7 ಜನ ಕೃಷಿ ಇಲಾಖೆ ಅಧಿಕಾರಿಗಳನ್ನ ಸ್ಥಳದಲ್ಲೇ ಜೈಲಿಗೆ ಕಳಿಸಿದ ಆಗಿನ ಕೃಷಿ ಸಚಿವ ಬೈರೇಗೌಡರು ಮರುದಿನ ಬೆಂಗಳೂರಲ್ಲಿ ಪತ್ರಿಕಾಗೋಷ್ಟಿ ಮಾಡಿ ರಾಜ್ಯದ ಕೃಷಿ ಇಲಾಖೆಯಲ್ಲಿನ ಭೂ ಸಂರಕ್ಷಣ ವಿಭಾಗ ತಕ್ಷಣ ರದ್ದು ಮಾಡುವುದಾಗಿ ಘೋಷಿಸಿ ಸಾಗರ ತಾಲ್ಲೂಕಿನ ಬೃಹತ್ ಬ್ರಷ್ಟಾಚಾರ ಬಯಲು ಮಾಡಿದ್ದು ತಿಳಿಸಿದ್ದರು.
ಇದು ಬೆಳಕಿಗೆ ಬರಲು RTV ಸ್ಥಳ ಪರಿಶೀಲನೆ, ಲೇಖನ ಮತ್ತು ಅವರು ಕೃಷಿ ಸಚಿವರನ್ನ ಖುದ್ದಾಗಿ ಪರಿಶೀಲನೆಗೆ ಬರುವಂತೆ ಮಾಡಿದ್ದು ಜೊತೆಗೆ ಈಗ ಕೆ.ಪಿ.ಸಿ.ಸಿ.ಸದಸ್ಯರಾಗಿರುವ ತಾಳಗುಪ್ಪ ಸಲೀo ಇವರಿಗೆ ಒತ್ತಾಯಿಸಿ ಕರೆತ೦ದದ್ದು ನಾನು ಹೇಗೆ ಮರೆಯಲಿ.
#ಇದೊಂಥರಾ ಆತ್ಮಕಥೆಯ ಹಿಂದೆ
ಅದೆಷ್ಟು ಕಥೆಗಳ ಸಾಲು? ದಿನಾ೦ಕ 18-ಮಾಚ್೯ -2020#
ಆರ್.ಟಿ.ವಿಠಲಮೂತಿ೯ ಬರೆದಿದ್ದು
ಮಳೆ ನಿಂತರೂ ಮಳೆ ಹನಿ ನಿಲ್ಲಲಿಲ್ಲ ಎನ್ನುವ ಹಾಗೆ ಇದೊಂಥರಾ ಆತ್ಮಕಥೆ ಪುಸ್ತಕ ಮನಸ್ಸೆಂಬ ನೆಲಕ್ಕೆ ಸದಾ ತಂಪೆರೆಯುತ್ತಿದೆ.
ಕಳೆದ ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆಯಾದ ಪುಸ್ತಕ ಈಗಲೂ ರಾಜ್ಯದ ಜನರ ಒಪ್ಪುಗೆ,ಅಪ್ಪುಗೆಗೆ ಪಾತ್ರ.
ಬರಹಗಾರರಿಗೆ ಇದಕ್ಕಿಂತ ದೊಡ್ಡ ಸರ್ಟಿಫಿಕೆಟ್ ಯಾವುದು?ಮೊನ್ನೆ ಅತ್ಯಾಪ್ತರಾದ ಅರುಣ್ ಪ್ರಸಾದ್ ಅವರು ಒಂದು ವಿಡಿಯೋ ಕಳಿಸಿದ್ದರು.
ನಮ್ಮೂರು ಸಾಗರ ತಾಲ್ಲೂಕಿನ ಆನಂದಪುರದ ಅರುಣ್ ಪ್ರಸಾದ್ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದವರು.ವ್ಯವಸ್ಥೆಯಲ್ಲಿನ ಭ್ರಷ್ಟಾಚಾರದ ವಿರುದ್ಧ ಸೆಣಸಿದವರು.ಯುವಕನಾಗಿದ್ದ ದಿನಗಳಲ್ಲಿ ನನ್ನ ಅಚ್ಚರಿಗೆ,ವಿಸ್ಮಯಕ್ಕೆ,ಬದುಕಿನಲ್ಲಿ ಏನನ್ನಾದರೂ ಸಾಧಿಸಬೇಕು ಎಂಬ ಹಪಹಪಿಗೆ ಕಾರಣರಾದವರಲ್ಲಿ ಅರುಣ್ ಪ್ರಸಾದ್ ಕೂಡಾ ಮುಖ್ಯರಾದವರು.
ಈಗ ಅನಂದಪುರದಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿರುವ ಅರುಣ್ ಪ್ರಸಾದ್ ಸದಾ ಕಾಲ ಚಟುವಟಿಕೆಯ ಆಗರ.ತಮ್ಮ ಕೆಲಸಗಳ ಮಧ್ಯೆ ಈಗಲೂ ಜನರಿಗಾಗಿ ಬಡಿದಾಡುತ್ತಾರೆ.ಅವರ ನೋವುಗಳಿಗೆ ಸ್ಪಂದಿಸುತ್ತಾರೆ.ಇತ್ತೀಚಿನ ದಿನಗಳಲ್ಲಿ ಚಂದದ ಬರವಣಿಗೆ ಅವರ ಕೈ ಹಿಡಿದಿದೆ.
ನಮಗೆ ಗೊತ್ತಿಲ್ಲದ ಎಷ್ಡೋ ಸಂಗತಿಗಳನ್ನು ಬರೆಯುತ್ತಾ,ಹಳೆಯ ನೆನಪುಗಳನ್ನು ಕೆದಕುತ್ತಾ ಅವರು ಬರೆಯುವ ರೀತಿ ನನಗೆ ಬಹಳ ಇಷ್ಟ.
ಇಪ್ಪತ್ತೈದು ವರ್ಷಗಳ ಹಿಂದೆ ಅವರು ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದಾಗ ನಾನು ನಾಡಿನ ಹಿರಿಯ ಪತ್ರಕರ್ತ ಬಿ.ವಿ.ವೈಕುಂಠರಾಜು ಅವರ ಕೈಯ್ಯಲ್ಲಿದ್ದ ಮಣ್ಣಿನ ಮುದ್ದೆ.
ತಮ್ಮ ಸಂಪಾದಕತ್ವದಲ್ಲಿ ಹೊರಬರುತ್ತಿದ್ದ ವಾರಪತ್ರಿಕೆಯಲ್ಲಿ ಅವರು ನನ್ನನ್ನು ರಾಜಕೀಯ ವರದಿಗಾರನನ್ನಾಗಿ ರೂಪಿಸುತ್ತಿದ್ದರು.
ಅದೇ ಸಂದರ್ಭದಲ್ಲಿ ಒಂದು ದಿನ ಅರುಣ್ ಪ್ರಸಾದ್ ಅವರ ಹೋರಾಟಗಳ ಬಗ್ಗೆ ನನಗೆ ವಿವರಿಸಿದವರು ಸ್ನೇಹಿತರಾದ ಸಲೀಂ.ಇವತ್ತು ಕಾಂಗ್ರೆಸ್ ನಾಯಕರಾಗಿ ಬೆಳೆದಿರುವ ಸಲೀಂ ಅವರು:ಆನಂದಪುರದಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ರೈತರಿಗೆ ಕೃಷಿಹೊಂಡ ತೋಡಿಕೊಡುವ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ನುಂಗಿ ಹಾಕಿದ್ದಾರೆ.ಅದರ ವಿರುದ್ಧ ಅರುಣ್ ಪ್ರಸಾದ್ ಹೋರಾಟ ಮಾಡುತ್ತಿದ್ದಾರೆ.ಜನ ಏನು ಅಂತ ನಿನಗ್ಗೊತ್ತಲ್ಲ?ತಪ್ಪು ಮಾಡಿದವರ ರಕ್ಷಣೆಗೇ ನಿಂತಿದ್ದಾರೆ.ಒಂದು ಸಲ ಸ್ಪಾಟ್ ಗೆ ಹೋದರೆ ಗೊತ್ತಾಗುತ್ತದೆ ಎಂದರು.
ನಾನು ಸೀದಾ ಆನಂದಪುರಕ್ಕೆ ಹೋದೆ. ಕೃಷಿ ಹೊಂಡ ತೋಡಿದ್ದಾರೆ ಎನ್ನಲಾದ ಜಾಗಕ್ಕೆ ಅರುಣ್ ಪ್ರಸಾದ್ ಅವರೇ ನನ್ನನ್ನು ಕರೆದುಕೊಂಡು ಹೋದರು.ಎಲ್ಲಿತ್ತು ಕೃಷಿ ಹೊಂಡ?ಆದರೆ ತೋಡಿದ ಹೆಸರಿನಲ್ಲಿ ಸರ್ಕಾರದ ಖಜಾನೆಯನ್ನೇ ತೋಡಿ ಲಕ್ಷಾಂತರ ರೂಪಾಯಿಗಳನ್ನು ಅಧಿಕಾರಿಗಳು ನುಂಗಿ ಹಾಕಿದ್ದರು.ಇದೆಲ್ಲವನ್ನು ಕಣ್ಣಾರೆ ನೋಡಿದವನು ವಾಪಸ್ಸು ಬಂದು ವಾರಪತ್ರಿಕೆಯಲ್ಲಿ ಬರೆದೆ.
