ನಾನು ಬರೆದಿರುವ 29 ಸಣ್ಣ ಕಥೆಗಳ ಸಂಕಲನ ಅಚ್ಚಿನಲ್ಲಿದೆ ಇದಕ್ಕೆ ಮುನ್ನುಡಿ ಬರೆದವರು ಬರಹಗಾರ, ಅಂಕಣಕಾರ ಮತ್ತು ಶಿಕ್ಷಣ ತಜ್ಞರಾದ ಅರವಿಂದ ಚೊಕ್ಕಾಡಿ
ನನ್ನ ಮೊದಲ ಕಾದಂಬರಿ #ಬೆಸ್ತರ_ರಾಣಿ_ಚಂಪಕಾ ನಿರೀಕ್ಷೆ ಮೀರಿದ ಸದ್ದು ಈಗಲೂ ಅಡಗಿಲ್ಲ.
ನನ್ನ ಇನ್ನೊಂದು ಕಥಾ ಸಂಕಲನ (29 ಕಥೆಗಳಿದೆ) ಅಚ್ಚಿನಲ್ಲಿದೆ ಈ ಪುಸ್ತಕಕ್ಕೆ ಅತ್ಯಂತ ಕಡಿಮೆ ಸಮಯದಲ್ಲಿ ವಾಟ್ಸಪ್ ನಿಂದ ಪ್ರಿಂಟ್ ತೆಗೆಸಿ, ಸಮಯ ಹೊಂದಿಸಿಕೊಂಡು ಖ್ಯಾತ ಬರಹಗಾರ, ಅಂಕಣಕಾರ ಮತ್ತು ಶಿಕ್ಷಣ ತಜ್ಞರಾದ #ಅರವಿಂದ_ಚೊಕ್ಕಾಡಿಯವರು ಪೂರ್ತಿ ಓದಿ ( ಪೂರ್ಣ ಓದದೆ ಸುಮ್ಮನೆ ಅಭಿಪ್ರಾಯ ಹೇಳುವವರಲ್ಲ) ಮುನ್ನುಡಿ ಬರೆದಿದ್ದಾರೆ.
ಬರಹಗಾರನಿಗೆ ಇದಕ್ಕಿಂತ ಹೆಚ್ಚಿನ ಪುರಸ್ಕಾರ ಬೇರೆ ಇಲ್ಲ, ಪುಸ್ತಕ ಅಚ್ಚಾಗುವ ಮೊದಲೇ ಮುನ್ನುಡಿ ಓದಿ.
#ಅರವಿಂದ_ಚೊಕ್ಕಾಡಿಯವರಿಗೆ_ಕೃತಜ್ಞತೆಗಳೊಂದಿಗೆ
ಮುನ್ನುಡಿ
---------------
* ಅರವಿಂದ ಚೊಕ್ಕಾಡಿ
ಮಿತ್ರರಾದ ಅರುಣ್ ಪ್ರಸಾದ್ ಅವರು ತಮ್ಮ ಕಥೆಗಳನ್ನು ವಾಟ್ಸಪ್‌ನಲ್ಲಿ ಕಳಿಸಿ "ಎರಡೇ ದಿನಗಳಲ್ಲಿ ಆಗಬೇಕು. ಇದಕ್ಕೆ ಮುನ್ನುಡಿ ಬರೆಯಲು ಸಾಧ್ಯವಾಗಲಾರದು. ಶುಭಾಶಯಗಳ ಎರಡು ಮಾತುಗಳನ್ನಾದರೂ ಬರೆದು ಕಳಿಸಿ" ಎಂದು ಕೇಳಿದ್ದಾರೆ. ಶುಭಾಶಯ, ಹಾರೈಕೆ, ಸಂದೇಶ ಎಲ್ಲ ಕೊಡಲು ನಾನು ಸೂಕ್ತ ವ್ಯಕ್ತಿಯಲ್ಲ. ಆದ್ದರಿಂದ ಕೂಡಲೇ ಕಥೆಗಳನ್ನು ಪ್ರಿಂಟ್ ತೆಗೆಸಿ ಓದಿ ಮುನ್ನುಡಿಯನ್ನೆ ಬರೆಯಲು ಪ್ರಯತ್ನಿಸಿದ್ದೇನೆ.
