Skip to main content

Blog number 3382. ಲಕ್ಷ್ಮೀಶ್ ವಾರ ಪತ್ರಿಕೆ ಸಂಪಾದಕರಾದ ಲಕ್ಷ್ಮೀಶ್ ನನ್ನ ಬಗ್ಗೆ ಬರೆದ ಲೇಖನ

ತೀರ್ಥಹಳ್ಳಿಯ ಖ್ಯಾತ ಲಕ್ಷ್ಮೀಶ್ ವಾರ ಪತ್ರಿಕೆ ಸಂಪಾದಕರಾದ ಲಕ್ಷ್ಮೀಷ್ ಹೊಸ ವರ್ಷದ ಹಿಂದಿನ ದಿನ ಇಹ ಲೋಕ ತ್ಯಜಿಸಿದರು ಅವರ ಶ್ರದ್ದಾಂಜಲಿ ಲೇಖನ ನೋಡಿದವರು ಲಕ್ಷೀಷರು ಮತ್ತು ನನ್ನ ಬೇಟಿ ಬಗ್ಗೆ ಅವರು ಬರೆದ ಲೇಖನದ ಪೂಣ೯ ಬಾಗ ಹಾಕಲು ಗೆಳೆಯರು ಕೋರಿದ್ದಾರೆ....

#June_11_2022.

#ಮಿತ್ರ_ಅರುಣ್_ಪ್ರಸಾದ್ 

#ಸ್ಮೃತಿ_ಲಕ್ಷ್ಮೀಶಪತ್ರಿಕೆ_ತೀರ್ಥಹಳ್ಳಿ


#shivamogga #thirthahalli #koppa #sringeri 
#press #PressClub #weekly #laxmish #laxmishvarapatrike #chalagara #Journalism #hibengalore #sringesh #janahorat #tungariver 

 1996 ನೇ ಇಸವಿಯ ಒಂದು ದಿನ ಮತ್ತು ಒಂದು ತಿಂಗಳು, ತೀರಾ ಖಚಿತವಾಗಿ ನೆನಪಿಲ್ಲ ಅನ್ನುವಾಗ ಅರುಣ್ ಪ್ರಸಾದ್ ಎಂಬ ಜಿಲ್ಲಾ ಪಂಚಾಯತಿ ಸದಸ್ಯರ ಬಗ್ಗೆ ರಾಜ್ಯ ಮತ್ತು ಜಿಲ್ಲಾ ಮಟ್ಟದ ಪತ್ರಿಕೆಗಳಲ್ಲಿ, ಕುತೂಹಲಕಾರಿ ಸುದ್ದಿ ಪ್ರಕಟವಾಗಿದ್ದವು.

 ನಾನು ಪತ್ರಿಕೆ ಆರಂಭಿಸಿ ಎರಡು ವರ್ಷ ಕಳೆದಿತ್ತಷ್ಟೇ, ಸ್ಥಳೀಯ ಲಕ್ಷ್ಮೀ ಮೆಡಿಕಲ್ಸಿನಲ್ಲಿ ಕುಂತು ಲೋಕಾಭಿರಾಮ ಹರಟುತ್ತಾ  ಗುರು ಶಿಷ್ಯ ಛಲಗಾರ ಗಣಪತಿ ಮತ್ತು ನಾನು ಇರುವಾಗ, ಗುರುಗಳಿಂದ ಈ #ಅರುಣಪ್ರಸಾದ್ ನನ್ನ ಶಿಷ್ಯ ಕಣೋ ಎಂಬ ಉದ್ಗಾರ ಹೊರಬಿತ್ತು.

   ಇವನಣ್ಣ ನಾಗರಾಜ್ ಆನಂದಪುರಂ ನಲ್ಲಿ ನನ್ನ ಪತ್ರಿಕೆ ವರದಿಗಾರ ಮತ್ತು ವಿತರಕನಾಗಿದ್ದ, ಇವನು ಅರುಣ ಬೆಳಿಗ್ಗೆ ಸಾಗರಕ್ಕೆ ಹೋಗುವ ಶಂಕರ್ ಬಸ್ಸಿನಲ್ಲಿ ಕಳಿಸುತ್ತಿದ್ದ ಛಲಗಾರವನ್ನು ಇಳಿಸಿ, ಅಲ್ಲಿನ ಚಂದಾದಾರರಿಗೆ ತಲುಪಿಸುವ ಕೆಲಸ ಮಾಡ್ತಿದ್ದ.

 ಆ ಹುಡುಗನೀಗ ಶಿವಮೊಗ್ಗ ಜಿಲ್ಲಾ ಪಂಚಾಯತಿಗೆ ಆನಂದಪುರಂ ಕ್ಷೇತ್ರದಿಂದ ಸದಸ್ಯ ಇವತ್ತವನ ಹೆಸರು‌ ತುಂಬಾ ಪತ್ರಿಕೆಗಳಲ್ಲಿ ಬಂದಿದೆ ಓದಿದ್ಯಾ..?* ಅಂದ್ರು.!

   "ಹೌದು, ನಾನೋದಿದ್ದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ನಡೆಯುತ್ತಿರುವ ಡ್ರಗ್ಸ್ ಮಾಫಿಯಾ  ಬಗ್ಗೆ ವಿವರವಾಗಿ ಮಾಹಿತಿ ಕಲೆ ಹಾಕಿ ಜಿ. ಪಂ. ಸಭೆಯಲ್ಲಿ ಮಾತಾಡಿದ್ದಕ್ಕಾಗಿ ಒಂದು ಖೊಟ್ಟಿ ಕೇಸನ್ನು ಅರುಣ ಪ್ರಸಾದ್ ಹಾಕಿಸಿಕೊಂಡಿದ್ದಾರೆ.

