ಶ್ರೀ ಸ್ವರ್ಣವಲ್ಲೀ ಮಠದಲ್ಲಿ ಪ್ರಜ್ವಲಿಸಿದ ಖೇಚರಿಯೋಗಿ
–---------------------------------------------------- -------
ಮಠಮಂದಿರಗಳು ಧಾರ್ವಿುಕ ಕಾರ್ಯಕ್ರಮಗಳಿಗೆ ಮೀಸಲಾದ ಪುಣ್ಯಸ್ಥಳ. ಮನೆಗೊಂದು ಯಜಮಾನ, ಮಠಕ್ಕೊಂದು ಗುರುಗಳು ಇರುವುದು ಲೋಕರೂಢಿ. ಹೀಗೆ ಪ್ರತಿಯೊಂದಕ್ಕೂ ಒಬ್ಬ ನಾಯಕ ಬೇಕೇ ಬೇಕು. ಪ್ರತಿ ಮನುಜರಲ್ಲಿಯೂ ವಿಭಿನ್ನ ಪ್ರತಿಭೆಯಿದೆ. ಅಂಥವರು ಮಹಾನ್ ಸಾಧನೆ ಮಾಡಲು ಕಠಿಣ ಪರಿಶ್ರಮ, ಸುದೀರ್ಘ ಸಮಯ, ಸಹನೆ, ತಾಳ್ಮೆ, ಏಕಾಗ್ರತೆ, ಛಲ ಎಲ್ಲವೂ ಅತ್ಯಗತ್ಯ. ಅವನ್ನೆಲ್ಲ ಮೈಗೂಡಿಸಿಕೊಂಡರೇ ಅಪ್ರತಿಮ ಸಾಧನೆ ಮಾಡಲು ಸಾಧ್ಯ. ಈ ಮಾತಿಗೆ ಉತ್ತಮ ನಿದರ್ಶನ ಕಲಸಿಯ ಶ್ರೀ ನೃಸಿಂಹಾನಂದ ಸರಸ್ವತೀ ಸ್ವಾಮಿಗಳು.
ಖೇಚರೀಯೋಗಿ ಎಂದೇ ಪ್ರಸಿದ್ಧವಾಗಿರುವ ಕಲಸಿಯ ಶ್ರೀಗಳು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಬನವಾಸಿಯವರು. ಇವರು 1917ರ ಮಾರ್ಚ್ 20ರಂದು ಜನಿಸಿದರು. ಇವರಿಗೆ ಪೂರ್ವಾಶ್ರಮದ ಹೆಸರು ಚಿದಂಬರ. ಚಿದಂಬರರಿಗೆ ಬಾಲ್ಯದಲ್ಲಿಯೇ ಉಪನಯನ ನೆರವೇರಿತು. ತಾಯಿಯ ತವರುಮನೆಯಾದ ಕಲಸಿಯಲ್ಲಿ ಪ್ರಾಥಮಿಕ ಶಾಲೆ ಸೇರಿದ ಚಿದಂಬರ, ಭೀಮನಕೋಣೆಯಲ್ಲಿ ವೇದಾಭ್ಯಾಸ ಮಾಡತೊಡಗಿದರು. ಕೆಲವು ವರ್ಷಗಳಲ್ಲಿ ತಂದೆ ನಿಧನರಾದ ಕಾರಣ ತಾಯಿಯೇ ಕುಟುಂಬ ಜವಾಬ್ದಾರಿ ಹೊತ್ತುಕೊಂಡರು. ದಾಯಾದಿಕಲಹದಿಂದ ನೊಂದ ಚಿದಂಬರರಿಗೆ, ಎಲ್ಲವನ್ನೂ ಬಿಟ್ಟು ದೂರ ಹೋಗುವುದೇ ಮೇಲು ಎನಿಸಿತ್ತು. ಒಮ್ಮೆ ಮಿತ್ರರೊಂದಿಗೆ ಯಾಣದ ಭೈರವೇಶ್ವರ ದರ್ಶನಕ್ಕೆಂದು ಹೋದ ಸಂದರ್ಭದಲ್ಲಿಯೇ ಭಗವಾನ್ ಶ್ರೀಧರಸ್ವಾಮಿಗಳ ದರ್ಶನ ಲಭಿಸಿತ್ತು. ಇವರ ಬಗ್ಗೆ ತಿಳಿದ ಶ್ರೀಧರರು, ‘ಕಾಲ ಬಂದಾಗ ಮತ್ತೆ ನಮ್ಮನ್ನು ನೋಡಲು ಬಾ’ ಎಂದು ಮಂತ್ರಾಕ್ಷತೆ ನೀಡಿ, ‘ನೀನು ಬಂದೇ ಬರುತ್ತೀಯಾ’ ಎಂದಿದ್ದರಂತೆ. ಆಗಲೇ ಶಾಲೆಗೆ ವಿದಾಯ ಹೇಳಿದ್ದ ಚಿದಂಬರರು, ಕುಟುಂಬಕ್ಕಾಗಿ ದುಡಿಯತೊಡಗಿದರು. ಅದೇ ಸಂದರ್ಭದಲ್ಲಿಯೇ ಚಿದಂಬರರು ಮನೆ ಬಿಟ್ಟು, ಪುಣ್ಯಕ್ಷೇತ್ರಗಳಲ್ಲಿ ಸಂಚರಿಸುತ್ತಾ ಮಾರ್ಗದರ್ಶನ ನೀಡುವ ಗುರುಗಳನ್ನು ಅರಸುತ್ತ ಸಾಗಿದರು. ಗೋಕರ್ಣಕ್ಕೆ ಬಂದು ಎರಡು ವರ್ಷ ವೇದಾಭ್ಯಾಸ ಮಾಡಿದರು. ಆಮೇಲೆ ಕಾಶಿಗೆ ತೆರಳಿ ವೇದಾಭ್ಯಾಸ ಮುಂದುವರಿಸಿದರು. ಎರಡು ವರ್ಷಗಳ ಬಳಿಕ ಶೀಗೇಹಳ್ಳಿಗೆ ಬಂದು ಸ್ವಾಮಿ ಶಿವಾನಂದರಿಂದ ಮಂತ್ರೋಪದೇಶ ಮಾಡಿದರು. ಅದನ್ನು ಸಿದ್ಧಿಸಿಕೊಂಡ ಚಿದಂಬರರು ಶೃಂಗೇರಿಗೆ ಹೋಗಿ ಜಗದ್ಗುರು ಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮಿಗಳಿಂದ ಆಶೀರ್ವಾದ ಪಡೆದರು. ನಾನಾ ಕ್ಷೇತ್ರಗಳಲ್ಲಿ ಸಂಚರಿಸುತ್ತ ಶಿವಮೊಗ್ಗಕ್ಕೆ ಹೋಗಿ ಗಣೇಶ ಸಾಧುಗಳಿಂದ ಪಂಚದಶೀ, ಷೋಡಶೀ ಹಾಗೂ ಶ್ರೀಚಕ್ರೋಪಾಸನಾ ಕ್ರಮದ ಉಪದೇಶ ಪಡೆದರು.
ಹೀಗೆ ಹಲವಾರು ತೀರ್ಥಕ್ಷೇತ್ರಗಳನ್ನು ಸಂದರ್ಶಿಸುತ್ತ 24 ಲಕ್ಷ ಗಾಯತ್ರಿ ಪುರಶ್ಚರಣೆ ನಡೆಸಿ, ನಂತರ ಕಲಸಿಗೆ ತೆರಳಿ ಅಲ್ಲಿನ ನೀಲಕಂಠೇಶ್ವರ ಮತ್ತು ಮಲ್ಲಿಕಾರ್ಜುನ ದೇವರ ಜೀಣೋದ್ಧಾರ ಮಾಡಲು ಜನರಿಗೆ ಪ್ರೇರೇಪಿಸಿದರು. ಆ ವೇಳೆಗಾಗಲೇ ಖೇಚರೀವಿದ್ಯೆಯ ಸಿದ್ಧಿ ಪಡೆದಿದ್ದ ಅವರು ಶೀಗೇಹಳ್ಳಿಗೆ ಬಂದು ಶ್ರೀಧರಸ್ವಾಮಿಗಳ ದರ್ಶನ ಪಡೆದು ತಮ್ಮ ಸಾಧನೆಯ ಬಗ್ಗೆ ವಿವರಿಸಿದರು. ಶ್ರೀಧರರ ಆದೇಶದಂತೆ ಗಾಣಗಾಪುರಕ್ಕೆ ತೆರಳಿ ವಿಶೇಷ ಪೂಜೆಗಳನ್ನು ಮಾಡಿ ಶ್ರೀಚಕ್ರವನ್ನು ವಿಸರ್ಜಿಸಿ, ಮಲ್ಲಿಕಾರ್ಜುನ ದೇವಾಲಯದ ಪಕ್ಕದ ಆಶ್ರಮದಲ್ಲಿ ನೆಲೆಸಿದರು.
