ಲಕ್ಷ್ಮಣ್ ಕೊಡಸೆ ನಮ್ಮ ಜಿಲ್ಲೆಯವರು ಪ್ರಜಾವಾಣಿ ಮುಖ್ಯ ವರದಿಗಾರರು, ಉಪ ಸಂಪಾದಕರಾಗಿದ್ದವರು, ನನ್ನ ಕಾದಂಬರಿ ಬೆಸ್ತರ ರಾಣಿ ಚಂಪಕಾ ಓದಿ ವಸ್ತುನಿಷ್ಟವಾಗಿ ವಿಮಶೆ೯ ಮಾಡಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ರಿಪ್ಪನ್ ಪೇಟೆ ಸಮೀಪದ ಕೊಡಸೆ ಎಂಬ ಊರಿನ ಲಕ್ಷ್ಮಣ್ ಕೊಡಸೆ ವಿದ್ಯಾವಂತರು, ಇವರ ಅನೇಕ ಪುಸ್ತಕ ಪ್ರಕಟ ಆಗಿದೆ.
ನನ್ನ ಮೊದಲ ಕಾದಂಬರಿ ಓದಿ ಪ್ರೋತ್ಸಾಹದ ನುಡಿ ಬರೆದಿದ್ದಾರೆ ಇದು ನನ್ನ ಕಾದಂಬರಿಗೊಂದು ಮುಕುಟ ಇಟ್ಟ೦ತೆ ಇದಕ್ಕಾಗಿ ನಾನು ಅವರಿಗೆ ಕೃತಜ್ಞತೆ ಅರ್ಪಿಸುತ್ತೇನೆ.
ಅವರು ಬರೆದ ಅನಿಸಿಕೆ ನಿಮಗಾಗಿ
ಅರುಣ್ ಪ್ರಸಾದ್ ಅವರ
ಬೆಸ್ತರ ರಾಣಿ ಚಂಪಕಾ
ಎಚ್.ಎಲ್.ನಾಗೇಗೌಡರು ಅಧ್ಯಯನ ಮಾಡಿ ಹೊರತಂದ `ಪ್ರವಾಸಿ ಕಂಡ ಇಂಡಿಯಾ' ಕೃತಿಯಲ್ಲಿ ಪ್ರಸ್ತಾಪವಾದ ಎಷ್ಟೋ ಸಂಗತಿಗಳು ದೇಶದ ರಾಜಕೀಯ ಇತಿಹಾಸದ ಬಗ್ಗೆ ಬೆಳಕು ಚೆಲ್ಲುತ್ತವೆ. ಅದರಲ್ಲಿನ ಒಬ್ಬ ಪ್ರವಾಸಿಯ ಅನುಭವದ ಪ್ರಸ್ತಾಪವನ್ನು ಆಧರಿಸಿ ಕೆಳದಿ ಸಂಸ್ಥಾನದ ಅರಸು ಮನೆತನದ ಒಂದು ಪ್ರೇಮ ಕಥೆಯನ್ನು ಕೆ.ಅರುಣ್ ಪ್ರಸಾದ್ ಕಾದಂಬರಿಯಾಗಿ ವಿಸ್ತರಿಸಿದ್ದಾರೆ. ಕೆಳದಿಯ ರಾಜಾ ವೆಂಕಟಪ್ಪನಾಯಕ ಬೆಸ್ತರ ಹುಡುಗಿ ಚಂಪಕಾಳನ್ನು ಆಕೆಯ ರಂಗೋಲಿಯ ಕಲೆಗೆ ಮನಸೋತು ಮದುವೆಯಾಗುವ ಸ್ವಾರಸ್ಯಕರ ಸಂಗತಿಯನ್ನು ಆಧರಿಸಿದೆ ಈ ಕಾದಂಬರಿ. ಈಗ ಆನಂದಪುರದಲ್ಲಿರುವ ಚಂಪಕ ಸರಸ್ಸು ರಾಣಿ ಚಂಪಕಾ ನೆನಪಿಗಾಗಿ ಅದೇ ರಾಜಾ ವೆಂಕಟಪ್ಪನಾಯಕನೇ ಕಟ್ಟಿಸಿದ್ದು.
ಆನಂದಪುರ ಸನಿಹದ ಯಡೇಹಳ್ಳಿ ನಿವಾಸಿಯಾದ ಅರುಣ್ ಪ್ರಸಾದ್ ಸಾರ್ವಜನಿಕ ಬದುಕಿನಲ್ಲಿದ್ದು ಜನರೊಂದಿಗೆ ಒಡನಾಡಿದವರು. ಶಿವಮೊಗ್ಗ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಅಧಿಕಾರ ವಿಕೇಂದ್ರೀಕರಣದ ಆಡಳಿತ ಪ್ರಕ್ರಿಯೆಯ ಅನುಭವವನ್ನು ಪಡೆದವರು. ಈಗ ರಾಜಕಾರಣದಿಂದ ವಿಮುಖರಾಗಿ ಉದ್ಯಮಕ್ಷೇತ್ರದಲ್ಲಿದ್ದು ಸಾಂಸ್ಕೃತಿಕವಾಗಿ ಜಾಗೃತರಾಗಿದ್ದಾರೆ. ತಮ್ಮ ಊರಿನ ಪ್ರಾಚೀನ ಸ್ಮಾರಕವಾಗಿರುವ ಚಂಪಕಾ ಸರಸ್ಸಿನ ಹಿಂದಿರುವ ಇತಿಹಾಸದ ಅಂಶಗಳನ್ನು ಕಾದಂಬರಿಯ ರೂಪದಲ್ಲಿ ದಾಖಲಿಸಿದ್ದಾರೆ.