  ಟೆಂಡರ್ ಅನ್ನೇ ಕರೆಯದೆ ತಮಗೆ ಬೇಕಾದ ಔಷಧ ಕಂಪನಿಗಳವರಿಂದ ಮಾತ್ರೆ ಟಾನಿಕ್ ಖರೀದಿಸುವ, ಅವುಗಳನ್ನೇ ಖರೀದಿಸದೆಯೇ ನಕಲಿ ಬಿಲ್ ಒಪ್ಪಿಸಿ ಸರ್ಕಾರದ ಖಜಾನೆಯಿಂದ ಹಣ ಪಡೆಯುವ, ತಮ್ಮ ಗೋದಾಮಿನಲ್ಲಿ ಯಾವತ್ತೂ ಇಲ್ಲದ ಮಾತ್ರೆ ಔಷಧಗಳ ಸಂಗ್ರಹ ಬೇಕಾದಷ್ಟಿದೆ ಅಂತ ತೋರಿಸಿ ಹಣ ನುಂಗುವ ಖದೀಮ ದಂಧೆಕೋರರ ಜಾಲವನ್ನು ಇಂಚಿಂಚೂ ಬಿಡದೇ ಪ್ರಸಾದ್ ಬಯಲಿಗೆಳೆದಿದ್ದರು.

    ಈ ಕಳ್ಳ ದಂಧೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಯನ್ನೂ ಸೇರಿದಂತೆ ಯಾರು ಯಾರೆಲ್ಲಾ ಫಲಾನುಭವಿಗಳು ಎಂಬುದನ್ನೂ ಅವರು ವಿವರಿಸಿದ್ದರು, ತಕ್ಷಣವೇ ಆರೋಗ್ಯ ಇಲಾಖೆಯ ಗೋದಾಮುಗಳಲ್ಲಿ ಹಾಲೀ ಇರುವ ಸಂಗ್ರಹವೆಷ್ಟು , ಬಿಲ್ಲುಗಳಲ್ಲಿ ತೋರಿಸಿದ ಔಷಧ ಮತ್ತು ಲೆಕ್ಕವೆಷ್ಟು ಎನ್ನುವ ನಿಟ್ಟಿನಲ್ಲಿ ಪ್ರಾಮಾಣಿಕ ತನಿಖೆ ಆಗಬೇಕು ಎಂದು ಆಗ್ರಹಿಸಿದ್ದರು. 

   ತಮ್ಮ ಆಗ್ರಹವೇನಿದೆ ಅದು ಸಭಾ ನಡವಳಿಕೆ ಪುಸ್ತಕದಲ್ಲಿ ನಮೂದಾಗುವುದೇ ಅಲ್ಲದೇ, ಜಿ.ಪಂ ಅಧ್ಯಕ್ಷರಾದರೂ ತಕ್ಷಣವೇ ಸೂಕ್ತ ತನಿಖೆಗೆ ಆದೇಶ ನೀಡಲೇ ಬೇಕಾದಂತಹ ಅನಿವಾರ್ಯತೆ ಸೃಷ್ಟಿಸಿದ್ದರು. 

    ಅದಾಗಿ ವಾರ ಕಳೆದಿಲ್ಲ ಎನ್ನುವಾಗ ಜಿಲ್ಲಾ ಆರೋಗ್ಯ ಇಲಾಖೆಯ ಪ್ರಮುಖ ಗೋದಾಮೊಂದಕ್ಕೆ ಬೆಂಕಿ ಬಿದ್ದಿತ್ತು.

    ಇದು ಆಕಸ್ಮಿಕವಲ್ಲ ಉದ್ದಿಶ್ಯಪೂರ್ವಕ ಕೃತ್ಯ ನಾನು ಪ್ರಸ್ತಾಪಿಸಿದ್ದ ಡ್ರಗ್ಸ್ ಮಾಫಿಯಾ ಗುಂಪಿನವರೇ ತಮ್ಮ ಹುಳುಕು ಹೊರಬರದೇ ಇರಲಿ ಅಂತ, ಅಗ್ನಿ ಆಕಸ್ಮಿಕ ಎಂದು ಕತೆ ಕಟ್ಟಲು ಹೊರಟಿದ್ದಾರೆ ಎಂದು ಸುದ್ದಿಗೋಷ್ಠಿಯನ್ನೂ ಕರೆದು ಅರುಣ್ ಆಪಾದಿಸಿದ್ದರು. 

  ಇವರನ್ನು ನಿಯಂತ್ರಿಸದಿದ್ದರೆ, ಹಗರಣ  ತಮ್ಮ ಬುಡಕ್ಕೇ ಬರುತ್ತದೆ ಎಂದರಿತ ಡ್ರಗ್ಸ್ ಮಾಫಿಯಾ ಮಂದಿ  ಆರೋಗ್ಯ ಇಲಾಖೆ ಅಧಿಕಾರಿಯನ್ನು  ನಿಂದಿಸಿದರು -ಕೊಲೆ ಬೆದರಿಕೆ ಹಾಕಿದರು ಎಂಬ ಸುಳ್ಳು ಪ್ರಕರಣ ದಾಖಲಿಸಿ, ಹದಿನೈದು ದಿನ ಜೈಲಿಗೆ ಕಳುಹಿಸುವಲ್ಲೂ ಯಶಸ್ವಿಯಾದರು ಎಂಬಿತ್ಯಾದಿ ವಿವರಗಳನ್ನು ಇವತ್ತು ಹೆಚ್ಚಿನ ಪ್ರತಿಕೆಗಳಲ್ಲಿ ಓದಿದ್ದೆ" ಎಂದೆ.

 ಆಗ ಮಾತಾಡಿದ ಛಲಗಾರರು ಆಳ್ತನಕ್ಕೆ ತಕ್ಕ ಸಾಹಸವನ್ನೇ ಮಾಡಿದ್ದಾನೆ ನಮ್ಮ ಅರುಣ ಎಂದು ಅಭಿಮಾನಿಸಿದರು.

