ಸಜ್ಜನ ಸಂಪನ್ನರಾದ ಸಾಗರದ ಆಹ್ಮದ್ ಆಲೀ ಖಾನ್ ಸಾಹೇಬರು 92 ವರ್ಷಗಳ ಸಂತೃಪ್ತ ಜೀವನ ನಡೆಸಿ ಇಹಲೋಕ ತ್ಯಜಿಸಿದ್ದಾರೆ (1930 ರಲ್ಲಿ ಹೊನ್ನಾಳಿಯಲ್ಲಿ ಜನಿಸಿದ್ದರು)
#ಸಜ್ಜನ_ಸಂಪನ್ನ_ವ್ಯಕ್ತಿತ್ವದವರು.
#ಪಠಾಣರಾದ_ಆಹ್ಮದ್_ಆಲೀ_ಖಾನ್_ಸಾಹೇಬರ_92_ವರ್ಷಗಳ_ಸಂತೃಪ್ತ_ಜೀವನ.
https://youtu.be/aOQjyYyh23o
ಇವತ್ತು ಬೆಳಿಗ್ಗೆ ಹಾಸಿಗೆಯಿಂದ ಏಳುವಾಗಲೇ ಸಾಗರದ ಮಾಜಿ ನಗರ ಸಭಾ ಸದಸ್ಯರಾದ ದಿನೇಶ್ ಖಾನ್ ಸಾಹೇಬರು ಅಲ್ಲಾರ ಪಾದ ಸೇರಿದರು ಎಂಬ ಸುದ್ದಿ ವಾಟ್ಸಪ್ ಮಾಡಿದ್ದರು.
ಖಾನ್ ಸಾಹೇಬರ ಆತ್ಮಕ್ಕೆ ದೇವರು ಸದ್ಗತಿ - ಸ್ವರ್ಗ ಪ್ರಾಪ್ತಿ ನೀಡಲಿ ಅಂತ ಪ್ರಾಥಿ೯ಸುತ್ತಾ ಅವರಿಗೆ ಶ್ರದ್ದಾಂಜಲಿ ಆಗಿ ಬೇರೆ ಬೇರೆ ಸಂದಭ೯ದಲ್ಲಿ ಖಾನ್ ಸಾಹೇಬರ ಬಗ್ಗೆ ಬರೆದ ಲೇಖನ ಪುನಃ ಖಾನ್ ಸಾಹೇಬರ ಅಭಿಮಾನಿಗಳಿಗೆ ಪ್ರಕಟಿಸಿದ್ದೇನೆ.
ಸಾಗರದಿಂದ ಎಲ್ಲಿಗೆ ಹೋಗಲೂ ಆಗ ಟ್ಯಾಕ್ಸಿ ಮಹಬಲರಾವ್ ಕಾರಿನಲ್ಲೇ ಹೋಗುತ್ತಿದ್ದರು ಅಂತ ತುಂಬೆ ಸುಬ್ರಾಯರ ಕಿರಿಯ ಮತ್ತು ಆತ್ಮೀಯ ಗೆಳೆಯರಾಗಿದ್ದ ಅಹ್ಮದ್ ಅಲೀ ಖಾನ್ ಸಾಹೇಬರು ನೆನಪು ಮಾಡಿಕೊಳ್ಳುತ್ತಾರೆ.
