ರೈತ ಸಂಘದ ಚಳವಳಿಗಳಲ್ಲಿ ನಮ್ಮ ತಂದೆ ಜೈಲಿಗೆ ಹೋದವರು, ಆ ದಿನದಲ್ಲಿ ಕೊಡ್ಲು ವೆಂಕಟೇಶ್ರ ಹೋರಾಟ ನಿತ್ಯ ತೀಥ೯ಹಳ್ಳಿಯಿಂದ ನಮ್ಮ ಊರಿಗೆ ಬರುತ್ತಿದ್ದ ಛಲಗಾರ ಪತ್ರಿಕೆ(ನಮ್ಮ ಅಣ್ಣ ಗಣಪತಿಯವರ ಮಿತ್ರ ಆ ಪತ್ರಿಕೆಯ ಆನಂದಪುರಂ ನ ವರದಿಗಾರರು) ಯಿಂದ ಗೋತ್ತಾಗುತ್ತಿತ್ತು.
ಸಕಾ೯ರಿ ಕಚೇರಿಯಲ್ಲಿ ಕೆಲಸದ ಸಮಯದಲ್ಲಿ ಕ್ರಿಕೆಟ್ ಕಾಮೆಂಟರಿ ಕೇಳೋದು ಈಗ FB ಅಥವ ವಾಟ್ಸ್ ಪ್ ನೋಡೋ ಅಷ್ಟೆ ಚಟ ಆಗಿತ್ತು, ಇವರ ಹೋರಾಟದಿಂದ ಇಡೀ ರಾಜ್ಯದಲ್ಲೇ ಇದೊಂದು ಸಂಚಲನೆ ಆಯಿತು ಮತ್ತು ಕಚೇರಿಗೆ ಟ್ರಾನ್ಸಿಸ್ಟರ್ ತರೋದು ಕಡಿಮೆ ಆಯಿತು.
ನಾನು ಇವರನ್ನ ಆ ದಿನದಲ್ಲಿ ಭೇಟಿ ಮಾಡಬೇಕ೦ತ ಮಾಡಿದ್ದೆ ಆದರೆ ಈ ವರೆಗೆ ಆಗಿಲ್ಲ ನಿಮ್ಮ ಲೇಖನ ಇದೆಲ್ಲ ನೆನಪಿಸಿತು.
ಇವರು ನಮಗೆಲ್ಲ ಹೀರೋ ಆಗಿದ್ದವರು ಆ ದಿನದಲ್ಲಿ.
(ಕೃಪೆ :ನೆಂಪೆ ದೇವರಾಜರ FB ಲೇಖನ)
ಯೂರೋಪಿನ ತತ್ವ ಜ್ಞಾನಿಗಳಂತೆ ಕಾಣುವ ಕೋಡ್ಳು ವೆಂಕಟೇಶ್ ಒಂದು ಕಾಲದ ಭಯಂಕರ ಅಹಿಂಸಾತ್ಮಕ ಗೆರಿಲ್ಲಾ ವಾರಿಗ.ನೌಕರಶಾಹಿ ಗಢಗಢ ನಡುಗುವಂತಹ ಇವರ ಹೋರಾಟಗಳೋ ಇಂದಿಗೂ ಮೈ ಜುಮ್ಮೆನಿಸುತ್ತವೆ.ಅರಣ್ಯವೆಂಬುದು ಜೀವನದ ನಡುವೆ ಹಾಸು ಹೊಕ್ಕಾಗಿರಬೇಕೆಂಬುದನ್ನು ತನ್ನ ಅನುಭವದ ಮೂಲಕವೇ ನವಿರಾಗಿ ವಿವರಿಸುವ ವೆಂಕಟೇಶ್ ರೈತ ಚಳುವಳಿ ಪ್ರವರ್ಧಮಾನ ಕಾಲ ಘಟ್ಟದಲ್ಲಿ ನಿರ್ಮಿಸಿದ ಹೋರಾಟಗಳು ಒಂದೆರಡಲ್ಲ.