#ವೀಳೆಯದ ಎಲೆ ಕತ್ತಿ,Betel leaves knife#
ಹಲವಾರು ರೀತಿಯ ಕತ್ತಿ ದೈನಂದಿನ ಜೀವನದಲ್ಲಿ ನೋಡಿದ್ದೇನೆ, ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿ ಆದರೆ ಈ ಕತ್ತಿ ನೋಡಿದ್ದು ಮಾತ್ರ ಇತ್ತೀಚಿಗೆ
ಹೊಸನಗರದ ಬಿಲ್ ಸಾಗರದ ವಿದ್ಯುತ್ ಚಾಲಿತ ಬೋಟು ಚಲಾಯಿಸುವ ಶಂಕರ ಮೊನ್ನೆ ಬಂದಿದ್ದರು ಅವರು ನನಗೆ ಪರಿಚಯ ಆಗಿದ್ದು ಶಿವಮೊಗ್ಗದ ಸಾಹಸಿ ಆ.ನಾ.ವಿಜೇ೦ದ್ರರಿಂದ ನಮ್ಮ ಊರ ಕೆರೆ ಸ್ವಚ್ಚತೆಗೆ ಇವರು ಮತ್ತು ಇವರ ಡಿಸೇಲ್ ಬೋಟ್ ತಂದಿದ್ದ ಪರಿ ಚಯ.
ಮೊನ್ನೆ ನನ್ನ ಆಪೀಸಿಗೆ ಬಂದು ನನ್ನ ಪರಿಚಯ ಇದೆಯಾ ಅಂದರು, ಅರೆ ಬಿಲ್ ಸಾಗರದ ಶಂಕರ್ ರವರೆ ನಿಮ್ಮನ್ನ ಮರೆಯಲು ಹೇಗೆ ಸಾಧ್ಯ ಅಂತ ಒಳ ಕರೆದು ಕೂರಿಸಿ ಚಹಾ ಆತಿಥ್ಯ ನೀಡಿ ದೂರ ಹೋಗಿದ್ದಿರಿ ಅಂದೆ, ಹೌದು ಬೆಳಿಗ್ಗೆನೆ ಹೊನ್ನಾಳಿಗೆ ಹೋಗಿದ್ದೆ ವೀಳೆಯದೆಲೆ ಕತ್ತಿ ತರಲು ಅಂದರು, ಹಾಗೇ ಅದು ಇದು ಬೇರೆ ವಿಚಾರ ಮಾತಾಡಿ ಹೊರಟರು ಅವಾಗ ಕೇಳಿದೆ ನಿಮ್ಮ ಊರಲ್ಲಿ ಕತ್ತಿ ಮಾಡೋರು ಇಲ್ಲವಾ? ಅಷ್ಟು ದೂರ ಹೋಗಿದ್ದಿರಲ್ಲ ಅಂದಾಗ ಈ ಕತ್ತಿ ರಹಸ್ಯ ಹೊರಬಂತು.
ಇದು ಇಲ್ಲೆಲ್ಲೂ ಸಿಗುವುದಿಲ್ಲ, ಇದಿಲ್ಲದಿದ್ದರೆ ಎಲೆ ಕಟಾವು ಸಾಧ್ಯವಿಲ್ಲ ಅಂದರು. ಅದು ಯಾವ ರೀತಿ ಕತ್ತಿರಿ ಅಂದೆ, ತಡೆಯಿರಿ ತಂದು ತೋರಿಸುತ್ತೇನೆ ಅಂತ ಅವರ ಬೈಕಿನ ಹತ್ತಿರ ಹೋಗಿ ತಂದರು, ನಾನು ನಿತ್ಯ ಬಳಕೆಯ ಬೇರೆ ವಿನ್ಯಾಸದ ಕತ್ತಿ ಅಂತ ಮಾಡಿದ್ದೆ ಆದರೆ ಈ ಕತ್ತಿ ನೋಡಿ ಆಶ್ಚಯ೯ ಆಯಿತು.
ಇದು ಕೈಯ ಬೆರಳಿಗೆ ಅಳವಡಿಸಿಕೊಂಡು ಅಡಿಕೆ ಮರ ಏರಿ ಎಲೆ ಬಳ್ಳಿಯಿ೦ದ ಎಲೆ ತೊಟ್ಟು ಚಿವುಟಿ ಎಲೆ ತೆಗೆಯುವ ಕತ್ತಿ, ನಿತ್ಯ ಸಾವಿರಾರು ಎಲೆ ತೆಗೆದು ಮಾರಾಟ ಮಾಡೋರಿಗೆ ಈ ಎಲೆ ಕತ್ತಿ ಬೇಕೇ ಬೇಕು ಅಂತ ಬಿಲ್ ಸಾಗರದ ಶಂಕರ ಹೇಳಿದರು.
ಜೀವ ಮಾನಪೂತಿ೯ ಕಲಿಯೋದೆ ಇರುತ್ತೆ ಅನ್ನೋದಕ್ಕೆ ಇದು ಒಂದು ಅನುಭವ ಎಲೆ ಬೆಳೆಯೋ ಪಶ್ಚಿಮ ಘಟ್ಟದ ನನಗೆ ಈವರೆಗೆ ಇದರ ಮಾಹಿತಿ ಇರಲಿಲ್ಲ.
Comments
Post a Comment