ಮೈಸೂರಿನ ಪ್ರಾಂತ್ಯದ ಬರಗಾಲದಿಂದ ಆದ ವಲಸೆ, ವೈವಾಹಿಕ ಸಂಬಂದಗಳ ವ್ಯಥೆ, ರಾಜರು ನಿರ್ಮಿಸಿದ ಕಾವೇರಿ, ಹೇಮಾವತಿ ಮತ್ತು ಲಕ್ಷ್ಮಣತೀರ್ಥ ನದಿ ಆಣೆಕಟ್ಟಿಂದ ಆದ ಪುನಶ್ಚೇತನ.
#ಹೆಣ್ಣು_ಮಕ್ಕಳನ್ನು_ಮಲೆನಾಡಿಗೆ_ತಂದು_ಮದುವೆ_ಮಾಡಿ_ಕೊಟ್ಟು_ಹೋಗುತ್ತಿದ್ದರು.
#ಈಗಲೂ_ಎಷ್ಟೋ_ಕುಟುಂಬಗಳು_ತಮ್ಮ_ಮೂಲ_ಹುಡುಕಲಾಗಲಿಲ್ಲ.
#ಮೈಸೂರಿನ_ಕುಂಬಾರ_ಕನ್ಯೆಯರನ್ನು_ಮಲೆನಾಡಿಗೆ_ತ೦ದು_ಮದುವೆ_ಮಾಡಿ_ಬಿಟ್ಟು_ಹೋಗುತ್ತಿದ್ದರು
ನಮ್ಮೂರ ಸಮೀಪದ ಹರತಾಳು ಎಂಬ ಗ್ರಾಮದ ಕುಂಬಾರ ದಂಪತಿಗಳು 1970 ರಿಂದ 1995 ರ ವರೆಗೆ ಆನಂದಪುರ೦ನ ಸಂತೆ ಮಾರ್ಕೆಟ್ ನಲ್ಲಿ ಮಣ್ಣಿನ ಮಡಿಕೆಗಳ ಮಾರಾಟದ ಅಂಗಡಿ ಇಟ್ಟುಕೊಂಡಿದ್ದರು.
ದೀಪಾವಳಿ ಅಂತ ಹಬ್ಬದ ಸಂಭ್ರಮದಿಂದ ಹಿಡಿದು ಸಾವಿನ ಶೋಕದ ಮನೆಯವರೆಗೆ ಅವರ ಅಂಗಡಿ ಅನಿವಾರ್ಯ ಆಗಿತ್ತು.
ವಾರಕ್ಕೊ ಹತ್ತು ದಿನಕ್ಕೊ ಒಮ್ಮೆ ಹಳ್ಳಿಯ ತಮ್ಮ ಮನೆಗೆ ಹೋಗಿ ಕೃಷಿ ಇತ್ಯಾದಿ ಕೆಲಸ ಮತ್ತು ಮಡಿಕೆ ತಯಾರಿ ಮಾಡಿಕೊಂಡು ಎತ್ತಿನಗಾಡಿಯಲ್ಲಿ ಪುನಃ ವಾಪಾಸು ಬರುತ್ತಿದ್ದರು.
