ಹೋಳಿಗೆ ತುಪ್ಪದ ಲಾಜಿಕ್ ಶಾಂತವೇರಿ ಗೋಪಾಲಗೌಡರು ಗಮನಿಸಿದ್ದರು ಇದನ್ನು ಕಾಗೋಡು ತಿಮ್ಮಪ್ಪರಿಂದ ಕೇಳಿದ್ದು ನನಗೆ ಪ್ರತಿ ಹಬ್ಬದಲ್ಲಿ ನನ್ನ ಸಿಬ್ಬಂದಿ ಮತ್ತು ಗೆಳೆಯರಿಗೆ ಹೋಳಿಗೆ ತುಪ್ಪದ ಉಡುಗೊರೆಗೆ ಮತ್ತು ನಮ್ಮ ಊರ ರಥೋತ್ಸವದಲ್ಲಿ ಅನ್ನ ಸಂತಪ೯ಣೆಗೆ ಹೋಳಿಗೆ ತುಪ್ಪ ಬಡಿಸಲು ಪ್ರೇರಣೆ ಆಯಿತು
ನನಗೆ ಪ್ರತಿ ವಷ೯ ದೀಪಾವಳಿಯಲ್ಲಿ ನೆನಪಾಗುವ
ಬಂಗಾರಪ್ಪನವರು ಜಾರಿಗೆ ತಂದ ಬಗರ್ ಹುಕುಂ ಮಂಜೂರು ಪತ್ರ ನನ್ನ ಗ್ರಾಮ ಪಂಚಾಯತ್ ವ್ಯಾಪ್ತಿಯ ಅನೇಕ ಹಳ್ಳಿಯಲ್ಲಿನ ಬಡ ರೈತರಿಗೆ ಭೂಮಾಲಿಕತ್ವ ತಂದ ಮೊದಲ ದೀಪಾವಳಿ ಆಗಿತ್ತು.
ಹಕ್ಕು ಪತ್ರ ಸಿಗುವ ಸಂದಭ೯ದಲ್ಲಿ ರಾಜಕೀಯ ಸ್ಥಿತ್ಯಂತರದಲ್ಲಿ ಬಂಗಾರಪ್ಪರ ಪದಚ್ಯುತಿ ಆಗಿ ಮೊಯ್ಲಿ ಮುಖ್ಯಮಂತ್ರಿ ಮತ್ತು ಗೃಹ ಮಂಡಳಿ ಅಧ್ಯಕ್ಷ ಸ್ಥಾನದಿಂದ ಕಾಗೋಡು ಮಂತ್ರಿ ಆಗಿದ್ದರು.
ರಾಜ್ಯದಲ್ಲಿ ಮೊದಲ ಬಗರ್ ಹುಕುಂ ಪತ್ರಗಳು ನಮ್ಮ ಗ್ರಾಮ ಪಂಚಾಯಿತಿಯಲ್ಲಿ ವಿತರಿಸಿದ್ದು ಇದಕ್ಕೆ ನನ್ನ ಶ್ರಮ ಕಾಗೋಡರಿಗೆ ತುಂಬಾ ಸಂತೋಷ ಉಂಟು ಮಾಡಿತ್ತು.
ಇದೇ ಸಂದರ್ಭದಲ್ಲಿ ಮಂತ್ರಿಗಳ ಜೊತೆ ನಾನು, ಬೀಮನೇರಿ ಶಿವಪ್ಪ ಮತ್ತು ತೀ.ನಾ. ಶ್ರೀನಿವಾಸ್ ಸಾಗರ ತಾಲ್ಲೂಕಿನ ಆವಿನಳ್ಳಿ ಹೋಬಳಿಯ ಪ್ರವಾಸದಲ್ಲಿ ಜೊತೆಗೆ ಇದ್ದೆವು, ದೀಪಾವಳಿಯ ಬೆಳಗಿನ ಉಪಹಾರ ಆವಿನಳ್ಳಿ ರೈಸ್ ಮಿಲ್ ಮಾಲಿಕರಾದ ಹೆಚ್.ಎಂ.ಬಸವರಾಜ್ ಗೌಡರ ಮನೆಯಲ್ಲಿ ಹೋಳಿಗೆ ಜೊತೆಗೆ ಉಪಹಾರ.
