ಖೇಚರೀಯೋಗಿ .
****************************************************
ಎಲ್ಲವನ್ನು ತ್ಯಜಿಸಿ ನಿಸ್ಪೃಹರಾಗಿ ಬದುಕುವುದು ಸುಲಭದ ಮಾತಲ್ಲ . ಅದು ಒಂದು ಮಹಾ ಸಾಧನೆ. ಅದೆಷ್ಟೋ ಸನ್ಯಾಸಿಗಳಿಗೆ ಯೋಗ ಮಾರ್ಗದ ದಿಗ್ದರ್ಶನ ಮಾಡಿದ ಮಹಾತ್ಮರು ಇವರು. ಬಾಡಿಹೋದ ಜೀವನಗಳಿಗೆ ಹೊಸ ಸ್ಫೂರ್ತಿ ತುಂಬಿ ನವ ಜೀವನದ ಮಹಾದ್ವಾರವನ್ನು ತೆರೆದುಕೊಟ್ಟ ದಿವ್ಯಪುರುಷರು..! ಕುಬ್ಜ ದೇಹ .. ಯೋಗಸಾಧನೆಯಿಂದಲೇ ಸೊರಗಿಹೋದ ಶರೀರ… ತೀಕ್ಷ್ಣ ಕಣ್ ದೃಷ್ಟಿ.. ನೇರ ಮಾತು.. ಸದಾ ಸಾಧನೆ… ಇದೇ ಅವರ ಪೂರ್ಣವ್ಯಕ್ತಿತ್ವದ ಕಿರು ಚಿತ್ರಣ.
ನಾನು ಹೇಳ ಹೊರಟಿದ್ದು, ಖೇಚರೀ ಯೋಗಿಗಳೂ ಎಂದೇ ಲೋಕವಿಖ್ಯಾತರಾಗಿದ್ದ ಪೂಜ್ಯ ನೃಸಿಂಹಾನಂದ ಸರಸ್ವತೀ ಸ್ವಾಮಿಗಳ ಕುರಿತು. 'ಕಲಸೀ ಸ್ವಾಮಿಗಳೂ' ಎಂದೇ ಪ್ರಸಿದ್ದರಾಗಿದ್ದ ಇವರು ಜನಿಸಿದ್ದು ಉತ್ತರಕನ್ನಡದ ಬನವಾಸಿಯಲ್ಲಿ 1912ರ ಮಾರ್ಚ್ 20 ರಂದು. ಇವರ ಬಾಲ್ಯದ ಹೆಸರು ಚಿದಂಬರ. ಬಾಲ್ಯದಿಂದಲೇ ತಂದೆಯನ್ನು ಕಳೆದುಕೊಂಡ ಚಿದಂಬರ ದಾಯಾದಿಗಳ ಕಲಹದಿಂದ ಮನನೊಂದು ಅದೊಂದು ದಿನ ಕಾಲಭೈರವನ ದರ್ಶನಕ್ಕೆ ಯಾಣಕ್ಕೆ ಹೋದನಂತೆ. ಅಲ್ಲಿ ಆತನಿಗೆ ದೊರಕಿದ ಶ್ರೀದರ ಸ್ವಾಮಿಗಳ ದಿವ್ಯಾಶೀರ್ವಾದ ಮಹಾ ಯೋಗಿಯಾಗುವುದಕ್ಕೆ ಭದ್ರ ಬುನಾದಿಯನ್ನೇ ನಿರ್ಮಿಸಿತ್ತು.
