#ನಾನು_ಮೊದಲ_ಬಾರಿಗೆ_ಜೋಗ_ಜಲಪಾತ_ನೋಡಿದ್ದು_1977
#ಆ_ವರ್ಷ_ಲಿಂಗನಮಕ್ಕಿ_ಅಣೆಕಟ್ಟಿನ_ಎಲ್ಲಾ_ಕ್ರಸ್ಟ್_ಗೇಟ್ಗಳನ್ನು
#ತೆರೆದು_ಅಗಾಧ_ನೀರನ್ನು_ಹೊರ_ಬಿಡಲಾಗಿತ್ತು
#ಎಲ್_ಬಿ_ಕಾಲೇಜಿನ_ಬ್ಯಾಡ್ಮಿಂಟನ್_ತಾರೆ_ನಮ್ಮೂರಿನ
#ಗಣಪತಿಶೇಟ್_ನಮಗೆ_ಜೋಗ್_ಫಾಲ್ಸ್_ತೋರಿಸಿದ_ಮಿತ್ರ.
#jogfalls #linganamakki #siddapura #ಸಾಗರ್ #shimoga
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಹರಿಯುವ ಶರಾವತಿ ನದಿ, ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಗೇರುಸೊಪ್ಪ ಕೊಳ್ಳದಲ್ಲಿ ಜೋಗ್ ಜಲಪಾತವಾಗಿ ಧಮ್ಮಿಕ್ಕುತ್ತದೆ ಬೇರೆ ತಾಲೂಕಿನ ಜನ ಸಾಗರ ಸಿದ್ದಾಪುರ ತಾಲೂಕಿನ ಎಲ್ಲರೂ ಜೋಗ ಜಲಪಾತ ನೋಡಿದ್ದಾರೆಂದು ಭಾವಿಸುತ್ತಾರೆ ಆದರೆ ಸಮೀಪದವರು ಈ ಜಲಪಾತ ನೋಡದೇ ಇರುವವರು ಅನೇಕರಿದ್ದಾರೆ, ನಾನು ನನ್ನ 15 ನೇ ವಯಸ್ಸಿನ ತನಕ ಜೋಗ ಜಲಪಾತ ನೋಡಿರಲಿಲ್ಲ.
ನಾನು 8 ನೇ ತರಗತಿಗೆ ಸಾಗರ ಮುನ್ಸಿಪ್ ಹೈಸ್ಕೂಲ್ ಸೇರಿದಾಗ ನಿತ್ಯ ಬೆಳಿಗ್ಗೆ ರೈಲಿನಲ್ಲಿ ಸಾಗರಕ್ಕೆ ಹೋಗಿ ಕ್ಲಾಸ್ ಮುಗಿಸಿ ಸಂಜೆ ರೈಲಿನಲ್ಲಿ ವಾಪಾಸು ಬರುವ ಅನೇಕ ನಮ್ಮ ಊರಿನ ವಿದ್ಯಾರ್ಥಿ ವೃಂದದೊಂದಿಗೆ ನನ್ನ ಪಯಣ ಇದು.
ಆಗ ಸಾಗರದ ಲಾಲ್ ಬಹದ್ದೂರ್ ಶಾಸ್ತ್ರೀ ಕಾಲೇಜಿನಲ್ಲಿ ಪದವಿ ತರಗತಿ ವಿದ್ಯಾರ್ಥಿ ಆಗಿದ್ದ ಆನಂದಪುರಂನ ಗಣಪತಿ ಶೇಟ್ ಬಾಲ್ ಬ್ಯಾಡ್ಮಿಂಟನ್ ಆಟದಲ್ಲಿ ಹೀರೋ ಆಗಿದ್ದರು, ಅವರೇ ರೈಲಿನ ನಮ್ಮ ತಂಡದ ನಾಯಕರು.
