#ಇದು_ನಮ್ಮ_ಬೆಕ್ಕು_ಪಾಣಿ_ಬಿಲಾಲಿ_ಬಿಲ್ಲಿಯಾಗಿದ_ಕಥೆ.
ನಮ್ಮ ಬೆಕ್ಕು ನಮ್ಮೂರ ಭಟ್ಟರ ಬೋಂಡಾ ಬಾಂಡ್ಲಿಯಲ್ಲಿ ಬಿದ್ದು ಬಂದ ಕಥೆ.
ಅದನ್ನೇ ಬಿಲಾಲಿ ಬಿಲ್ಲಿ ಅಭ್ಯಂಜನ ಎಂಬ ಹೆಸರಿನ ಕಥೆಯಾಗಿ ಬರೆದೆ ಅದು ಕೇಳಿದವರಿಗೂ ಇಷ್ಟವಾಯಿತು.
ಈ ಕಥೆಗೆ ಮುನ್ನುಡಿ ಬರೆದ ಖ್ಯಾತ ಶಿಕ್ಷಣ ತಜ್ಞ - ಲೇಖಕ -ವಿಮರ್ಶಕ ಅರವಿಂದ ಚೊಕ್ಕಾಡಿ ಕೂಡ ಬಿಲಾಲಿ ಬಿಲಿಯನ್ನ ಉಲ್ಲೇಖಿಸಿದರು.
ನಾನು ನನ್ನ ಕಥಾಸಂಕಲನಕ್ಕೆ ಭಟ್ಟರ ಬೋಂಡಾ ಬಾಂಡ್ಲಿಯಲ್ಲಿ ಬಿಲಾಲಿ ಬಿಲ್ಲಿ ಅಭ್ಯಂಜನ ಎಂಬ ಹೆಸರು ಇಟ್ಟೆ, ಇದು 28 ಸಣ್ಣ ಕಥೆಗಳ ಕಥಾಸಂಕಲನ ಆಯಿತು.
#petcats #bilalibilliabyanjana #smallstory #kannadabooks #shivamogga #sagar #Anandapuram #aravindchokkadi
ಬಿಲಾಲಿ ಬಿಲ್ಲಿ ಇದು ನಮ್ಮ ಬೆಕ್ಕಿನ ಮೂಲ ಹೆಸರಲ್ಲ ಅದರ ನಿಜ ನಾಮ ಮಗ ನಾಮಕರಣ ಮಾಡಿದ ಹೆಸರು ಪಾಣಿ.
ಅದರ ಫೈಟಿಂಗ್ ಚಮತ್ಕಾರಗಳು, ಕಿಲಾಡಿತನಗಳನ್ನು ನೋಡಿ ಗೆಳೆಯರಾದ ಅಮೀರ್ ಸಾಹೇಬರು ಬಿಲಾಲಿ ಬಿಲ್ಲಿ ಎಂದು ಕರೆಯುತ್ತಿದ್ದರು.
ನಾನು ಬರೆದ ಕಥಾಸಂಕಲನದಲ್ಲಿ ಅದಕ್ಕೆ ಬಿಲಾಲಿ ಬಿಲ್ಲಿ ಎಂದೆ ಉಚ್ಚರಿಸಿದ್ದೆ.
ಆ ಕಥೆಯ ಕಾರಣದಿಂದಲೇ ಕಥಾ ಸಂಕಲನಕ್ಕೆ ಬಿಲಾಲಿ ಬಿಲ್ಲಿ ಅಭ್ಯಂಜನ ಎಂಬ ಹೆಸರು ಇಡುವಂತೆ ಆಯಿತು.
ಕಥಾ ಸಂಕಲನದ ಮುಖಪುಟದಲ್ಲೂ ಈ ಬಿಲಾಲಿ ಬಿಲ್ಲಿ ಚಿತ್ರ ಅಚ್ಚಾಗಿದೆ ಅದರ ಪೋಟೋ ತೆಗೆದದ್ದು ನನ್ನ ಮಗಳು.
ಒಮ್ಮೊಮ್ಮೆ ನನಗೆ ಅನಿಸುವುದು ಬಿಲಾಲಿ ಬಿಲ್ಲಿ ಸೆಲೆಬ್ರಿಟಿ ಆಗಿ ಹೋಯಿತಲ್ಲ ಏನಿರಬಹುದು ಎಂದು ಆಶ್ಚರ್ಯವಾಗುತ್ತದೆ
ಅಥವಾ ಹಿಂದಿನ ಜನ್ಮದಲ್ಲಿ ಬಿಲಾಲಿ ಬಿಲ್ಲಿ ಪ್ರಸಿದ್ಧ ವ್ಯಕ್ತಿಯೇ ಆಗಿರಬೇಕು.