1952 ರಲ್ಲಿ ಹೊನ್ನಾಳಿ ಮೂಲದ ಆಹ್ಮದ್ ಅಲೀ ಖಾನ್ ಸಾಹೇಬರು ಅವರ ಬಾವ ವಾಸಿಂ ಖಾನ್ ಸಾಹೇಬರು (ಅಕ್ಕನ ಗಂಡ)ಸಾಗರದಲ್ಲಿ ಕಂಟ್ರಾಕ್ಟ್ ಆಗಿದ್ದಾಗ ಅವರ ಮುಖಾಂತರ ಸಾಗರದಲ್ಲಿ ಗುತ್ತಿಗೆದಾರರಾಗಿ ಚಿಕ್ಕ ವಯಸಲ್ಲಿಯೇ (ಹುಟ್ಟಿದ್ದು 1930) ಹೆಸರುವಾಸಿ ಆಗಿರುತ್ತಾರೆ ಹಾಗಾಗಿ ತುಂಬೆ ರಸ್ತೆ,ಮೋರಿ ಇತ್ಯಾದಿ ಖಾನ್ ಸಾಹೇಬರೇ ಮಾಡಬೇಕೆಂಬ ಶಿಪಾರಸ್ಸು ತುಂಬೆ ಸುಬ್ರಾಯರದ್ದು ಇದಕ್ಕೆ ಮುಖ್ಯ ಕಾರಣ ಮತ್ತಿಕೊಪ್ಪ ಹರನಾಥ ರಾಯರ ದೊಡ್ಡಪ್ಪರಾಗಿದ್ದ ಅಳ್ನಾವರ ಅಡಿಕೆ ಕಂಪನಿಯ ನಿರ್ಧೇಶಕರು ಆಗಿದ್ದ ಮತ್ತಿಕೊಪ್ಪ ಲಕ್ಷ್ಮೀನಾರಾಯಣರು ಮತ್ತು ಖಾನ್ ಸಾಹೇಬರ ಆತ್ಮೀಯತೆ ಕೂಡ.
ಹಾಗಾಗಿ ತುಂಬೆ ಸುಬ್ರಾಯರು ಎಲ್ಲೇ ಹೋಗುವುದಾದರೂ ಖಾನ್ ಸಾಹೇಬರು ಜೊತೆ ಕರೆದೊಯ್ಯುತ್ತಿದ್ದರು ಆದ್ದರಿಂದ ಬದರಿನಾರಾಯಣ ಅಯ್ಯಂಗಾರರ ಬೇಟಿಗೆ ತುಂಬೆ ಸುಬ್ರಾಯರ ಜೊತೆ ಖಾನ್ ಸಾಹೇಬರು ಯಾವಾಗಲೂ ಆನಂದಪುರಂಗೆ ಬರುತ್ತಿದ್ದನ್ನು ನೆನಪು ಮಾಡಿಕೊಳ್ಳುತ್ತಾರೆ, ಈ ಸಂದರ್ಭದಲ್ಲೇ ತುಂಬೇ ಸುಬ್ರಾಯರು, ಬದರಿನಾರಾಯಣ ಅಯ್ಯಂಗಾರರು ಆನ೦ದಪುರಂನ ಎರೆಡು ಕೆರೆ ಕೆಳಗಿನ ನೀರಾವರಿ ಜಮೀನು ಅಂತಿಮ ಬೆಲೆ ಎಕರೆಗೆ 3000 ಸಾವಿರದಂತೆ ವ್ಯಾಪಾರ ಆಗುತ್ತದೆ ಆದರೆ ಆಗಲೇ ಇವರ ಅಕ್ಕಿ ಗಿರಣಿಗಳನ್ನು ಖರೀದಿಸಿ ಯಶಸ್ವಿ ಉದ್ದಿಮೆದಾರರಾಗಿದ್ದ ಸುಬ್ಬಣ್ಣ ನಾಯಕರು ಈ ಜಮೀನು ತನಗೆ ಬೇಕೆಂದು ಬದರಿನಾರಾಯಣ ಅಯ್ಯಂಗಾರರ ಅಣ್ಣ ವೆಂಕಟಚಲಾಯಂಗಾರ್ ರಿಂದ ಒತ್ತಡ ತಂದಿದ್ದರಿಂದ ಈ ವ್ಯವಹಾರ ಮುರಿದು ಬಿತ್ತಂತೆ.