ಇಪ್ಪತ್ತನೆಯ ಶತಮಾನದ ಮೊದಲ ದಶಕದಿಂದಲೇ ಕನ್ನಡದಲ್ಲಿ ಸ್ವತಂತ್ರ ಕಾದಂಬರಿಗಳ ರಚನೆ ಮೊದಲಾಯಿತು. ಅದಕ್ಕೂ ಮೊದಲು ಬಂಗಾಳದಿಂದ, ಮರಾಠಿಯಿಂದ ಐತಿಹಾಸಿಕ ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದಿಸಿದ ಬಿ.ವೆಂಕಟಾಚಾರ್ಯರು, ಆಲೂರು ವೆಂಕಟರಾಯರು, ಗಳಗನಾಥ ಮೊದಲಾದವರು ನಾಡಿನ ಜನತೆಗೆ ಓದುವ ಅಭಿರುಚಿಯನ್ನು ಪರಿಚಯಿಸಿದ್ದರು. ಎಂ.ಎಸ್.ಪುಟ್ಟಣ್ಣನವರ `ಮಾಡಿದ್ದುಣ್ಣೋ ಮಹಾರಾಯ',`ಮುಸುಕು ತೆಗೆಯೇ ಮಾಯಾಂಗನೆ' ಕೃತಿಗಳು ಚಾರಿತ್ರಿಕ ಘಟನೆಗಳ ಹಿನ್ನೆಲೆಯಲ್ಲಿ ಪತ್ತೇದಾರಿ ಅಂಶಗಳನ್ನೂ ಒಳಗೊಂಡಿದ್ದ ಪ್ರಾರಂಭದ ಕೃತಿಗಳು. ಕನ್ನಡದ ಐತಿಹಾಸಿಕ ಕಾದಂಬರಿಗಳ ಪರಂಪರೆ ಶ್ರೀಮಂತವಾಗಿಯೇ ಇದೆ. ಬಿ.ಪುಟ್ಟಸ್ವಾಮಯ್ಯ, ಅ.ನ.ಕೃ, ಕೆ.ವಿ.ಅಯ್ಯರ್, ಮ.ನ.ಮೂರ್ತಿ, ಸಿ.ಕೆ.ವೆಂಕಟರಾಮಯ್ಯ, ತರಾಸು, ಬಿ.ಎಲ್.ವೇಣು ಮೊದಲಾದ ಪ್ರಮುಖ ಲೇಖಕರು ನಾಡಿನ ಇತಿಹಾಸದ ಸ್ವಾರಸ್ಯಕರ ಸಂಗತಿಗಳನ್ನು ಆಧರಿಸಿ ಕಾದಂಬರಿಗಳನ್ನು ರಚಿಸಿ ಅದು ವಿಶಿಷ್ಟ ಪ್ರಕಾರ ಎಂದು ಪರಿಗಣಿಸುವಷ್ಟು ಸಮೃದ್ಧವಾಗುವಂತೆ ಮಾಡಿದ್ದಾರೆ. ಟಿಪ್ಪು ಸುಲ್ತಾನನ ಕುರಿತಾಗಿ ಕಳೆದ ಶತಮಾನದ ಐವತ್ತು, ಅರವತ್ತರ ದಶಕಗಳಲ್ಲಿ ಕೆಲವು ಕಾದಂಬರಿಗಳು ಹೊರಬಂದಿವೆ.
ಇತಿಹಾಸದ ಅಂಶಗಳ ಎಳೆಯನ್ನು ಹಿಡಿದು ಕಾಲ್ಪನಿಕ ಸಂಗತಿಗಳನ್ನು ಸೇರಿಸಿ ಚರಿತ್ರೆಯ ಅರಿವನ್ನು ಮೂಡಿಸುವ ಲೇಖಕರ ಸಾಲಿಗೆ ಅರುಣ್ ಪ್ರಸಾದ್ ಕೂಡ ಈ ಕೃತಿಯ ಮೂಲಕ ಸೇರಿದ್ದಾರೆ. ಐತಿಹಾಸಿಕ ಕಾದಂಬರಿಗಳ ರಚನೆಗೆ ಅಧ್ಯಯನ ಮತ್ತು ಆಯಾ ಕಾಲದ ಸಾಮಾಜಿಕ, ಸಾಂಸ್ಕೃತಿಕ ಹಿನ್ನೆಲೆಯ ಅರಿವನ್ನು ಹೊಂದಿದ್ದರೆ ಬರವಣಿಗೆ ಪರಿಪುಷ್ಟವಾಗುತ್ತದೆ. ಆಸ್ವಾದ್ಯವಾಗುತ್ತದೆ. `ಪ್ರವಾಸಿ ಕಂಡ ಇಂಡಿಯಾ' ಕೃತಿಯಲ್ಲಿ ಬೇರೆ ಬೇರೆ ಕಾಲಘಟ್ಟದ ಪ್ರವಾಸಿಗರು ಕಂಡ ಜನಜೀವನ, ಚರಿತ್ರೆಯ ಪಠ್ಯಗಳಲ್ಲಿ ದಾಖಲಾದ ಘಟನಾವಳಿಗಳನ್ನು ಸೂಕ್ತವಾಗಿ ಅಳವಡಿಸುವ ಸಂವಿಧಾನ ಕೌಶಲ ಕೃತಿಗಳಿಗೆ ಮೌಲಿಕತೆಯನ್ನು ತಂದುಕೊಡುತ್ತದೆ. ಈ ಹಾದಿಯಲ್ಲಿ ಹೆಜ್ಜೆ ಇರಿಸಿದ ಅರುಣ್ ಪ್ರಸಾದ್ ಅವರಿಗೆ ಶುಭ ಹಾರೈಕೆಗಳು
Comments
Post a Comment