ಹಿಂದೂ ದಮ೯ದವನು ಮುಸ್ಲಿ೦ ಗೆಳೆಯರಿಗೆ ಮೆಕ್ಕಾ ಯಾತ್ರೆ ಮಾಡಿಸಬಹುದೆ? ಮುಸ್ಲಿಂ ಗೆಳೆಯ ಈ ರೀತಿ ಮೆಕ್ಕಾ ಯಾತ್ರೆ ಮಾಡಿದರೆ ಹರಾಂ ಅಂತೆ ಅಂತ ಒಂದು ಸುದ್ದಿ ನಮ್ಮ ಊರಲ್ಲಿ ಪ್ರಾರಂಭವಾಗಿತ್ತು.
ಬಹುಶಃ ಇದು ಅಪರೂಪದ ಪ್ರಕರಣ ಆದ್ದರಿಂದ ಸ್ಥಳೀಯರಿಗೆ ಇದರ ಬಗ್ಗೆ ಸರಿಯಾದ ತಿಳುವಳಿಕೆ ಇರಲಿಲ್ಲ, ಜೊತೆಗೆ ಮತ್ಸರ, ಹೊಟ್ಟೆಕಿಚ್ಚು ಬೇರೆ ಸೇರಿದ್ದರಿಂದ ಮೆಕ್ಕಾ ಯಾತ್ರೆಗೆ ತಯಾರಿ ನಡೆಸಿದವರಿಗೆ ಒಂದು ರೀತಿ ಕಿರಿಕಿರಿ ಆದರೆ, ಮೆಕ್ಕಾ ಯಾತ್ರೆ ಮಾಡಿಸಲು ಹೊರಟ ಹಿಂದೂ ದಮಿ೯ಯನಿಗೆ ಹಿಂದಿನಿಂದ ಹೋಗಿ ಹೋಗಿ ಸಾಬರಿಗೆ ಮೆಕ್ಕಾ ಕಳಿಸಲು ಅವನಿಗೆ ಬುದ್ಧಿ ಇಲ್ಲ ಅಂತ ಕುಹಕ ಬೇರೆ.
ಇದು ನಾನೂ ಮತ್ತು ನನ್ನ ಹಿರಿಯ ಮಿತ್ರರಾದ ಗನ್ನಿ ಸಾಹೇಬರು 2007 ರಲ್ಲಿ ಅನುಭವಿಸಿದ ಪ್ರಕರಣವಿದು, ಇದಕ್ಕೆ ಒಂದು ಸಕಾರಣ ಇತ್ತು ಮತ್ತು ನಮ್ಮುರ ದೇವಸ್ಥಾನದಲ್ಲಿ ನಾನು ಗನ್ನಿಸಾಬರಿಗೆ ಒಂದು ಮಾತು ಕೊಟ್ಟಿದ್ದೆ.
2006ರಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರಂ ಹೋಬಳಿಯ ಯಡೇಹಳ್ಳಿ ಎಂಬ ನಮ್ಮ ಊರಲ್ಲಿ ಗಣಪತಿ ದೇವಸ್ಥಾನ ಕಟ್ಟಿಸಿ ಪ್ರತಿಷ್ಟಾಪನೆ ನಡೆಯಿತು, ಅಲ್ಲಿವರೆಗೆ ಇಡಿ ಹೋಬಳಿಯಲ್ಲಿ ಗಣಪತಿ ದೇವಸ್ಥಾನವೇ ಇರಲಿಲ್ಲ, ಯಡೇಹಳ್ಳಿಯಲ್ಲಿ ಎರಡು ಚಚ್೯ ಮತ್ತು ಒಂದು ಮಸೀದಿ ಇತ್ತು, ಗಣಪತಿ ದೇವಸ್ಥಾನದ ದೇವರ ವಿಗ್ರಹ ಕೋಲಾರ ಜಿಲ್ಲೆಯ ಶಿವಾರಪಟ್ಟಣದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತರಿಂದ ಕೃಷ್ಣ ಶಿಲೆಯಲ್ಲಿ ಕೆತ್ತಿಸಿ ತಂದಾಗ ವಿಗ್ರಹವನ್ನ ಯಡೇಹಳ್ಳಿ ವೃತ್ತದಿಂದ ಮೆರವಣಿಗೆಯಲ್ಲಿ ದೇವಸ್ಥಾನದವರೆಗೆ ನಾನು ಗನ್ನಿಸಾಹೇಬರು ಒಟ್ಟಾಗಿ ಹೋದೆವು, ಅಲ್ಲಿ ಕ್ರಿಶ್ಚಿಯನ್ ಅಂದ ಕಲಾವಿದ ಒಲೆಯನ್ ಡಿಸೋಜ ಮತ್ತು ದಲಿತ ಕಲಾವಿದ ಬೋರಯ್ಯ ಸಣ್ಣ ರಸ ಮಂಜರಿ ಕಾಯ೯ಕ್ರಮ ನಡೆಸಿಕೊಟ್ಟರು, ದೇವರ ವಿಗ್ರಹ ಗಭ೯ಗುಡಿಯ ಒಳಕ್ಕೆ ಹೋಗುವಾಗ ಅಚಾನಕ್ಕಾಗಿ ನನ್ನ ಬಾಯಿ೦ದ ಒಂದು ಮಾತು ಹೊರಬಿತ್ತು.