1964 ರಲ್ಲಿ ಲಕ್ಷ್ಮೀಕಾಂತಪ್ಪನವರು ಶಾಸಕರು, ಮಲ್ಕೋಡು ಗೋವಿಂದಪ್ಪನವರು ( ಪುತ್ತೂರಾಯರ ತಂದೆ) ಮುನ್ಸಿಪಾಲಿಟಿ ಅಧ್ಯಕ್ಷರಾಗಿದ್ದರು ಇವರೆಲ್ಲ ತುಂಬೆ ಸುಬ್ರಾಯರ ಮಾತು ಮೀರುತ್ತಿರಲಿಲ್ಲ ಅಂತಹ ವ್ಯಕ್ತಿತ್ವ ಅವರದ್ದೆಂದು ಖಾನ್ ಸಾಹೇಬರು ನೆನಪಿಸಿ ಕೊಳ್ಳುತ್ತಾರೆ.
ಆಗ ಸಾಗರದಲ್ಲಿ ತಾಲ್ಲೂಕ್ ಕಾಂಗ್ರೇಸ್ ಪಾರ್ಟಿ ಕಛೇರಿ ಸೂರಬ ರಸ್ತೆಯ ಯು.ಜಿ.ಮಲ್ಲಿಕಾರ್ಜುನರ ಕಟ್ಟಡದಲ್ಲಿ ನಡೆಯುತ್ತಿತ್ತು ನಂತರ ಸಾಗರದಲ್ಲಿ ಗಾಂಧಿ ಮಂದಿರ ನಿರ್ಮಿಸುವ ತೀಮಾ೯ನ ಆಗುತ್ತದೆ ಇದಕ್ಕೆ ಬದರೀನಾರಾಯಣ ಆಯ್ಯಂಗಾರರು, ತುಂಬೆ ಸುಬ್ರಾಯರು, ಹುಣಾಲು ಮಡಕೆ ಸ್ವಾಮಿ ಗೌಡರು (ಹುಣಾಲು ಮಡಕೆ ಬಸವರಾಜ್ ಗೌಡರ ತಂದೆ), ಖಾನ್ ಸಾಹೇಬರು ಮತ್ತು ಅನೇಕರು ದೇಣಿಗೆ ನೀಡುತ್ತಾರೆ ಆಗ ಸಾಗರ ತಾಲ್ಲೂಕ್ ಕಾಂಗ್ರೇಸ್ ಅಧ್ಯಕ್ಷರು ಮದೂರು ರುದ್ರಪ್ಪ ಗೌಡರು ಮತ್ತು ಕಾರ್ಯದಶಿ೯ ಆಗಿ ಎಲ್ ಟಿ.ತಿಮ್ಮಪ್ಪ ಹೆಗಡೆ ಇರುತ್ತಾರೆ.
ಖಾನ್ ಸಾಹೇಬರು ತುಕಾರಾಂ ಶೆಟ್ಟರು ಆಗ ಕಾಂಗ್ರೇಸ್ ಪಕ್ಷದ ಯುವ ಮುಖಂಡರು.
ಬೆಂಗಳೂರಲ್ಲಿ ಬದರಿನಾರಾಯಣ್ ಆಯ್ಯಂಗಾರರು ಇಹ ಲೋಕ ತ್ಯಜಿಸಿದಾಗ ಅಹ್ಮದ್ ಅಲೀ ಖಾನ್ ಸಾಹೇಬರು ಅಂತಿಮ ದರ್ಶನಕ್ಕೆ ಹೋಗಿದ್ದು ಅವರಿಗೆ ಬದರೀನಾರಾಯಣ ಅಯ್ಯಂಗಾರ್ ಮೇಲಿದ್ದ ಪ್ರೀತಿ ಮತ್ತು ಆ ಲಾಗಯಿತಿನಿಂದ ಅವರಿಗೆ ಕಾಂಗ್ರೇಸ್ ಪಕ್ಷದ ಮೇಲೆ ಇರುವ ನಿಷ್ಟೆ ತೋರಿಸುತ್ತದೆ.
