#ಇವತ್ತು_ಇಂದಿರಾ_104ನೇ_ಹುಟ್ಟುಹಬ್ಬ
#ಮುಚ್ಚಿಟ್ಟ_ಕಾಂಗ್ರೇಸ್_ಇತಿಹಾಸದ_ಪುಟ.
ಇವತ್ತು ದೇಶದ ಉಕ್ಕಿನ ಮಹಿಳೆ ಮೊದಲ ಮಹಿಳಾ ಪ್ರಧಾನಿ ಇಂದಿರಾರ 104 ನೇ ಹುಟ್ಟುಹಬ್ಬ.
19- ನವೆಂಬರ್ -1917 ಇಂದಿರಾರ ಜನ್ಮ ದಿನ.
ಇಂದಿರಾ ಗಾಂಧಿ ಅವರ 60ನೇ ಹುಟ್ಟುಹಬ್ಬಕ್ಕೆ 20 ದಿನ ಮೊದಲು ದಿನಾಂಕ 30 ಅಕ್ಟೋಬರ್ 1977ರಂದು ಶಿವಮೊಗ್ಗದಲ್ಲಿ ಕಾಂಗ್ರೇಸ್ ಪಕ್ಷ ಬಹಿರಂಗ ಸಭೆಯೊಂದನ್ನು ಹಮ್ಮಿಕೊಂಡಿತ್ತು ಈ ಸಭೆಯನ್ನು ಉದ್ದೇಶಿಸಿ ಶ್ರೀಮತಿ ಇಂದಿರಾ ಗಾಂಧಿ ಮಾತಾಡುವವರಿದ್ದರು.
ಈ ಸಭೆ ನಂತರ ತೀರ್ಥಹಳ್ಳಿ ಮಾರ್ಗವಾಗಿ ಶೃಂಗೇರಿ ಮೂಲಕ ಅವರು ಮಂಗಳೂರು ತಲುಪುವ ಕಾರ್ಯಕ್ರಮ ನಿರ್ಧಾರವಾಗಿತ್ತು.
ಆ ದಿನ ಶಿವಮೊಗ್ಗದಲ್ಲಿ ಇಂದಿರಾ ಗಾಂಧಿ ನೋಡಲು ಜಿಲ್ಲೆಯ ಮೂಲೆ ಮೂಲೆಯಿಂದ ಸಹಸ್ರಾರು ಜನ ಸ್ವಯಂ ಪ್ರೇರಣೆಯಿಂದ ಬಂದಿದ್ದರು, ಇಂದಿರಾ ಗಾಂಧಿ ಈ ಯಶಸ್ವಿ ಸಭೆ ನಡೆಸಿ ತೀರ್ಥಹಳ್ಳಿಗೆ ನಿರ್ಗಮಿಸುವ ಮಾರ್ಗದಲ್ಲಿ ಇಂದಿರಾರ ಕಾರಿಗೆ ಕಲ್ಲು ಹೊಡೆಯುವ ಹೇಯ ಕೃತ್ಯಕ್ಕೆ ತಯಾರಿ ಒ0ದು ನಡೆದಿತ್ತು.
ಶಿವಮೊಗ್ಗ ತೀರ್ಥಹಳ್ಳಿ ಮಾರ್ಗದಲ್ಲಿ (ಈಗಿನ ಬೈಪಾಸ್ ಸಮೀಪ) ಯುವಕರ ಗುಂಪೊಂದು ಇಂದಿರಾ ವಿರೋದಿ ಘೋಷಣೆಯೊಂದಿಗೆ ಇಂದಿರಾ ಕಾರು ಅಡ್ಡಗಟ್ಟಿ ಕಲ್ಲಿನ ಸುರಿಮಳೆ ನಡೆಸಿತು, ಇಂದಿರಾ ಗಾಂದಿ ಪ್ರಯಾಣಿಸುತ್ತಿದ್ದ ಅಂಬಾಸಿಡರ್ ಕಾರಿನ ಡ್ರೈವರ್ ಚಾಕಚಕ್ಯತೆಯಿಂದ ಆಗಬಹುದಾಗಿದ್ದ ದೊಡ್ಡ ದುರಂತ ತಪ್ಪಿಸಿ ತೀರ್ಥಹಳ್ಳಿ ಕಡೆಗೆ ಕಾರನ್ನು ವೇಗವಾಗಿ ಓಡಿಸುತ್ತಾನೆ.