ಗನ್ನಿ ಸಾಹೇಬರೆ ದೇವರ ಸತ್ಯವಿದ್ದರೆ ಈ ವಷ೯ ನಿಮ್ಮನ್ನ ಮೆಕ್ಕಾ ಯಾತ್ರೆಗೆ ಕಳಿಸುತ್ತೇನೆ, ಹಾಗಾದರೆ ಈ ದೇವಸ್ಥಾನ ಕಟ್ಟಿಸಿದ ಪುಣ್ಯ ಗ್ಯಾರಂಟಿ ನನಗೆ ತಲುಪಿದಂತೆ ಆಗುತ್ತೆ ಅಂದೆ ಅದಕ್ಕೆ ಪ್ರತ್ಯುತ್ತರವಾಗಿ ಅವರು ಗ್ಯಾರಂಟಿ ಆಗೇ ಆಗುತ್ತೆ ಅಂತ ಕೈ ಮುಗಿದರು.
ಅದರಂತೆ ಗನ್ನಿ ಸಾಹೇಬರು ಮೆಕ್ಕಾ ಯಾತ್ರೆಗೆ ಅಜಿ೯ ಸಲ್ಲಿಸಿದಾಗ ಸಕಾ೯ರದಿಂದ ಆಯ್ಕೆ ಆದರು ಅದಕ್ಕೆ ನಿಗದಿ ಮಾಡಿದ ಹಣ ನಾನು ಡಿ.ಡಿ.ಮೂಲಕ ಪಾವತಿ ಮಾಡಿದೆ, ಅವರು ತಮ್ಮ ದಮ೯ದ ಪವಿತ್ರ ಯಾತ್ರೆಗೆ ತಯಾರಿ ನಡೆಸಿದರು ಅಷ್ಟರಲ್ಲೆ ಈ ಅನುಮಾನದ ಅಪವಾದ ಶುರುವಾಯಿತು.
ನಮ್ಮಿಬ್ಬರ ಉತ್ಸಾಹಕ್ಕೆ ಒಂದು ರೀತಿ ತಣ್ಣಿೀರು ಎರಚಿದ೦ತೆ ಆಯಿತು, ಗನ್ನಿ ಸಾಹೇಬರು ಯಾರು ಏನೇ ಹೇಳಿದರೂ ನಾನು ಮೆಕ್ಕಾ ಯಾತ್ರೆ ಮಾಡ್ತಿನಿ ಅಂದರಾದರೂ ನನಗೂ೦ದು ಅಳಕು ಇತ್ತು. ಅನ್ಯ ದಮ೯ದವರ ಹಣದಲ್ಲಿ ಮುಸ್ಲಿಂರು ಮೆಕ್ಕಾ ಯಾತ್ರೆ ಮಾಡಿದರೆ ಹರಾಂ ಆಗುವುದಾದರೆ ಸರಿ ಅಲ್ಲ ಅಂತ ಅನ್ನಿಸುತ್ತಿತ್ತು.