***************
ಇಲ್ಲಿನ ಕಥೆಗಳ ಕೇಂದ್ರ ಗ್ರಾಮ ಭಾರತವೇ. ಈ ' ಗ್ರಾಮ ಭಾರತ' ಎನ್ನುವುದು ಅನೇಕರಿಗೆ ಶಾಂತಿಯ ತೌರೂರು, ನೆಮ್ಮದಿಯ ನೆಲೆ, ಶಾಂತಿಯೇ ಮೈವೆತ್ತ ಭೂಸ್ವರ್ಗವಾಗಿ ಕಾಣಿಸುತ್ತದೆ. ಇನ್ನು ಕೆಲವರಿಗೆ ಮೂಢನಂಬಿಕೆ, ಸಂಪ್ರದಾಯವಾದ, ಜಾತಿವಾದ, ಶೋಷಣೆ...ಹೀಗೆ ಕಾಣಿಸುತ್ತದೆ. ಇವೆರಡೂ ಅಲ್ಲದ; ಆದರೆ ಇವೆರಡನ್ನೂ ಒಳಗೊಂಡಿರುವಂತಾದ್ದೇ ನಿಜವಾದ ಗ್ರಾಮ ಭಾರತ. ಆ ಭಾರತವನ್ನು ಅರುಣ್ ಪ್ರಸಾದ್ ಅವರು ಲಾಲಿತ್ಯಪೂರ್ಣ ಭಾಷೆಯಲ್ಲಿ ಕೆಲವೊಮ್ಮೆ ಖುಷಿಯಿಂದ, ಕೆಲವೊಮ್ಮೆ ಉದ್ವೇಗದಿಂದ, ಕೆಲವೊಮ್ಮೆ ಗಮ್ಮತ್ತಿನಿಂದ ಓದಿಕೊಳ್ಳುವ ಹಾಗೆ ಕತೆಗಳಾಗಿ ಕಟ್ಟಿ ಕೊಟ್ಟಿದ್ದಾರೆ.
ಇಲ್ಲಿನ ಕತೆಗಳಲ್ಲಿ ಎರಡು ರೀತಿಯ ಕಥೆಗಳನ್ನು ಗುರುತಿಸಬಹುದು. ಹಲವು ಕಥೆಗಳು ಸಾಹಿತ್ಯಕ ಸ್ವರೂಪದವುಗಳಾಗಿವೆ. ಈ ರೀತಿಯ ಕಥೆಗಳು ಜಾಸ್ತಿ ಇವೆ. ಇನ್ನು ಕೆಲವು ಕಥೆಗಳು ವೈಚಾರಿಕ ಸ್ವರೂಪದವು. ಕೆಲವೊಮ್ಮೆ ವೈಚಾರಿಕ ಲೇಖನಗಳ ಮಾದರಿಯಲ್ಲಿ ಕಾಣಿಸಿಕೊಳ್ಳುತ್ತವೆ. ' ಮುರುಘಾ ಮಠ v/s ಮುರುಗೀಮಠ' ದಂತಹ ಕಥೆಗಳು ಈ ರೂಪದವುಗಳಾಗಿವೆ. ಸ್ವಾರಸ್ಯವೆಂದರೆ ಲೇಖನಗಳ ಶೈಲಿಯೇ ಕುತೂಹಲಕಾರಿ ರೀತಿಯಲ್ಲಿ ಕಥನ ಶೈಲಿಗೆ ಹೊರಳಿಕೊಳ್ಳುವುದಾಗಿದೆ.