ಸಂನ್ಯಾಸ ಸ್ವೀಕಾರ
ಸುದೀರ್ಘವಾದ ತೀರ್ಥಯಾತ್ರೆ, ಅನೇಕ ಸಾಧುಗಳ ಮಾರ್ಗದರ್ಶನ ಪಡೆದುಕೊಂಡ ಚಿದಂಬರರಿಗೆ ಸಂನ್ಯಾಸಿಯಾಗಬೇಕೆನಿಸಿತು. ಒಮ್ಮೆ ಕಂಚಿಯ ಶ್ರೀ ಚಂದ್ರಶೇಖರೇಂದ್ರ ಸರಸ್ವತಿ ಮಹಾಸ್ವಾಮಿಗಳ ದರ್ಶನ ಪಡೆದು ಸಂನ್ಯಾಸ ಸ್ವೀಕಾರಕ್ಕೆ ಆಜ್ಞೆಯಾಗಬೇಕೆಂದು ಪ್ರಾರ್ಥಿಸಿದರು. ಮೊದಲೇ ನಿರ್ಧರಿಸಿದಂತೆ ಸಿದ್ಧಾರ್ಥಿ ಸಂವತ್ಸರದ ಮಾಘ ಕೃಷ್ಣ ಸಪ್ತಮಿ ಶುಕ್ರವಾರ ಶ್ರೀ ಚಂದ್ರಶೇಖರ ಸ್ವಾಮಿಗಳ ಸಾನ್ನಿಧ್ಯದಲ್ಲಿ, ಶ್ರೀ ನಾರಾಯಣಾನಂದ ಸ್ವಾಮಿಗಳಿಂದ ಚಿದಂಬರರು ಸಂನ್ಯಾಸ ಸ್ವೀಕರಿಸಿ ‘ನೃಸಿಂಹಾನಂದ ಸರಸ್ವತೀ’ ಎಂದು ನಾಮಾಂಕಿತಗೊಂಡರು. 1991ರಲ್ಲಿ ಚಾತುರ್ವಸ್ಯದ ವ್ರತದ ಸಂದರ್ಭದಲ್ಲಿ ಸ್ವರ್ಣವಲ್ಲಿ ಶ್ರೀಗಳಿಗೆ ನೃಸಿಂಹಾನಂದ ಶ್ರೀಗಳು ಯೋಗಸಾಧನೆಯ ರಹಸ್ಯಗಳನ್ನು ತಿಳಿಸಿದರು. ನಂತರ ಅವರು ಸ್ವರ್ಣವಲ್ಲಿಯಲ್ಲಿಯೇ ನೆಲೆಸಿದರು. ಈ ಮಹಾನ್ ಸಿದ್ಧಪುರುಷರು 2011ರ ಜನವರಿ 19ರಂದು ಬ್ರಹ್ಮಲೀನರಾದರು.
ಖೇಚರಿಮುದ್ರೆ ಎಂದರೆ…
ಯೋಗಸಾಧನೆಯಲ್ಲಿ ಭೂಚರಿ, ಮಧ್ಯಮ, ಷಣ್ಮುಖಿ, ಶಾಂಭವಿ, ಖೇಚರೀ ಎಂಬ ಐದು ವಿಧದ ಮುದ್ರೆಗಳಿವೆ. ಖೇಚರೀ ಮುದ್ರೆಯಲ್ಲಿ ಭ್ರೂಮಧ್ಯದಲ್ಲಿ ದೃಷ್ಟಿಯನ್ನು ಕೇಂದ್ರೀಕರಿಸಬೇಕು. ಇದು ಲಂಬಿಕಾಯೋಗಕ್ಕೆ ಸಂಬಂಧಿಸಿದ ಮುದ್ರೆ. ನಾಲಗೆಯ ಅಗ್ರಭಾಗವನ್ನು ಹಿಂದಕ್ಕೆ ಬಾಗಿಸಿ ಕಿರುನಾಲಗೆಗೆ ತಾಕಿಸುವುದು ಲಂಬಿಕಾಯೋಗ. ಇದನ್ನು ಗುರುಮುಖದಿಂದಲೇ ಮಾಡಬೇಕು. ಸಾಧಕನಿಗೆ ಇಂಥ ಸಾಧನೆ ಫಲಿಸಿದರೆ ಅಂಥವನಿಗೆ ಹಸಿವಾಗಲೀ, ಬಾಯಾರಿಕೆಯಾಗಲೀ ಇರುವುದಿಲ್ಲ. ಇದನ್ನು ಸಾಧಿಸಿದ ಯೋಗಿಯು ಆಕಾಶಯಾನ ಮಾಡಬಲ್ಲ.
