂಲ ತಳಿ ಸಂರಕ್ಷಣೆಯಲ್ಲಿ ಅನೇಕರು ಪ್ರಚಾರ ಇಲ್ಲದೆಯೇ ಕಾಯ೯ನಿರ್ವಹಿಸಿದ್ದರಿಂದ 1) ಅನ೦ತ ಭಟ್ಟ ಅಪ್ಪೆಮಿಡಿ 2) ಮಾಳಂಜಿ ಅಪ್ಪೆ 3) ಕೆಂಗ್ಲೆ ಅಪ್ಪೆ, 4) ಬೀಮನ ಗುಂಡಿ ಅಪ್ಪೆ 5) ಅಡ್ಡೇರಿ ಜೀರಿಗೆ 6)ಚೆನ್ನಿಗನ ತೋಟ ಜೀರಿಗೆ 7) ಕೂರಂಬಳ್ಳಿ ಜೀರಿಗೆ 8) ದೊಂಬಿಸರ ಜೀರಿಗೆ 9) ಜೇನಿ ಜೀರಿಗೆ 10) ಪಡವಗೋಡು ಜೀರಿಗೆ 11) ಕಾಳಿಗುಂಡಿ ಅಪ್ಪೆ 12) ಬೀಮನ ಕೋಣೆ ಕೆಂಚಪ್ಪೆ 13) ಜಲ್ಲೆ ಅಪ್ಪೆ 14) ಸೂಡೂರು ಲಕ್ಷ್ಯ ಅಪ್ಪೆ 15) ಕರ್ಣಕುಂಡಲಿ 16) ಹಾರ್ನಳ್ಳಿ ಅಪ್ಪೆ 17) ಕೆಂಚಪ್ಪೆ 18) ಹೊಸಗದ್ದೆ ಅಪ್ಪೆ 19) ಗೆಣಸಿನ ಕುಣಿ ಜೀರಿಗೆ 20) ಅಂಡಗಿ ಅಪ್ಪೆ 21) ಕಣಗಲ ಅಪ್ಪೆ ಮುಂತಾದ ವಿನಾಶದ ಅಂಚಿನಲ್ಲಿನ ಅಪ್ಪೆಮಿಡಿಗಳು ಉಳಿಸಿ ಬಳಸಲು ಸಾಧ್ಯವಾಗಿದೆ.
ಈಗ ಸಾಗರ ತಾಲ್ಲೂಕಿನಲ್ಲೇ ( ಇರುವಕ್ಕಿ) ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ಪ್ರಾರಂಭ ಆಗಿರುವುದರಿಂದ ಮುಂದಿನ ದಿನದಲ್ಲಿ ಈ ಮೂಲ ತಳಿ ಸಂರಕ್ಷಣೆಗೆ ಹೆಚ್ಚಿನ ಸಹಕಾರವೂ ಸಿಗುವ ಆಶಾಭಾವನೆ ಇದೆ.
ಉಪ್ಪಿನ ಕಾಯಿ ಉದ್ದಿಮೆಯಲ್ಲಿ ಅನೇಕರು ಸ್ವಯ೦ ಉದ್ಯೋಗವನ್ನು ಪಡೆಯುವ ವಿಪುಲ ಅವಕಾಶಗಳಿದ್ದು ಅದನ್ನು ಸದ್ಬಳಕೆ ಮಾಡಿಕೊಂಡರೆ ಈ ಭಾಗದಲ್ಲಿ ಮೂಲ ತಳಿಯ ಅಪ್ಪೆಮಿಡಿ ಬೆಳೆಗಾರರಿಗೂ ಲಾಭದಾಯಕ ಆರ್ಥಿಕ ಆದಾಯ ಸಿಗಲಿದೆ.
ಉಪ್ಪಿನ ಕಾಯಿ ಪ್ರಿಯರಿಗೂ ಸುಲಭವಾಗಿ ಸ್ವಾದಿಷ್ಟ ಅಪ್ಪೆಮಿಡಿ ಉಪ್ಪಿನಕಾಯಿ ಸಿಗಲಿದೆ.
ಮಲೆನಾಡು ಭಾಗದಲ್ಲಿ ಮೂರು ವರ್ಷದಿಂದ ಅಪ್ಪೆ ಮಿಡಿ ಇಲ್ಲವೇ ಇಲ್ಲ, ನೆರೆ ರಾಜ್ಯದ ಮಿಡಿ ಖರೀದಿಸಿ ಉಪ್ಪಿನ ಕಾಯಿ ತಯಾರಿಸುವ ಪ್ರಮೇಯ ಈಗ ಬಂದಿದೆ.
Comments
Post a Comment