FB ಲೇಖನ ಕೃಪೆ: ಶ್ರೀ ರಾಘವೇಂದ್ರ ಶಮಾ೯ ತಲವಾಟ.
ನಿನ್ನ ಕಣ್ಣು ಸ್ವಲ್ಪ ಅರಿಶಿನ ಬಣ್ಣಕ್ಕೆ ಕಾಣಿಸ್ತಲಾ..! ಕಾಮಾಲೆಯಾ ಗೀಮಾಲಾಯೆ ಆಯಿಕ್ಕು ಮಾರಾಯಾ, ಔಷಧಿ ತಗ " ಅಂದರು ಮೂವತ್ವರ್ಷದ ಹಿಂದೆ ಒಬ್ಬರು.ಅವರು ಹೇಳಿದಮೇಲೆ ಸುಸ್ತು ಊಟ ಸೇರುವುದಿಲ್ಲ ಮುಂತಾದ ಸಮಸ್ಯೆ ಶುರುವಾಯಿತು. ನಿಜವಾಗಿಯೂ ಕಾಮಾಲೆಯೋ ಅಥವಾ ಅವರು ಹೇಳಿದ್ದಕ್ಕೆ ಹಾಗೆ ಆಯಿತೋ ಗೊತ್ತಿಲ್ಲ. ಯಾವುದಕ್ಕೂ ಇರಲಿ ಅಂತ ನಮ್ಮ ದೊಡ್ಡಪ್ಪ ಕಾಮಾಲೆಗೆ ಔಷಧಿಕೊಡುತ್ತಿದ್ದರು ಅವರ ಬಳಿ ಹೋದೆ. ದೊಡ್ಡಪ್ಪನ ಮಗ ಮೋಹನಣ್ಣ "ಔಷಧಿ ಆನು ಬೇಕಾದ್ರೂ ಕೊಡ್ತಿ, ಆದರೆ ನಿನಗೆ ಕಾಮಾಲೆ ಅಲ್ಲ, ಕಾಮಾಲೆ ಅಲ್ದಿದ್ರೂ ಈ ಔಷಧಿ ತಗಳ್ಳಕ್ಕು, ಆದರೆ ನಾಲ್ಕ್ ತಾಸು ಮಳ್ ಹಿಡಿತು, ಬಟ್ ಲಿವರ್ರಿಗೆ ಒಳ್ಳೆದು" ಅಂದ. "ಮಳ್ ಹಿಡಿತು ಅಂದ್ರೆ ಎಂತಾಕ್ತು?". ಅಂತ ಕೇಳಿದೆ'
" ಔಷಧಿ ತಗಂಡು ಸ್ವಲ್ಪಹೊತ್ತಿನ ನಂತರ ಕಂಬಳಿ ಹುಳ, ಬೆಕ್ಕು ಕಾಣ್ತು, ಗೋಟಾಗಾರಿನ ಮಧುರ ಹೋದ ತಿಂಗಳು ಔಷಧಿ ತಗಂಡವ " ನೋಡು ನೋಡು ಸಾಲು ಸಾಲು ಬೆಕ್ಕು ಅಂತ ಕೂಗ್ತಿದ್ದ" ಆದ್ರೆ ಅಲ್ನೋಡಿರೆ ಎಂತದೂ ಇರ್ಲೆ" ಹಂಗೆ ಭ್ರಮೆ ಹುಟ್ಟಿಸ್ತು, ಆವಾಗ ಪದೇ ಪದೇ ಮಜ್ಜಿಗೆ ಕುಡಿಯಕು, ಮಧ್ಯಾಹ್ನ ಫುಲ್ ಕಡಿಮೆ ಆಕ್ತು" ಎಂದು ಅನುಭವದ ಸುದೀರ್ಘ ಭಾಷಣ ಕೊಟ್ಟ.
"ಅಯ್ಯೋ ಭ್ರಮೆ ಸೈಯಲ, ಮಾನಸಿಕವಾಗಿ ಆನು ಗಟ್ಟಿ, ಇದೆಲ್ಲ ಡೋಂಟ್ ಕೇರ್" ವಯಸ್ಸಿಗನುಗುಣವಾದ ವಾದ ಹರಿಬಿಟ್ಟೆ.