ಅವರ ಸಂಬಂದಿ ಕೆಲ ಯುವಕರು ಗನ್ನಿಸಾಹೇಬರನ್ನ ಹಿಂದಿನಿಂದ ಅವರ ಸಂಬಂದಿ ಗೆಳೆಯರ ಎದುರು ಹಿಯಾಳಿಸುತ್ತಿದ್ದರು ಇದೇ ಸಂದಭ೯ದಲ್ಲಿ ಉತ್ತರ ಪ್ರದೇಶದ ಮೌಲ್ವಿಗಳು ಆನಂದಪುರಂನ ಮಸೀದಿಗೆ ಬಂದರು ಆ ದಿನ ಶುಕ್ರವಾರದ ನಮಾಜು ಬೇರೆ, ನಮಾಜು ಮುಗಿದ ನಂತರ ಈ ಜಿಜ್ಞಾಸೆಗೆ ಉತ್ತರ ಅವರಿ೦ದ ಕೇಳಿದರು, ಅನೇಕ ಗನ್ನಿ ಸಾಹೇಬರ ಆಪ್ತರಿಗೆ ಮತ್ತು ಕೆಲ ಕುಹಕಿಗಳಿಗೆ ಏನು ಉತ್ತರ ಬರಬಹುದು ಅಂತ ಕುತೂಹಲವಿತ್ತು.
ಮುಸ್ಲಿ೦ ಪಂಡಿತರು ಈ ಬಗ್ಗೆ ಇರುವ ಪತ್ವಾ ಏನಂತ ತಿಳಿಸಿದರು ಅದೇನೆಂದರೆ "ಯಾರೇ, ಯಾವ ದಮ೯, ಯಾವುದೇ ಜಾತಿ, ಯಾವ ದೇಶದವರೂ ಮುಸ್ಲಿಂ ದಮ೯ದವರನ್ನ ಮಾತ್ರ ಮೆಕ್ಕಾ ಯಾತ್ರೆಗೆ ಕಳಿಸಬಹುದು, ಇದು ಅವರ ನೆರವಿಂದ ಹೋದವರಿಗೆ ಹರಾಂ ಅಲ್ಲ ಮತ್ತು ಮೆಕ್ಕಾ ಯಾತ್ರೆ ಮಾಡಿಸಿದವರಿಗೆ ಹೋದವರಿಗಿಂತ ಡಬಲ್ ಪುಣ್ಯ ಅಂತ ಅಂದರು" ನಮ್ಮ ಗನ್ನಿ ಸಾಹೇಬರಿಗೆ ಇದರಿಂದ ತುಂಬಾ ನಿರಾಳವಾಯಿತು, ನನಗೂ ಸಂತೋಷವಾಯಿತು.
ನಮ್ಮ ಶ್ರೀವರ ಸಿದ್ಧಿವಿನಾಯಕ ದೇವಾಲಯದಲ್ಲಿ ಗನ್ನಿ ಸಾಹೇಬರಿಗೆ ಅಭಿನಂದನಾ ಸಮಾರಂಭ ಇಟ್ಟುಕೊಂಡಿದ್ದೆವು ಸಾಗರದಿಂದ ತೀನಾ.ಶ್ರೀನಿವಾಸ, ಕೋಯಾ ಸಾಹೇಬರು, ಪುತ್ತೂರಾಯರು, ನಾರಾಯಣ್ ರಾವ್, ಅಮೃತ್ ರಾಸ್ ಎಲ್ಲಾ ಬಂದಿದ್ದರು.
ಊರ ದೇವಸ್ಥಾನ ಕಟ್ಟಿಸಿದ್ದು ನಮ್ಮ ಹೆತ್ತವವರ ಪುಣ್ಯದಿಂದ ಅಂತ ಬಾವಿಸಿದ್ದೇನೆ ಅದೇ ರೀತಿ ಗನ್ನಿ ಸಾಹೇಬರಿಗೆ ಮೆಕ್ಕಾ ಯಾತ್ರೆ ಮಾಡಿಸಿದ್ದು ಕೂಡ.
Comments
Post a Comment