ಎಂತಹ ಕಷ್ಟದ ಸಂದರ್ಭದಲ್ಲೂ ತನ್ನ ಭೀಭತ್ಸ ಎದೆ ನಡುಗಿಸುವ ನ್ಯಾಯಪರ ಹೋರಾಟಗಳಿಂದ ಈ ಫೆಡೆಲ್ ಕ್ಯಾಸ್ಟ್ರೋ (ಒಮ್ಮೊಮ್ಮೆ ಕ್ಯಾಸ್ಟ್ರೋ ತraಹವೂ ಕಾಣುತ್ತಾರೆ) ಹಿಮ್ಮೆಟ್ಟಿದ ನಿರ್ಶನಗಳೇ ಇಲ್ಲ. ಎಂಭತ್ತು ತೊಂಭತ್ತರ ದಶಕಗಳ ಆರಂಭದಲ್ಲಿ ಹಸಿರು ಶಾಲನ್ನು ಹೆಗಲ ಮೇಲೆ ಹೊತ್ತು ವೆಂಕಟೇಶ್ ಹೊರಟರೆಂದರೆ ಇಡೀ ಆಜಾದ್ ರಸ್ತೆ ಇವರತ್ತ ನೋಡುತ್ತಿತ್ತು. ಅರಣ್ಯ ಇಲಾಖೆಯವರು ಇವರ ಮೈಮೇಲೆ ಕೈ ಮಾಡಿದಾಗ ಮತ್ತು ಪೋಲೀಸು,ಅಬ್ಕಾರಿ,ಪ್ರಾಯೋಜಿತ ಗೂಂಡಾಗಳು ಇವರ ಮೇಲೆ ಬಿದ್ದಾಗಲೂ ತನ್ನ ಅಹಿಂಸಾತ್ಮಕ ಹೋರಾಟ ಕೈ ಬಿಟ್ಟವರಲ್ಲ.ವೆಂಕಟೇಶ್ ರವರ ಹೋರಾಟಗಳ ಗಾಥೆಗಳು ಒಂದೊಂದಾಗಿ ನೆನಪಿಸಿಕೊಂಡರೆ ಹತ್ತಾರು ಹೊತ್ತಿಗೆಗಳಿಗೆ ಅನ್ನವಾಗಬಲ್ಲುದು.ಇವರ ಹೋರಾಟದ ತೀವ್ರತೆಗಳನ್ನು ತಡೆದು ಕೊಳ್ಳಲಾರದವರನೇಕರು ರೈತ ಚಳುವಳಿಯತ್ತ ಮುಖಮಾಡುವುದನ್ನೇ ಮರೆತದ್ದೂ ಇದೆ.
ನನ್ನ ಮತ್ತು ವೆಂಕಟೇಶ್ ರವರ ಜೊತೆಗಿನ ಒಡನಾಟ ಹತ್ತಾರು ಸಂಘರ್ಷಗಳಿಗೆ ಎಡೆಮಾಡಿದೆ.ನಾನಾಗ ಪ್ರಥಮ ಪಿಯುಸಿ ಯಾದರೂ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳುತ್ತಲೇ ಬೆಳೆದವ ನಾನು. ಒಮ್ಮೊಮ್ಮೆ ಬಿಡು ಬೀಸಾದ ಪ್ರಶ್ನೆಗಳಿಗೆ ತತ್ತರಿಸಿ ಮುಖವನ್ನು ಕೆಂಗುಲಾಬಿ ಮಾಡಿಕೊಂಡು ಉತ್ತರ ಹೇಳಿದರೂ ಛಲ ಬಿಡದ ತ್ರಿವಿಕ್ರಮನಂತೆ ಇರೊಂದಿಗೆ ಮತ್ತೆ ಮತ್ತೆ ಕೇಳುತ್ತಲೇ ಇರುತ್ತೇನೆ. ಇವರನ್ನು ಬಿಟ್ಟುಕೊಳ್ಳಲೊಲ್ಲದವನಂತೆ ಇವರ ಬೀಸುಗಾಲಿನ ದಾಪಿನ ಜೊತೆ ಹೋಗುತ್ತಿದ್ದುದೇ ಹೆಚ್ಚು ಅಪ್ಯಾಯಮಾನ ಸಂಗತಿ.ಅದರ ನೆನಪು ಕೂಡಾ.ಆಜಾದ್ ರಸ್ತೆಯಲ್ಲಿ ಇವರು ರೂಪಿಸಿದ ಬಸ್ ದರ ವಿರೋಧಿ ಚಳುವಳಿ ಸಂದರ್ಭದಲ್ಲಿ ಇವರತ್ತ ಸೋಡಾ ಬಾಟಲಿಗಳು ಬಿದ್ದರೂ ಎದೆಗುಂದದ ಹೋರಾಟದ ಸಾಕ್ಷಿ ಪ್ರಜ್ಞೆ ನಮ್ಮ ವೆಂಕಟೇಶ್.