"ಸರಿ ನಿನಗೆ ಧೈರ್ಯ ಇದ್ರೆ ಖುಷಿ, ಲಿವರ್ ಆರೋಗ್ಯ ಜಾಸ್ತಿಯಾಗ್ತು, ತಗ, ವಾರಮಕ ಕೊಡ ಔಷಧಿ ಭಾನುವಾರ ಬೆಳಗ್ಗೆ ಬಾ" ಅಂದ.
ಭಾನುವಾರ ಬೆಳಗ್ಗೆ ಹೋಗಿ ಹಸಿರು ಬಣ್ಣದ ಎರಡು ಚಮಚದಷ್ಟು ಔಷಧಿ ತಂದು ,ಮನೆಯಲ್ಲಿ ಅಮ್ಮನ ಹತ್ತಿರ " ಹಿಂಗೆ ಹಿಂಗೀಂಗೆ ಅಂಥ ಆರಿಶಿನ ಕಾಮಾಲೆಯ ಔಷಧಿ ತೆಗೆದುಕೊಳ್ಳುವ ವಿಷಯ ಹೇಳಿ, ಕುಡಿದು ಅಪ್ಪಯ್ಯನ ಮಂಚ ಹತ್ತಿ ಮಲಗಿದೆ.
ಮಲಗಿ ಅರ್ಧಗಂಟೆಯಾದರೂ ಅರಾಂ.ಓಹ್ ನಾನು ಗಟ್ಟಿ ಅಂತ ಖುಷಿಯಾಯಿತು. ಹಾಗೆ ಸುಮ್ಮನೆ ಮಲಗುವುದು ಯಾಕೆ ಎಂದು ಒಂದು ರೌಂಡ್ ಕೊಟ್ಟಿಗೆವರೆಗೆ ಹೋದೆ.ಮತ್ತೆ ಮಲಗುವ ಮನಸ್ಸಾಯಿತು. ಮಲಗಿದೆ, ಕಣ್ಮುಚ್ಚಿದರೆ ಎತ್ತಿ ಎತ್ತಿ ಒಗೆದಂತಾಯಿತು. ಕಣ್ಬಿಟ್ಟೆ, ಹೊದ್ದ ಕಂಬಳಿಯ ಮೇಲೊಂದು ದಪ್ಪನೆಯ ಕಂಬಳಿಹುಳ ನಿಧಾನ ಹರೆದು ಹೋಗುತ್ತಾ ಇತ್ತು. ಥೋ ದರಿದ್ರಅಂದು ತೋರ್ಬೆರಳು ಮಡಚಿ ಪಟಕ್ಕನೆ ಹೊಡೆದೆ ,ನೊ ಕಂಬಳಿ ಹುಳ ಇಲ್ಲ. ತಕ್ಷಣ ನೆನಪಾಯಿತು ಓಹೋ ಔಷಧಿಯ ಪ್ರಭಾವ ಹೀಗೆಲ್ಲ ಅಂತ. ಮತ್ತೆ ಕಣ್ಮುಚ್ಚಿದೆ, ಊಹ್ಞೂ ನಿದ್ರೆ ಮಾಡಲಾಗದು ಎತ್ತಿಬೀಸಿ ಒಗೆದ ಅನುಭವ. ಕಣ್ಮಿಟ್ಟೆ ಈ ಬಾರಿ ಹತ್ತಾರು ಕಂಬಳಿ ಹುಳ ಹರೆದು ಹೋಗುತ್ತಿತ್ತು.