ಕುಂಬಾರ ದಂಪತಿಗಳಿಗೆ ಸಂತಾನ ಭಾಗ್ಯ ಇಲ್ಲದ್ದರಿಂದ ತುಂಬಾ ದುಃಖ ವ್ಯಕ್ತಪಡಿಸುತ್ತಿದ್ದರು ಆಗ ನಮ್ಮದು ಸಣ್ಣ ಅಕ್ಕಿ ಮಾಡುವ ಮುಂಬಾಯಿಯ ಥಾನೆಯಿಂದ ತಂದ ಅಕ್ಕಿಗಿರಣಿ ನಮ್ಮ ತಂದೆ ಪ್ರಾರಂಭಿಸಿದ್ದರು ಈ ಯಂತ್ರದಲ್ಲಿ 5 kg ಭತ್ತ ಕೂಡ ಅಕ್ಕಿ ಮಾಡಬಹುದಾಗಿತ್ತು (ದೊಡ್ಡ ರೈಸ್ ಮಿಲ್ ನಲ್ಲಿ ಕನಿಷ್ಟ 50 kg ಯಿಂದ ಪ್ರಾರಂಭ) ಹಾಗಾಗಿ ಅನೇಕ ಸಣ್ಣ ರೈತರು ಮತ್ತು ಈ ರೀತಿ ಭತ್ತ ಪಡೆದು ಮಡಿಕೆ ಮಾರುವವರು, ಕ್ಷೌರದ ಕೂಲಿ ಆಗಿ ಭತ್ತ ಪಡೆಯುವ ಕೌರಿಕರು, ದನ ಕಾಯುವವರು, ಮೀನು ಮಾರಾಟ ಮಾಡುವವರು, ವರ್ತನೆಯ ವೀಳ್ಯದೆಲೆ ತಂಬಾಕು ನೀಡುವವರು ನಮ್ಮ ಅಕ್ಕಿ ಗಿರಣಿಗೆ ಖಾಯಂ ಗಿರಾಕಿ ಮತ್ತು ಒಂದು ವರ್ಷ SSLC ಪರೀಕ್ಷೆ ಬರೆಯದೆ ಮುಂದೂಡಿದ ನನಗೆ ನಾನೇ ಪ್ರಾರಂಬಿಸಿದ ದಿನಸಿ ಅಂಗಡಿ ಜೊತೆ ಈ ಅಕ್ಕಿ ಗಿರಣಿ ಡ್ರೈವರ್ ಹುದ್ದೆ ಬೋನಸ್ (ಶಿಕ್ಷೆ😂) ಆಗಿ ಬಂದಿತ್ತು.
ಆಗೆಲ್ಲ ಈ ಕುಂಬಾರಮ್ಮನ ಬಾಲ್ಯದ ಕಥೆ ಕೇಳುವುದು ಅವರ ದುಃಖಾಂತ್ಯದ ಕಥೆಯಲ್ಲಿ ಕಣ್ಣೀರಾಗುತ್ತಿದ್ದೆ.
ಇವರ ತಂದೆಗೆ ಐದು ಜನ ಹೆಣ್ಣು ಮಕ್ಕಳು ಆಗೆಲ್ಲ ಮೈಸೂರು ಭಾಗದಲ್ಲಿ ವಿಪರೀತ ಬರಗಾಲದ ಕಪ್ಪದ ದಿನಗಳು, ಜನ ವಲಸೆ ಹೋಗುತ್ತಿದ್ದರು ಆದರೆ ಕೃಷಿ ಭೂಮಿ, ಕುಂಬಾರಿಕೆ ಮತ್ತು ಜಾನುವಾರುಗಳಿದ್ದ ಇವರ ಕುಟುಂಬ ಹೋಗುವುದಾದರೂ ಎಲ್ಲಿಗೆ? ಇನ್ನು ಈ ಭಾಗದಲ್ಲಿ ಮದುವೆ ಸಂಬಂದ ಬೆಳೆಸುವುದಾದರೂ ಯಾರು? ಈ ಚಿಂತೆಯಲ್ಲಿದ್ದಾಗಲೇ ಇವರಿಗೆ ಗೊತ್ತಾಗಿದ್ದು ದೂರದ ಮಲೆನಾಡಿನಲ್ಲಿ ಇರುವ ಇವರ ಸ್ವಜಾತಿ ಕುಂಬಾರರ ಕುಟುಂಬದಲ್ಲಿ ಕನೈಯರ ಕೊರತೆ ಇದೆ ಆದರೆ ಅವರು ಇಷ್ಟು ದೂರ ಬಂದು ಸಂಬಂದ ಮಾಡುವುದಿಲ್ಲ ನಾವೇ ಕನ್ಯೆ ಅವರ ಮನೆ ಬಾಗಿಲಿಗೆ ಒಯ್ದು ತೋರಿಸಿ ಒಪ್ಪಿಗೆ ಆದರೆ ಮದುವೆ ಮಾಡಿ ಬರಬಹುದು ಆದರೆ ಮುಂದೆ ಅಷ್ಟು ದೂರ ಬಂದು ಹೋಗಲಾಗದೆ ಸಂಬಂದ ಉಳಿಯಲಾರದು ಆದರೆ ಮದುವೆ ಇಲ್ಲದೆ ಮೈಸೂರಿನ ಕುಂಬಾರ ಕನ್ಯೆ ಜೀವನ ಮಾಡುವುದು ತಪ್ಪಿಸ ಬಹುದೆಂಬ ಸಲಹೆ.