ಶಾಲೆ ಬಿಟ್ಟು ಮನೆಗಾಗಿ ದುಡಿಯಲು ಆರಂಬಿಸಿದ ಚಿದಂಬರರು.. ಮನೆಯನ್ನು ಬಿಟ್ಟು ಮಾರ್ಗದರ್ಶನ ನೀಡುವ ಗುರುಗಳಿಗಾಗಿ ಅದೆಷ್ಟು ಪುಣ್ಯಕ್ಷೆತ್ರಗಳನ್ನು ಸಂಚರಿದರೋ ತಿಳಿಯದು. ಗೋಕರ್ಣ, ಕಾಶಿ ಮುಂತಾದ ಕಡೆ ವೇದಾದ್ಯಯನ ಮುಗಿಸಿ. ಶೀಗೇಹಳ್ಳಿಗೆ ಬಂದು ಸ್ವಾಮಿ ಶಿವಾನಂದರಿಂದ ಮಂತ್ರೋಪದೇಶ ಪಡೆದರು. ಶೃಂಗರಿಯ ಪೂಜ್ಯ ಜಗದ್ಗುರು ಚಂದ್ರಶೇಖರ ಭಾರತೀ ಸ್ವಾಮಿಗಳ ಆಶೀರ್ವಾದ ಪಡೆದರು.
ಸಿದ್ದಾರ್ಥಿ ಸಂವತ್ಸರದ ಮಾಘ ಕೃಷ್ಣ ಸಪ್ತಮಿಯಂದು ವಿದ್ಯುಕ್ತವಾಗಿ ಸನ್ಯಾಸ ಸ್ವೀಕರಿಸಿ ’ ನೃಸಿಂಹಾನಂದ ಸರಸ್ವತೀ ’ ಅಭಿದಾನ ಪಡೆದರು. ನಂತರ ಸ್ವಾಮಿಗಳು 1991ರಿಂದ ನಮ್ಮ ಶ್ರೀ ಸ್ವರ್ಣವಲ್ಲಿಯಲ್ಲೇ ನೆಲೆಸಿದರು. ಈ ಮಹಾ ಪುರುಷರು 2011 ಜನವರಿ 19 ರಂದು ಬ್ರಹ್ಮಲೀನರಾದರು.
ಅದೊಂದು ವಿಶೇಷ ಘಟನೆ. ಕೆಲವು ದಿನಗಳ ಹಿಂದೆ ಸ್ವರ್ಣವಲ್ಲೀ ಶ್ರೀಮದ್ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳ ಸವಾರಿ ಮೈಸೂರಿಗೆ ಹೊರಟಿತ್ತು. ಅದೊಂದು ರಾತ್ರಿ ತಾವು ಮಾತನಾಡಬೇಕು ಎಂಬ ಅಭಿಲಾಷೆ ವ್ಯಕ್ತವಾದ ಕಾರಣ ಸ್ವರ್ಣವಲ್ಲೀ ಶ್ರೀ ಗಳು ಶ್ರೀ ನಿವಾಸಕ್ಕೆ [ ಕಲಸೀ ಸ್ವಾಮಿಗಳ ವಾಸ್ತವ್ಯ ಕೊಠಡಿ] ತೆರಳಿದರು. ಆ ಸಂದರ್ಭದಲ್ಲಿ ಕಲಸೀ ಸ್ವಾಮಿಗಳು ತಮ್ಮ ಸಮಾಧಿ ನಿರ್ಮಿಸಲು ಸ್ಥಳ ಎಲ್ಲಿ ಎಂದು ಕೇಳಿದ್ದರು. ಅದಕ್ಕೆ ಇಡೀ ಮಠವೇ ತಮ್ಮದು ಅದರಲ್ಲಿ ಎಲ್ಲಿ ಬೇಕಾದರೂ ಸ್ವೀಕರಿಸಬಹುದು ಎಂದು ಶ್ರೀಗಳು ಹೇಳಿದ್ದರು. ಆ ಮೈಸೂರು ಸವಾರಿಯಿಂದ ಶ್ರೀಗಳು ಬರುವ ಪೂರ್ವದಲ್ಲೇ ಕಲಸೀ ಸ್ವಾಮಿಗಳು ದಿವ್ಯತ್ವದಲ್ಲಿ ಲೀನವಾದದ್ದು ಇನ್ನೂ ವಿಶೇಷ.
ಅವರು ಮುಕ್ತರಾದ ದಿನ ಅದೆಷ್ಟೋ ಜನರಿಗೆ ವಾರಗಳ ಮೊದಲೆ ಆ ದಿನ ಮಠಕ್ಕೆ ಬರಲು ಸೂಚಿಸಿದ್ದರಂತೆ. ಆ ದಿನ ಹುಣ್ಣಿಮೆ, ಗುರುವಾರ, ಪ್ರಾತಃಕಾಲ ಬ್ರಾಹ್ಮೀಮುಹೂರ್ತ, ಇದನ್ನೆಲ್ಲ ಗಮನಿಸಿದರೆ ಅವರು ಇಚ್ಛಾಮರಣಿಗಳು ಎನ್ನ ಬಹುದೇನೋ.