   ಆನಂತರದಲ್ಲಿ ಎಲ್ಲೋ ಅಪರೂಪಕ್ಕೆ ಭೇಟಿಯಾಗುವ ಅವಕಾಶ ಒದಗಿದಾಗ, ಹಾಯ್ ಹಲೋಗೆ ಸೀಮಿತವಾಗಿತ್ತು.

  ನಾನು ಫೇಸ್ ಬುಕ್ ಎಂಬ ವೇದಿಕೆ ಪ್ರವೇಶಿಸುವ ಎಷ್ಟೋ ವರ್ಷ ಮೊದಲೇ ಅಲ್ಲಿ ತಮ್ಮ ಲೇಖನ, ಬರಹಗಳ ಮೂಲಕ ಸುಪರಿಚಿತರಿದ್ದವರು ನೇರ ಸಂಪರ್ಕಕ್ಕೆ ಸಿಕ್ಕರು.

   2018 ರ ಫೆಬ್ರವರಿ ತಿಂಗಳಲ್ಲಿ ಶಿವಮೊಗ್ಗದ  ನಂಜಪ್ಪ ಲೈಫ್ ಕೇರ್ ಆಸ್ಪತ್ರೆಯಲ್ಲಿ ನನಗೆ ಓಪನ್ ಹಾರ್ಟ್ ಸರ್ಜರಿಯಾಗಿ ವಾರಕ್ಕೆ, ಅಲ್ಲಿಗೇ ಬಂದು ಶೀಘ್ರ ಚೇತರಿಕೆಗೆ ಹಾರೈಸಿದ್ದರು. 

  ಬಹುತೇಕ ಅಲ್ಲಿಂದ ನನ್ನ ಅವರ ಗೆಳೆತನ ನಿಕಟವಾಯ್ತು,ಫೇಸ್ ಬುಕ್, ವಾಟ್ಸಾಪುಗಳಲ್ಲಿ ನಿತ್ಯ ಭೇಟಿಯಾದೆವು.

  ಸಾಗರ, ಆನಂದಪುರಂ ಗಳ ಐತಿಹಾಸಿಕ ಹಿನ್ನೆಲೆ ಕುರಿತ ಅವರು ಬರೆದ ಒಂದೆರಡು ಪುಸ್ತಕಗಳು, ಆ ಸುತ್ತಮುತ್ತಲಿನ ಸಾಮಾಜಿಕ ಜೀವನ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ತಮ್ಮ ಛಾಪನ್ನು ಅನನ್ಯವಾಗಿ ಮೂಡಿಸಿದ್ದ ಹತ್ತು ಹಲವು ಪ್ರತಿಷ್ಠಿತರ,  ಎಲೆಮರೆಯ ಕಾಯಂತೆ ಅನ್ಯರ ಒಳಿತಿಗಾಗಿ ದುಡಿದ ನಿಸ್ಪ್ರಹ ಸಾಧಕರ ಬಗ್ಗೆ ನಿತ್ಯವೂ ಒಂದಲ್ಲ ಒಂದು ಲೇಖನ ಬರೆವ ಅರುಣ್ ಪ್ರಸಾದ್ ಒಬ್ಬ ಪತ್ರಕರ್ತನಾಗಿದ್ದರೆ ಒಳ್ಳೆಯದಿತ್ತು ಅನಿಸಿದ್ದು ಅದೆಷ್ಟು ಬಾರಿಯೋ.

   ಅದನ್ನವರಿಗೆ ಅನೇಕ ಸಲ ಹೇಳಿಯೂ ಇದ್ದೆ, ಆನಂದಪುರಂ ವೃತ್ತದಲ್ಲಿ #ಹೊಂಬುಜ_ರೆಸಿಡೆನ್ಸಿ  ಎಂಬ ಹೆಸರಿನ ವಸತಿ ಗೃಹ ಅದಕ್ಕೆ ಹೊಂದಿಕೊಂಡಂತೆ ಶುಚಿರುಚಿಯ ಸಸ್ಯಾಹಾರಿ ಫಲಹಾರ ಮಂದಿರ, ಕೃಷಿ ಇತ್ಯಾದಿ ಚಟುವಟಿಕೆಗಳ ಮಧ್ಯೆ ಪತ್ರಿಕೋದ್ಯಮ ನನಗಾಗಿ ಬರಲ್ಲ ಬಿಡಿ  ಎಂದಿದ್ದ ಪ್ರಸಾದರಿಗೆ ರವಿ ಬೆಳಗೆರೆಯಿಂದ ಹಿಡಿದು ಶೃಂಗೇಶ್ ವರೆಗೆ ನೂರಾರು ಪತ್ರಕರ್ತರು ನಿಕಟವಾಗಿ ಗೊತ್ತಿದ್ದರು.

   ಅಷ್ಟೇ ಅಲ್ಲ ಒಂದು ಅವಧಿಗೆ ಜಿಲ್ಲಾ ಪಂಚಾಯತಿ ಸದಸ್ಯರಾಗಿದ್ದಾಗ ಜಿಲ್ಲೆಯ ಮತ್ತು ರಾಜ್ಯದ ಅಸಂಖ್ಯ ರಾಜಕಾರಣಿಗಳ ಪರಿಚಯ ಇವರಿಗಾಗಿತ್ತು.

 ಅದರಲ್ಲೂ ತಮ್ಮ ಸ್ವಕ್ಷೇತ್ರ ಆನಂದಪುರಂ ಬಗ್ಗೆ ವಿಶೇಷ ಹೆಮ್ಮೆ ಹೊಂದಿರುವ ಅರುಣ್, ಅದರ ಸ್ಥಾಪಕರಾದ ಕೆಳದಿ ಮನೆತನದ ರಾಜಾ ವೆಂಕಟಪ್ಪನಾಯಕರಿಂದ ಹಿಡಿದು ಅವರ ಹಿಂದಿನ ಮತ್ತು ಮುಂದಿನ ಹಲವು ತಲೆಮಾರುಗಳ ಬಗ್ಗೆ ದೊಡ್ಡ ಜ್ಞಾನ ಭಂಡಾರವೇ ಆಗಿ ಬಿಟ್ಟರು.