ಹುಲ್ಲು ಕೊಯ್ದರೂ,ಸೊಪ್ಪು ಹೊತ್ತರೂ,ಎರಡಾಳಿನ ಬದುಗಳನ್ನು ಒಬ್ಬರೇ ಕಡಿದರೂ ತನ್ನ ಸೌಂದರ್ಯವನ್ನು ಒಂಚೂರೂ ಹಾಳು ಮಾಡಿಕೊಳ್ಳದೆ ಹವಾಯಿ ಚಪ್ಪಲಿ ಮತ್ತು ಜೀನ್ಸ್ ಪ್ಯಾಂಟಿನ ಮೂಲಕವೇ ಆಕರ್ಷಿತರಾಗುವ ಇವರ ಸುಂದರತೆಯ ಗುಟ್ಟಿನ ಹಿಂದೆ ನಿರ್ಮಲ ಮನಸ್ಸು ಕಾರಣವೆಂಬುದನ್ನು ವಿವರಿಸಬೇಕಾದ್ದಿಲ್ಲ.ಪ್ರಚಾರವಿರಲಿ ಇಲ್ಲದಿರಲಿ,ಹೊಗಳಲಿ ತೆಗಳಲಿ ತಾನು ನಂಬಿದ ಸಿದ್ದಾಂತಕ್ಕೆ ಎಂದೂ ದ್ರೋಹ ಬಗೆದವರಲ್ಲ. ನ್ಯಾಯ ಪರ ಹೋರಾಟದ ಸಂದರ್ಭದಲ್ಲಿ ಒಬ್ಬಂಟಿಯಾದದ್ದೂ ಇದೆ. ಆದರೂ ಹಿಂದೆ ಸರಿದವರಲ್ಲ.
ಇವರ ನೇತೃತ್ವದಲ್ಲೇ ತಮ್ಮ ಗ್ರಾಮದ ಎಲ್ಲರಿಗೂ ತಲಾ ಎರಡು ಎಕರೆಯಂತೆ ಭೂಮಿಯನ್ನು ಸಮಾನವಾಗಿ ಹಂಚಿಕೊಡುತ್ತಾರೆ.ಬಡತನದ ಬೇಗೆಯನ್ನು ಮೈ ಮೇಲೆ ಹೊದ್ದಿದ್ದ ರೈತರು ಖಾಲಿ ಜಾಗವನ್ನು ಉಳುಮೆ ಮಾಡುತ್ತಾರೆ.ಬೇಲಿ ಮಾಡಲು ಬಿದಿರು ಮುಳ್ಳು ಕಡಿಯುತ್ತಿರುತ್ತಾರೆ . ಅರಣ್ಯ ಇಲಾಖೆಯ ರಾಜು ಎಂಬ ಯುವ ಐ.ಎಫ್ ಎಸ್ ಅಧಿಕಾರಿಯೊಬ್ಬ ಬೇಕೆಂತಲೇ ಪಾಳು ಭೂಮಿಯನ್ನು ಬಡ ರೈತರು ಉಳುಮೆ ಮಾಡುತ್ತಿದ್ದಾಗ ರೈತರ ಮೈಮೇಲೆ ಬೀಳುತ್ತಾನೆ.ಬಿದಿರು ಮಲೆನಾಡ ಕಾಡಿನ ರಕ್ಷಾ ಕವಚ ಹೇಗೋ ಮಳೆ ಸಂಸ್ಕೃತಿಯ ಆಪತ್ರಕ್ಷಕ ಎಂಬ ತಿಳುವಳಿಕೆ ನೀಡುವ ವೇಂಕಟೇಶರನ್ನು ಕೇಳಿಸಿಕೊಳ್ಳುವ ವ್ಯವಧಾನವಿಲ್ಲದ ಅರಣ್ಯಾಧಿಕಾರಿ ವೆಂಕಟೇಶ್ರವರ ಅಂಗಿಯನ್ನು ಹಿಡಿದೆಳೆದು ಹರಿಯುತ್ತಾನೆ. ಅಲ್ಲಿಂದ ಶುರುವಾಯಿತು ನೋಡಿ!.