ಇನ್ನು ಅವರ ಆ 90 ರ ಹರೆಯದಲ್ಲೂ ಒಂದು ಕಣ್ಣು ಪೂರ್ಣ ಕಾಣುತ್ತಿರಲಿಲ್ಲ ಆದರೆ ಇನ್ನೊಂದು ಕಣ್ಣಿನ ಶಕ್ತಿ ಅಗಾಧ.. ನೆಲದ ಮೇಲೆ ಬಿದ್ದ ಕೂದಲಿಗೆ ತಾವೇ ಕಮಂಡಲು ಜಲ ಹಾಕುತ್ತಿದ್ದ ರೀತಿಯನ್ನು ಹಲವರು ಕಂಡಿದ್ದಾರೆ.
ನಾನಾರೀತಿಯ ರೋಗ ಸಮಸ್ಯೆ ಗಳಿಂದ ವರ ಬಳಿ ಬಂದ ಎಷ್ಟೋ ಜನ ಗುಣಮುಖರಾಗಿ ಹೋದ ಉದಾಹರಣೆಗಳಿವೆ.
ಅದೆಷ್ಟೋ ವರ್ಷ ಕೇವಲ ಹಿಟ್ಟು ಸೇವಿಸಿ ಜೀವಿಸಿದ ಅವರ ಆಹಾರ ಕ್ರಮವನ್ನು ನಾವೇ ಕಂಡಿದ್ದೇವೆ.
ಯೋಗಿಗಳು ತಣ್ಣೀರು ಸ್ನಾನ ಮಾಡಿ ಅವರ ಸಾಧನೆ ಮಾಡುವುದು ನಮಗೆ ತಿಳಿದಿದೆ. ಆದರೆ ಇವರ ವಿಷಯದಲ್ಲಿ ಅದೂ ಒಂದು ಆಶ್ಚರ್ಯ ಅದೆಷ್ಟು ಬಿಸಿ ಇದ್ದರು ಸಹಿಸಿಕೊಳ್ಳುವ ವಿಶೇಷ ಸಾಧನೆ ಅವರಲ್ಲಿತ್ತು.
ಅವರ ನಿತ್ಯಕರ್ಮಗಳಿಗೆ ತೆಂಗಿನ ಚಿಪ್ಪಿನಿಂದ ಸಿದ್ದಪಡಿಸಿದ ಪಾತ್ರೆಗಳು. ಅತಿ ಅಲ್ಪ ಆಹಾರ ಸೇವನೆ. ಪ್ರತಿನಿತ್ಯ ಅವರ ಅನುಷ್ಠಾನ.. ಅದು ಅಸಾಧಾರಣ ಜೀವನ ಶೈಲಿ.
ಅವರ ಅಭಿಲಾಷೆಯೇ ಹಾಗೆ ಸಮಾಧಿ ಸ್ಥಳದ ಸಮೀಪದಲ್ಲಿ.. ಬಂದ ಭಕ್ತರಿಗೆ ಧ್ಯಾನ ಮಾಡಲು ಸ್ಥಳ ಇರಬೇಕು ಎಂದು. ಅದೇ ರೀತಿಯಲ್ಲಿಯೇ ಅವರ ಸಮಾಧಿ ಮಂದಿರ ನಿರ್ಮಾಣವಾಗಿದೆ.
ಕರ್ನಾಟಕದ ಅದೆಷ್ಟೋ ಪೀಠಾಧಿಪತಿಗಳಿಗೆ, ಯತಿಗಳಿಗೆ ಸಾಧಕರಿಗೆ ಅವರು ಖೇಚರಿವಿದ್ಯೆಯ ಉಪದೇಶ ಮಾಡಿದ್ದಾರೆ..
Comments
Post a Comment