 ಸಾಗರ ಪ್ರಾಂತ್ಯದಲ್ಲಿನ ಯಾವುದೇ ಪ್ರಮುಖ ವ್ಯಕ್ತಿ ವಿಚಾರಗಳ ಮಾಹಿತಿ ಬೇಕಾದರೆ, ಅರುಣ್ ಪ್ರಸಾದರನ್ನು ಕೇಳಿ ಎಂಬ ಮೆಚ್ಚುಗೆಯ ಮಾತು ವ್ಯಾಪಕವಾಯ್ತು.

     ಬಹುಶಃ ಅವರಲ್ಲೊಬ್ಬ ಚರಿತ್ರಕಾರನ ಜೊತೆಗೆ ಅಪ್ಪಟ ಸಾಹಿತಿಯೂ ಇದ್ದಾನೆಂಬುದನ್ನು, ಅರುಣ್ ಬರೆದ #ಬೆಸ್ತರ ರಾಣಿ_ಚಂಪಕಾ ನಿರೂಪಿಸಿದಳು.

 ಸತ್ಯ ಘಟನೆಗಳನ್ನು ಆಧರಿಸಿ ರಚಿಸಿದ್ದ ಆ ಕೃತಿಯನ್ನು ಸ್ವಘೋಷಿತ ಸಂಶೋಧಕರಿಗೆ ಹೆದರಿ,  ಕಾಲ್ಪನಿಕ ಕಾದಂಬರಿ ಅಂತ ಪ್ರಸ್ತಾಪಿಸ ಬೇಕಾಗಿ ಬಂದಿತ್ತು ಎಂದು ಈಗೆರಡು ತಿಂಗಳ ಹಿಂದೆ ಪ್ರಕಟಿಸಿದ ತಮ್ಮ ಸಣ್ಣ ಕತೆಗಳ ಗೊಂಚಲು #ಭಟ್ಟರ_ಬೋಂಡಾದ_ಬಾಂಡ್ಲಿಯಲ್ಲಿ_ಬಿಲಾಲಿ_ಬಿಲ್ಲಿ_ಅಭ್ಯಂಜನ_ಮತ್ತು_28_ಕಥೆಗಳು ಕೃತಿಯ ಲೇಖಕರ ಮಾತಲ್ಲಿ ಹೇಳಿಕೊಂಡಿದ್ದಾರೆ.

 ತನ್ಮೂಲಕ ಅನ್ಯಥಾ ಕಾಲುಕೆದರಿ ಜಗಳಕ್ಕೆ ನಿಲ್ಲುವ, ಅನಗತ್ಯ ಟೀಕೆ ವಿಮರ್ಶೆಗಳಿಗೆ ಹೊರಡುವ ಮಂದಿಯ ಸಹವಾಸವೇ ತನಗೆ ಬೇಡವೆನ್ನುವ ಸಾತ್ವಿಕ ನಿಲುವು ಪ್ರಕಟಿಸಿದ್ದಾರೆ.

   ಎಂಟನೇ ತರಗತಿ ಓದುತ್ತಿದ್ದಾಗಲೇ ಛಲಗಾರ ಪತ್ರಿಕೆಯಲ್ಲಿ ಪ್ರಕಟವಾದ #ಅರಣ್ಯ_ನ್ಯಾಯ ಎಂಬುದು ತನ್ನ ಪ್ರಪ್ರಥಮ ಸಾಹಿತ್ಯ ಸಾಹಸ ಎನ್ನುತ್ತಾರೆ ಅರುಣ್.

   ಕಾಡುಪ್ರಾಣಿಯೊಂದನ್ನು ಭೇಟೆಯಾಡಿ ಅದರ ಮಾಂಸವನ್ನು ಹಸಿಗೆ ಮಾಡಿ ಹೊತ್ತು ತರುತ್ತಿದ್ದ ಬಡವನೊಬ್ಬ, ಅರಣ್ಯಾಧಿಕಾರಿಗಳ ಕೈಗೆ ಸಿಕ್ಕುಬಿದ್ದ ಅವನ ಕೊರಳ ಪಟ್ಟಿಗೆ ಕೈಹಾಕಿ ಎಳೆದೊಯ್ದ ಅರಣ್ಯ ಇಲಾಖೆ ಸಿಬ್ಬಂದಿಗಳು, ಆತನನ್ನು ತಮ್ಮ ಕಚೇರಿಯಲ್ಲಿ ಕೆಡವಿಕೊಂಡು ಸಮಾ ರುಬ್ಬಿದ್ದಲ್ಲದೇ ಒಂದು ಕೇಸಾಕಿ ಬಿಡುಗಡೆ ಮಾಡಿದರು ಆತ ತನ್ನ ಕುಟುಂಬಕ್ಕಾಗಿ ಬೇಟೆಯಾಡಿದ್ದ ಪ್ರಾಣಿಯ ಮಾಂಸವನ್ನು ಅರಣ್ಯ ಸಿಬ್ಬಂದಿಗಳೇ ಬೇಯಿಸಿ ತಿಂದರು ಎಂಬ ವಿವರಗಳಿದ್ದ ಆ ವರದಿ ತಮ್ಮೂರಿನಲ್ಲಿ ನಡೆದ ಬಡ ಹಕ್ಕಿಪಿಕ್ಕಿ ವ್ಯಕ್ತಿಯೊಬ್ಬನ ನೈಜ ಜೀವನಾನುಭವ ಎಂದು ಕಳೆದ ಜೂನ್ ಮೂರರಂದು ಅವರನ್ನು ಹೊಂಬುಜ ರೆಸಿಡೆನ್ಸಿಯ ಕಚೇರಿಯಲ್ಲಿ ನನ್ನ ಕುಟುಂಬ ಸಮೇತ ಮೊಖ್ತಾ ಭೇಟಿಯಾದ ಸಂದರ್ಭದಲ್ಲಿ ಹೇಳಿಕೊಂಡರು. 