ಈ ಬೆಕ್ಕು ಬಂದು ಸೇರಿದ್ದೇ ಒಂದು ಆಶ್ಚರ್ಯ.. ನಮ್ಮ ಮನೆಯಿರುವುದು ನಾಲ್ಕು ರಸ್ತೆ ಬಂದು ಸೇರುವ ಯಡೇಹಳ್ಳಿ ವೃತ್ತದಲ್ಲಿ.
ಸುತ್ತ ಮುತ್ತಲಿನ ಹಳ್ಳಿಯವರು ತಮ್ಮಸಾಕು ನಾಯಿ ಮತ್ತು ಬೆಕ್ಕು ಮರಿ ಹಾಕಿದಾಗ ಹೆಣ್ಣು ಮರಿ ಆಗಿದ್ದರೆ ಅವು ಕಣ್ಣು ಬಿಡುವ ಮೊದಲೇ ತಂದು ಬಿಟ್ಟು ಹೋಗುವ ಸರ್ಕಲ್.
ಇಂತಹದೇ ಒಂದು ಪ್ರಸಂಗದಲ್ಲಿ ಈ ಬೆಕ್ಕು ನಮ್ಮ ಯಡೇಹಳ್ಳಿಯ ಸರ್ಕಲ್ ನಲ್ಲಿ ಯಾರೋ ತಂದು ಬಿಟ್ಟು ಹೋಗಿದ್ದಾರೆ.
ನಮ್ಮದೇ ಕಾಂಪ್ಲೆಕ್ಸ್ ನಲ್ಲಿ ಮೀನಿನ ಊಟದ ಹೋಟೆಲ್ ಒಂದು ಶಂಕರ ಎಂಬುವವರು ನಡೆಸುತ್ತಿದ್ದರು, ಈ ಬೆಕ್ಕಿನ ಮರಿ ಹೇಗೋ ರಾತ್ರಿ ಅವರ ಹೋಟೆಲ್ ಒಳ ಸೇರಿದೆ.
ಹೋಟೆಲ್ ನವರಿಗೆ ಗೊತ್ತೇ ಇಲ್ಲದೆ ಅವರು ಲಾಕ್ ಮಾಡಿಕೊಂಡು ಹೋಗಿದ್ದಾರೆ ರಾತ್ರಿ ಎಲ್ಲಾ ಮರಿ ಬೆಕ್ಕು ಹೊರಬರಲು ದಾರಿ ಗೊತ್ತಾಗದೆ ಕೂಗುತ್ತಿತ್ತು.
ಇದು ನನ್ನ ಮಗ ಮತ್ತು ಮಗಳಿಗೆ ಗೊತ್ತಾಗಿ ಅವರಿಬ್ಬರು ಸಣ್ಣವರಿದ್ದರಿಂದ ಆ ಹೋಟೆಲ್ ಬಾಗಿಲು ಎಷ್ಟು ಹೊತ್ತಿಗೆ ತೆಗೆಯುತ್ತಾರೆ ಅಷ್ಟು ಬೇಗ ಅದನ್ನು ತಂದು ಹಾಲು ಕೊಡಬೇಕು ಎಂಬ ತವಕದಲಿದ್ದರು.
ಆದರೆ ಮರುದಿನ ನಿತ್ಯ ಬರುವ ವೇಳೆಗಿಂತ ಕೊಂಚ ತಡವಾಗಿ ಹೋಟೆಲ್ ಮಾಲೀಕ ಶಂಕರ ಬಂದು ಬಾಗಿಲು ತೆಗೆದಾಗ ಈ ಬೆಕ್ಕಿನ ಮರಿಗಾಗಿ ಕಾಯುತ್ತಿದ್ದ ನನ್ನ ಮಕ್ಕಳು ಈ ಅತಿ ಸಣ್ಣ ಬೆಕ್ಕಿನ ಮರಿ (ಬಹುಷ್ಯ ಮರಿ ಹಾಕಿದ ಹತ್ತು ದಿನಗಳಲ್ಲಿ ಕಣ್ಣು ಬಿಟ್ಟ ಇದನ್ನ ತಂದು ನಮ್ಮೂರ ಸರ್ಕಲ್ ದಾರಿ ಕಾಣಿಸಿದ ಮಾಲಿಕ ಮಹಾನುಭ ಅನ್ನಿಸುತ್ತೆ) ಮನೆಗೆ ತಂದರು.