ತಮ್ಮ ಗ್ರಾಮದ ಸುತ್ತಮುತ್ತಲಿನ ಸಾವಿರಾರು ಜನ ಇಲಾಖೆಯ ವಿರುದ್ದ ಸೇರುತ್ತಾರೆ. ಮೊಬೈಲು,ಲ್ಯಾಂಡ್ ಫೋನು ಇಲ್ಲದ ಆ ಕಾಲದ ಸುದ್ದಿ ಅದ್ಹೇಗೆ ಬಾಯಿಂದ ಬಾಯಿಗೆ ಮುಟ್ಟಿತೋ ನಾ ಕಾಣೆ. ಉಂಟೂರು ಕಟ್ಟೆ ಕೈಮರದಿಂದ ರೈತರು ಕಾಲ್ನಡಿಗೆಯಲ್ಲಿ ತೀರ್ಥಹಳ್ಳಿಯ ಅರಣ್ಯ ಕಛೇರಿಗೆ ಮುತ್ತಿಗೆ ಹಾಕುತ್ತಾರೆ.ಹರಿದ ಅಂಗಿಯನ್ನು ಕೈಯಲ್ಲಿ ಹಿಡಿದು ವೆಂಕಟೇಶ್ ಮುಂದೆ ನಡೆಯುತ್ತಾ ಹೋಗುತ್ತಾರೆ. ಇವರ ಹಿಂದೆ ಸಾವಿರಾರು ರೈತರು!.ಇವರದೊಂದೇ ಬೇಡಿಕೆ. 'ಅರಣ್ಯಾಧಿಕಾರಿ ಕ್ಷಮೆ ಕೇಳುವುದು ಬೇಡಾ.ತಪ್ಪಯಿತು ಎಂದು ಹೇಳುವುದು ಬೇಡಾ.ತೆಗೆದ ಅಂಗಿಯನ್ನು ಅದೇ ಅಧಿಕಾರಿ ವೆಂಕಟೇಶರ ಮೈಗೆ ಹಾಕ ಬೇಕೆಂಬುದು ಇವರ ಬೇಡಿಕೆ.ಶಿವಮೊಗ್ಗದಿಂದ ಎಸ್ಪಿ ಬಂದರು. ಆಗ ಕೆಂಪಯ್ಯ ಎಸ್ಪಿ.ದಿವಂಗತ ಎನ್.ಡಿ ಸುಂದರೇಶ್ ಬಂದರು.ರೈತರ ಆಕ್ರೋಷ ಮುಗಿಲು ಮುಟ್ಟುತ್ತಾ ಹೋಯಿತು.ಕತ್ತಲಾಗುತ್ತಾ ಬಂದಿತು. ಹಸಿರು ಶಾಲು ಹೊದ್ದ ರೈತರು ಕರಗುತ್ತಾರೆ ಎಂದು ಪೋಲೀಸರು ಕಾದರು.ಅರಣ್ಯಾಧಿಕಾರಿಗಳು ಸೇಫಾಗುತ್ತೇವೆ ಎಂದು ನಿರುಮ್ಮಳರಾಗುತ್ತಾ ಬಂದರು.ಆದರೆ ಹಸಿರು ಹೊತ್ತ ರೈತರು ವೆಂಕಟೇಶ್ ಮೇಲೆ ಹಲ್ಲೆಯಾಗಿದೆ ಎಂಬ ಸುದ್ದಿ ತಿಳಿದು ಕತ್ತಲಾಗುತ್ತಾ ಬಂದಂತೆ ಜಾಸ್ತಿಯಾಗ ತೊಡಗಿದರು.