  ಕೋಳಿ ಕಜ್ಜಾಯದ ಆಕರ್ಷಣೆ
   ಅವತ್ತವರಲ್ಲಿಗೆ ದಿಢೀರ್ ಭೇಟಿ ಕೊಡುವ ಆಸಕ್ತಿಯಾದರೂ ಬೆಳೆದದ್ದು, ಅರುಣ್ ತಮ್ಮ ಫೇಸ್ ಬುಕ್ ಗೋಡೆಯಲ್ಲಿ  #ಕೋಳಿ_ಕಜ್ಜಾಯ ಎಂಬ ವಿಶೇಷ ಮಾಂಸಾಹಾರಿ ಭಕ್ಚ್ತದ ಬಗ್ಗೆ ಬಾಯಲ್ಲಿ ನೀರೂರುವಂತೆ ಬರೆದಿದ್ದ ವಿವರಣೆ ಓದಿದ್ದು, ನಾಟಿ ಕೋಳಿಸಾರು ತುಂಬಾನೇ ರುಚಿಯಿರುತ್ತೆ ಗೊತ್ತಿತ್ತು ಆದರೆ ಆ ಕಾರದಡುಗೆ ಜೊತೆಗೆ ಈ ಕಜ್ಜಾಯ ಎನ್ನುವ ಪದಾರ್ಥ ಹ್ಯಾಗೆ ಹೊಂದಾಣಿಕೆ ಆಗತ್ತೆ ಎಂಬುದನ್ನು ನೋಡಿಯೇ ಬಿಡುವ, ಅಲ್ಲಲ್ಲ ತಿಂದೇ ನೋಡುವ ಅನ್ನುವ ಕುತೂಹಲದಲ್ಲಿ ಕರೆಮಾಡಿದರೆ, ಸ್ವೀಕರಿಸಿದ ಅರುಣ್ ಅದನ್ನು ಬಾಯಲ್ಲಿ ಹೇಳುವ ಹಾಗಿಲ್ಲ ಖುದ್ದಾಗಿ ಬಂದು ತಿಂದೇ ಬಿಡಬೇಕು ಯಾವಾಗ ಬರ್ತೀರಿ..? ನನಗೂ ನಿಮ್ಮೊಡನೆ ಕುಂತು ತುಂಬಾ ಮಾತಾಡಕ್ಕಿದೆ ಎಂಬ ಆಹ್ವಾನ ನೀಡಿದರು.

  "ಇವತ್ತೇ ಬರ್ತಿದೀನಿ. ರಿಪ್ಪನ್ ಪೇಟೆಯಲ್ಲಿ ಸ್ವಲ್ಪ ಹಣ್ಣಿನ ಸಸಿಗಳನ್ನು, ಹಲಸು, ಅಪ್ಪೆ ಮಿಡಿ ಮಾವು, ಜಾಯಿಕಾಯಿ, ಲವಂಗ ಇತ್ಯಾದಿ ಸಸಿಗಳನ್ನು ಖರೀದಿಸುವ ಕೆಲಸವಿದೆ ಮೊದಲು ನಿಮ್ಮ ಕೋಳಿ ಕಜ್ಜಾಯಕ್ಕೊಂದು ಗತಿ ಕಾಣಿಸಬೇಕು ಎಂದು ನಾನು ನನ್ನ ಮಕ್ಕಳು ನಿರ್ಧರಿಸಿದ್ದೇವೆ ಎರಡು ಗಂಟೆ ಒಳಗೆ ನಿಮ್ಮೆದುರು ಹಾಜರ್" ಎಂದವನು ಹೊರಟೇ ಬಿಟ್ಟೆ. 

   ಅವರ ಕಚೇರಿ ಎದರು ಕಾರು ನಿಲ್ಲಿಸಿ ಒಳಗೆ ಹೋದರೆ, ಕೈಲೊಂದು ಮಿರುಗುವ ಶಲ್ಯ ರೂಪದ ಶಾಲು ಹಿಡಿದು ಎದ್ದು ನಿಂತರು ಅದನ್ನು ಆದರ ಪೂರ್ವಕವಾಗಿ ಅತ್ಯಂತ ಆತ್ಮೀಯವಾಗಿ ನನಗೆ ಹೊದಿಸಿ ಸಂಭ್ರಮಿಸಿದರು. 

  ಕೈಗೆ #ಚಿತ್ರಸಿರಿ ಶಿರವಂತೆ ಎಂಬ ಹೆಸರಿದ್ದ ಪೆನ್ನು ಪೆನ್ಸಿಲ್ಲು ಇತ್ಯಾದಿ ಇಡಬಹುದಾದ ಸುಂದರ ಗೃಹ ಕೈಗಾರಿಕೆಯೊಂದರ ಪುಟ್ಟ ಪೆಟ್ಟಿಗೆಯನ್ನು ಸ್ಮರಣಿಕೆಯಾಗಿ ಕೊಟ್ಟರು ಅವರ ಬಗ್ಗೆ ಕೇಳೋಣವೆಂದು ಕೊಂಡಿದ್ದರೆ, ನನ್ನ ನಿಟ್ಟಿನಲ್ಲಿ ಅವರಲ್ಲಿರುವ ಮಾಹಿತಿಗಳನ್ನೆಲ್ಲಾ ಮೊದಲಾಗಿ ಹೇಳಿ, ನನ್ನಂತಹಾ ನನ್ನನ್ನೇ ದಂಗು ಪಡಿಸಿ ಹರ್ಷಿಸಿದರು.