ನಂತರದ ಸಭೆಯೊಂದರಲ್ಲಿ ಕಾಗೋಡು ನನ್ನ ಹೊಗಳಿದ್ದೇ ಹೊಗಳಿದ್ದು ಕಾರಣ ನನ್ನ ಗ್ರಾಮ ಪಂಚಾಯಿತಿಯಲ್ಲಿ ಯಶಸ್ವಿ ಆಗಿ ಬಗರ್ ಹುಕುಂ ಹಕ್ಕು ಪತ್ರ ವಿತರಿಸಿದ್ದಕ್ಕೆ ಈ ಹೊಗಳಿಕೆ ನನಗೆ ನಾಚಿಕೆ ತರಿಸುತ್ತಿತ್ತು.
ಆ ಸಂದಭ೯ದಲ್ಲಿ ಕಾಗೋಡು ಶಾಂತವೇರಿ ಗೋಪಾಲಗೌಡರನ್ನ ನೆನಪಿಸಿ ಕೊಂಡರು "ಕೃಷಿ ಕಾಮಿ೯ಕರು, ಗೇಣಿ ರೈತರು ಭೂಮಿ ಹಕ್ಕು ಪಡೆಯೋ ಕಾಲ ಬರಬೇಕು ಹಾಗೆ ದೀಪಾವಳಿ ಹಬ್ಬದಲ್ಲಿ ಹೋಳಿಗೆ ಮಾಡಿ ತುಪ್ಪ ಹಾಕಿ ತಿನ್ನೋ ಕಾಲ ಬೇಕು ಅಂತಿದ್ದರು" ಅಂತ ಬೆಳಿಗ್ಗೆ ಬಸವರಾಜಗೌಡರ ಮನೆಯಲ್ಲಿಯ ಹೋಳಿಗೆ ಮತ್ತು ಬಗರ್ ಹುಕುಂ ಹಕ್ಕು ಪತ್ರ ನೀಡುತ್ತಿರುವ ಸಂದಭ೯ ಅವರು ಈ ಲಯಕ್ಕೆ ಬರಲು ಕಾರಣವಾಗಿತ್ತು.
ನಂತರ ಕಾರಿನಲ್ಲಿ ವಾಪಾಸು ಬರುವಾಗ ವಿನಂತಿಸಿದೆ ಗೋಪಾಲಗೌಡರ ಹೋಳಿಗೆ ಅಥ೯ ಏನು ಅಂತ.
ಇವತ್ತೂ ನಮ್ಮ ಶೂದ್ರರು ಸಾವಿರಾರು ರೂಪಾಯಿ ಖಚು೯ ಮಾಡಿ ಕುರಿ ಕಡಿದು ಹಬ್ಬ ಮಾಡುತ್ತಾರೆ ಆದರೆ ಸರಳವಾಗಿ ಮಾಡಬಹುದಾದ ಹೋಳಿಗೆ ಮಾಡುವ ಪ್ಲಾನಿಂಗ್ ಮಾತ್ರ ಇಲ್ಲ, ಬೇಳೆ ತಂದರೆ ಬೆಲ್ಲ ಇಲ್ಲ ಎರಡೂ ಇದ್ದರೆ ತುಪ್ಪ ಇಲ್ಲ ಎಲ್ಲಾ ಇದ್ದರು ತಯಾರಿಸುವ ಗೃಹಿಣಿಗೆ ಆಸಕ್ತಿ ಇಲ್ಲ ಇದಕ್ಕೆಲ್ಲ ಸಂಸ್ಕಾರ ಬೇಕು, ನಾಜೂಕು ಬೇಕು ಅದನ್ನು ಕಲಿತರೆಂದರೆ ಬುದ್ದಿವಂತರಾಗುತ್ತಾರೆ, ಸುಖ ಜೀವನ ಮಾಡ್ತಾರೆ ಅಂತ ಗೋಪಾಲಗೌಡರು ಇನ್ನೂ ಚೆನ್ನಾಗಿ ವಿವರಿಸುತ್ತಿದ್ದರು ಅಂದರು.