ಇಂದಿನ ಕಾಲದಂತೆ ಅಂದು ಸುದ್ದಿ ಮಾಧ್ಯಮಗಳು ಈ ಪ್ರಮಾಣದಲ್ಲಿದ್ದಿದ್ದರೆ ಇಪ್ಪತ್ತ ನಾಲ್ಕು ಗಂಟೆಯೂ ಇದೇ ಸುದ್ದಿ ಬಿತ್ತರಗೊಳ್ಳುತ್ತಿತ್ತು. ಆದರೆ ಅಂದು ರೈತರ ಸುದ್ದಿ ನೀಡಲು ಇದ್ದಂತಹ ಪ್ರಿಂಟ್ ಮೀಡಿಯಾಗಳು ವೆಂಕಟೇಶ್ ಮತ್ತು ರೈತ ಚಳುವಳಿಯ ಬಗ್ಗೆ ಕೆಲವೊಂದು ಪೂರ್ವಾಗ್ರಹಳನ್ನು ಮೈ ಮೇಲೆ ಹಾಕಿಕೊಂಡಿದ್ದವು.ಅಂತರ್ರಾಷ್ಟ್ರೀಯ ಮಟ್ಟದಲ್ಲೆಲ್ಲ ಸುದ್ದಿಯಾಗುತ್ತಿದ್ದ ಘಟನೆಗಳೇ ಅಂದು ಚಿಕ್ಕ ಪುಟ್ಟ ಸುದ್ದಿಯಾಗಿ ಬರುತ್ತಿದ್ದದೇ ಹೆಚ್ಚು.(ಉದಾಃಹರಣೆಗೆ ಬೆಂಗಳೂರಿನ ಕಾರ್ಗಿಲ್ ಬೀಜ ಕಂಪೆನಿ ಮೇಲಿನ ದಾಳಿ ಅಮೆರಿಕಾದ ಪತ್ರಿಕೆಗಳಲ್ಲಿ ಮೊದಲ ಪುಟದ ಸುದ್ದಿ. ನಮ್ಮ ಕನ್ನಡದ ಪತ್ರಿಕೆಗಳಲ್ಲಿ ಆರನೇ ಪುಟದ ಸುದ್ದಿ)
ದಿವಂಗತ ಎನ್.ಡಿ ಸುಂದರೇಶ್ ಮತ್ತು ಎಸ್ಪಿ ಕೆಂಪಯ್ಯನವರ ನಡುವೆ ಆದ ರಾಜಿ ಪಂಚಾಯ್ತಿಯ ದೆಸೆಯಿಂದ ಅರಣ್ಯಾಧಿಕಾರಿ ಕೋಡ್ಳು ವೆಂಕಟೇಶ್ ರವರಿಗೆ ಅಂಗಿ ತೊಡಿಸಿ ಆಲಂಗಿಕೊಂಡು ಕ್ಷಮೆ ಕೇಳಬೇಕಾಯಿತು.ವೆಂಕಟೇಶ್ ರವರ ಮೇಲೆ ಅರಣ್ಯಾಧಿಕಾರಿ ಹಲ್ಲೆ ನಡೆಸಿದ್ದಾರೆ ಎಂದ ಕ್ಷಣ ಮಾತ್ರದ ಸುದ್ದಿಯಿಂದ ಒಟ್ಠಾದ ರೈತರನ್ನು ನೆನಪಿಸಿಕೊಂಡರೆ ಇದೆಲ್ಲಾ 'ಹೌದಾ' ಎನಿಸುತ್ತದೆ. ಸೇರಿದ್ದ ರೈತರು ರಾತ್ರೋನು ರಾತ್ರಿ ನಡೆದೇ ಮನೆಗೆ ಹೋದರು.ಕಾಸು ಕೇಳದ,ಬಸ್ಸು ಕೇಳದ,ಕಾಫಿ ತಿಂಡಿ ಖರ್ಚಿಗೆ ಕೇಳದ ಅಂದಿನ ರೈತರ ನಿರ್ಮಲ ಪ್ರೀತಿಗೂ ಇಂದಿನ ಹೋರಾಟಗಳಿಗೂ ಇರುವ ವ್ಯತ್ಯಾಸ ಮತ್ತೆ ಮತ್ತೆ ನೆನಪಾಗದಿರಲು ಸಾಧ್ಯವೆ?