ಗಣಪತಿ ಶೇಟ್ ಸದಾ ಹಸನ್ಮುಖಿ ಹಿಪ್ಪಿ ಕ್ರಾಪ್, ಬೆಲ್ ಬಾಟಮ್ ಪ್ಯಾಂಟ್ ಕೈಯಲ್ಲಿ ಬ್ಯಾಟ್ ಹಿಡಿದ ಕ್ರಿಯಾಶೀಲ ನಾಯಕ ನಮಗೆ ಮಾತು ಮಾತಿಗೂ ತಮಾಷೆ ಅವರಿದ್ದಲ್ಲಿ ನಗು ನಗೂ...
1977ರಲ್ಲಿ ಲಿಂಗನಮಕ್ಕಿ ಆಣೆ ಕಟ್ಟು ತುಂಬಿ ಎಲ್ಲಾ ಕ್ರೆಸ್ಟಗೇಟ್ ತೆರೆದಿದ್ದ ಸುದ್ದಿ ಅಂದಿನ ಪ್ರಜಾವಾಣಿ ದಿನ ಪತ್ರಿಕೆಯ ಮುಖ ಪುಟದಲ್ಲಿ ಚಿತ್ರ ಸಮೇತ ಸುದ್ದಿ ಪ್ರಕಟವಾಗಿದ್ದರಿಂದ ನಿತ್ಯ ರೈಲಿನಲ್ಲಿ ಜೋಗ ಜಲಪಾತ ವೀಕ್ಷಣೆಗೆ ಬರುವ ಪ್ರವಾಸಿಗರ ಸಂಖ್ಯೆ ಜಾಸ್ತಿ ಆಗಿತ್ತು. ಆಗ ವಿದೇಶಿ ಪ್ರವಾಸಿಗರೂ ಜಾಸ್ತಿ,#Freedom_at_midnight ಪುಸ್ತಕ ಹೆಚ್ಚಿನ ವಿದೇಶಿ ಪ್ರವಾಸಿಗರು ಪ್ರಯಾಣದಲ್ಲಿ ತಪ್ಪದೇ ಓದುತ್ತಿದ್ದರು ಮತ್ತು ಆಗ ಹಿಪ್ಪಿ ಸಂಸ್ಕೃತಿ ಹೆಚ್ಚು ಪ್ರಸಿದ್ಧಿ ಆಗಿದ್ದರಿಂದ ಅವರ ವೇಷ ಭೂಷಣ ಬಗಲಲ್ಲಿ ಗಿಟಾರ್ ಕೈಯಲ್ಲಿ ಸಿಗಾರ್ ಇರುತ್ತಿತ್ತು.
ಇಂತಹ ದಿನದಲ್ಲೇ ನಮ್ಮ ನಾಯಕ ಗಣಪತಿ ಶೇಟ್ ಜೋಗ್ ಜಲಪಾತ ನೋಡುವ ಒಂದು ದಿನದ ಪ್ರವಾಸದ ಪ್ಲಾನ್ ಮಾಡಿದರು.
ಎಲ್ಲರೂ ಅವರವರ ಮನೆಯಲ್ಲಿ ಅನುಮತಿ ಪಡೆದು ಬರಬೇಕು ತಮ್ಮ ಮಧ್ಯಾಹ್ನದ ಊಟದ ಡಬ್ಬಿ ಕಡ್ಡಾಯವಾಗಿ ತರಬೇಕು ಎಂದು ತಿಳಿಸಿದರು ನಮ್ಮ ಒಂದು ದಿನದ ಟ್ರಿಪ್ ವಿವರ ಆನಂದಪುರಂನಲ್ಲಿ ರೈಲಿನಲ್ಲಿ ಕುಳಿತುಕೊಳ್ಳುವ ನಾವು ಸಾಗರದಲ್ಲಿ ಇಳಿದು ಬಸ್ಸಿನಲ್ಲಿ ಜೋಗ ತಲುಪಿ ಅಲ್ಲಿ ಪ್ರವೇಶದ ಪಾಸ್ ಪಡೆದು ಮಹಾತ್ಮ ಗಾಂಧಿ ಪವರ್ ಹೌಸ್ ಗೆ ಟ್ರಾಲಿನಲ್ಲಿ ಇಳಿಯುವುದು ಅಲ್ಲಿ ವಿದ್ಯುತ್ ಉತ್ಪಾದನೆ ಮಾಡುವ ಟರ್ಬೈನ್ ಗಳನ್ನು ನೋಡಿ ನಂತರ ಜೋಗ್ ಜಲಪಾತ ತಲುಪಿ ಅದನ್ನು ವೀಕ್ಷಿಸುವುದು.
