ಭಾಗ - 46, ಆನಂದಪುರಂ ಇತಿಹಾಸ, ಹುಲಿ ಮಾಂಸ ತಿಂದ, ಆನಂದಪುರಂಗೆ ಅತಿ ದೊಡ್ಡ ಕಟ್ಟಡ ಕಟ್ಟಿದ ಆ ಕಾಲದ ಆನಂದಪುರಂನ ಆಂಗ್ರಿ ಯಂಗ್ ಮ್ಯಾನ್ ನಲ್ಲಪ್ಪ.
#ಆನಂದಪುರಂ_ಇತಿಹಾಸ
#ನಲ್ಲಪ್ಪ_ಒಂದು_ಕಾಲದ_ಆನಂದಪುರಂ_ಆಂಗ್ರಿ_ಯಂಗ್_ಮ್ಯಾನ್.
#ಆನಂದಪುರಂ_ಹೆದ್ದಾರಿಯಲ್ಲಿನ_ಆಕಾಲದ_ಬೃಹತ್_ಕಟ್ಟಡದ_ನಿರ್ಮಾತೃ.
#ಹುಲಿ_ಮಾ೦ಸ_ತಿಂದು_ತೇಗಿದ_ಸಾಹಸಿ.
#ಕೋಪಿಷ್ಟ_ಅಷ್ಟೇ_ಹೃದಯವಂತ_ವ್ಯಕ್ತಿ
ನಲ್ಲಪ್ಪ ದೂರದ ಚಿಕ್ಕಬಳ್ಳಾಪುರ ತಾಲ್ಲೂಕಿನ ಸೋಗನಹಳ್ಳಿಯಿಂದ ಆನಂದಪುರಂಗೆ ಕ್ಷೌರಿಕ ವೃತ್ತಿಗೆ ಬಂದ ತೆಲುಗು ಮಾತೃ ಭಾಷೆಯ ಕುಟುಂಬದವರು.
ಹುಟ್ಟು ಸಾಹಸಿ, ಯಾವುದಕ್ಕೂ ಯಾರಿಗೂ ಹೆದರದ ಆದರೆ ಮಾನವೀಯ ಗುಣಗಳುಳ್ಳ ಹೃದಯವಂತರು.
ಇವರಿಗಿಂತ ಮೊದಲು ಆನಂದಪುರಂನ ಮೂಲ ಕ್ಷೌರಿಕರು ಕನ್ನಡ ಮಾತೃ ಭಾಷೆಯ ಮಲಂದೂರಿನ ಮಂಜಣ್ಣ ಮತ್ತು ಪಕೀರಣ್ಣ ಸಹೋದರರು ಇದ್ದರು.
ನಲ್ಲಪ್ಪನವರ ಜೊತೆ ಅವರ ತಮ್ಮ ಕೊಂಡಪ್ಪರ ಕುಟುಂಬವನ್ನು ಕರೆತರುತ್ತಾರೆ ನಂತರ ನಾರಾಯಣಪ್ಪರ ಕುಟುಂಬ ಕೂಡ ನಲ್ಲಪ್ಪನವರೆ ಕರೆ ತರುತ್ತಾರೆ.
ಆ ಕಾಲದಲ್ಲಿ ಚೆನ್ನಪ್ಪ ಶೆಟ್ಟರ (ಮಲ್ಲೇಶಿ ತಂದೆ) ಮನೆಯೇ ಅತ್ಯಂತ ದೊಡ್ಡ ಮನೆ ಮತ್ತು ಅವರು ತಲ ತಲಾಂತರದಿಂದ ಆನಂದಪುರಂನ ಹಳೆಯ ಲೇವಾದೇವಿದಾರರು.
ಆದರೆ ದೂರದ ಚಿಕ್ಕಬಳ್ಳಾಪುರದಿಂದ ಬಂದು ಆನಂದಪುರಂನಲ್ಲಿ ನೆಲೆಸಿ ಆನಂದಪುರಂನ ಬೆಂಗಳೂರು ಹೊನ್ನಾವರ ರಸ್ತೆಯ ಮುಖ್ಯ ರಸ್ತೆಯಲ್ಲಿ ಚೆನ್ನಪ್ಪ ಶೆಟ್ಟರ ಮನೆಗಿಂತ ಎರೆಡು ಪಟ್ಟು ದೊಡ್ಡದಾದ ಮನೆ, ಸಲೂನ್ ಮತ್ತು ಬಾಡಿಗೆ ರೂಂಗಳ ದೊಡ್ಡ ಕಟ್ಟಡ ಕಟ್ಟಿದ್ದರು.