ಇದಾದ ಮರುದಿನವೇ ವಿಧಾನಸೌಧದಲ್ಲಿ ಕೃಷಿ ಸಚಿವ ಸಿ.ಭೈರೇಗೌಡರ ಸುದ್ದಿಗೋಷ್ಡಿ.ಈ
ಗೋಷ್ಟಿ ಮುಗಿಯಬೇಕು.ಅಷ್ಟರಲ್ಲಿ ನಾನು ಏರಿದ ಧ್ವನಿಯಲ್ಲಿ ಅಧಿಕಾರಿಗಳ ಹಗಲು ದರೋಡೆಯ ಬಗ್ಗೆ ಹೇಳಿದೆ.
ಒಂದು ಕ್ಷಣ ಮೌನಿಯಾದ ಭೈರೇಗೌಡರು:ನೀವು ಬರೆದಿದ್ದು ನನ್ನ ಗಮನಕ್ಕೆ ಬಂದಿದೆ ವಿಠ್ಠಲಮೂರ್ತಿ. ಮೂರು ದಿನ ಟೈಮು ಕೊಡಿ.ಮಾತನಾಡುತ್ತೇನೆ ಎಂದರು.
ಮರುದಿನವೇ ಆನಂದಪುರಕ್ಕೆ ದೌಡಾಯಿಸಿದ ಭೈರೇಗೌಡರು ಸ್ಪಾಟ್ ಇನ್ಸ್ ಪೆಕ್ಷನ್ ಮಾಡಿದರು.ವಿಷಯದ ಅರಿವಾಗುತ್ತಿದ್ದಂತೆಯೇ ಕೆಂಡಾಮಂಡಲಗೊಂಡು ಅರ್ಧ ಡಜನ್ ಗೂ ಹೆಚ್ಚು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿ,ಜೈಲಿಗಟ್ಟಿದರು.ಅಷ್ಟೇ ಅಲ್ಲ.ಜನರ ದುಡ್ಡು ತಿಂದ ಅಧಿಕಾರಿಗಳು ಹಗಲಿರುಳು ಪರದಾಡುವ ಸ್ಥಿತಿ ತಂದರು.
ಅರುಣ್ ಪ್ರಸಾದ್ ಅವರ ಹೋರಾಟ ಫಲ ಕೊಟ್ಟಿತ್ತು.ಅಂದ ಹಾಗೆ ಇಂತಹ ಹಲ ಹೋರಾಟಗಳನ್ನು ಅವರು ಮಾಡುತ್ತಲೇ ಬಂದಿದ್ದಾರೆ.ಅವರ ಹೋರಾಟದ ಹಾದಿಯಲ್ಲಿ ನಾನೂ ಒಮ್ಮೆ ಪಂಜು ಹಿಡಿದ ಕತೆ ಇದು.
ಅಂತಹ ಅರುಣ್ ಪ್ರಸಾದ್ ಈಗ ಆನಂದಪುರದಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದಾರೆ.ಯಾರೇ ಆತ್ಮೀಯರು ಬರಲಿ.ಅವರನ್ನು ಸ್ವಾಗತಿಸಿ ನೆನಪಿನ ಕಾಣಿಕೆಯಾಗಿ ಪುಸ್ತಕ ಕೊಡುತ್ತಾರೆ.ನಾನು ಬರೆದ ಇದೊಂಥರಾ ಆತ್ಮಕಥೆ ಕೃತಿಯ ಐವತ್ತು ಕೃತಿಯನ್ನು ಖರೀದಿಸಿ ಬಂದ ಆತ್ಮೀಯರಿಗೆ ಕೊಡುತ್ತಾ;ಇದು ನಮ್ಮ ಆರ್.ಟಿ.ವಿಠ್ಠಲಮೂರ್ತಿ ಬರೆದಿದ್ದು ಅಂತ ಪ್ರೀತಿಯಿಂದ ಹೇಳುತ್ತಾರೆ.
ನನ್ನದು ಅಂತಲ್ಲ.ಹಲವರ ಪುಸ್ತಕಗಳನ್ನು ತಾವೇ ಖರೀದಿಸಿಟ್ಟುಕೊಂಡು ಪುಸ್ತಕ ಪ್ರೀತಿಯನ್ನು ಹಂಚುತ್ತಾರೆ.
ಅವರ ಈ ಪುಸ್ತಕ ಪ್ರೀತಿ ನಿಜಕ್ಕೂ ದೊಡ್ಡದು.ಅವರಿಗೆ ನನ್ನ ಧನ್ಯವಾದಗಳು ಸಲ್ಲುತ್ತವೆ.ಹಾಗೆಯೇ ಇದೊಂಥರಾ ಆತ್ಮಕಥೆ ಪುಸ್ತಕದ ಹಿಂದಿರುವ ಅಸಂಖ್ಯಾತ ಕತೆಗಳು ನೆನಪಿಗೆ ಬಂದು ಮನಸ್ಸು ಚಕಚಕಿತಗೊಳ್ಳುತ್ತದೆ.
Comments
Post a Comment