ನನ್ನ ಮನೆಯ ಹಬ್ಬದಲ್ಲೂ ಹೋಳಿಗೆ ಲಭ್ಯವಾಗುತ್ತಿರಲಿಲ್ಲ ಅದೇ ರೀತಿ ನಮ್ಮ ಸುತ್ತಮುತ್ತ ಶೂದ್ರರ ಮನೆಗಳಲ್ಲೂ ಹೋಳಿಗೆ ತುಪ್ಪ ವಿರಳವಾಗಿತ್ತು.
ಒಮ್ಮೆ ಸಾಗರದ ಮಾಜಿ ಶಾಸಕರಾದ ಎಲ್.ಟಿ.ತಿಮ್ಮಪ್ಪ ಹೆಗ್ಗೆಡೆಯವರ ಮನೇಲಿ ಹೋಳಿಗೆಯನ್ನ ತುಪ್ಪ,ಬೆಲ್ಲದ ಪಾಕ, ಸಕ್ಕರೆ ಪಾಕ, ಹಣ್ಣಿನ ರಸಾಯನಗಳ ಜೊತೆ ವಿವಿದ ರುಚಿಯಲ್ಲಿ ಹತ್ತಾರು ಹೋಳಿಗೆ ತಿಂದದ್ದು, ಕಾಗ೯ಲ್ ನ ಕಲ್ಯಾಣ ಮಂಟಪದಲ್ಲಿ ಬಿದನೂರು ಶಶಿಕಾಂತ ಜೈನರ ಮದುವೆಯಲ್ಲಿ ಹತ್ತಾರು ಹೋಳಿಗೆ ಮತ್ತು ಮಾವಿನ ಹಣ್ಣಿನ ರಸಾಯನದಲ್ಲಿ ತಿಂದದ್ದು ನೆನಪು ಈಗಲೂ ಮರೆತಿಲ್ಲ.
ಈಗ ಇದೆಲ್ಲ ನಮ್ಮಮನೇನಲ್ಲೆ ಮಾಡುವ ಕಾಲ,ಸಂಸ್ಕಾರ ಬಂದಿದೆ ಆದರೆ ಡಯಾಬಿಟೀಸ್ ತಿನ್ನದಂತೆ ಬಾಯಿ ಕಟ್ಟಿದೆ.
ಕಾಗೋಡು ಹೇಳಿದ ಗೋಪಾಲಗೌಡರ ಕಥೆ ನನಗೆ ಪ್ರತಿ ಹಬ್ಬಕ್ಕೆ ನನ್ನ ಸಿಬ್ಬಂದಿಗಳಿಗೆ ಹೋಳಿಗೆ ತುಪ್ಪ ತಪ್ಪದೇ ತಯಾರಿಸಿ ನೀಡುವ ಪದ್ಧತಿಗೆ ಕಾರಣವಾಗಿದೆ, ಹಾಗೆಯ ನಮ್ಮ ಊರಿನ ಶ್ರೀ ವರಸಿದ್ಧಿವಿನಾಯಕ ದೇವರ ಜಾತ್ರೆಯಲ್ಲಿ ರಥೋತ್ಸವದ ದಿನ ನಮ್ಮ ಕುಟುಂಬದಿಂದ ಅನ್ನದಾಸೋಹ ವ್ಯವಸ್ಥೆ ಇರುತ್ತದೆ ಅವತ್ತೂ ಬಂದ ಭಕ್ತಾದಿಗಳಿಗೆ ಹೋಳಿಗೆ ತುಪ್ಪ ಇದ್ದೇ ಇರುತ್ತದೆ ಮೂರರಿಂದ ಮೂರೂವರೆ ಸಾವಿರ ಜನ ಆಹಾರ ಸ್ವೀಕರಿಸುತ್ತಾರೆ.
Comments
Post a Comment