1995 ರ ತನಕ ನಲ್ಲಪ್ಪನವರ ಕಟ್ಟಡವೇ ಆನಂದಪುರಂಗೆ ದೊಡ್ಡ ಕಟ್ಟಡ ಎಂಬ ದಾಖಲೆ ಆಗಿತ್ತು.
ಆ ಕಾಲದಲ್ಲಿ ದೇಶಿ ಮದ್ಯ ಮಾರಾಟ ನಿಷೇದ ಇದ್ದರೂ ನಲ್ಲಪ್ಪ ಸ್ವತಃ ಮಧ್ಯ ತಯಾರಿಸುತ್ತಿದ್ದದ್ದು ಇದಕ್ಕಾಗಿ ಪೋಲಿಸರು ಹಿಡಿದು ಒಯ್ಯುವುದು, ಸಂಜೆ ಬಿಡುಗಡೆ ಆಗಿ ಬರುವುದು ಪುನಃ ಇದೇ ವ್ಯಾಪಾರ ಪುನಾರಾವರ್ತನೆ ಮಾಡುವುದರಿಂದ ನಲ್ಲಪ್ಪ ಕಾನೂನು ಪಾಲನೆ ಮಾಡುವವರಿಗೆ ತಲೆ ನೋವಾಗಿದ್ದರೂ ಸ್ಥಳಿಯ ಮಧ್ಯ ಪ್ರಿಯರಿಗೆ ನಲ್ಲಪ್ಪ ಪ್ರಿಯ ವ್ಯಕ್ತಿಯೇ ಆಗಿದ್ದರು.
ಆ ಕಾಲದಲ್ಲಿ ಆನಂದಪುರಂನ ಹಳೇ ಪೋಲಿಸ್ ಠಾಣೆ ಪಕ್ಕದಲ್ಲಿದ್ದ ಪಾರೆಸ್ಟ್ ಕಚೇರಿಯಲ್ಲಿ ರೇಂಜರ್ ಟೈಲಿ ಎಂಬುವವರ ಮೇಲೆಯೇ ಹಲ್ಲೆ ಮಾಡಿ ಜಯಿಸಿಕೊಂಡಿದ್ದು ಆ ಕಾಲದಲ್ಲಿ ದೊಡ್ಡ ಇತಿಹಾಸ.
ಆ ಕಾಲದಲ್ಲಿನ ಜನಮನದಲ್ಲಿ ಇದ್ದ ನಂಬಿಕೆ ಹುಲಿ ಮಾಂಸ ಯಾರು ತಿನ್ನುವುದಿಲ್ಲ, ತಿನ್ನಬಾರದು ಮತ್ತು ಹುಲಿ ಮಾಂಸ ಕಹಿ ಎಂಬ ನಂಬಿಕೆ ಇದನ್ನು ಸುಳ್ಳು ಮಾಡಲು ನಲ್ಲಪ್ಪ ಶಿಕಾರಿ ಮಾಡಿದ ಹುಲಿ ಮಾಂಸ ತಂದು ಸಾವ೯ಜನಿಕರ ಎದುರೇ ಬೇಯಿಸಿ ತಿಂದದ್ದು ಈ ಭಾಗದಲ್ಲೇ ದೊಡ್ಡ ಸುದ್ದಿ.
ಜಮೀನ್ದಾರ್ ಅಯ್ಯಂಗಾರ್ ಕುಟುಂಬದವರೂ ನಲ್ಲಪ್ಪರನ್ನು ಕಂಡರೆ ಅಂಜುವಂತಿದ್ದ ನಲ್ಲಪ್ಪ ಮತ್ತು ಪಾಪಮ್ಮ ದಂಪತಿಗಳಿಗೆ ಮೂರು ಹೆಣ್ಣು ಮತ್ತು ಮೂರು ಗಂಡು ಮಕ್ಕಳು.
ಹಿರಿಯ ಪುತ್ರಿ ರಾಮಕ್ಕನಿಗೆ ನಾರಾಯಣಪ್ಪರ ಮಗ ಮುನಿಯಪ್ಪರೊಂದಿಗೆ ವಿವಾಹ ಮಾಡಿಕೊಂಡು ಆನಂದಪುರಂನಲ್ಲಿ ನೆಲೆಸಿದ್ದಾರೆ ಇವರ ಪುತ್ರ ಕೃಷ್ಣ ಯಡೇಹಳ್ಳಿಯಲ್ಲಿ ಸಲೂನ್ ಇಟ್ಟುಕೊಂಡಿದ್ದಾರೆ ಇನ್ನೊಬ್ಬ ಪುತ್ರ ಟ್ಯಾಕ್ಸಿ ರಿಕ್ಷಾ ಇಟ್ಟುಕೊಂಡು ಟ್ರಾವೆಲ್ಲರ್ ಸ೦ಸ್ಥೆ ನಡೆಸಿಕೊಂಡಿದ್ದು ಜನಾನುರಾಗಿ ಆಗಿದ್ದ ಕುಮಾರ ಇತ್ತೀಚೆಗೆ ಅನಾರೋಗ್ಯದಿಂದ ಮೃತರಾಗಿದ್ದಾರೆ.
ಹಿರಿಯ ಪುತ್ರ ಆನಂದ್ ಕ್ರೀಡಾಪಟು ಅವರು ಪೋಲಿಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಮಾಡಿ ನಿವೃತ್ತರಾಗಿ ಶಿವಮೊಗ್ಗದಲ್ಲಿ ನೆಲೆಸಿದ್ದಾರೆ.
ದ್ವಿತಿಯ ಪುತ್ರ ಗೋವಿಂದ ಮೂಲ ಆಸ್ತಿಯಲ್ಲಿ ಆನಂದಪುರಂನಲ್ಲಿ ನೆಲೆಸಿದ್ದರು ಅವರೂ ಈಗ ಇಲ್ಲ.
ತೃತಿಯ ಪುತ್ರ ದಮ೯ರಾಜು ಶಿವಮೊಗ್ಗದಲ್ಲಿ ನೆಲೆಸಿದ್ದು ಶಿವಮೊಗ್ಗ ತಾಲ್ಲೂಕ್ ಸವಿತಾ ಸಮಾಜದ ಅಧ್ಯಕ್ಷರಾಗಿದ್ದಾರೆ ಮತ್ತು ಇವರನ್ನು ರಾಜ್ಯ ಸರ್ಕಾರದ ಸವಿತಾ ಸಮಾಜ ಅಭಿವೃದ್ದಿ ನಿಗಮದಲ್ಲಿ ರಾಜ್ಯ ಮಟ್ಟದ ನಿರ್ದೇಶಕರಾಗಿ ರಾಜ್ಯ ಸರ್ಕಾರ ನೇಮಕ ಮಾಡಿದೆ.
ನಲ್ಲಪ್ಪರ ತಮ್ಮ ಕೊಂಡಪ್ಪರಿಗೆ ಇಬ್ಬರು ಮಕ್ಕಳು ದೊಡ್ಡ ಮಗ ಮುನಿಯಪ್ಪ ಸಂತೆ ಮಾರ್ಕೆಟಲ್ಲಿ ಮನೆ ಮಾಡಿಕೊಂಡು ವಾಸ ಇದ್ದರು ಈಗ ಇಲ್ಲ ಇನ್ನೋಬ್ಬ ಮಗ ಕೃಷ್ಣಣ್ಣ ಕೌರಿಕ ವೃತ್ತಿ ಮುಂದುವರಿಸಿಕೊಂಡು ಆನಂದಪುರಂನ ಅಶೋಕ ರಸ್ತೆಯಲ್ಲಿ ನೆಲೆಸಿದ್ದಾರೆ.
ಆ ಕಾಲದ ಆಂಗ್ರಿ ಯಂಗ್ ಮ್ಯಾನ್ ನಲ್ಲಪ್ಪರ ಬಗ್ಗೆ ಜನರಲ್ಲಿ ಅನೇಕ ದಂತ ಕಥೆಗಳೇ ಇದೆ, ನಲ್ಲಪ್ಪರ ದೈಯ೯ ಸಾಹಸಗಳು ಅವರನ್ನು ಆರ್ಥಿಕವಾಗಿ ಸದೃಡರಾಗಿಸಿತು ಆಸ್ತಿವಂತರನ್ನಾಗಿಸಿತು, ಸಮಾಜದಲ್ಲಿ ಗೌರವ ಸಮಬಾಳ್ವೆಗೆ ಕಾರಣ ಆಯಿತು ಅವರ ವೃತ್ತಿ ಆ ಕಾಲದಲ್ಲಿ ಅವರಿಗೆ ಕೀಳರಿಮೆಗೆ ಕಾರಣವಾಗದೇ ಸಮಾನ ವೃತ್ತಿ ಗೌರವ ಸಮಾಜ ನೀಡುವಂತಾಗಿದ್ದು ವಿಶೇಷವೇ ಆಗಿದೆ.
(ನಾಳೆ ಭಾಗ-47)
Comments
Post a Comment