ಭ್ರಮೆ ಖಂಡಿತಾ ಅಲ್ಲ ಅಂತನಿಸಿ ಕೊಡವಿದೆ ಕಂಬಳಿಯ ,ಒಂದೇ ಒಂದು ಹುಳವೂ ಇಲ್ಲ. ಮತ್ತೆ ಕಣ್ಮುಚ್ಚಿದೆ. ಈ ಬಾರಿ ಕ್ಷಣವೂ ಕಣ್ಮುಚ್ಚಲಾಗಲಿಲ್ಲ, ಗುಡ್ಡ ಹತ್ತಿ ಜೋರಾಗಿ ಓಡಿಹೋಗೋಣ ಅನಿಸಲು ಶುರುವಾಯಿತು. ಪಟಕ್ಕನೆ ಎದ್ದೆ ಜಗಲಿಯ ಬಾಗಿಲವರೆಗೆ ಬಂದೆ, ಉಫ್ ಔಷಧಿಯ ಪ್ರಭಾವ ಅಂತ ನೆನಪಾಗಿ ಮತ್ತೆ ಮಂಚ ಹತ್ತಿದೆ. ಮಲಗಿದೆ ಆದರೆ ನಿದ್ರೆಯಿರಲಿ ಮಲಗಲೂ ಆಗದ ಚಡಪಡಿಕೆ, ಈ ಬಾರಿ ಕಂಬಳಿ ಹುಳ ಗೋಡೆಯ ತುಂಬೆಲ್ಲಾ ಕಾಣಿಸತೊಡಗಿತು.ಅಷ್ಟರಲ್ಲಿ ಮಜ್ಹಿಗೆ ಕುಡಿಯಬೇಕೆಂಬುದು ನೆನಪಾಯಿತು, ಅಮ್ಮನ ಹತ್ತಿರ ಮಜ್ಜಿಗೆ ಕೊಡು ಎಂದೆ. ಆವಾಗ ಮೋಹನಣ್ಣ ಅನುಭವ ಇಲ್ಲದೆ ಜಾಸ್ತಿ ಡೋಸ್ ಕೊಟ್ಟುಬಿಟ್ಟನಾ ಎಂಬ ಅನುಮಾನ ಕಾಡಿ ಸಾಯುವ ಭಯ ಕಾಡತೊಡಗಿತು.ಅಮ್ಮನ ಹತ್ತಿರ. ಇದೇಕೋ ಯಡವಟ್ಟಾಯಿತು ಒಂಚೂರು ಮೋಹನಣ್ಣನ ಬರಹೇಳು ಪೋನ್ ಮಾಡಿ ಅಂತ ಹೇಳಿ ಮಜ್ಜಿಗೆ ಕುಡಿದು ಮಲಗಲು ಮಂಚದ ಬಳಿ ಹೋದರೆ ಮಂಚದ ತುಂಬೆಲ್ಲಾ ಕಂಬಳಿ ಹುಳದ ರಾಶಿ. ಅವುಗಳಲ್ಲಿ ಕೆಲವು ನನ್ನತ್ತ ನೋಡಿ ಹಲ್ಕಿಸಿಯುತ್ತಿತ್ತು, ಕೆಲವು ಮುಸಿಡಿ ಉದ್ದ ಮಾಡುತ್ತಿತ್ತು. ಧೈರ್ಯ ಮಾಡಿ ಪಟಾರನೆ ಹೊಡೆದೆ ಎಲ್ಲಾ ಮಾಯವಾಯಿತು. ಏನಾದರಾಗಲಿ ಅಂತ ಮಲಗಿದೆ ಕೊಂಚ ಒರಕು ಬಂದಂತಾಯಿತು. ಸ್ವಲ್ಪ ಸಮಯದ ನಂತರ ಕಣ್ಬಿಟ್ಟರೆ ಮೋಹನಣ್ಣ "ಏನಾ..... :) ? " ಎನ್ನುತ್ತಾ ಎದುರು ನಿಂತಿದ್ದ. ಮಜ್ಜಿಗೆಯ ಪ್ರಭಾವದಿಂದ ಕೊಂಚ ನಿಯಂತ್ರಣಕ್ಕೆ ಬಂದಿತ್ತು ಔಷಧಿಯ ಪ್ರಭಾವ. " ಎಂತ ಡೋಸು ಜಾಸ್ತಿಯಾಗಲ್ಲೆ ಎಂತೂ ಇಲ್ಲೆ ಸುಮ್ನೆ ಮಲಗು ಸರಿಯಾಕ್ತು" ಅಂತ ಹೇಳಿ ಹೋದ ಮೋಹನಣ್ಣ.