ತಮ್ಮ ಹೆತ್ತ ಕರಳ ಕುಡಿ ಎಲ್ಲೋ ಬಿಟ್ಟು ಬರುವ ಈ ಕ್ರೌರ್ಯ ಒಪ್ಪದ ಕುಟುಂಬ ಕೆಲ ವರ್ಷ ಸ್ಥಳಿಯವಾಗಿ ವರಾನ್ವೇಷಣೆ ಮಾಡಿಯೂ ವಿಫಲರಾದಾಗ, ವರ್ಷದಿಂದ ವರ್ಷಕ್ಕೆ ಮಳೆ ಇಲ್ಲದೆ ಬೆಳೆ ಇಲ್ಲದೆ ಹೈರಾಣಾದ ಇವರ ಕುಟುಂಬ ಎತ್ತಿನಗಾಡಿಯಲ್ಲಿ ದಾರಿ ಮಧ್ಯದ ಖರ್ಚು ವೆಚ್ಚಕ್ಕಾಗಿ ಮಣ್ಣಿನ ಮಡಿಕೆ ಹೇರಿ ಅದರ ಮದ್ಯ ಇವರಿಬ್ಬರು ಅಕ್ಕ ತಂಗಿಯರನ್ನು ಕೂರಿಸಿ ಕೊಂಡು ಬಂದು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಹರತಾಳಿನಲ್ಲಿದ್ದ ಕುಂಬಾರರ ಕ್ಯಾಂಪಿನಲ್ಲಿ ಕನ್ಯೆ ತೋರಿಸಿ ಮದುವೆ ಮಾಡಿದರು, ಇನ್ನೂ ಉಳಿದ ತಂಗಿಯನ್ನು ಮದುವೆ ಹೀಗೆ ಒಳ್ಳೇ ಜಾಗ ನೋಡಿ ಮದುವೆ ಮಾಡಿ ಊರಿಗೆ ಹೋಗಿ ಮುಂದಿನ ವರ್ಷ ತಾಯಿ, ತಮ್ಮಂದಿರು ಮತ್ತು ತಂಗಿಯರನ್ನು ಕರೆತರುವುದಾಗಿ ಕಣ್ಣಲ್ಲಿ ಬಂದ ಕಣ್ಣೀರು ಮರೆ ಮಾಚಿಕೊಂಡು ಹೋದ ಅಪ್ಪ ತಂಗಿಗಾಗಿ 60 ವರ್ಷದಿಂದ ಕಾಯುತ್ತಾ ಇದೀನಿ ಕಾಣಪ್ಪ! ಅಂತ ಕಣ್ಣೀರಿಟ್ಟಾಗೆಲ್ಲ ನಾನೂ ಕಣ್ಣೀರಾಗದೆ ನನ್ನ ವೇದನೆ ಕಡಿಮೆ ಆಗುವುದಾದರೂ ಹೇಗೆ?