ಸಿದ್ಧಾಂತಿಯೊಬ್ಬ ಒಳ್ಳೆಯ ಕಥೆಗಾರನಾಗಲಾರ. ಏಕೆಂದರೆ ಸಿದ್ಧಾಂತವು ಜಗತ್ತನ್ನು ಕಪ್ಪು ಬಿಳುಪಾಗಿ ತೋರಿಸುವ ಕನ್ನಡಕವನ್ನು ಕಥೆಗಾರನಿಗೆ ತೊಡಿಸುತ್ತದೆ. ಆದರೆ ಜಗತ್ತು ಕಪ್ಪು- ಬಿಳುಪಲ್ಲ. ಜಗತ್ತು ಸದಾ ಕಾಲವೂ ಅತ್ಯಂತ ವರ್ಣಮಯವಾದದ್ದು. ವರ್ಣಮಯ ಜಗತ್ತಿನ ವರ್ಣಗಳು ಕಾಣಬೇಕಾದರೆ ಕಥೆಗಾರ ಸಿದ್ಧಾಂತವನ್ನು ಮೀರಿ ಬದುಕನ್ನು ಗ್ರಹಿಸುವ ಶಕ್ತಿ ಇರಬೇಕು. ಅರುಣ್ ಪ್ರಸಾದ್ ಅವರಿಗೆ ಆ ಶಕ್ತಿ ಇದೆ. ಆದ್ದರಿಂದಲೇ ಇಲ್ಲಿನ ಕಥೆಗಳಲ್ಲಿ ಬರುವ ಪ್ರಬಲ ಸಮುದಾಯದವರು-ದುರ್ಬಲ ಸಮುದಾಯದವರು, ಶ್ರೀಮಂತರು- ಬಡವರು ಎಲ್ಲರೂ ತಮ್ಮ ತಮ್ಮ ಶಕ್ತ್ಯಾನುಸಾರ ಮೋಸ-ವಂಚನೆ-ಡೋಂಗಿಗಳನ್ನು ಮಾಡುವವರೂ ಹೌದು, ಉದಾತ್ತರೂ ಹೌದು. ' ಹಾವು ಗೊಲ್ಲರ ಕತ್ತೆ ಪುರಾಣ' ದಲ್ಲಿ ಬರುವ ವೆಂಕಟೇಶಿ ವಂಚಕ. ಆದರೆ ಅವನನ್ನು ವಂಚಕ ಎನ್ನಲು ಆಗುವುದಿಲ್ಲ. ತಾನೇ ಮಾರಾಟ ಮಾಡಿದ ಕತ್ತೆಯನ್ನು ಸಾಕಲಾರದೆ ತನಗೆ ವಾಪಸ್ ಸಾಕಲು ಕೊಟ್ಟಾಗ ಅಳಿಯನಿಗೆ ವರ ದಕ್ಷಿಣೆಯಾಗಿ ಆ ಕತ್ತೆಯನ್ನು ಕೊಟ್ಟು ಕತ್ತೆ ಸತ್ತು ಹೋಯಿತು ಎಂದು ಸುಳ್ಳು ಹೇಳಬಲ್ಲ. ಅದೇ ವೆಂಕಟೇಶಿ ಸಾಬರಲ್ಲಿಗೆ ಹಾವು ಹಿಡಿಯಲು ಹೋಗಿ ಹಾವು ಇಲ್ಲವಾದಾಗ ತನ್ನ ಬಳಿ ಇದ್ದ ಹಾವನ್ನೆ ಹೆಂಡತಿಯ ಕೈಯಲ್ಲಿ ಹೊರ ತರಿಸಿ,"ಇಕೊಳ್ಳಿ, ಹಾವು ಹಿಡಿದೆ" ಎಂದು ಇಪ್ಪತ್ತು ರೂಪಾಯಿ ವಸೂಲಿ ಮಾಡಿಕೊಳ್ಳಬಲ್ಲ. ಇವೆಲ್ಲ ಮೋಸ ಹೌದು. ಆದರೆ ಮೋಸಗಳು ಜೀವನದ ಅಗತ್ಯಗಳಾಗಿ ಬರುತ್ತವೆ ಹೊರತು ಸಮಾಜಕ್ಕೆ ಹಾನಿಕಾರಕಗಳಾಗಿ ಕಾಡುವುದಿಲ್ಲ ಎನ್ನುವಲ್ಲಿ ಅರುಣ್ ಪ್ರಸಾದ್ ಅವರ ಕಥೆಗಳು ಗೆಲ್ಲುತ್ತವೆ. ಈ ಮೋಸಗಳು ಗೊತ್ತಾದಾಗ ಅದಕ್ಕೆ ಪ್ರತಿಕ್ರಿಯಿಸುವ ವ್ಯಕ್ತಿತ್ವಗಳು ಕೂಡ ಮೋಸಗಾರನನ್ನು ಶಿಕ್ಷಿಸುವ ಧಾವಂತವನ್ನು ತೋರುವುದಿಲ್ಲ ಎನ್ನುವುದಕ್ಕಿಂತಲೂ ಮುಖ್ಯವಾದದ್ದು ಮೋಸಗಾರನನ್ನು ನೀತಿವಂತನಾಗಿ ಪರಿವರ್ತಿಸಲಿಕ್ಕೂ ಹೋಗುವುದಿಲ್ಲ ಎನ್ನುವುದು. ಆದ್ದರಿಂದ ಇಲ್ಲಿನ ಕಥೆಗಳು ಅಪ್ಪಟ ಕಥೆಗಳಾಗಿ ಉಳಿದುಕೊಂಡಿವೆ. ಉಪದೇಶಗಳಾಗಿ ಬದಲಾಗಿಲ್ಲ. ಸಮಾಜ ಇರುವುದೇ ಹಾಗೆ. ಇರುವ ಸಮಾಜವನ್ನು ಕಥೆಗಾರ ಕಲಾತ್ಮಕವಾಗಿ ಕಾಣಿಸುವ ಕೆಲಸವನ್ನು ಕೈಗೆತ್ತಿಕೊಂಡಿರುವುದು ಇಲ್ಲಿನ ಕತೆಗಳಲ್ಲಿ ಗೊತ್ತಾಗುತ್ತದೆ. ಆದ್ದರಿಂದ ಸೃಜನಶೀಲ ರಚನೆಗಳಿಗೆ ಅಗತ್ಯವಾದ ಕಲಾತ್ಮಕತೆ ಎಲ್ಲೂ ಸೊರಗಿಲ್ಲ.