ಮತ್ತೆ ಮತ್ತೆ ಮಜ್ಜಿಗೆ ಕುಡಿದು ಮಲಗಿದೆ ನಿಧಾನ ನಿದ್ರೆ ಆವರಿಸಿತು. ಕನಸು ಕನಸು ಒಂದಕ್ಕೊಂದು ಸಂಬಂಧವಿಲ್ಲದ್ದು. ಗಟ್ಟಿ ಎಚ್ಚರವಾಗಿದ್ದು ಮತ್ತೆ ಒಂದು ಗಂಟೆಗೆ. ಆಗ ನಿರಾಳವಾಗಿತ್ತು. ಮಜ್ಜಿಗೆ ಅನ್ನ ಊಟ ಮಾಡಿ ಮಲಗಿದೆ, ಸೊಂಪು ನಿದ್ರೆ ಎಚ್ಚರವಾದಾಗ ಐದು ಗಂಟೆ. ಎಲ್ಲ ಸ್ವಚ್ಛ ನಿರಾಳವಾಗಿತ್ತು. ಸರಿ ಎಂದು ಕಾಫಿಕುಡಿದು ಪೇಪರ್ ಓದೋಣ ಅಂತ ಕುಂತರೆ ಒಂದಕ್ಷರವೂ ಕಾಣದು ಎಲ್ಲಾ ಮಬ್ಬು ಮಬ್ಬು. ಅಯ್ಯ ಒಂದು ಮಾಡಲು ಹೋಗಿ ಮತ್ತೊಂದಾಯಿತಾ ಎಂಬ ಭಯ ಕಾಡತೊಡಗಿತು. ನನ್ನ ಅವತಾರ ಬೆಳಗ್ಗೆಯಿಂದ ನೋಡಿದ್ದ ಅಪ್ಪಯ್ಯ " ಎಂತೂ ಆಗಲ್ಲೆ ಮಾರಾಯ, ಕಣ್ಣು ಸರಿ ಇದ್ದು ಎಲ್ಲಾ ಸರಿ ಇದ್ದು, ಔಷಧಿ ತಗಂಡಿದ್ದಕ್ಕೆ ಕಣ್ ಕಲ್ಡಿರ್ತು ಅದು, ಬೇಕಾರೆ ಎನ್ಮನೆ ಚಾಳಿಸ್ ಕನ್ನಡಕ ಹಾಕ್ಯಂಡು ನೋಡು" ಎಂದು ಅರ್ದ ಗದರಿದ ದನಿಯಲ್ಲಿ ಬಂತು. ಸರಿ ಅಂತ ಅಪ್ಪಯ್ಯನ ಕನ್ನಡಕ ಹಾಕಿಕೊಂಡು ಓದಿದೆ. ಎಲ್ಲವೂ ಸ್ಪಷ್ಟ. ಅಬ್ಬ ಗಿಡದ ಔಷಧಿಯೇ ಅಂದೆನಿಸಿತು. ಮಾರನೇ ದಿವಸ ಲಕಲಕ ವಾವ್.
ಇಷ್ಟೆಲ್ಲಾ ಘಟನೆಗೆ ಕಾರಣವಾದ ಆ ಔಷಧಿಯ ಗಿಡವೇ ಈ ಪಟದಲ್ಲಿದ್ದುದು. ಅದರ ಹೆಸರು ಉಮ್ಮಾತ. ಈಗ ನಿಮಗೆ ಅರ್ಥವಾಗಿರಬಹುದು ಪ್ರಕೃತಿಯಲ್ಲಿ ಏನೇಲ್ಲಾ ಇದೆ ಅಂತ.
#ಕೊನೆಯದಾಗಿ: ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ನೋಡಿಕೊಳ್ಳಲು ಮಾತ್ರಾ ಬೇರೆಯವರ ಕಣ್ಣೇ ಬೇಕು.
Comments
Post a Comment