ಆಗ ನನಗೆ 16 ವರ್ಷ ಆಗಲೇ ನಾನು ತೀರ್ಮಾನ ಮಾಡಿದ್ದೆ ದೊಡ್ಡವನಾಗಿ ನನ್ನ ಸ್ವಂತ ದುಡಿಮೆ ಪ್ರಾರಂಭ ಮಾಡಿದಾಗ ಈ ಕುಂಬಾರಮ್ಮನ ಕುಟುಂಬದ ಪುನರ್ಮಿಲನ ಮಾಡಿಸಬೇಕೆಂದು ಈ ನನ್ನ ತೀರ್ಮಾನ ಕೇಳಿದಾಗೆಲ್ಲ ಕುಂಬಾರಮ್ಮ ತನ್ನ ಎರೆಡೂ ಕೈ ಬೆರಳಿಂದ ನನ್ನ ಮುಖ ಸವರಿ ಲಟಿಕೆ ಚಟಚಟಂತ ತೆಗೆದು "ನನ್ನ ರಾಜಕುಮಾರ ನಿನಗೆ ನಂಜನ ಗೂಡಿನ ನಂಜುಂಡೇಶ್ವರ ದೇವರು ಎಲ್ಲಾ ಶಕ್ತಿ ನೀಡಲಿ " ಅಂತ ಆಶ್ರೀ ವಾದ ಮಾಡುತ್ತಿದ್ದರು.
ಆ ಕಾಲ ಬಂತು 1993ರಿಂದ 1995ರಲ್ಲಿ ಶಿವಮೊಗ್ಗ ಜಿಲ್ಲಾ ಪಂಚಾಯತ್ ಸದಸ್ಯನಾದಾಗ ನಮ್ಮ ಗ್ರಾಮ ಪಂಚಾಯತ್ ಗೆ ಸೇರಿದ ಇರುವಕ್ಕಿ(ಈಗ ಕೃಷಿ ವಿಶ್ವವಿದ್ಯಾಲಯ ಇಲ್ಲಿ ಆಗಿದೆ.) ಯಲ್ಲಿ ಕುಂಬಾರರ ದೊಡ್ಡ ಕ್ಯಾಂಪಲ್ಲಿ ಈ ಬಗ್ಗೆ ಮಾಹಿತಿಗಾಗಿ ಚರ್ಚಿಸಿದಾಗ ಅಲ್ಲೂ ಕೆಲ ಮೈಸೂರಿನ ಕನ್ಯೆಯರ ಸಂಬಂದ ಆದ ಬಗ್ಗೆ ಗೊತ್ತಾಯಿತು.
ನಂಜನಗೂಡಿನ ಪ್ರಸಿದ್ದ ಔಷದ ಕಾರ್ಖಾನೆಯಲ್ಲಿ ಮುಖ್ಯ ಸೆಕ್ಯುರಿಟಿ ಅಧಿಕಾರಿ ಆಗಿದ್ದ ನನ್ನ ಬಂಧು ರಾದಾಕೃಷ್ಣರ ನೆರವು ಪಡೆದೆ, ಅವರೂ ಈ ಪುನರ್ಮಿಲನ ಕಾರ್ಯಕ್ಕೆ ಕೈ ಜೋಡಿಸಿ ಅವರ ವಾರದ ರಜೆಯಲ್ಲಿ ಹುಡುಕಾಟ ಮಾಡಿದರು.