ಅರುಣ್ ಪ್ರಸಾದ್ ಭ್ರಷ್ಠಾಚಾರದ ದರ್ಶನ ಮಾಡಿಸುವ ವಿಧಾನ ಸುಂದರವಾಗಿದೆ. ಗ್ರಾಮ ಪಂಚಾಯತ್ ಅಧ್ಯಕ್ಷ ಕುಮಾರ್ ಬಿಡಾಡಿಗಳಾದ ಐವತ್ತು ನಾಯಿಗಳನ್ನೂ ಸಾಯಿಸದೆ, 293 ನಾಯಿಗಳನ್ನು ಸಾಯಿಸಿದ ಲೆಕ್ಕ ಕೊಟ್ಟು 52 ಸಾವಿರ ರೂಪಾಯಿಗಳ ಬಿಲ್ ಮಾಡಿಕೊಳ್ಳುತ್ತಾನೆ. ಇವನು 52 ಸಾವಿರದ ಬಿಲ್ ಮಾಡಲು ಗಣೇಶನಿಗೆ 50 ರೂಪಾಯಿ ಕೊಟ್ಟು ತನ್ನ ಕಡೆಗೆ ಮಾಡಿಕೊಳ್ಳುತ್ತಾನೆ. ಈ ಗಣೇಶ ಇನ್ನೂ ಬುದ್ಧಿವಂತ. ಮನೆಯಲ್ಲಿ ನಾಯಿಗಳನ್ನು ಸಾಕದ ಗಣೇಶ ಬೀದಿ ನಾಯಿಗಳಿಗೆ ತಿಂಡಿ ಹಾಕುತ್ತಾನೆ. ಮೇಲ್ನೋಟಕ್ಕೆ ಇಲ್ಲಿ ಇದು ಪ್ರಾಣಿ ದಯೆಗಿಂತ ಮಿಗಿಲಾಗಿ ಬೇರೇನಿದೆ ಎನಿಸುತ್ತದೆ. ಏನಾದರೂ ಇರಬಹುದಾದರೂ ಎಲ್ಲಿಯೂ ಕನೆಕ್ಟಿವಿಟಿ ಕಾಣುವುದಿಲ್ಲ. ಆದರೆ ಕನೆಕ್ಟಿವಿಟಿ ಇದೆ. ಜೋಳವನ್ನು ಬೆಳೆದ ರೈತರಿಗೆ ಹಂದಿ-ಮಂಗಗಳ ಕಾಟದಿಂದ ಬಚಾವಾಗಲು ಹೊಲದಲ್ಲಿ ಕಟ್ಟಲು ನಾಯಿಗಳು ಬೇಕು. ಅವರಿಗೆ ಬೇಕಾದ ನಾಯಿಗಳನ್ನು ಒದಗಿಸುವವನು ಗಣೇಶ. ಗಣೇಶ ನಾಯಿಗಳಿಗೆ ತಿಂಡಿ ಹಾಕುವುದರಿಂದ ನಾಯಿಗಳು ಗಣೇಶನೊಂದಿಗೆ ಬರುತ್ತವೆ. ಗಣೇಶನು ಆ ನಾಯಿಗಳನ್ನು ರೈತರಿಗೆ ಒದಗಿಸುತ್ತಾನೆ. ಆ ಕಡೆಯಿಂದಲೂ ಲಾಭ. ಈ ಕಡೆಯಿಂದಲೂ ಲಾಭ. ಭ್ರಷ್ಠಾಚಾರದ ಸರಣಿ ಯಾವ ರೀತಿ ಅರಿವೇ ಇಲ್ಲದ ಹಾಗೆ ಸುತ್ತಿಕೊಳ್ಳುತ್ತದೆ ಎಂಬುದನ್ನು ಕಥೆಯು ಹೇಳುತ್ತದೆ. ಪಂಚಾಯತ್ ಸಭೆಯಲ್ಲೂ ನಾಯಿ ಕೊಂದದ್ದರ ಬಿಲ್ ಜಾಸ್ತಿಯಾಯಿತು ಎಂದು ಆದಾಗ ಪ್ರಾಣಿ ದಯೆಯ ಇಶ್ಯೂ ಮುಂದೆ ಬಂದು ಇನ್ನು