ನಮ್ಮಲ್ಲಿ ಎರೆಡು ರೆಸ್ಟೋರಂಟ್, ಒಂದು ಕಲ್ಯಾಣ ಮಂಟಪ ಮತ್ತು ಎರೆಡು ಮನೆಗಳ ತ್ಯಾಜ್ಯ ವಿಲೆವಾರಿ ನಿತ್ಯ ಆಗಬೇಕು.
ಪ್ಲಾಸ್ಟಿಕ್, ಗಾಜು, ಹಸಿ ಕಸ ಹೀಗೆ ಪ್ರತ್ಯೇಕ ಡಬ್ಬಿಗಳಲ್ಲಿ ಹಾಕಿ ನಿತ್ಯ ಅವುಗಳನ್ನ ವಿಲೇವಾರಿ ಮಾಡುತ್ತೇವೆ.
ಪ್ಲಾಸ್ಟಿಕ್ ಖಾಲಿ ಬಾಟಲ್, ಹಾಲು ಎಣ್ಣೆ ಖಾಲಿ ಕವರ್, ಪಿನಾಯಿಲ್, ಡೆಟಾಲ್ ಖಾಲಿ ಕ್ಯಾನ್ಗಳನ್ನು ದೊಡ್ಡ ಚೀಲದಲ್ಲಿ ಹಾಕಿ ವಾರಕೊಮ್ಮೆ ರಿಸೈಕ್ಲಿOಗ್ ಘಟಕಕ್ಕೆ ಕಳಿಸುತ್ತೇವೆ.
ಸಣ್ಣ ಪೇಪರ್ಗಳು, ಬಳಸಿದ ನ್ಯಾಪ್ಕಿನ್ಗಳನ್ನ ನಮ್ಮದೆ ಸಣ್ಣ ಸುಡುವ ಘಟಕದಲ್ಲಿ ಸುಡಲಾಗುತ್ತದೆ.
ಮಾಂಸಹಾರಿ ಹೋಟೆಲ್ ತ್ಯಾಜ್ಯ ಮತ್ತು ಸಸ್ಯಹಾರಿ ಹೋಟೆಲ್ ತ್ಯಾಜ್ಯ ನಿತ್ಯ ರಾತ್ರಿ ಹಂದಿ ಸಾಕಣೆ ಕೇಂದ್ರದವರಿಗೆ ನೀಡುತ್ತೇನೆ.
ಕಲ್ಯಾಣ ಮಂಟಪದ ಊಟದ ಎಲೆ, ತರಕಾರಿ ಸಿಪ್ಪೆ, ಉಳಿದ ಆಹಾರಗಳನ್ನ 10 ಅಡಿ ಅಗಲ ