ಭಾಗ -52, ಆನಂದಪುರಂ ಇತಿಹಾಸ, ಉತ್ತರ ಕರ್ನಾಟಕದ ಸುಪ್ರಸಿದ್ಧ ಜಮಖಂಡಿ ನಾಟಕ ಕಂಪನಿ ಆನಂದಪುರಂ ನಲ್ಲಿ ಮರು ಹುಟ್ಟು ಪಡೆದಿದ್ದು.
#ಆನಂದಪುರಂ_ಇತಿಹಾಸ.
#ಶ್ರೀ ಗಜಾನನ ನಾಟಕ ಮಂಡಳಿ ಜಮಖಂಡಿ_ನಾಟಕ_ಸಂಸ್ಥೆ.
#ಪ್ರಖ್ಯಾತ_ನಾಟಕ_ಕಂಪನಿ_ಅಂತಿಮ_ದಿನಗಳು_ಆನಂದಪುರಂನಲ್ಲಿ.
#ಆನಂದಪುರಂಗೆ_ಬಂದಾಗ_ಹಣ_ಸಹಾಯ_ಮಾಡಿ_ಆಶ್ರೀವದಿಸಿ_ಪ್ರೋತ್ಸಾಹಿಸಿದ_ವೆಂಕಟಾಚಲಯ್ಯಂಗಾರರು.
#ಕನ್ನಡ_ಚಲನಚಿತ್ರ_ನಟರಾದ_ಲೋಕೇಶ್_ದಿರೇಂದ್ರಗೋಪಾಲ್_ಆನಂದಪುರಂನಲ್ಲಿ_ತಿಂಗಳುಗಟ್ಟಲೆ_ಕ್ಯಾಂಪ್
#ಆನಂದಪುರಂ_ವಾಸಿಗಳೇ_ಆದ_ಜಮಖಂಡಿ_ರಾಮರಾವ್_ಒಡೆಯರ್_ರಾಜ್ಯೋತ್ಸವ _ಪ್ರಶಸ್ತಿ_ಪಡೆದರು.
ಜಮಖಂಡಿ ರಾಮಕೃಷ್ಣರನ್ನು ಕಲಾವಿದರು ರಾಮರಾವ್ ಒಡೆಯರ್ ಎಂದೇ ಕರೆಯುತ್ತಿದ್ದರು, ಇವರ ಊರು ಜಮಖಂಡಿ, ಅದೇ ಹೆಸರಿನಲ್ಲಿ ಇವರು ಪ್ರಾರಂಬಿಸಿದ ಶ್ರೀ ಗಜಾನನ ನಾಟಕ ಮಂಡಳಿ ಕಂಪನಿ ಉತ್ತರ ಕರ್ನಾಟಕದಲ್ಲಿ ಪ್ರಸಿದ್ಧಿ ಹೊಂದಿತ್ತು.
ಜಮಖಂಡಿ ನಾಟಕ ಕಂಪನಿ ಟಿಪ್ಪು ಸುಲ್ತಾನ್ ಎಂಬ ಐತಿಹಾಸಿಕ ನಾಟಕದಿಂದ ಅತ್ಯಂತ ಜನಪ್ರಿಯತೆ ಹೊಂದಿತ್ತು ಈ ನಾಟಕದಲ್ಲಿ ರಾಮರಾವ್ ರ ಬ್ರಿಟಿಷ್ ಕರ್ನಲ್ ಪಾತ್ರ ಕೂಡ ಮನೆ ಮಾತಾಗಿದ್ದ ಕಾಲವದು, ಶಾಂತಕುಮಾರ್ ಮೀರ್ ಸಾದಿಕ್ ಪಾತ್ರದಿಂದ ಪ್ರಸಿದ್ಧರಾಗಿದ್ದರು.
