ಹಳ್ಳಿಗಳಲ್ಲಿ ಒ0ದು ಕಾಲದಲ್ಲಿ ಕೋಳಿ ಸಾಕಾಣಿಕೆ ಆರ್ಥಿಕ ಸ್ವಾವಲಂಬನೆಗೆ ಕಾರಣ ಆಗಿತ್ತು ಈಗ ಪೌಲ್ಟ್ರಿ ಉದ್ಯಮದ ವೇಗದಲ್ಲಿ ಹಳ್ಳಿಯ ಮನೆ ಮನೆಯ ಕೋಳಿ ಗೂಡು ಅಪರೂಪವಾಗಿದೆ
#ಒಂದು_ಕಾಲದಲ್ಲಿ_ಕುಟುಂಬದ_ಆರ್ಥಿಕ_ಬದ್ರತೆಗೆ_ಉರುಗೋಲಾಗಿತ್ತು.
#ಅದುನಿಕ_ಡೈರಿ_ಪೌಲ್ಟ್ರಿ_ಕೈಗಾರಿಕೆಗಳಾದ್ದರಿಂದ_ನಳಿಸಿದೆ.
#ಶಾಲಾಮಕ್ಕಳಿಗೆ_ಮೊಟ್ಟೆ_ಬೇಕಾ_ಎಂಬ_ಚರ್ಚೆ_ಸಂದರ್ಭದಲ್ಲಿ_ಹಳ್ಳಿಗಳ_ಕೋಳಿಕಥೆ.
ಆಗೆಲ್ಲ ಅಂದರೆ ಬಹಳ ದಿನ ಆಗಿಲ್ಲ, 30 ವರ್ಷದ ಹಿಂದೆ ಈ ಪಾಟಿ ಕೋಳಿ ಮಾಂಸದ ಪೋಲ್ಟ್ರಿ ಉದ್ಯಮ ಬೆಳೆದಿರಲಿಲ್ಲ, ಹಳ್ಳಿಗಳ ದೈವಗಳು ಬೂತಗಳು ಪಾರಂ ಕೋಳಿ ಬಲಿ ಒಪ್ಪಿಕೊಂಡಿರದ ಕಾಲದಲ್ಲಿ ಹಳ್ಳಿಯ ಪ್ರತಿ ಮನೆಯಲ್ಲೂ ಕೋಳಿ ಗೂಡು ಇರುತ್ತಿತ್ತು ಅದರಲ್ಲಿ ಕನಿಷ್ಟ ಹತ್ತಿಪ್ಪತ್ತು ಕೋಳಿಗಳು ಇರುತ್ತಿದ್ದವು.
ಮನೆಯ ಅತ್ಯಂತ ಕಿರಿಯ ವಯಸ್ಸಿನ ಸದಸ್ಯನಿಗೆ ಬೆಳಿಗ್ಗೆ ಕೋಳಿ ಗೂಡಿನ ಬಾಗಿಲು ತೆಗದು ಕೋಳಿ ಹೊರಬಿಡುವುದು ಅವು ಸೂರ್ಯ ಮುಳುಗುವ ಸಮಯದಲ್ಲಿ ಹೊಟ್ಟೆ ತುಂಬಿಸಿಕೊಂಡು ಗೂಡಿಗೆ ಮರಳುವಾಗ ಗೂಡಿಗೆ ಕೂಡಿ ಬಾಗಿಲು ಭದ್ರ ಮಾಡುವ ಕೆಲಸ.
ಕೋಳಿ ಗೂಡಿನಲ್ಲಿ ಮೊಟ್ಟೆ ಸಂಗ್ರಹಿಸುವುದು, ಮೊಟ್ಟಿ ಮರಿ ಮಾಡಲು ಕಾವು ನೀಡಲು ಕುಳಿತ ಕೋಳಿ ಆರೈಕೆಗಳು ಮಾಡ ಬೇಕಿತ್ತು.
ಹತ್ತಾರು ಹೆಣ್ಣು ಕೋಳಿಗೆ ಒಂದೆರೆಡು ಗಂಡು ಹುಂಜಾ ಇರುತ್ತಿತ್ತು, ಇದರ ಮಧ್ಯದಲ್ಲಿ ದೈವಗಳಿಗೆ, ಬೂತಗಳಿಗೆ ಮೀಸಲಿಟ್ಟ ಹರಕೆ ಕೋಳಿಗಳು ಇರುತ್ತಿದ್ದವು.