ಅವತ್ತಿನಿಂದ ಈ ಬೆಕ್ಕು ಪಾಣಿ ಎಂಬ ನಾಮಕರಣದಿಂದ ನಮ್ಮ ಮನೆ ಸೇರಿತ್ತು, ಅದು ಚಿಕ್ಕಂದಿನಲ್ಲೇ ವಿಶೇಷ ಬೆಕ್ಕು ಅನ್ನಿಸಿತ್ತು ಅದರ ಚಟುವಟಿಕೆಗಳನ್ನು ನೋಡಿ.
ಆಗ ನನ್ನ ವಾಕಿಂಗ್ ನಮ್ಮ ಕಲ್ಯಾಣ ಮಂಟಪದ ಒಳಗಡೆ ಹಾಲಿನಲ್ಲಿ ಆಗುತ್ತಿತ್ತು,ಅಲ್ಲಿ ನಿಲ್ಲಿಸುತ್ತಿದ್ದ ಅಂಬಾಸೆಡರ್ ಕಾರು ಮತ್ತು ಮಾರುತಿ ಕಾರುಗಳ ಟಾಪ್ ಮೇಲೆ ಈ ಬೆಕ್ಕಿನ ಮರಿ ಇಟ್ಟು ನಾನು ಅದರ ಸುತ್ತ ವಾಕಿಂಗ್ ಮಾಡುತ್ತಿದ್ದೆ ನನ್ನ ವಾಕಿಂಗ್ ನೋಡುತ್ತಾ ಅದು ಯಾವಾಗಲೂ ಅಲ್ಲೇ ಕುಳಿತಿರುತ್ತಿತ್ತು.
ಹೀಗೆ ದೊಡ್ಡದಾಗುತ್ತಾ ಬಂತು... ಕಲ್ಯಾಣ್ ಮಂಟಪದಲ್ಲಿ ಸಿದ್ದ ಸಮಾಧಿ ಯೋಗ (ಎಸ್. ಎಸ್. ವೈ ) ತರಬೇತಿ ಕೆಲ ದಿನ ಬೆಳಿಗ್ಗೆ ಐದಕ್ಕೆ ಪ್ರಾರಂಭವಾಗುತ್ತಿತ್ತು, ನಾವೆಲ್ಲ ಮನೆಯವರು ಭಾಗವಹಿಸಿದ್ದೆವು ಈ ಬೆಕ್ಕಿನ ಮರಿ ಅಲ್ಲೇ ಒಂದು ಕುಳಿತು ಎಲ್ಲವನ್ನು ವೀಕ್ಷಿಸುತ್ತಿತ್ತು.
ಸ್ವಲ್ಪ ದೊಡ್ಡದಾದಂತೆ ಇದು ಕಾಗೆಗಳನ್ನ ಶಿಕಾರಿ ಮಾಡಲು ಪ್ರಯತ್ನಪಡುತ್ತಿತ್ತು ಇದು ಕಾಗೆಗಳ ಗುಂಪಿಗೆ ಸಿಟ್ಟು ತರಿಸಿತ್ತು.
ಕಾಗೆಗಳ ಹಿಂಡಿಗೆ ಈ ಬೆಕ್ಕು ಏಕಾಂಗಿಯಾಗಿ ಬಯಲಲ್ಲಿ ಇದ್ದಾಗ ಕಾಗೆಗಳು ಎಲ್ಲವೂ ಸೇರಿ ಅಟ್ಯಾಕ್ ಮಾಡಲು ಬರುತ್ತಿದ್ದವು ಆದರೆ ನಮ್ಮ ಬೆಕ್ಕು ಧೈರ್ಯದಿಂದ ಕಾಗೆಗಳ ಜೊತೆ ಹೋರಾಡುತ್ತಿತ್ತು.
ಒಮ್ಮೆ ಇದರ ಹೋರಾಟ ಕಷ್ಟಕರವಾಗಿತ್ತು ಅವತ್ತು ಕಾಗೆಗಳ ಸಂಖ್ಯೆ ಮತ್ತು ಶಕ್ತಿ ಜಾಸ್ತಿ ಆಗಿತ್ತು ಆಗ ಬೆಕ್ಕು ನಮ್ಮ ಕೆರೆ ಪಕ್ಕದ ಅಂಟುವಾಳ ಗಿಡದ ಮೇಲೆ ಓಡಿ ಹತ್ತಿದೆ ಆದರೆ ಕಾಗೆಗಳ ತಂಡ ಇದನ್ನು ಬಿಡದೆ ಹಿಂಬಾಲಿಸಿ ಕುಕ್ಕಲು ಪ್ರಯತ್ನಿಸುತ್ತಿತ್ತು.