ಮೈಸೂರು ಮಂಡ್ಯ ಜಿಲ್ಲೆಗಳಲ್ಲಿ ಬರಗಾಲದಿಂದ ಜನ ಎಷ್ಟು ಸತಾವಣೆಗೊಂಡಿದ್ದರೆಂದರೆ 1875-76 ರಲ್ಲಿ ಒಂದೇ ಹನಿ ಭೂಮಿಗೆ ಬಿದ್ದಿರಲಿಲ್ಲ, ಮೈಸೂರು ರಾಜ್ಯದ ಐದನೇ ಒಂದು ಭಾಗದ ಜನ ಬರಗಾಲದಿಂದ ರಾಜ್ಯದಿಂದಲೇ ವಲಸೆ ಹೋದಾಗ ರಾಜರು 1911 ರಲ್ಲಿ ಕಾವೇರಿ ನದಿ ಮತ್ತು ಅದರ ಜೊತೆಯ ಹೇಮಾವತಿ ಮತ್ತು ಲಕ್ಷ್ಮಣ ತೀರ್ಥ ನದಿಗಳಿಗೆ ಆಣೆಕಟ್ಟು ಕಟ್ಟಿ 1932 ರಲ್ಲಿ ನೀರು ಹರಿಸುವ ತನಕ ಈ ವಲಸೆ ಮುಂದುವರಿದಿತ್ತು.
81 ಲಕ್ಷ ರೂಪಾಯಿ ಅಂದಾಜು ವೆಚ್ಚದಲ್ಲಿ ಸುಣ್ಣ ಮಿಶ್ರಿತ ಗಚ್ಚುಗಾರೆಯಿಂದ ನಿರ್ಮಾಣವಾದ ಬೃಹತ್ ನೀರಾವರಿ ಡ್ಯಾಂ ಕೃಷ್ಣರಾಜ ಸಾಗರದಿಂದ ಸುಮಾರು ಹತ್ತು ಸಾವಿರ ಜನ ನಿರ್ವಸಿತರಾದರು ಸರ್.ಎಂ.ವಿಶ್ವೇಶ್ವರಯ್ಯರ ಹೆಸರು ಅಜರಾಮರ ಆಯಿತು, ಸರ್ ಮಿರ್ಜಾ ಇಸ್ಮಾಯಿಲರ ಆಸಕ್ತಿಯಿಂದ ನಿರ್ಮಾಣ ಆದ ಬೃಂದಾವನ ಈಗ ವಿಶ್ವ ವಿಖ್ಯಾತ ಪ್ರವಾಸಿ ತಾಣ ಆಗಿದೆ.
ಈ ಕುಂಬಾರ ಕುಟುಂಬದ ಪುನರ್ಮಿಲನದ ಶೋದದಲ್ಲಿ ಬೇರೆ ಕೆಲ ಕುಟುಂಬಗಳ ಪುನರ್ಮಿಲನ ಆಯಿತು ಅವರ ಪೋಷಕರು ಜೀವ೦ತ ಇರಲಿಲ್ಲ ಆದರೆ ಅವರ ಸಹೋದರ ಸಂಬಂದಿ ಕಳ್ಳುಬಳ್ಳಿಗಳು ಸಿಕ್ಕಿದರು ಎರೆಡೂ ಕಡೆ ಕಳೆದು ಹೋದ ಮೈಸೂರು ಪ್ರಾಂತ್ಯದ ಬರಗಾಲ ಸಂಬಂದಿ ಸಂಬಂದ ಪುನರ್ ಪ್ರಾರಂಭ ಆಗಿ ಹಾಲು ಜೇನಿನಂತಾಯಿತಾದರೂ ನಾನು ಶೋದ ಮಾಡಲು ಮೂಲ ಕಾರಣವಾದ ಕುಂಬಾರಮ್ಮನ ಕುಟುಂಬ ಮಾತ್ರ ಸಿಗಲಿಲ್ಲ ಇದು ನನಗೆ ತುಂಬಾ ಬೇಸರದ ವಿಷಯ ಆಗಿತ್ತು.
ಇತ್ತೀಚೆಗೆ ವಯೋಸಹಜ ಕಾಯಿಲೆಯಿಂದ ಕುಂಬಾರಮ್ಮ ದಂಪತಿಗಳೂ ಇಹ ಲೋಕ ತ್ಯಜಿಸಿದ್ದಾರೆ ಅವರ ಸಾಕು ಮಗನ ಕುಟುಂಬ ಹಳ್ಳಿಯಲ್ಲಿದೆ.
Comments
Post a Comment