#ಹುಲಿ_ಬತ್ತ_ಹೋಯಿತು
#ಈಗ_ಹುಲಿ_ರೂಪದಲ್ಲಿ_ಮೀಟರ್_ಬಡ್ಡಿ_ಊರಿಗೆ_ಬಂತು!?
ಐವತ್ತು ವರ್ಷದ ಹಿಂದೆ ಮಲೆನಾಡ ಹಳ್ಳಿಗಳಲ್ಲಿ ರೂಪಾಯಿ ನೋಟು ಅಷ್ಟಾಗಿ ಚಲಾವಣಿ ಇರಲಿಲ್ಲ ಇದಕ್ಕೆ ಪರ್ಯಾಯವಾಗಿ ತಾವು ಬೆಳೆದ ಬತ್ತವನ್ನೆ ವಿನಿಮಯವಾಗಿ ಬಳಸುತ್ತಿದ್ದರು.
ವೈದ್ಯರಿಗೆ, ಕ್ಷೌರಿಕರಿಗೆ, ಕುಲುಮೆಯರಿಗೆ, ವೀಳ್ಯದೆಲೆ ಮತ್ತು ಮೀನು ಮಾರಟಗಾರಿಗೆ ವರ್ಷ ವರ್ಷ ಬತ್ತ ನೀಡುವ (ವರ್ತನೆ ಬತ್ತ) ಪದ್ಧತಿ ಇತ್ತು.
ಇದೇ ರೀತಿ ಬರ - ನೆರೆ ಬಂದು ಪಸಲು ನಷ್ಟವಾದಾಗ ಊಟಕ್ಕೂ ತಾತ್ವಾರ ಆದಾಗ ಮಲೆನಾಡಿನ ರೈತರು ದೊಡ್ಡ ರೈತರ ಮನೆಯಿಂದ ಬತ್ತ ಸಾಲವಾಗಿ ತರುತ್ತಿದ್ದರು.
ಸಾಮಾನ್ಯವಾಗಿ ಏಪ್ರಿಲ್ ಮೇ ನಂತರ ಪಡೆದ ಬತ್ತ ಡಿಸೆಂಬರ್ ಒಳಗೆ ಸುಗ್ಗಿ ಕಾಲದಲ್ಲೇ ಅಂದರೆ ಆರು ತಿಂಗಳಿಗೆ ವಾಪಾಸ್ ಮಾಡುವ ವಾಯಿದೆ ಆಗಿರುತ್ತಿತ್ತು.
ಒಂದು ಕ್ವಿಂಟಾಲ್ ಬತ್ತಕ್ಕೆ ಒ0ದೂವರೆ ಕ್ವಿಂಟಾಲ್ ಬತ್ತ ವಾಪಾಸ್ ನೀಡುವ ಈ ಸಾಲದ ಬತ್ತಕ್ಕೆ #ಹುಲಿ_ಬತ್ತ ಎಂಬ ಹೆಸರಿತ್ತು.
ಆರು ತಿಂಗಳ ಅವಧಿಯಲ್ಲಿ ಶೇಕಡ 100 % ವಾಷಿ೯ಕ ಬಡ್ಡಿಯ ಹುಲಿ ಬತ್ತ ಪಡೆದವ ಕೈ ಸೋತು ಬಡವನಾದರೆ, ಹುಲಿ ಬತ್ತ ನೀಡಿದ ದಣಿ ಬತ್ತ ಬೆಳೆಯುವ ಕಷ್ಟ ನಷ್ಟ ಇಲ್ಲದೆ ನೀಡಿದ ಬತ್ತ ವರ್ಷವಷ೯ ದ್ವಿಗುಣವಾಗಿ ಶ್ರೀಮಂತನಾಗುತ್ತಲೇ ಸಾಗುತ್ತಾನೆ.
ಆ ವರ್ಷ ವಾಪಾಸು ನೀಡದಿದ್ದರೆ ಹುಲಿ ಬಡ್ಡಿಯ ಬತ್ತಕ್ಕೂ ಹುಲಿ ಸೇರಿಸಿ ಕೊಡಬೇಕು ಉದಾಹರಣೆ 10 ಚೀಲ ಬತ್ತಕ್ಕೆ 5 ಚೀಲ ಬಡ್ಡಿ ಹುಲಿ ಬತ್ತ ನೀಡಲಾಗದಿದ್ದರೆ ಮುಂದಿನ ವರ್ಷ 15 ಚೀಲ ಬತ್ತಕ್ಕೆ ಏಳುವರೆ ಚೀಲ ಬತ್ತ ಸೇರಿಸಿ ಒಟ್ಟು ಇಪ್ಪತ್ತೆರುಡು ವರೆ ಚೀಲ ಬತ್ತ ನೀಡಬೇಕಿತ್ತು, ಈ ರೀತಿ ನೂರಾರು ಚೀಲ ಹುಲಿ ಬತ್ತ ಆಗಿ ಸಾಲ ಪಡೆದವ ತನ್ನ ಜಮೀನು ಮಾಲಿಕರಿಗೆ ಬಿಟ್ಟುಕೊಟ್ಟು ಬಿಕಾರಿ ಆದ ಉದಾಹರಣೆ ನೂರಾರಿದೆ.
ಕೆಳ ಮಧ್ಯಮ ವರ್ಗದಲ್ಲಿ ಮದುವೆ ಸಂಬಂದ ಮಾಡುವಾಗ ಈ ಮಾತು ಕೇಳಿ ಬರುತ್ತಿತ್ತು " ಇದ್ದಿದರಲ್ಲಿ ಆರಾಮಿದ್ದಾರೆ ಹುಲಿ-ಗಿಲಿ ತರೋ ಪ್ರಮೇಯ ಇಲ್ಲ" ಅಂದರೆ ಸಂಬಂದ ಮಾಡಲು ತೊಂದರೆ ಇಲ್ಲ ಅಂತ.
ಈ ವರ್ಷದ ನಿರಂತರ ಮಳೆ ಬರುವಾಗ ಇದೆಲ್ಲ ನೆನಪಾಯಿತು, ಇಂತಹ ಕಾಲದಲ್ಲೇ ವರ್ಷದ ಕೂಳಿಗಾಗಿ ಹುಲಿ ಬಾಯಿ ತೆರೆಯುತ್ತಿತ್ತು ಈಗ ಕಾಲ ಬದಲಾಗಿದೆ ಹುಲಿ ಬತ್ತ ನೀಡುತ್ತಿದ್ದ ಮನಸ್ಸಿನವರು ಈಗ ಮೀಟರ್ ಬಡ್ಡಿ ಕುಳಗಳಾಗಿದ್ದಾರೆ.
ಹುಲಿ ಬತ್ತ ಹೋದರೂ ಅದು ಮೀಟರ್ ಬಡ್ಡಿ ರೂಪದಲ್ಲಿ ಹುಲಿ ಮಲೆನಾಡಿನಲ್ಲಿ ಆಕಳಿಸುತ್ತಿದೆ
Comments
Post a Comment