ಅಲ್ಲಿಂದ ಲಿಂಗನಮಕ್ಕಿಗೆ ಹೋಗಿ ಲಿಂಗನಮಕ್ಕಿ ಡ್ಯಾಮ್ ಪೂರ್ತಿ ನೋಡಿ ಸಾಗರಕ್ಕೆ ವಾಪಸ್ ಬಂದು ಸಂಜೆ ರೈಲಿನಲ್ಲಿ ಊರಿಗೆ ವಾಪಸ್ ಆಗುವುದು.
ಈ ಪ್ರವಾಸದ ವೆಚ್ಚ ತಲಾ 10 ರೂಪಾಯಿ ಪಾವತಿಸಬೇಕು ಈ ಹಣದಲ್ಲಿ ಸಾಗರದಿಂದ ಹೊರಟು ಜೋಗ ಲಿಂಗನಮಕ್ಕಿ ನೋಡಿ ಸಾಗರಕ್ಕೆ ವಾಪಸ್ ಆಗುವ ವಾಹನದ ಬಸ್ ಚಾರ್ಜ್, ಪ್ರವೇಶದ ಪಾಸ್ ಮತ್ತು ಊಟ ಅಥವಾ ಉಪಹಾರ ಎಂದು ನಿಗದಿ ಮಾಡಿದ್ದರು.
ಅವತ್ತು ಬೆಳಿಗ್ಗೆ ಆನಂದಪುರದಿಂದ ಸುಮಾರು 15 ಜನರ ನಮ್ಮ ತಂಡ ರೈಲಿಗೆ ಹತ್ತಿ ಮೊದಲು ಸಾಗರ ರೈಲು ನಿಲ್ದಾಣ ತಲುಪುವ ಮೊದಲು ಗಣಪತಿ ಶೇಟ್ ಟಿಟಿ ಅವರಲ್ಲಿ ವಿನಂತಿಸಿ ನಾವೆಲ್ಲರೂ ಟಿಕೆಟ್ ಇಲ್ಲದೆಯೂ ತಾಳಗುಪ್ಪ ರೈಲ್ವೆ ಸ್ಟೇಷನ್ ವರೆಗೆ ಪ್ರಯಾಣಿಸಲು ಅವಕಾಶ ಪಡೆದರು.
ಅಲ್ಲಿಂದ ಬಸ್ಸಿನಲ್ಲಿ ಜೋಗ್ ಬಸ್ ನಿಲ್ದಾಣ ತಲುಪಿದೆವು, ಅಲ್ಲಿ ಕೆಪಿಸಿ ಕಚೇರಿಯಲ್ಲಿ ಪಾಸ್ ಪಡೆದು ಜೋಗ್ ಬಸ್ ನಿಲ್ದಾಣದ ಎದುರಿನ ಮಹಾತ್ಮ ಗಾಂಧಿ ಪವರ್ ಹೌಸ್ ನೋಡಲು ಅಲ್ಲಿನ ಮುಖ್ಯ ದ್ವಾರಕ್ಕೆ ಹೋಗಿ ಸಾಲಾಗಿ ನಿಂತು ಟಿಕೆಟ್ ಪಡೆದು ಟ್ರಾಲಿಯಲ್ಲಿ ಕುಳಿತು ಪವರ್ ಹೌಸಿನ ತಳ ತಲುಪಿದೆವು.
ಈ ಟ್ರಾಲಿ ಪಯಣದ ಅನುಭವದ ಥ್ರಿಲ್ಲಿಂಗ್ ಅನುಭವಿಸಿದವರಿಗೆ ಗೊತ್ತು.