ಕಲಸಿ ಸ್ವಾಮಿಗಳು ಅಂತ ಇದ್ದರು ಹಿಮಾಲಯಕ್ಕೆ ಹೋದರಂತೆ ಅವರು ಸಾಗರದ ತಾಳಗುಪ್ಪ ಸಮೀಪ ಬೆಳ್ಳಣ್ಣೆಯಲ್ಲಿ ಶರಾವತಿ ನದಿ ದಂಡೆಯ ಸಣ್ಣ ಗುಹೆ ಪ್ರದೇಶದಲ್ಲಿ ತಪಸ್ಸು ಮಾಡುತ್ತಿದ್ದರು, ನಮ್ಮ ಅತ್ತೆ ಮತ್ತು ನಾನು ನಿತ್ಯ ಅವರಿಗೆ ಒಂದು ಲೋಟ ಹಾಲು ಮತ್ತು ಒಂದು ಬಾಳೆಹಣ್ಣು ತೆಗೆದು ಕೊಂಡು ಇಟ್ಟು ಬರುತ್ತಿದ್ದೆವು, ಹೆಚ್ಚಿನ ದಿನ ಚಿಕ್ಕವಳಾದ ನನಗೆ ಬಾಳೆಹಣ್ಣು ತಿನ್ನಲು ಕೊಟ್ಟು ಹಾಲು ಮಾತ್ರ ಇಟ್ಟುಕೊಳ್ಳುತ್ತಿದ್ದರು ಅಂತ ನನ್ನ ಪತ್ನಿ ಹೇಳುತ್ತಿದ್ದಳು.
ಒಮ್ಮೆ ಸ್ವಣ೯ವಲ್ಲಿಗೆ, ಸ್ವಾಮಿಗಳನ್ನ ನಮ್ಮ ಊರಿನಲ್ಲಿ ನಾವು ಕಟ್ಟಿಸಿ ಕೊಟ್ಟಿರುವ ವರಸಿದ್ದಿ ವಿನಾಯಕ ಸ್ವಾಮಿ ದೇವಾಲಯದಲ್ಲಿ 1108 ನಾರಿಕೇಳಾ ಯಂತ್ರದ್ದಾದಾರಕ ಮಹಾಗಣಯಾಗದ ಪೂಣಾ೯ಹುತಿಗೆ ಆಹವಾನಿಸಲು ಹೋದಾಗ ಸ್ವಾಮಿಗಳ ವಾಹನ ಚಾಲಕರಾಗಿದ್ದ ಲಕ್ಷ್ಮಿನಾರಾಯಣರು ಅವರ ಮನೆಗೆ ಚಹಾಗೆ ಕರೆದುಕೊಂಡು ಹೋಗಿದ್ದಾಗ ಒಂದು ಕೋಣೆಗೆ ಕಲಸಿನರಸಿ೦ಹಾನಂದ ಸ್ವಾಮಿಗಳ ಕುಟಿರ ಎಂಬ ನಾಮಪಲಕ ನೋಡಿದಾಗ ಅವರ ಬಗ್ಗೆ ಪತ್ನಿ ತಿಳಿಸಿದ್ದು ನೆನಪಾಗಿ ವಿಚಾರಿಸಿದಾಗ ಅವರು ಮಹಾನ್ ತಪಸ್ವಿಗಳು, ಹಿಮಾಲಯದಿಂದ ಬಂದವರು ಇಲ್ಲಿ ತಂಗಿದ್ದಾರೆಂದರು.
ಅಲ್ಲಿಂದ ವಾಪಾಸು ಹೋಗುವಾಗ ಅವರು ಅವರ ಕುಟಿರದ ಒಳ ಹೋಗುವುದು ನೋಡಿದೆ, ಈ ವಿಚಾರ ಮನೆಗೆ ಬಂದು ಪತ್ನಿಗೆ ತಿಳಿಸಿದೆ, ಅವಳು ಅವರನ್ನ ಬೇಟಿ ಮಾಡಿಸಬೇಕೆಂದು ಹೇಳಿದಾಗ ಆಯಿತೆಂದಿದ್ದೆ.
ನಂತರ ದಿನ ಪತ್ರಿಕೆಯಲ್ಲಿ ಅವರ ಬಗ್ಗೆ ಬಂದ ಲೇಖನದಿಂದಲೂ ಹೆಚ್ಚು ತಿಳಿಯುವಂತಾಯಿತು, ಅದಾಗಿ ಸ್ವಲ್ಪ ದಿನದಲ್ಲಿ ಅವರು ಇಹಲೋಕ ತ್ಯಜಿಸಿದ ಸುದ್ದಿ ಪತ್ರಿಕೆಯಲ್ಲಿ ನೋಡಿ ಬೇಸರವಾಯಿತು ಅವರನ್ನ ಪ್ರತ್ಯಕ್ಷ ಭೇಟಿ ಆಗುವ ಅವಕಾಶ ವಂಚಿತರಾದ ಬಗ್ಗೆ ಬೇಸರ ಉಂಟಾಯಿತು.
ನಂತರ ಸ್ವರ್ಣವಲ್ಲಿಗೆ ಹೋಗಿ ಮಠದ ಹಿಂಬಾಗದಲ್ಲಿನ ಅವರ ಬೃಂದಾವನ ಸಂದಶಿ೯ಸಿ ನಮಸ್ಕರಿಸಿ ಬಂದೆವು.
Comments
Post a Comment