ಅದೊಂದು ಬೆಳಿಗ್ಗೆ ವೆಂಕಟೇಶ್ ತಾಲೂಕು ಕಛೇರಿಗೆ ಬರುತ್ತಾರೆ.ಆಗ ಇಂಡಿಯಾ ಆಸ್ಟ್ರೇಲಿಯಾ ತಂಡದ ನಡುವೆ ಕ್ರಿಕೆಟ್ ಟೆಸ್ಟ್ ಮ್ಯಾಚ್ ನಡೆಯತ್ತಿರುತ್ತದೆ. ಟ್ರಾನ್ಸಿಸ್ಟರನ್ನು ಕಿವಿಗೆ ಆನಿಸಿಕೊಂಡು ಕ್ರಿಕೆಟ್ ಕಾಮೆಂಟರಿಯನ್ನು ಕೇಳುವುದೊಂದು ಪ್ರತಿಷ್ಟೆಯ ಸಂಕೇತವಾಗಿತ್ತು. ( ಮೋಬೈಲ್ ಫೋನು ಮೊದ ಮೊದಲು ಇಂಡಿಯಾ ಪ್ರವೇಶಿಸಿದಾಗ ಮೊಬೈಲನ್ನು ಕೆಲವರು ಕಿವಿಯಿಂದಲೇ ತೆಗೆಯುತ್ತಿರಲಿಲ್ಲ.ಹಾಗೆ.) ತಾಲೂಕು ಆಫೀಸಿನಲ್ಲಿದ್ದ ಸಬ್ ರಿಜಿಸ್ಟ್ರಾರ್ ಕಛೇರಿಯಲ್ಲಿ ರಿಜಿಸ್ಟೇಷನ್ನು,ವಗೈರೆಗಳಿಗಾಗಿ ಜನರು ಕಾದು ನಿಂತಿದ್ದಾರೆ.ಕೆಲಸ ಮಾತ್ರ ಆಗುತ್ತಿಲ್ಲ. ಅಲ್ಲಿದ್ದ ಸಬ್ ರಿಜಿಸ್ಟ್ರಾರ್ ಜನರ ಕೆಲಸದ ಬಗ್ಗೆ ತಲೆ ಕೆಡಿಸಿಕೊಳ್ಳದೆ ಟ್ರಾನ್ಸಿಸ್ಟರ ಒಂದನ್ನು ಕಿವಿಗೆ ಒತ್ತಿ ಹಿಡಿದುಕೊಂಡು ತಮ್ಮದೇ ಆದ ಮೆಚ್ಚುಗೆ ಮತ್ತು ಬೇಸರದಲ್ಲಿ ಆನಂದ ಅನುಭವಿಸುತ್ತಿರುತ್ತಾರೆ. ದೂರ ದೇಶದಲ್ಲಿ ಬೀಳುತ್ತಿದ್ದ ಇಂಡೀಯಾದ ಸಿಕ್ಸು ಫೋರುಗಳಿಗೆ ಸಬ್ ರಿಜಿಸ್ಟ್ರಾರ್ ಮೊಗ ಆಗಸದಷ್ಟಗಲವಾಗುತ್ತಾ ಹೋಗುತ್ತಿದ್ದಂತೆ ಕೆಲಸಕ್ಕೆ ಬಂದವರು ಆಕಳಿಸತೊಡಗುತ್ತಾರೆ.ಇದನ್ನು ನೋಡಿ ವೆಂಕಟೇಶ್ ನಖ ಶಿಖಾಂತ ಉರಿದು ಹೋಗುತ್ತಾರೆ.ಕೂಡಲೇ ಇವರ ಚೇಂಬರಿಗೆ ನುಗ್ಗಿದ ವೇಂಕಟೇಶ್, ಕಛೇರಿ ವೇಳೆಯಲ್ಲಿ ಕ್ರಿಕೆಟ್ ಕಾಮೆಂಟರಿ ಕೇಳತ್ತಿರುವುದರ ಬಗ್ಗೆ ಪ್ರಶ್ನೆ ಎಸೆಯುತ್ತಾರೆ. ಇಂತಹ ಸರಳ ಪ್ರಶ್ನೆಗಳಿಗೆ ಉತ್ತರಕೊಡುವುದು ತನ್ನ ಅಂತಸ್ತಿಗೆ ಧಕ್ಕೆ ಎಂದೇ ಭಾವಿಸಿದ ಅಧಿಕಾರಿ ''ಇದನ್ನೆಲ್ಲ ಕೇಳಲು ನೀನಾರು'' ಎನ್ನುತ್ತಾನೆ.