ಕೋಳಿ ಮೊಟ್ಟೆ ತಿನ್ನಲು ಬರುವ ನಾಗರ ಹಾವು, ಕೋಳಿ ಮರಿ ಎತ್ತಿಕೊಂಡು ಹೋಗುವ ಗಿಡುಗಗಳು, ಇಡೀ ದೊಡ್ಡ ಕೋಳಿಯನ್ನೆ ಕಬಳಿಸುವ ಕಾಡಿನ ನರಿಗಳು ಮತ್ತು ಕೋಳಿ ಮಾಂಸ ಪ್ರಿಯ ಕೋಳಿ ಕಳ್ಳರ ಕಾಟವೂ ಇರುತ್ತಿತ್ತು.
ಅವಿಭಕ್ತ ಕುಟುಂಬದಲ್ಲಿ ಆಯಾ ಸೊಸೆಯಿಂದರ ಕೋಳಿಗಳು ಅವಿಭಕ್ತ ಕೋಳಿ ಗೂಡಿನಲ್ಲಿ ಇರುತ್ತಿದ್ದವು ಮತ್ತು ಅವರವರ ಅಂದು ಬಂದುಗಳು ಬಂದಾಗ ಅವರ ಕೋಳಿ ಪಲ್ಯ ಆಗುತ್ತಿತ್ತು. ಸಾಕು ಕೋಳಿಗಳಿಂದ ಕುಟುಂಬದಲ್ಲಿ ವ್ಯಾಜ್ಯಗಳು, ಇರುಸು ಮುರುಸುಗಳಾಗಿ ಕುಟುಂಬಗಳಲ್ಲಿ ಹಿಸ್ಸೆಗಳಾಗಿದ ಉಧಾಹರಣೆಗಳಿದೆ.
ಹಾವು ಕಚ್ಚಿದರೆ ವಿಷ ತೆಗೆಯಲು ಬೇಕಾದ ಕಪ್ಪು ಬಣ್ಣದ ಒಂದೆರೆಡು ಕೋಳಿಗಳು, ಮಾಟ ಮಂತ್ರ ತೆಗೆಯಲು ಮಂತ್ರವಾದಿಗಳಿಗೆ ಬೇಕಾದ ಕೆಂಪು ಬಣ್ಣದ ಹುಂಜಾಗಳಿಗೂ ಗೂಡಿನಲ್ಲಿ ಸ್ಥಾನವಿರುತ್ತಿತ್ತು.
ಸಮ ಪಾಲಿನ ಕೋಳಿಗಳದ್ದೆ ಬೇರೆ ಕಥೆ, ವೀಳ್ಯದ ಎಲೆ ಮತ್ತು ಮೀನು ವರ್ಷ ಪೂರ್ತಿ ವಾರ ವಾರ ನೀಡಿ ಅದರ ಬೆಲೆಯ ಬತ್ತ ವರ್ತನೆಗೆ ಪಡೆಯುತ್ತಿದ್ದ ಬಾಯಮ್ಮಗಳು ಹಾಗೂ ಬೂಬಮ್ಮಗಳು ಎಲ್ಲಿಂದಲೋ ಕೋಳಿ ಮರಿ (ವಿಶಿಷ್ಟ ಬಣ್ಣ ಮತ್ತು ಜಾತಿಯದ್ದು ) ಸಾಕಲು ತಂದು ಕೊಡುತ್ತಿದ್ದರು ಅದರ ಮೊಟ್ಟೆಯಿಂದ ಬಂದ ಮರಿಗಳು ಅರ್ಧ ಸಾಕಿದವರಿಗೆ ಉಳಿದ ಅದ೯ ಸಂಖ್ಯೆ ಮರಿ ಬಾಯಮ್ಮ ಅಥವ ಬೂಬಮ್ಮರದ್ದು.