ಈ ನಾಟಕ ಕಂಪನಿ ಪ್ರಾರಂಬಿಸಿದ ಸತ್ಯನಾರಾಯಣ ವೃತ ನಾಟಕ ಮತ್ತು ಈ ನಾಟಕದ ಸೀನರಿಗಳು ಸಿನಿಮಾವನ್ನು ಮೀರಿಸುವಂತ ಅದ್ದೂರಿ ಆಗಿತ್ತು, ಆಸ್ತಿಕರೆಲ್ಲ ಈ ನಾಟಕ ಎಷ್ಟು ಸಾರಿ ನೋಡಿದರೂ ಕಡಿಮೆ ಎಂಬಂತೆ ಪದೇ ಪದೇ ವೀಕ್ಷಿಸುತ್ತಿದ್ದರು.
ಸತ್ಯನಾರಾಯಣ ವೃತ ನಾಟಕದಲ್ಲಿ ಬರುವ ಸೂರ್ಯೋದಯದಲ್ಲಿ ಜೀವ೦ತ ಸೂಯ೯ ಉದಯಿಸಿದಂತೆ, ಸಮುದ್ರದಲ್ಲಿ ಹಡಗು ಮುಳುಗುವುದು ಇತ್ಯಾದಿ ಸೀನರಿ ಜಮಖಂಡಿ ನಾಟಕ ಕಂಪನಿ ಬಿಟ್ಟರೆ ಬೇರಾರು ಮಾಡಲಿಲ್ಲ.
ಆ ಕಾಲದಲ್ಲಿ ಕಂದಗಲ್ಲರು ಬರೆದ ನಾಟಕಗಳಿಗೆ ವಿಶೇಷ ಮಹತ್ವ ತಂದುಕೊಟ್ಟ ಕಂಪನಿಗಳು ಶ್ರೀ ಗಜಾನನ ನಾಟಕ ಮಂಡಳಿ ಜಮಖಂಡಿ ಮತ್ತು ಗೋಕಾಕ್ ನಾಟಕ ಕಂಪನಿಗಳು ಮಾತ್ರ.
1970 ರ ದಶಕದಲ್ಲಿ ರಾಜ್ಯದ ನಾಟಕ ಕಂಪನಿಗಳೆಲ್ಲ ಪ್ರೇಕ್ಷಕರ ಸಿನಿಮಾ ಆಕರ್ಷಣೆಯಿಂದ ಆದಾಯ ಕುಂಟಿತವಾಗಿ ನಷ್ಟ ಅನುಭವಿಸಿದವು ಮತ್ತು ಹೊಸ ನಾಟಕಗಳ ಕೊರತೆಯೂ ನಾಟಕ ಕಂಪನಿಗಳ ಸ್ಥಗಿತಕ್ಕೆ ಕಾರಣ ಆಯಿತು.
ನಾಟಕ ವೃತ್ತಿಯಿಂದಲೇ ಜೀವನ ಕಂಡುಕೊಂಡಿದ್ದ ಕಲಾವಿದರ ಪಾಲಿಗೆ ಇದು ಶೋಚನೀಯ ಪರಿಸ್ಥಿತಿ.
ಇಂತಹ ಕಾಲ ಘಟ್ಟದಲ್ಲಿ ಅಂದಾಜು 1974-75 ರಲಿ ಜಮಖಂಡಿ ನಾಟಕ ಕಂಪನಿ ಮಾಲಿಕರು ಕಲಾವಿದರಾದ ರಾಮರಾಯರು ಆನಂದಪುರಂ ನಲ್ಲಿ ತಮ್ಮ ನಾಟಕದ ಕ್ಯಾಂಪ್ ಹಾಕುವ ಮನಸ್ಸು ಮಾಡುತ್ತಾರೆ, ಇವರ ಇಡೀ ಕುಟುಂಬ ಕಲಾವಿದರೇ ಆಗಿದ್ದು ಸಂಗೀತ ಸಾಧನ ನುಡಿಸುವುದು, ಹಿನ್ನೆಲೆ ಗಾಯನ, ಅಭಿನಯ, ಅನೌನ್ಸ್ ಮೆಂಟ್, ಟಿಕೇಟ್ ಕೊಡುವುದು, ಮೇಕಪ್, ಅಡಿಗೆ ಎಲ್ಲಾ ಕುಟುಂಬವೇ ನಿರ್ವಹಿಸುತ್ತಿತ್ತು.
ಆಗ ಅಯ್ಯಂಗಾರ್ ಕುಟುಂಬದ ಯಜಮಾನರಾಗಿದ್ದ ಊರ ಪ್ರಮುಖರೂ ಆಗಿದ್ದ ವೆಂಕಟಾಚಲಯ್ಯಂಗಾರರನ್ನು ಬೇಟಿ ಮಾಡಿ ತಮ್ಮ ಉದ್ದೇಶ ತಿಳಿಸಿ ಸಹಾಯ ಯಾಚಿಸುತ್ತಾರೆ.
ಜಮಖಂಡಿ ರಾಮರಾಯರಿಂದ ಜನಪ್ರಿಯ ಆಗಿದ್ದ ಜಮಖಂಡಿ ನಾಟಕ ಕಂಪನಿ ಈಗ ನಷ್ಟದಿಂದ ತತ್ತರಿಸುವುದನ್ನು ಕೇಳಿ ವೆಂಕಟಾಚಲಯ್ಯಂಗಾರ್ ಮರುಗುತ್ತಾರೆ, ರಾಮರಾಯರಿಗೆ ಆನಂದಪುರಂ ನಲ್ಲಿ ನಾಟಕ ಕ್ಯಾಂಪ್ ಹಾಕಲು ಎಲ್ಲಾ ರೀತಿಯ ಸಹಕಾರ ನೀಡುವ ಭರವಸೆ ನೀಡಿ ತಮ್ಮ ಕೈಯಿಂದ ಎರೆಡು ಸಾವಿರ ರೂಪಾಯಿ ಪ್ರೋತ್ರಾಹ ಧನ ದಾನ ಮಾಡಿ ರಾಮರಾಯರಿಗೆ ಆತ್ಮಸ್ಥೆಯ೯ ನೀಡುತ್ತಾರೆ.
ಇದರಿಂದ ಹುಮ್ಮಸ್ಸಿನಿಂದ ಆನಂದಪುರಂ ಮಾರಿಕಾಂಬಾ ದೇವಾಲಯದ ಹಿಂಬಾಗದ ಮಾಧ್ಯಮಿಕ ಶಾಲಾ ಅವರಣದಲ್ಲಿ ಜಮಖಂಡಿ ನಾಟಕ ಕಂಪನಿ ಆನಂದಪುರಂ ನಿವಾಸಿಗಳ ಪ್ರೋತ್ಸಾಹ ಸಹಕಾರದಿಂದ ತನ್ನ ಹಿಂದಿನ ಜನಪ್ರಿಯತೆ ಗಳಿಸುತ್ತದೆ.
ಅವರ ಮಕ್ಕಳೆಲ್ಲ ಇಲ್ಲೇ ವಿದ್ಯಾಬ್ಯಾಸ ಮುಂದುವರಿಸುತ್ತಾರೆ, ಕಂಪನಿಯ ಜನಪ್ರಿಯ ನಾಟಕಗಳು ಪ್ರದರ್ಶನವಾಗುತ್ತದೆ, ಸಿನಿಮಾ ನಟರಾದ ಲೋಕೇಶ್, ದೀರೇಂದ್ರ ಗೋಪಾಲ್ ತಿಂಗಳುಗಟ್ಟಲೆ ಆನಂದಪುರಂ ನಾಟಕ ಕ್ಯಾಂಪಿನಲ್ಲಿ ಭಾಗವಹಿಸಿ ಜಮಖಂಡಿ ನಾಟಕ ಕಂಪನಿಗೆ ಆರ್ಥಿಕ ಬಲ ತರುತ್ತಾರೆ.
ನಂತರ ರಾಮರಾಯರ ವೃದ್ದಾಪ್ಯ ಅನಾರೋಗ್ಯ ಮತ್ತು ನಾಟಕ ವೃತ್ತಿ ಬಗ್ಗೆ ಕುಟುಂಬದ ಯುವಕರಲ್ಲಿ ನಿರಾಸಕ್ತಿಗಳಿಂದ ಜಮಖಂಡಿ ರಾಮರಾಯರು ತಮ್ಮ ಸುಪ್ರಸಿದ್ದ ಜಮಖಂಡಿ ನಾಟಕ ಕಂಪನಿ ವಿಸರ್ಜಿಸುತ್ತಾರೆ.
1992 ರಲ್ಲಿ ಬಂಗಾರಪ್ಪನವರು ಮುಖ್ಯಮಂತ್ರಿ ಆದಾಗ ಜಮಖಂಡಿ ರಾಮರಾವ್ ರಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಿ ಬೆಂಗಳೂರಿಗೆ ಕರೆಸಿ ಪ್ರಶಸ್ತಿ ವಿತರಿಸಿದ್ದು ಸಮಸ್ತ ನಾಟಕ ಕಲಾವಿದರಿಗೆ ನೀಡಿದ ಗೌರವ ಆಗಿತ್ತು.
ತಮ್ಮ ಅಂತಿಮ ದಿನಗಳು ಆನಂದಪುರಂ ನಿವಾಸಿಗಳಾಗಿ ಕಳೆದ ಜಮಖಂಡಿ ರಾಮರಾವ್ ತಮ್ಮ ಮಕ್ಕಳ ವಿವಾಹ ಇತ್ಯಾದಿ ಆನಂದಪುರಂ ನಲ್ಲೇ ನೆರವೇರಿಸಿದ್ದಾರೆ. ಇವರ ಕೆಲ ಮಕ್ಕಳು ಇಲ್ಲೇ ನೆಲೆಸಿದ್ದಾರೆ.
ದೊಡ್ಡ ಪುತ್ರಿ ಲಲಿತ, ದ್ವಿತಿಯ ಪುತ್ರ ಚಂದ್ರಶೇಖರ್, ತೃತಿಯ ವಿಶ್ವನಾಥ, ನಾಲ್ಕನೆಯವರು ಅನುಸೂಯ ಐದನೆಯವರು ಶಾರದಾ, ಆರನೆಯವರು ಶಾಕುಂತಲಾ, ಏಳನೆಯವರು ಗಾಯಿತ್ರಿ, ಎಂಟನೆಯವರು ವಿದ್ಯಾಶಂಕರ ಮತ್ತು ಒಂಬತ್ತನೆಯವರು ಗೀತಾ.
ಉತ್ತರ ಕರ್ನಾಟಕದ ಜನರು, ಆನಂದಪುರಂನ ಜನರು ಜಮಖಂಡಿ ನಾಟಕ ಕಂಪನಿ ಈಗಲೂ ನೆನಪಿಸಿಕೊಳ್ಳುತ್ತಾರೆ, ಕನ್ನಡ ಚಲನಚಿತ್ರರಂಗದ ಹಿರಿಯ ಕಲಾವಿದರೆಲ್ಲಾ ಜಮಖಂಡಿ ನಾಟಕ ಕಂಪನಿ ಸದಾ ಸ್ಮರಿಸುತ್ತಾರೆ ಇಂತಹ ಕಲಾ ಶ್ರೀಮಂತಿಕೆಯ ಶ್ರೀ ಗಜಾನನ ನಾಟಕ ಮಂಡಳಿ ಜಮಖಂಡಿ ನಾಟಕ ಕಂಪನಿ ಆನಂದಪುರಂನಲ್ಲಿ ತನ್ನ ಅಂತ್ಯ ಕಂಡಿದ್ದು ವಿಷಾದನೀಯ ಆದರೂ ಕಲಾವಿದರ ಕುಟುಂಬ ಇಲ್ಲಿ ನೆಲೆಸಿ ನೆಮ್ಮದಿಯ ಹೊಸ ಜೀವನ ಆನಂದಪುರಂ ನಲ್ಲಿ ಪ್ರಾರಂಬಿಸಿದ್ದು ಸಂತೋಷದ ವಿಷಯವೇ ಆಗಿದೆ.
Comments
Post a Comment