ಆದರೂ ಆಗಬಾರದ ದುರಂತ ಕಲ್ಲೊಂದು ಕಾರಿನ ಗಾಜು ಮುರಿದು ಇಂದಿರಾರ ನೀಳಕಾಯದ ಮೂಗು ಗಾಯ ಮಾಡುತ್ತದೆ, 60 ವರ್ಷದ ಇಂದಿರಾ ಆ ಕ್ಷಣದಲ್ಲಿ ಏನು ಭಾವನೆ ತಾಳಿದರೋ ಗೊತ್ತಿಲ್ಲ.
ಮಾರ್ಗ ಮಧ್ಯೆ ಮೂಗಿಗೆ ಬ್ಯಾಂಡೇಜು ಮಾಡಿಸಿ ಅದು ಕಾಣಿಸದಂತೆ ಸೆರಗಿನಿಂದ ಮುಖ ಮುಚ್ಚಿ ಪ್ರಯಾಣಿಸಿದರೂ ಈ ಘಟನೆ ದೇಶ ವಿದೇಶದ ಪತ್ರಿಕೆ ಮತ್ತು ರೇಡಿಯೋದಲ್ಲಿ ದೊಡ್ಡ ಸುದ್ದಿ ಆಯಿತು.
ಇಂದಿರಾ ಅಭಿಮಾನಿಗಳು ದುಃಖಪಟ್ಟರೆ ವಿರೋದಿಗಳು ಸಂಭ್ರಮಿಸುತ್ತಾರೆ.
ಅವತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಮುಖ ಕಾಂಗ್ರೇಸ್ ವಿರೋದಿ ಜನತಾ ಪಕ್ಷವಾಗಿತ್ತು, ಜೆ.ಹೆಚ್.ಪಟೇಲರು ಮತ್ತು ಕಾಗೋಡು ತಿಮ್ಮಪ್ಪನವರು ಜನತಾ ಪಕ್ಷದ ಮುಖಂಡರಾಗಿದ್ದರು.
ಮುಂದೆ ಪಟೇಲರು ಜನತಾ ಪರಿವಾರದಿಂದಲೇ ಮುಖ್ಯಮಂತ್ರಿ ಆಗುತ್ತಾರೆ, ಕಾಗೋಡು ಜನತಾ ಪಕ್ಷ ತೊರೆದು ಕಾಂಗ್ರೇಸ್ ಸೇರಿ ಮಂತ್ರಿ ಆಗುತ್ತಾರೆ.
ಇವತ್ತಿಗೂ ಅಂದರೆ 44 ವರ್ಷದ ಹಿಂದೆ ಇಂದಿರಾ ಗಾಂಧಿಗೆ ಕಲ್ಲು ಹೊಡೆದವರು ಯಾರು? ಈ ದುಷ್ಕೃತ್ಯಕ್ಕೆ ಪ್ರೇರಣೆ ನೀಡಿದ ಮುಖಂಡರು ಯಾರು? ಎನ್ನುವುದು ಬಹಿರಂಗ ಆಗಲೇ ಇಲ್ಲ. ಇದೊಂದು ಕರಾಳ ಘಟನೆ ಕಾಂಗ್ರೇಸ್ ಪಕ್ಷದ ಇತಿಹಾಸದ ಪುಟದಿಂದ ಉದ್ದೇಶಪೂರ್ವಕವಾಗಿ ಅಳಿಸಲಾಯಿತಾ? ಗೊತ್ತಿಲ್ಲ.
Comments
Post a Comment