ಆಗಾಗ ಕಾಡುವ ಕೋಳಿ ಕಾಯಿಲೆಯಿಂದ ಕೋಳಿ ಗೂಡು ಗೂಡೇ ಖಾಲಿ ಆಗುತ್ತಿದ್ದಾಗ ಮನೆಯ ಗೃಹಿಣಿಯರ ಪರದಾಟ ನೋಡುವಂತಿಲ್ಲ, ಆಗಾಗ್ಗೆ ಕೋಳಿ ಹೇನು ಆಗಿ ಅದರಿಂದ ಆಗುತ್ತಿದ್ದ ಪೀಡನೆಗಳು ಹೀಗೆ ಒಂದೇ ಎರಡೇ? ಸಮಸ್ಯೆಗಳು.
ಮೊದಲೆಲ್ಲ ಬತ್ತ ಒನಕೆಯ ಒರಳಲ್ಲಿ ಕುಟ್ಟಿ ಅಕ್ಕಿ ಮಾಡಿ ಹಸನು ಮಾಡಿದಾಗ ಉಳಿಯುತ್ತಿದ್ದ ನುಚ್ಚು, ನೆಲ್ಲಕ್ಕಿ ಕೋಳಿ ಮತ್ತು ಎಮ್ಮೆ ದನಗಳಿಗೆ ಆಹಾರ ಆಗುತ್ತಿತ್ತು ಕಾಲ ಬದಲಾದಂತೆ ಅಕ್ಕಿ ಗಿರಣಿಯ ನುಚ್ಚು, ನೆಲ್ಲಕ್ಕಿ ಜೊತೆಗೆ ತೌಡು ಇವುಗಳಿಗೆ ಬಳಕೆ ಆಗಲು ಪ್ರಾರಂಬಿಸಿತು.
ಕೆಲ ವರ್ಷದ ಹಿಂದೆ ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ ಪಶು ಸಂಗೋಪನಾ ಅಧಿಕಾರಿಯೋರ್ವರು ಎಷ್ಟೋ ಲಕ್ಷ ಕೋಳಿಗಳಿಗೆ ಲಸಿಕೆ ನೀಡಿದ್ದಾಗಿ ನೀಡಿದ ಹೇಳಿಕೆ ಸಭೆಯಲ್ಲಿ ಅಲ್ಲೋಲ ಕಲ್ಲೋಲ ಆಗಿತ್ತು (ಸುಳ್ಳು ಲೆಕ್ಕ) .
ಈಗ ಪೌಲ್ಟ್ರಿ ಉದ್ದಿಮೆ ಆಗಿದೆ, ಹಳ್ಳಿಯ ಗಲ್ಲಿಗಲ್ಲಿಗಳಲ್ಲಿ ಕೋಳಿ ಮಾಂಸದ ಅಂಗಡಿ ಬಂದಿದೆ, ಕೋಳಿ ಸಾಕುವ ನಾಜೂಕಿನ ಗೃಹಿಣಿಯರು ಈಗಿಲ್ಲ, ತಂದೂರಿ ಕೋಳಿ ಗ್ರಿಲ್ ಕೋಳಿ ಅಂತ ನವೀನ ಕೋಳಿ ಪದಾರ್ಥಗಳು ಸೇರಿಕೊಂಡಿದೆ.
ಬತ್ತ ಬೆಳೆದರೆ ನಷ್ಟ ಅಂತಾಗಿದೆ, ಊಟಕ್ಕೆ ತರಹಾವಾರಿ ಅಕ್ಕಿ ಖರೀದಿ ನಡೆದಿದೆ,ಒ0ದು ಕಾಲದ ನೆಲ್ಲಕ್ಕಿ, ನುಚ್ಚು ಮತ್ತು ತೌಡು ಹೊಸ ತಲೆಮಾರಿಗೆ ಗೊತ್ತೂ ಇಲ್ಲ.
ಹಳ್ಳಿಗಳಲ್ಲಿ ಎಲ್ಲೆಂದರಲ್ಲಿ ಕೋಳಿ ಅಂಗಡಿ ತ್ಯಾಜ್ಯ ಎಸೆಯುತ್ತಾರೆ ಅದನ್ನು ತಿಂದು ಬೀದಿಯಲ್ಲಿ ಹೋಗುವವರನ್ನು ಗುರಾಯಿಸುವ ಬೀದಿ ನಾಯಿಗಳು ತಂಡ ತಂಡವಾಗಿ ಬಲಿಷ್ಟವಾಗಿ ಮಕ್ಕಳ ಮೇಲೆ ಎರಗುತ್ತಿದೆ.
Comments
Post a Comment