ಆಗ ಚಲಾಕಿ ಬಿಲ್ಲಿ ಅಂಟುವಾಳ ಮರದ ತುದಿಯಿಂದ ನೇರ ಕೆರೆಗೆ ಹಾರಿತ್ತು... ಇದನ್ನು ಕಾಗೆಗಳು ನಿರೀಕ್ಷಿಸಿರಲಿಲ್ಲ ಹೀಗೆ ಬೆಕ್ಕು ಕಾಗೆ ಅಕ್ರಮಣದಿಂದ ತಪ್ಪಿಸಿ ಕೊಂಡು ಮನೆ ಸೇರಿತ್ತು.
ಈ ಬೆಕ್ಕಿಗೆ ಧೈರ್ಯ ಜಾಸ್ತಿ ಆದ್ದರಿಂದ ಇದಕ್ಕೆ ತಿರುಗಾಟದ ಶೋಕಿ ಇತ್ತು, ಊರೊಳಗೆ ತಿರುಗಾಟಕ್ಕೆ ಹೋದರೆ ಇದಕ್ಕೆ ಊರ ನಾಯಿಗಳು ಶತ್ರುಗಳು ಕಾರಣ ಅವುಗಳು ನಮ್ಮ ಮನೆಯ ಹತ್ತಿರ ಬಂದಾಗ ಇದು ವಿನಾಕಾರಣ ಜಗಳ ತೆಗೆದು ಹೊಡೆದಾಟ ಮಾಡುತ್ತಿತ್ತು.
ಈಗ ಊರ ಒಳಗಿನ ತಿರುಗಾಟಕ್ಕೆ ಹೋದಾಗ ಹಳೆಯ ದ್ವೇಷದಿಂದ ಗಡಿ ಸಮಸ್ಯೆ ಉದ್ಭವವಾಗಿ ಊರ ನಾಯಿಗಳು ತಮ್ಮ ಗಡಿ ರಕ್ಷಣೆ ಮಾಡಿಕೊಳ್ಳಲು ಅವುಗಳೆಲ್ಲ ಸೇರಿ ಇದರ ಮೇಲೆ ಅಟ್ಯಾಕ್ ಮಾಡುತ್ತಿದ್ದವು.
ಇಂತಹ ಸಂದರ್ಭದಲ್ಲಿ ಪಲಾಯಾನ ಮಾಡುತ್ತಿದ್ದ ಬಿಲ್ಲಿ ನಮ್ಮ ಮನೆಯ ತನಕ ಓಡಿ ಬರುತ್ತಿತ್ತು.
ನಮ್ಮ ಗೇಟು ದಾಟಿದ ತಕ್ಷಣ ತಿರುಗಿ ನಿಲ್ಲುತ್ತಿತ್ತು.. ಊರ ನಾಯಿಗಳು ತನ್ನ ಬೇಟೆ ತನ್ನ ಬಾಯಿಗೆ ಸಿಕ್ಕಿತು ಎನ್ನುವಾಗ ಬಿಲ್ಲಿ ತನ್ನ ಪಂಜಾದಿಂದ ನಾಯಿಯ ಮುಖಕ್ಕೆ ಬಾರಿಸುತ್ತಿತ್ತು ಇದನ್ನು ನಿರೀಕ್ಷೆ ಮಾಡದ ನಾಯಿಗಳು ಈ ಅನಿರೀಕ್ಷಿತ ಹೊಡೆತದಿಂದ ತತ್ತರಿಸಿ
ಅತ್ಯಂತ ನೋವಿನಿಂದ ಒಮ್ಮೆಗೆ ಹಿಂದೆ ಸರಿದ ನಾಯಿಗಳು ವಾಪಸ್ ಓಡಿ ಹೋಗುತ್ತಿದ್ದವು.
ಈ ಹಲ್ಲೆಯಿಂದ ಅವುಗಳು ಹೆಚ್ಚಿನ ದ್ವೇಷದಿಂದ ಇದರ ಮೇಲೆ ಮುಂದೆ ಸಿಕ್ಕಾಗ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದವು.