ನಮ್ಮ ತಂದೆ ನನಗೆ ಸಾಗರದ ಕಾಗೋಡು ತಿಮ್ಮಪ್ಪರ ಸಂಜಯ ಮೆಮೋರಿಯಲ್ ಪಾಲಿಟೆಕ್ನಿಕ್ ನಲ್ಲಿ ವ್ಯಾಸಂಗ ಮಾಡಲು 1982ರಲ್ಲಿ ಬದರೀನಾರಾಯಣ ಅಯ್ಯಂಗಾರರಿಂದ ಆಗ ಪಾಲಿಟೆಕ್ನಿಕ್ ಕಾಲೇಜ್ ನ ಅಧ್ಯಕ್ಷರಾಗಿದ್ದ ತುಂಬೆ ಸುಬ್ರಾಯರು ಮತ್ತು ಸಮಿತಿ ಸದಸ್ಯರಾಗಿದ್ದ ಖಾನ್ ಸಾಹೇಬರಿಗೆ ಹೇಳಿಸಿದ್ದರು ಅವತ್ತು ಸಾಗರದ ಆಸ್ಪತ್ರೆ ಎದುರಿನ ಪುತ್ತೂರಾಯರ ಕಟ್ಟಡದಲ್ಲಿ ಪಾಲಿಟೆಕ್ನಿಕ್ ಕಛೇರಿಯಲ್ಲಿ ನಾನು ಇವರ ಸಂದರ್ಶನದಲ್ಲಿ ಭಾಗವಹಿಸಿದ್ದೆ ಅವತ್ತೆ ಮೊದಲ ಬಾರಿ ತುಂಬೆ ಸುಬ್ರಾಯರನ್ನು ಮತ್ತು ಖಾನ್ ಸಾಹೇಬರನ್ನು ನೋಡಿದ್ದು, ನನ್ನ ಅರ್ಜಿ ನೋಡಿದ ಕೂಡಲೆ ಖಾನ್ ಸಾಹೇಬರು ಸಮಿತಿ ಸದಸ್ಯರಿಗೆ ಬದರಿ ಕ್ಯಾಂಡಿಡೇಟ್ ಅಂದ ಕೂಡಲೆ ಅಧ್ಯಕ್ಷರಾಗಿದ್ದ ತುಂಬೆ ಸುಬ್ರಾಯರು ಆಯ್ತು ಉಚಿತ ಸೀಟು ನೀಡಿ ಬಿಡಿ ಅಂದಿದ್ದು ನನಗೆ ಮರೆಯಲಾರದ ನೆನಪು.
ಕಾಗೋಡು ತಿಮ್ಮಪ್ಪ ಹಿಂದುಳಿದ ಜನಾಂಗದಿಂದ ವಕೀಲರಾಗಲು ಮತ್ತು ವಕೀಲ ವೃತ್ತಿ ಮಾಡಲು ತುಂಬೆ ಸುಬ್ರಾಯರ ಹೆಚ್ಚಿನ ಬೆಂಬಲವಿತ್ತಂತೆ ಆ ಕಾರಣದಿಂದ ಕಾಗೋಡು ತಿಮ್ಮಪ್ಪನವರು ಪಕ್ಷ ಬೇದ ಮರೆತು ತುಂಬೆ ಸುಬ್ರಾಯರಲ್ಲಿ ಗೌರವ ಹೊಂದಿದ್ದರೆಂದು ಖಾನ್ ಸಾಹೇಬರು ಹೇಳುತ್ತಿದ್ದರು.
ಮೊನ್ನೆ 28 ಅಕ್ಟೋಬರ್ ರಂದು ಸಂಜೆ ಖಾನ್ ಸಾಹೇಬರು ಅವರ ಮಗ ಮತ್ತು ನನ್ನ ಕ್ಲಾಸ್ ಮೇಟ್ ಮೋಹಿಸಿನ್ ಆಲೀ ಖಾನ್ ಮತ್ತು ಅವರ ಮೊಮ್ಮಗ ಬಂದಿದ್ದರು.
ಸಾಗರದ ಆಹಮದ್ ಆಲೀ ಖಾನ್ ಸಾಹೇಬರ ಜೀವನದ ಬಗ್ಗೆ ಬರೆದರೆ ಒಂದು ಸ್ವಾರಸ್ಯಕರವಾದ ಗ್ರ೦ಥವೇ ಆದೀತು, 1978-79ರಲ್ಲಿ ಸಾಗರದ ನಿಮ೯ಲ ಹೈಸ್ಕೂಲ್ ಎದರು ಜನತಾ ಪಕ್ಷದ ಸಾಗರದ ಮಾಜಿ ಶಾಸಕರಾದ ಕಾಗೋಡು ತಿಮ್ಮಪ್ಪ ಜನತಾ ಪಕ್ಷ ತೊರೆದು ಕಾ೦ಗ್ರೇಸ್ ಸೇರುವ ಸಭೆ ಇದೆ ಅಂತ ಸಾವ೯ಜನಿಕ ಪ್ರಕಟನೆ ಕೇಳಿ ಮುನ್ಸಿಪಲ್ ಹೈಸ್ಕೂಲ್ ನ 8ನೇ ತರಗತಿಗೆ ಚಕ್ಕರ್ ಹೊಡೆದು ಈ ಸಭೆ ನೋಡಲು ಹೋಗಿದ್ದೆ, ಅಲ್ಲಿ ಕಾಗೋಡು ಜನತಾ ಪಕ್ಷದವರು ನನ್ನ ಬೆನ್ನಿಗೆ ಚೂರಿ ಹಾಕಿದ್ದಾರೆ ಅಂತ ಭಾಷಣ ಮಾಡಿದ್ದು ಮತ್ತು ಖಾನ್ ಸಾಹೇಬರು ಅವರನ್ನ ಕಾಂಗ್ರೇಸ್ ಗೆ ಸೇರಿಸಿಕೊಂಡ ಕ್ಷಣ ಜನರ ಚಪ್ಪಾಳೆ ಅಭೂತ ಪೂವ೯ ಬೆಂಬಲದ ಕ್ಷಣ ಅವತ್ತು 15 ವಷ೯ ಪ್ರಾಯದ ನನ್ನ ಮೆದುಳಲ್ಲಿ ಅಚ್ಚಳಿಯದೆ ಉಳಿದಿದೆ.
ಆಗ ದೇಶದ ಪ್ರದಾನಿ ಇಂದಿರಾ ಗಾಂಧಿ ನನ್ನ ಮೂರನೆ ಮಗ ಎನ್ನುತ್ತಿದ್ದ ಮಡಿಕೆರೆಯ ಎಪ್.ಎಂ.ಖಾನ್ ಮತ್ತು ಸಾಗರದ ಆಹಮದಾಲಿ ಖಾನ್ ಖಾಸಾ ಖಾಸಾ, ಗುಂಡುರಾವ್ ರನ್ನ ಮುಖ್ಯಮಂತ್ರಿ ಮಾಡಿದ್ದರಿಂದ ಸೊರಬದ ಬಂಗಾರಪ್ಪ ದೂರ ಆಗಿದ್ದರು ಆಗ ಸಾಗರದ ಶಾಸಕರು ಕಾ೦ಗ್ರೇಸ್ ನ ಎಲ್.ಟಿ. ತಿಮ್ಮಪ್ಪ ಹೆಗ್ಗಡೆ ಚುನಾವಣೆಯಲ್ಲಿ ಜನತಾ ಪಕ್ಷದ ಕಾಗೋಡು ತಿಮ್ಮಪ್ಪರನ್ನ ಸೋಲಿಸಿದ್ದರು.
ಬಂಗಾರಪ್ಪರನ್ನ ಕೌ೦ಟರ್ ಮಾಡಲೆಂದೇ ಕಾಗೋಡರನ್ನ ಕಾಂಗ್ರೆಸ್ ಗೆ ಸೇರಿಸಿ, ವಿಧಾನ ಪರಿಷತ್ ಸದಸ್ಯರನ್ನ ಮಾಡಿ PWD ಮಂತ್ರಿ ಮಾಡುವ ಮೂಲಕ ರಾಜಕಾರಣದ ಗಾಡ್ ಪಾದರ್ ಈ ಆಹಮದ್ ಆಲೀ ಖಾನ್ ಸಾಹೇಬರು ಮತ್ತು ಅವತ್ತಿನ ಸಭೆಯ ಉದ್ದೇಶ ಮತ್ತು ಅದರ ರೂವಾರಿ ಖಾನ್ ಸಾಹೇಬರು.