ಮುಂದೆ ನಾಯಿಗಳನ್ನು ಕೊಲ್ಲುವುದು ಸಲ್ಲ ಎಂಬ ನಿರ್ಣಯವಾಗುತ್ತದೆ. ಇದು ವೈಚಾರಿಕ ಭ್ರಷ್ಠಾಚಾರ. ' ಹೀಗೂ ಉಂಟೇ?' ಕಥೆಯ ಶೀನಿ, ರಾಮಿಗಳದ್ದೂ ಇದೇ ಬಗೆಯ ಕಥೆ. ಕೆಲಸಗಾರರಾಗಿ ಬಂದವರು ಹೊಡೆದಾಟ, ಬಡಿದಾಟ, ಕಳ್ಳಭಟ್ಟಿ ಸರಾಯಿಗಳಲ್ಲೆಲ್ಲ ತೊಡಗಿಕೊಂಡು ಬೆಳೆಯುತ್ತಾರೆ. ಸಿದ್ಧಪ್ಪ ಮೃತನಾದಾಗ ಶೀನಿ, ರಾಮಿಯರ ರೋದನೆ ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿ ಮಾಡಿ ಅವರನ್ನು ಸಮಾಧಾನಪಡಿಸುತ್ತಾರೆ. ಕೊನೆಗೆ ನೋಡಿದರೆ ಶೀನಿ ರಾಮಿಯರು ಅಳುವುದು ಅವರಿಗೆ ಸಿದ್ಧಪ್ಪನಿಂದ ಬರಬೇಕಾದ ಕಳ್ಳಭಟ್ಟಿ ಸರಾಯಿಯ ಬಾಕಿಗಾಗಿ! ಕೊನೆಗೆ ಹೆಣ ಎತ್ತಲೂ ಬಿಡದೆ ಇದ್ದಾಗ ಅಬ್ಬು ಸಾಹೇಬ ಹಣದ ಬಾಕಿ ಕೊಟ್ಟು ಹೆಣ ಎತ್ತಿಸುತ್ತಾರೆ.
' ಭಟ್ಟರ ಬೋಂಡಾದ ಬಾಂಡ್ಲಿಯಲ್ಲಿ ಬಿಲಾಲಿ ಬಿಲ್ಲಿ ಅಭ್ಯಂಜನ' ಬಹಳ ಗಮ್ಮತ್ತಿನ ಕಥೆ. ಎಲ್ಲಿಂದಲೋ ಬಂದು ಸೇರಿಕೊಳ್ಳುವ ನಿರೂಪಕನ ಬೆಕ್ಕು. ದೊಡ್ಡ ದೊಡ್ಡ ನಾಯಿಗಳೊಂದಿಗೇ ಅದರ ಜಗಳ. ಅದರ ಪಾಂಜದ ಏಟಿಗೆ ನಾಯಿಗಳು ತತ್ತರಿಸುತ್ತವೆ. ಇಂತಿಪ್ಪ ಬಿಲಾಲಿ ಬಿಲ್ಲಿ ಒಮ್ಮೆ ಭಟ್ಟರ ಬೋಂಡಾದ ಎಣ್ಣೆಗೆ ಬಿದ್ದು ಮೈಯೆಲ್ಲ ಎಣ್ಣೆ ಮಾಡಿಕೊಂಡು ಬರುತ್ತದೆ. ಬೆಕ್ಕು ಬಿದ್ದ ಎಣ್ಣೆಯಲ್ಲಿ ಬೋಂಡಾ ಮಾಡಬೇಡಿ ಎಂದು ಹೇಳಿ ಕಳಿಸುವ ವೇಳೆಗೆ ಭಟ್ಟರು ಬೋಂಡಾ ಮಾಡಿ ಮಾರಾಟ ಮಾಡಿ ಆಗಿರುತ್ತದೆ! ಅಲ್ಲಿ ಮಂಜುಳಮ್ಮ ಎಂದು ಇನ್ನೊಂದು ಪಾತ್ರ ಬರುತ್ತದೆ. ಭಟ್ಟರ ಹೆಂಡತಿ ಚಂದ್ರಲತಾ ಮತ್ತು ಮಂಜುಳಮ್ಮ ಅಪ್ಪಟ್ಟ ಗ್ರಾಮ ಭಾರತದ ಪ್ರತಿಭೆಗಳು. ನನ್ನ ಹಿತ್ತಲಿನ ಗುಲಾಬಿ ಹೂವು ನೀನೇ ಕದ್ದಿದ್ದೀಯ ಎಂದು ಚಂದ್ರಲತಾ ಮಂಜುಳಮ್ಮನ ಮೇಲೆ ಆರೋಪಿಸಿದ್ದಕ್ಕೆ ಪ್ರತಿಯಾಗಿ ಮಂಜುಳಮ್ಮ ಭಟ್ಟರ ಬೋಂಡಾವನ್ನು ತಿನ್ನಬೇಡಿ ಎಂದು ಊರೆಲ್ಲ ಹೇಳುತ್ತಾ ಬರುವುದು ಸಾಕ್ಷಾತ್ ಗ್ರಾಮ ಭಾರತದ ದರ್ಶನವೇ ಆಗಿದೆ. ಆದರೂ ಒಂದು ಪೆಗ್ ಹಾಕಿದವರೆಲ್ಲರೂ ಭಟ್ಟರ 'ತಾಕತ್ ಬೋಂಡ' ವೇ ಬೇಕು. ಬೋಂಡಾದ ಹೆಸರೇ ' ತಾಕತ್ ಬೋಂಡ'!
ಈ ಕೃತಿಯ ಪ್ರತಿಯೊಂದು ಕಥೆಗಳೂ ಇಂತಹ ಸ್ವಾದಿಷ್ಟ ಅಕ್ಷರ ಮಾಲೆಗಳಾಗಿವೆ. ಕಥೆಗಾರ ಅರುಣ್ ಪ್ರಸಾದ್ ಬಳಿ ಅತ್ಯಂತ ಶ್ರೀಮಂತವಾದ ಅನುಭವಗಳಿವೆ ಎನ್ನುವುದಕ್ಕೆ ಇಲ್ಲಿನ ಪ್ರತಿಯೊಂದು ಕಥೆಗಳೂ ಸಾಕ್ಷಿಯಾಗಿವೆ. ಊರಿನ ರಾಜಕೀಯಗಳೂ ಬೆಸದುಕೊಂಡು ಕಥೆಗಳಿಗೆ ಎಲ್ಲೆಲ್ಲೋ ಏನೇನೊ ಟ್ವಿಸ್ಟ್ ಕೊಡುತ್ತಾ ಊರಿನ ಸಮಗ್ರತೆಯನ್ನು ಒಳಗೊಳ್ಳುತ್ತಾ ದೇಸೀ ಕಥೆಗಳಾಗಿ ಹೊರಹೊಮ್ಮಿ ಮೋಹಕವಾಗಿ ಸೆರೆ ಹಿಡಿಯುತ್ತವೆ.
ಅರುಣ್ ಪ್ರಸಾದ್ ನಮ್ಮ ನಡುವಿನ ಅತ್ಯುತ್ತಮ ಕಥೆಗಾರರು. ತಾಜಾ ತಾಜಾ ಕಥೆಗಳು ಸೂಕ್ಷ್ಮ ದರ್ಶಿತ್ವದ ಕಥೆಗಳೂ ಆಗಿವೆ. ಅರುಣ್ ಅವರ ಕಥೆಗಳ ಮೊದಲ ಓದುಗನಾಗಲು ಅವಕಾಶ ಮಾಡಿಕೊಟ್ಟದ್ದಕ್ಕಾಗಿ ಅವರಿಗೆ ನಾನು ಋಣಿಯಾಗಿದ್ದೇನೆ. ಅರುಣ್ ಅವರಿಗೆ ಕಥನ ಕಲೆಗೆ ಪ್ರೀತಿಯ ಶುಭ ಸುಪ್ರಭಾತವನ್ನು ಕೋರುತ್ತೇನೆ.
ಅರವಿಂದ ಚೊಕ್ಕಾಡಿ
ಮೂಡುಬಿದಿರೆ
24 ನೆಯ ಜುಲೈ 2021
Comments
Post a Comment