 ನೂರಾ ಮೂವತೈದು ಕೇಜಿಯಷ್ಟಿದ್ದ ಭೌತಿಕ ಕಾಯವನ್ನು ಕ್ವಿಂಟಾಲಿಗೆ ಇಳಿಸಿದ ಸಾಹಸ ವಿವರಿಸಿದರು.

 ಬಾಲ್ಯದಲ್ಲಿ ಬರೆದು ಮತ್ತೆ ಮರೆತಿದ್ದ ಬರವಣಿಗೆಯನ್ನು ಜನಹೋರಾಟ ದೈನಿಕದ ಸಂಪಾದಕರೂ, ರವಿ ಬೆಳಗೆರೆ ಅವರ ಹಾಯ್ ಬೆಂಗಳೂರ್ ಪತ್ರಿಕೆಯ ಸ್ಪೋಟಕ ಸುದ್ದಿಗಳ ವರದಿಗಾರರೂ ಆಗಿರುವ ಶೃಂಗೇಶ್ ಪ್ರೋತ್ಸಾಹಿಸಿ 29 ಸಣ್ಣ ಕತೆಗಳನ್ನು ಬರೆದಿದ್ದೇನೆ ಗೊತ್ತಾ ಅಂದ್ರು.

   ರವಿ ಬೆಳಗೆರೆ ಮತ್ತು ಶೃಂಗೇಶ್ ತಮ್ಮಲ್ಲಿಗೆ ಬಂದಾಗ ಅನೇಕ ಬಾರಿ ನನ್ನ ಲೇಖನ ಮತ್ತು ಬರವಣಿಗೆ ಬಗ್ಗೆ ಮೆಚ್ಚುಗೆಯ ಮಾತಾಡುತ್ತಿದ್ದರು ಅಂತಂದು ದಿಗಿಲಿಗೆ ಒಳಪಡಿಸಿದ್ರು.

   ಹೀಗೆ ಹತ್ತು ನಿಮಿಷ ಐದೇ ನಿಮಿಷ ನಂಗೆ ಬೇರೆ ಕೆಲಸವಿದೆ  ಊಟಕ್ಕೆ ಬಂದ ನಿಮ್ಮನ್ನು ಕಾಯಿಸಲ್ಲ ಅಂತಂದ ಮಾತುಕತೆ ಒಂದು ಗಂಟೆಗಿಂತಲೂ ಸ್ವಲ್ಪ ಹೆಚ್ಚೇ ಸಾಗಿತು. 

  ಸಂಭಾಷಣೆ ಸಂವಾದ, ಚರ್ಚೆ, ಮಾತು ಹೃದಯಸ್ಪರ್ಶಿಯಾಗೂ ಆತ್ಮೀಯವಾಗೂ ಇದ್ದರೆ ಸಮಯ ಕಳೆದಿದ್ದೇ ಗೊತ್ತಾಗಲ್ಲ ಎನ್ನುವ ಮಾತನ್ನು ಕೃತಿಯಲ್ಲಿ ತೋರಿದರು.

   ನಮ್ಮಲ್ಲಿ ಉದ್ದಿನವಡೆ ಮಾಡ್ತೀವಲ್ಲ ಅದನ್ನೇ ಅಕ್ಕಿಯಿಂದ ಕೋಡುಬಳೆ ರೂಪದಲ್ಲಿ‌ ಅಡುಗೆ ಎಣ್ಣೆಯಲ್ಲಿ ಹುರಿದು ತಯಾರಿಸುವ ತಿನಿಸೇ ಕೋಳಿ ಕಜ್ಜಾಯ. 

   ಡಾ. ರಾಜ್ ಕುಮಾರ್  ಪರಸ್ಪರ ಬೀಗರಾಗುವ ಮೊದಲಿಂದಲೂ  ಬಂಗಾರಪ್ಪನವರ ಸೊರಬದ ಮನೆಗೆ ಬರುತ್ತಿದ್ದ ವರನಟ ರಾಜಕುಮಾರ್ ಅವರಿಗೆ ಇದೆಂದರೆ ತುಂಬಾ ಇಷ್ಟ.

  ಇದನ್ನು ನಾಟಿ ಕೋಳಿ ಸಾರಲ್ಲಿ ಅದ್ದಿ ತಿನ್ನುವುದೆಂದರೆ ಪರಮಾನಂದ.

   ಎರಡು ವರ್ಷಗಳ ಕಾಲ ಕಾಡಿದ ಕೊರೋನಾ ಸಂಕಷ್ಟ ಕಳೆದ ನಂತರ, ಹ್ಯಾಗೆ ಶ್ರೀಯುತರಲ್ಲಿನ ಲೇಖಕ ಲವಲವಿಕೆಯಾದನೋ ಹಾಗೆಯೇ ರಾಜ್‌ಕುಮಾರ್ ಇಷ್ಟದ ಕಜ್ಜಾಯ ನೆನಪಾಗಿದೆ. 

  ಅವರಿಗಿಷ್ಟದ ನಾಟಿಕೋಳಿ ಸಾರೂ ಸ್ಮರಣೆಗೆ ಬಂದಿದೆ  ಅದನ್ನೇ ಕೋಳಿ- ಕಜ್ಜಾಯವಾಗಿ ನಮ್ಮ *ಚಂಪಕಾ ಪ್ಯಾರಡೈಸ್* ನಲ್ಲಿ ತಯಾರಿಸಿ ತಕ್ಕ ಪ್ರಚಾರವನ್ನೂ ಕೊಟ್ಟಮೇಲೆ, ಕುತೂಹಲಗೊಂಡು ಇವತ್ತು ನೀವು ಬಂದಂತೆಯೇ ನೂರಾರು ಗ್ರಾಹಕರು ಎಲ್ಲೆಲ್ಲಿಂದಲೋ ಹುಡುಕಿಕೊಂಡು ಬರುತ್ತಾರೆ. 