ಇದರಿಂದ ಕಾಗೋಡರ ರಾಜಕೀಯ ಜೀವನ, ಶಾಂತವೇರಿ ಗೋಪಾಲ ಗೌಡರ ಸಮಾಜ ವಾದದ ಮೂಸೆಯಿಂದ ಬಂದ ಕಾಗೋಡು ಬಂಗಾರಪ್ಪ ಬದ್ದ ಶತ್ರುಗಳಾಗಿದ್ದು ಇತಿಹಾಸ.
ಈ ಎಲ್ಲಾ ಕಾರಣದಿಂದ ಖಾನ್ ಸಾಹೇಬರು ವಿದಾನ ಪರಿಷತ್ ಸದಸ್ಯರಾಗಿ ಮಂತ್ರಿಗಳಾಗುವ ಅಹ೯ತೆ ಇದ್ದರೂ ಸಕಾ೯ರದಲ್ಲಿ ನಿಗಮದ ಅಧ್ಯಕ್ಷರೂ ಆಗಿ ಮಾಡದಿದ್ದು ದುರಂತ.
ಈ ಇಳಿ ವಯಸ್ಸಿನಲ್ಲಿ ಶಿವಮೊಗ್ಗದಿಂದ ಸಾಗರ ತೆರಳುವ ಮಾಗ೯ ಮಧ್ಯದಲ್ಲಿ ಬ೦ದವರನ್ನ ಒತ್ತಾಯದಿಂದ ನನ್ನ ಕುಚಿ೯ಯಲ್ಲಿ ಕೂರಿಸಿ ಶಾಲು ಹೊದಿಸಿ ಸನ್ಮಾನ ಮಾಡಿ ನಾವೆಲ್ಲ ಸಂತೋಷಪಟ್ಟಿವು, ನಿಜಕ್ಕೂ ಈ ಅವಕಾಶ ಪಡೆದ ನಾವು ದನ್ಯರು ನಮ್ಮ ನೂತನ ಉದ್ದಿಮೆಗೆ ಶುಭ ಹಾರೈಸಿದರು.
ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ನವರು ಲೋಕಸಭೆಗೆ ಕಾಂಗ್ರೇಸ್ ವಿರುದ್ಧ ಸ್ಪದಿ೯ಸಿದಾಗ ಹೇಳುತ್ತಿದ್ದರು ಯಾರಾದರೂ ಬದಲಾಗಿ ಬೇರೆ ಪಕ್ಷಕ್ಕೆ ಓಟು ನೀಡ ಬಹುದು ಆದರೆ ಆ ಸಾಗರದ ಖಾನ್ ಮತ್ತು ಪೈ (ಪುತ್ತೂರಾಯರ ಬಗ್ಗೆ) ಮಾತ್ರ ಕೈ ಬಿಟ್ಟು ಬರೊಲ್ಲ ಅಂತ.
ಅದಕ್ಕೆ ಕಾರಣವೂ ಇದೆ, ಗುಂಡೂರಾಯರ ಕಾಲದಲ್ಲಿ ಬಂಗಾರಪ್ಪರನ್ನ ಹಣಿಯಲು ಜನತಾ ಪಕ್ಷದಿಂದ ಕಾಗೋಡರನ್ನ ತಂದು ವಿದಾನ ಪರಿಷತ್ ಸದಸ್ಯರನ್ನಾಗಿಸಿ ಮಂತ್ರಿ ಮಾಡಿದ ಕಾಯ೯ದಲ್ಲಿ ಆಹಮದ್ ಆಲೀ ಖಾನ್ ಸಾಹೇಬರ ಕೆಲಸ ದೊಡ್ಡದು.