ಕೂಡಲೆ ಈತನ ಕೈಲಿದ್ದ ಟ್ರಾನ್ಸಿಸ್ಟರನ್ನು ಕೈಗೆತ್ತಿಕೊಂಡ ವೇಂಕಟೇಶ್ ಸಬ್ ರಿಜಿಸ್ಟ್ರಾರ್ ರವರನ್ನು ದರ ದರನೆ ಎಳೆದುಕೊಂಡು ತಹಸೀಲ್ದಾರ್ ಚೇಂಬರಿಗೆ ಕರೆದೊಯ್ದು ತಹಸೀಲ್ದಾರರ ಎದುರು ತಂದು ನಿಲ್ಲಿಸುತ್ತಾರೆ.. ಸರ್ಕಾರ ಸಂಬಳ ಕೊಡುವುದು ಕ್ರಿಕೆಟ್ ಕಾಮೆಂಟರಿ ಕೇಳುವುದಕ್ಕೋ ಸಾರ್ವಜನಿಕರ ಕೆಲಸ ಮಾಡಿಕೊಡುವುದಕ್ಕೋ ಎಂಬ ವೇಂಕಟೇಶ್ ರವರ ಅಜಾನುಬಾಹು ದೇಹ ಅಬ್ಬರಿಸಿದೊಡನೆ ತಹಸೀಲ್ದಾರ್ ಕಂಗಾ ಪಿಂಗಿಯಾಗುತ್ತಾರೆ.ಇವರ ವಿರುದ್ದ ಕ್ರಮ ಕೈಗೊಳ್ಳುವ ಅಧಿಕಾರ ತಮಗಿಲ್ಲ. ನೀವು ಏನು ಬೇಕಾದರೂ ಮಾಡಿಕೊಳ್ಳಿ ಎಂಬ ತಹಸೀಲ್ದಾರರ ಉತ್ತರದಿಂದ ಪಕ್ಕದಲ್ಲಿದ್ದ ಸಬ್ ರಿಜಿಸ್ಟ್ರಾರ್ ಮತ್ತಷ್ಟು ಅಧೀರರಾಗುತ್ತಾರೆ.ಅಲ್ಲಿಯೇ ಸಬ್ ರಿಜಿಸ್ಟ್ರಾರ್ ರನ್ನು ಬಿಟ್ಟ ವೆಂಕಟೇಶ್ ಟ್ರಾನ್ಸಿಸ್ಟರ್ ಸಮೇತ ಪೋಲೀಸು ಠಾಣೆಗೆ ಹೋಗಿ ಟ್ರಾನ್ಸಿಸ್ಟರನ್ನು ಪೋಲೀಸು ಠಾಣೆಗೆ ಒಪ್ಪಿಸಿ ದೂರು ದಾಖಲಿಸುತ್ತಾರೆ. ಮಾರನೇ ದಿನ ವೆಂಕಟೇಶ್ ರವರೇ ತಪ್ಪು ಮಾಡಿದ್ದಾರೆ ಎಂಬಂತೆ ಸುದ್ದಿಗಳು ಹೊರ ಬಂದದ್ದು ಇನ್ನೊಂದು ವಿಶೇಷ.
ಎಂಭತ್ತು ತೊಂಭತ್ತರ ದಶಕದ ರೈತ ಚಳುವಳಿ ಮತ್ತು ವೆಂಕಟೇಶ್ ರವರು ತಮ್ಮ ತೀವ್ರತೆಯನ್ನು ಈಗಲೂ ಉಳಿಸಿಕೊಂಡಿದ್ದಿದ್ದರೆ ಕಸ್ತೂರಿ ರಂಗನ್ ಮತ್ತು ಮಾಧವ ಗಾಡ್ಘೀಳರು ವರದಿ ಕೊಡುವುದಿರಲಿ ಮಾತೂ ಆಡುತ್ತಿರಲಿಲ್ಲವೇನೋ? ಇದೇನೆ ಇರಲಿ.ಎಂಬತ್ತು ತೊಂಭತ್ತರ ದಶಕದಲ್ಲಿ ವೆಂಕಟೇಶ್ ಮತ್ತು ಅವರ ಗೆಳೆಯರು ನಡೆಸಿದ ಹೋರಾಟಗಳನ್ನು ಬರಹ ರೂಪಕ್ಕಿಳಿಸಬೇಕೆಂದಿದ್ದೇನೆ. ಇನ್ನೊಮ್ಮೆ ಲಂಚದ ವಿರುದ್ದದ ಮತ್ತು ಕಳ್ಳ ಸಾರಾಯಿ ವಿರುದ್ದದಂತಹ ಹತ್ತಾರು ಹೋರಾಟಗಳ ಬಗ್ಗೆ ನೆನಪಿಸುವ ಇರಾದೆ ಇದೆ.
Comments
Post a Comment