2015 ರಲ್ಲಿ ನಮ್ಮ ತಂದೆಯು ಕಟ್ಟಿಸಿದ್ದ ಹಳೆಯ ಮನೆ ತೆಗೆದು ಹೊಸ ಮನೆ ನಿರ್ಮಾಣ ಶುರು ಮಾಡಿದ್ದೆವು ಆಗ ನಮ್ಮ ವಾಸ್ತವ್ಯ ನಮ್ಮ ಕಾಟೇಜ್ ಗಳಲ್ಲಿ ಆಗ ಬಿಲಾಲಿ ಬಿಲ್ಲಿ ತುಂಬು ಗರ್ಭಿಣಿ.
ಅವತ್ತು ನಾನು ಅಲ್ಲೇ ಕುರ್ಚಿ ಮೇಲೆ ಕುಳಿತು ಪೇಪರ್ ಓದುತ್ತಿದ್ದೆ ಆಗ ಯಾವುದೋ ಒಂದು ಬೆಕ್ಕು ಅಲ್ಲಿ ಬರುತ್ತಿದ್ದನ್ನ ನೋಡಿದ ನಮ್ಮ ಬಿಲ್ಲಿ ಬೇರೆ ಬೆಕ್ಕು ಇಲ್ಲಿಗೆ ಬರುವುದು ಸಹಿಸದೆ ಅದನ್ನು ಓಡಿಸಿಕೊಂಡು ಹೋಯಿತು.
ನಂತರ ತುಂಬು ಬಸುರಿ ಆ ಬೆಕ್ಕಿನ ಮೇಲೆ ಹಲ್ಲೇ ಮಾಡಲು ಹೊರಟಿದ್ದಾಗ ಅದರ ಅತ್ಯಂತ ವೇಗದ ಓಟ-ದ್ವೇಷ- ಕೋಪ ಎಲ್ಲಾ ಸೇರಿ ಅದರ ಹೃದಯ ಸ್ತಂಭನವಾಯಿತು.
ನಂತರ ನಡೆದದ್ದು ಮಕ್ಕಳ ರೋದನೆ ಜೊತೆಗೆ ಮೌನವಾಗಿ ನಮ್ಮ ಕಣ್ಣೀರುಗಳು.
ಅದನ್ನು ಗೌರವಯುತವಾಗಿ ಸಮಾಧಿ ಮಾಡಬೇಕು ಎಂದು ತೀರ್ಮಾನಿಸಿ ಸಮಾಧಿ ಮಾಡಿದ್ದೇವೆ.
ಈ ಬೆಕ್ಕಿನದ್ದೇ ನಮ್ಮೂರ ಭಟ್ಟರ ಬೋಂಡಾ ಬಾಂಡ್ಲಿಯಲ್ಲಿ ಬಿದ್ದು ಬಂದ ಕಥೆ ಅದನ್ನೇ
ಬಿಲಾಲಿ ಬಿಲ್ಲಿ ಅಭ್ಯಂಜನ ಎಂಬ ಹೆಸರಿನ ಕಥೆಯಾಗಿ ಬರೆದೆ ಅದು ಕೇಳಿದವರಿಗೂ ಇಷ್ಟವಾಯಿತು.
ಈ ಕಥೆಗೆ ಮುನ್ನುಡಿ ಬರೆದ ಖ್ಯಾತ ಶಿಕ್ಷಣ ತಜ್ಞ - ಲೇಖಕ -ವಿಮರ್ಶಕ ಅರವಿಂದ ಚೊಕ್ಕಾಡಿ ಕೂಡ ಬಿಲಾಲಿ ಬಿಲಿಯನ್ನ ಉಲ್ಲೇಖಿಸಿದರು.
ನಾನು ನನ್ನ ಕಥಾಸಂಕಲನಕ್ಕೆ ಭಟ್ಟರ ಬೋಂಡಾ ಬಾಂಡ್ಲಿಯಲ್ಲಿ ಬಿಲಾಲಿ ಬಿಲ್ಲಿ ಅಭ್ಯಂಜನ ಎಂಬ ಹೆಸರು ಇಟ್ಟೆ, ಇದು 28 ಸಣ್ಣ ಕಥೆಗಳ ಕಥಾಸಂಕಲನ ಆಯಿತು.
ಇದು ನಮ್ಮ ಬೆಕ್ಕು ಪಾಣಿ ಬಿಲಾಲಿ ಬಿಲ್ಲಿಯಾಗಿದ ಕಥೆ.
Comments
Post a Comment