ಸ್ವಾತಂತ್ರ್ಯ ನಂತರದ 1952 ರಿಂದ ಪ್ರಾರಂಭವಾದ ಚುನಾವಣೆಯಿಂದ ಈ ವರೆಗಿನ ಚುನಾವಣೆ ವರೆಗೆ ನೇರ ನೋಡಿದವರು, ರಾಜಕಾರಣ ಮಾಡಿದವರು ಇವರು, ಸಾಗರ ತಾಲ್ಲೂಕಿನ ಕಾಂಗ್ರೇಸ್ ಅಧ್ಯಕ್ಷರಾಗಿ ಪಕ್ಷ ಸಂಘಟಿಸಿದವರು, ಪುರಸಭಾ ಅಧ್ಯಕ್ಷರೂ ಆದವರು.
1989ರಲ್ಲಿ ಸಾಗರ ವಿಧಾನ ಸಭೆಗೆ ಕಾಗೋರಡರನ್ನ ಪುನಃ ಕರೆ ತಂದವರು ಆಗಲೇ ನಮ್ಮಂತವರನ್ನೆಲ್ಲ ಹಿಡಿದು ತಂದು ಕಾಂಗ್ರೇಸ್ಗೆ ಸೇರಿಸಿ ಕೊಂಡವರು, ಇವರ ಮಾಗ೯ದಶ೯ನದಿಂದಲೇ ನಾನು ಗ್ರಾ.ಪಂ., ಜಿ.ಪಂ ಗೂ ಹೋಗುವ೦ತಾಯಿತು, ಸಾಗರ ತಾಲ್ಲೂಕಿನಲ್ಲಿ ಇವರ ಗರಡಿಯಲ್ಲಿ ತಯಾರಾದ ನಾಯಕರು ನೂರಾರು.
ಈಗ 86 ರ ವಯೋಮಾನದ ಇವರು ನಿವೃತ್ತ ಜೀವನ ಮಾಡುತ್ತಿದ್ದಾರೆ, ಯೋಗ್ಯರಾದ ಮಕ್ಕಳು, ಮೊಮ್ಮಕ್ಕಳು ಮತ್ತು ಮರಿ ಮಕ್ಕಳ ಒಂದಿಗೆ ಸಂತೃಪ್ತ ಜೀವನ ಅವರದ್ದು.
ಇತ್ತೀಚಿಗೆ ಅನಾರೋಗ್ಯದಿಂದ ಮಣಿಪಾಲದಲ್ಲಿ 15 ದಿನ ಚಿಕಿತ್ಸೆ ಪಡೆದು ಬಂದಿದ್ದಾರೆಂದು ತಿಳಿದು ಮೊನ್ನೆ ಸಂಜೆ ಇವರನ್ನ ಬೇಟಿ ಮಾಡಲು ಸಾಗರಕ್ಕೆ ಹೋಗಿದ್ದೆ, ಈ ಇಳಿ ವಯಸ್ಸಿನಲ್ಲೂ ಬಂದವರ ಆತಿಥ್ಯ ಮರೆಯದೆ ನಮಗೆ ಬ್ಲಾಕ್ ಟೀ ಮತ್ತು ಬಿಸ್ಕತ್ ನೀಡಿದರು, ಅವತ್ತೆ ಬೆಳಿಗ್ಗೆ ಕಾಗೋಡು ತಿಮ್ಮಪ್ಪನವರು ಬಂದು ಹೋಗಿದ್ದರು.
ಇವರ ಸಣ್ಣ ಮಗ ಮೊಹಿಸಿನ್ ಖಾನ್ ಜೊತೆ ಇದ್ದಾರೆ, ಮೊಹಿಸಿನ್ ನನ್ನ ಕ್ಲಾಸ್ ಮೇಟ್ ಕೂಡ ಈಗ ಅವರು ಶುಂಠಿ ಮತ್ತು ಅಡಕೆ ವ್ಯಾಪಾರಿಗಳು, ದೊಡ್ಡ ಮಗ ಮನ್ಜೂರ್ ಖಾನ್ ನಗರಸಭಾ ಸದಸ್ಯರು, ಇನ್ನಿಬ್ಬರು ಮತೀನ್ ಖಾನ್ ಮತ್ತು ಮೆಹರ್ ಖಾನ್.
Comments
Post a Comment