  #ಬೆಸ್ತರ_ರಾಣಿ_ಚಂಪಕಾ* ಕೃತಿಯಲ್ಲಿ ಕೆಳದಿ ಸಂಸ್ಥಾನದ ಅದ್ವಿತೀಯ ದೊರೆ ರಾಜಾ ವೆಂಕಟಪ್ಪ ನಾಯಕನ  ಉಪಪತ್ನಿ ಚಂಪಕಾಳಿಗಾಗಿ ಆನಂದಪುರಂ ನಲ್ಲಿ #ಚಂಪಕ_ಸರಸ್ಸುಎಂಬ ಹೆಸರಿನ ಸುಂದರ ಕೊಳ ನಿರ್ಮಿಸಿದ ಎನ್ನುವುದನ್ನು ಓದಿದ ಸಾಕಷ್ಟು ಇತಿಹಾಸ ಪ್ರಿಯರಂತೆಯೇ *ನಟ ಯಶ್* ಕೂಡ ಅದೇ *ಚಂಪಕ ಸರಸ್ಸು* ಅರ್ಥಾತ್‌ ಕೊಳವನ್ನು ಸಂಪೂರ್ಣ ಅಭಿವೃದ್ಧಿ ಪಡಿಸಲು ಮನ ಮಾಡಿದ್ದಾರೆ ಅದರ ಕಾಮಗಾರಿ ಭರದಿಂದ ಸಾಗಿದ್ದು, ಆ ಘನಕಾರ್ಯಕ್ಕೆ ನಾನು ಕಾರಣನಾದೆನೆಲ್ಲಾ ಎಂಬ ಹೆಮ್ಮೆ ನನ್ನದು ಎಂದವರು, ತುಂಬಾ ತಡವಾಯಿತು. ನಮ್ಮ ಮಾತುಕತೆ ನಡುವೆ ನಿಮ್ಮ ಶ್ರೀಮತಿ ಮತ್ತು ಮಕ್ಕಳು ಅದೆಷ್ಟು ಹಸಿದಿದ್ದಾರೋ ಮರೆತು ಬಿಟ್ಟೆ ಎಂದರು.

 ತಮ್ಮ ಸಿಬ್ಬಂದಿಗಳಲ್ಲಿ ತುಂಬಾ ವಿನಮ್ರರಾದ ನಾಗರಾಜ, ಅನಿಲ್, ಪ್ರದೀಪ್ ಅವರುಗಳನ್ನು ನಮ್ಮ ಸೇವೇಗೆ ನಿಯೋಜಿಸಿ ಪೂರ್ವ ನಿಗದಿತ ಕೆಲಸಕ್ಕೆ ಅರುಣ್ ನಡೆದಾಗ ಗಂಟೆ ನಾಲ್ಕು ಸಮೀಪಿಸಿತ್ತು.

 ಮೊದಲಿಗೆ ಕೊಳಿ ಕಜ್ಜಾಯ ತಿಂದು ಕುತೂಹಲ ತಣಿಸಿಕೊಂಡೆವು,ಅದರ ಹಿಂದೆ ಬಂದ ನಾಟಿಕೋಳಿ ಸಾರು ತುಂಬಾ ಸೊಗಸಾಗಿತ್ತು ನನ್ನನ್ನು ಹೊರತುಪಡಿಸಿ ವಸು ಮತ್ತು ಮಕ್ಕಳಿಗೆ ಹೊಳೆಬಾಳೆ ಕಾಯಿ ಯಾನೆ ಮೀನೆಂದರೆ ಪಂಚಪ್ರಾಣ ಅದೂ ಬಂತು. 

   ಐದೋ ಆರೋ ಕಜ್ಜಾಯಗಳನ್ನು ಶುಚಿರುಚಿಯಾದ ಬಿಸಿಬಿಸಿ ನಾಟಿ ಕೋಳಿ ಸಾರಿಗೆ ಅದ್ದದ್ದಿ ತಿಂದ ನಾನು, ಸ್ವಲ್ಪ ಅನ್ನ ಮೊಸರು ತಿಂದು ತೇಗಿದೆ.

  ಮೊದಲೇ ಇವರಿಂದ ಹಣ ಪಡೆಯಬೇಡಿ ಅಂತ ಅರುಣ್ ಹೇಳಿದ್ದರು,ಪೂರಾ ಊಟ ಮುಗಿಸಿ ಡರ್ರೆಂದು ತೇಗಿ ಕೈತೊಳೆದು *ಚಂಪಕಾ ಪ್ಯಾರಡೈಸ್* ಮೆಟ್ಟಿಲಿಳಿಯುವಾಗ *ಅನ್ನದಾತೋ ಸುಖೀಭವ* ಎಂಬ ಉದ್ಗಾರ ಹೊಟ್ಟೆಯೊಳಗಿಂದ ಕೇಳಿಸಿತು. 

   ನಮ್ಮ ಕುಟುಂಬದ ಜೊತೆಗೆ ನಿಂತು ಗ್ರೂಪ್ ಫೋಟೋ ತೆಗೆಸಿಕೊಳ್ಳಲು ಅಲ್ಲಿನ‌ ವಿನಮ್ರ ವಿತರಕ ನಾಗರಾಜ ಮತ್ತು ಸ್ವಾದಿಷ್ಟ ಬಾಣಸಿಗ ಅನಿಲ್ ಕಾದಿದ್ದರೆ, ಆ ಇಚ್ಛೆ ನಮಗೂ ಇತ್ತು. 