ಅಲ್ಲಿ ವಿದ್ಯುತ್ ಉತ್ಪಾದನೆ ಆಗುವ ಬೃಹತ್ ಯಂತ್ರಗಳಾದ ಟರ್ಬೈನ್ ನೋಡಿದೆವು ಅಲ್ಲಿನ ಬೃಹತ್ ಕಟ್ಟಡ ಅಲ್ಲಿ ಟರ್ಬೈನ್ ಉಂಟು ಮಾಡುವ ಅಸಾಧ್ಯ ಶಬ್ದ, ಟರ್ಬೈನ ತಿರುಗುವ ಕಂಪನ ಭಯ ಮತ್ತು ಆಶ್ಚಯ೯ ತರಿಸಿತ್ತು.
ಅಲ್ಲಿಂದ ಪುನಃ ಟ್ರಾಲಿನಲ್ಲಿ ಮೇಲಕ್ಕೆ ಬಂದದ್ದು ಒಂದು ಅದ್ಭುತವಾದ ಅನುಭವ.
ಅಲ್ಲಿಂದ ತಕ್ಷಣ ಬಸ್ಸಲ್ಲಿ ಹತ್ತಿ ಜೋಗ್ ಜಲಪಾತ ನೋಡಲು ಹೋದೆವು, ಅವತ್ತು ಆನಂದಪುರದಿಂದ ಶುರುವಾಗಿದ್ದ ನಮ್ಮ ಪ್ರಯಾಣದ ಮಳೆ ಸತತವಾಗಿ ಬೀಳುತ್ತಲೇ ಇತ್ತು ನಮ್ಮ ದೊಡ್ಡ ಛತ್ರಿಗಳು ನಮ್ಮನ್ನ ಮಳೆಯಿಂದ ರಕ್ಷಣೆ ಮಾಡಲಾಗದೇ ಒದ್ದೆ ಆಗಿದ್ದೆವು.
ಆಗಿನ ಬಸ್ಸಿನ ಕಿಟಕಿಗಳಿಗೆ ಆಗ ಮಳೆ ನೀರಿನಿಂದ ರಕ್ಷಿಸಿಕೊಳ್ಳಲು ಉದ್ದದ ಟಾರ್ಪಲ್ ಇರುತ್ತಿತ್ತು, ಮಳೆಗಾಲ ಆದ್ದರಿಂದ ಆ ಟಾರ್ಪಾಲ್ ತೆಗೆಯುತ್ತಿರಲಿಲ್ಲ ಆದ್ದರಿಂದ ಬಸ್ಸಿನೊಳಗೆ ಕತ್ತಲು, ಬಸ್ಸಿನ ಒಳಗಿನ ಲೈಟ್ ಸದಾ ಉರಿಯುತ್ತಲೇ ಇರುತ್ತಿತ್ತು, ಬಸ್ ಜಲಪಾತದ ಸಮೀಪದ ಘಾಟಿನಲ್ಲಿ ಇಳಿಯುತ್ತಾ ಜೋಗ್ ಜಲಪಾತದ ಎದುರಿಗೆ ಬರುವಾಗ ಡ್ರೈವರ್ ಎದುರಿನ ವಿಂಡ್ ಶೀಲ್ಡ್ ನಿಂದ ಜೋಗ ಜಲಪಾತ ಕೆಲವು ತಿರುವುಗಳಲ್ಲಿ ದರ್ಶನ ನೀಡುತ್ತಿದ್ದ ಜಲಪಾತದ ದೃಶ್ಯ ಬಾಲಕರಾದ ನಮಗೆ ಆಶ್ಚರ್ಯ ಮತ್ತು ಭಯ ಉಂಟು ಮಾಡಿತು.
ನನ್ನ ಜೀವಮಾನದಲ್ಲಿ ಅಷ್ಟು ದೊಡ್ಡ ಕಣಿವೆ, ಶಿಲಾ ರಚನೆ ಮತ್ತು ಅಗಾದ ನೀರಿನ ಜಲಪಾತ ಅದೇ ಮೊದಲ ಬಾರಿಗೆ ನಾನು ನೋಡಿದ್ದು.