     ಅಲ್ಲಿಂದಿಳಿದು ಕೆಳಗೆ ಬರುವ ವೇಳೆಗೆ ಅರುಣ್ ಪ್ರಸಾದ್ ತಮ್ಮ ಕಚೇರಿಯಲ್ಲಿ ಕುಂತಿದ್ದರು,ಅವರಿಗೆ ಧನ್ಯವಾದ ಹೇಳಿ, ಅವರ ಮುಖತಃ ಭೇಟಿಯಿಂದ ದೊರಕಿದ ಸಂತಸ ತಿಳಿಸಿ ರಿಪ್ಪನ್ ಪೇಟೆ ಕಡೆಗೆ ನನ್ನ ಮಗ ಅಗ್ನಿಮಿತ್ರ ಕಾರು ಹೊರಳಿಸಿದಾಗ, ನಂಗೊಬ್ಬ ತಮ್ಮನಿದ್ರೆ ಹಿಂಗೆ ಅರುಣ ಪ್ರಸಾದರಂತೆಯೇ ಇರುತಿದ್ನಲ್ವಾ ಎಂಬ ಕಲ್ಪನೆ ಗರಿಗೆದರಿ ಬಿಡ್ತು.

   ಜೊತೆಗೆ ಹುಟ್ಟಿದವರಿಗಿಂತ ನೂರು ಪಟ್ಟು ಮಿಗಿಲಾದ ಆತ್ಮೀಯತೆ ಆದರ ಗೌರವವನ್ನು ತುಂಬಾ ಅಪರೂಪಕ್ಕೆ ಮನಕ್ಕೆ ತಟ್ಟುವಂತೆ ತಲುಪಿಸಿದ ಅರುಣ್ ಪ್ರಸಾದ್ ನನ್ನ ತಮ್ಮನಲ್ಲ ಎಂದೇಕೇ ಭಾವಿಸಬೇಕು ಎಂದು ಸೂಚಿಸಿದ್ದು ಅಂತರಾತ್ಮ..!

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...

ಶ್ರೀಧರ ಸ್ವಾಮಿ ವರದಳ್ಳಿ ಪವಾಡ ಪುರುಷರು.

   ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ವರದಳ್ಳಿಯ ತಪಸ್ವಿ ಶ್ರೀಧರ ಸ್ವಾಮಿಗಳು.   ವರದಳ್ಳಿ ಶ್ರೀಧರ ಸ್ವಾಮಿಗಳ ಬಗ್ಗೆ ಕೇಳಿದ್ದು, ಓದಿದ್ದು ಮತ್ತು ಅವರ ಒಡನಾಡಿಗಳನ್ನ ಭೇಟಿ ಮಾಡಿದ್ದು ಬಿಟ್ಟರೆ ಅವರನ್ನ ಪ್ರತ್ಯಕ್ಷವಾಗಿ ನೋಡಿಲ್ಲ.     ನಾವು ಚಿಕ್ಕವರಿದ್ದಾಗ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುವಾಗ ಆಗಿನ ಕಾಲದ ಖ್ಯಾತ ಚಲನಚಿತ್ರ ನಟ ಉದಯ ಕುಮಾರ್ ಅರಳಿ ಮರದ ಗ್ಯಾರೇಜ್ ಹತ್ತಿರ ಬಂದಿದ್ದಾರೆ ಅಂತ ಊರಿನ ಜನರೆಲ್ಲ ಗುಂಪು ಗುಂಪಾಗಿ ಓಡುತ್ತಿದ್ದರು, ನಾವು ಚಿಕ್ಕ ಮಕ್ಕಳೆಲ್ಲ ಅವರನ್ನ ಹಿಂಬಾಲಿಸಿದೆವು.       ಅಲ್ಲಿ ಒಂದು ಬಿಳಿ ಅಂಬಾಸಡರ್ ಕಾರು ನಿಂತಿದ್ದು ಅದರ ಅಡಿಯಲ್ಲಿ ಮಲಗಿ ಮೆಕ್ಯಾನಿಕ್ ದುರಸ್ತಿ ಮಾಡುತ್ತಿದ್ದರೆ ಎತ್ತರದ ಮಣ್ಣು ದಿಬ್ಬದ ಮೇಲೆ ನಮ್ಮ ನಟ ಉದಯ ಕುಮಾರ್ ಸಿಗರೇಟು ಸೇದಿ ಹೊಗೆ ಬಿಡುತ್ತಿದ್ದರು. ಯಾರೂ ಅವರ ಹತ್ತಿರ ಮಾತಾಡುವ ದೈಯ೯ ವಹಿಸಲಿಲ್ಲ ಆದರೆ ನೆರೆದ ಜನ ಮಾತಾಡಿಕೊಳ್ಳುತ್ತಿದ್ದ ಮಾತಿನ ಸಾರಾಂಶವೆಂದರೆ ವರದಳ್ಳಿಯಲ್ಲಿ ತಪಸ್ಸು ಮಾಡುತ್ತಿದ್ದ ಶ್ರೀಧರ ಸ್ವಾಮಿಗಳು ದೇಹತ್ಯಾಗ ಮಾಡಿದ್ದಾರೆ ಅದನ್ನ ಕೇಳಿ ಅವರ ಭಕ್ತ ಮತ್ತು ಶಿಷ್ಯರಾದ ಖ್ಯಾತ ಚಿತ್ರ ನಟ ಉದಯ ಕುಮಾರ್ ಬರುವಾಗ ಕಾರು ಹಾಳಾಗಿ ದುರಸ್ತಿಗಾಗಿ ನಿಂತಿದ್ದಾರೆ, ದುಃಖದಲ್ಲಿ ಇರೋದರಿಂದ ಆ ರೀತಿ ಸಿಗರೇಟು ಸೇದಿ ಬೂದಿ ಮಾಡುತ್ತಿದ್ದಾರೆ ಅವರ ಹತ್ತಿರ ಯಾರೂ ಮಾತಾಡ ಬೇಡಿ ಅಂತ ...