ನಂತರ ಜೋಗ್ ಜಲಪಾತವನ್ನು ವೀಕ್ಷಣೆ ಮಾಡಿ ತಕ್ಷಣ ಸಿಕ್ಕಿದ ಬಸ್ ಹತ್ತಿ ಕಾರ್ಗಲ್ ತಲುಪಿ ಅಲ್ಲಿಂದ ನಡೆದುಕೊಂಡು ಬಳಸು ದಾರಿಯಲ್ಲಿ ಲಿಂಗನಮಕ್ಕಿ ಆಣೆಕಟ್ಟಿಗೆ ಹೊರಟಿವು.
ದಾರಿ ಮಧ್ಯದಲ್ಲಿ ಲಿಂಗನಮಕ್ಕಿ ಡ್ಯಾಮ್ ನಿಂದ ಹೈಡ್ರೋ ಎಲೆಕ್ಟ್ರಿಕ್ ಪ್ರಾಜೆಕ್ಟ್ ಗೆ ಹೋಗುವ ಕಾಲುವೆಗಳನ್ನ ನೋಡುತ್ತಾ ಆ ಕಾಲುವೆಯ ಒಳಗೆ ರಭಸದಿಂದ ಹರಿಯುವ ನೀರುಗಳನ್ನ ನೋಡುತ್ತಾ ಲಿಂಗನಮಕ್ಕಿ ತಲುಪಿದೆವು.
ಅಲ್ಲಿ ಪಾಸ್ ತೋರಿಸಿ ಆಣೆಕಟ್ಟಿನ ಮೇಲೆ ನಡೆಯುತ್ತಾ ಕ್ರೆಸ್ಟ್ ಗೇಟ್ ಗಳನ್ನು ತೆಗೆದಿದ್ದು ನೋಡುತ್ತಾ ಅದರಿಂದ ರಬಸದಿಂದ ಹರಿಯುವ ನೀರಿನ ಹರಿವು ನೋಡುತ್ತಾ, ಬಲಭಾಗದಲ್ಲಿ ವಿಶಾಲವಾದ ಸಮುದ್ರೋಪಾದಿಯಲ್ಲಿ ನಿಂತ ಶರಾವತಿ ನೀರನ್ನು ನೋಡುತ್ತಾ ಡ್ಯಾಮಿನ ಇನ್ನೊಂದು ಬಾಗ ಮಳೆಯಲ್ಲೇ ತಲುಪಿದೆವು.
ಅಲ್ಲಿಗೆ ತಲುಪಿದಾಗ ಕೆಪಿಸಿಯ ಲಾರಿ ಒಂದು ಬರುತ್ತಿತ್ತು ಅದನ್ನು ಗಣಪತಿ ಶೇಟ್ ಕೈತೋರಿಸಿ ನಿಲ್ಲಿಸಿ "ನಾವು ವಿದ್ಯಾರ್ಥಿಗಳು ಆದಷ್ಟು ಬೇಗ ತಾಳಗುಪ್ಪ ತಲುಪಬೇಕು ನಮ್ಮ ರೈಲು ತಪ್ಪಿದರೆ ಆನಂದಪುರ ತಲುಪುವುದು ಕಷ್ಟ" ಎಂದು ವಿನಂತಿಸಿದರು, ಆಗ ಆ ಡ್ರೈವರ್ ಒಪ್ಪಿ ನಮ್ಮನ್ನೆಲ್ಲಾ ಲಾರಿ ಹಿಂಬಾಗದಲ್ಲಿ ಕೂರಿಸಿಕೊಂಡು ಚೈನಾ ಗೇಟ್ ಸಮೀಪ ತಂದುಬಿಟ್ಟರು.
ಈಗ ಬ್ಯಾಡ್ಮಿಂಟನ್ ತಾರೆ ಆನಂದಪುರಂ ಗಣಪತಿ ಶೇಟ್ ಇಲ್ಲ ಅವತ್ತು ಗಣಪತಿ ಶೇಟ್ ನಮ್ಮೆಲ್ಲರಿಗೆ ಜೋಗ ಜಲಪಾತ ತೋರಿಸಿದ್ದು ಮಾತ್ರ ಮರೆಯಲಾರದ ಸಿಹಿಯಾದ ಸವಿಯಾದ ಅನುಭವ.
Comments
Post a Comment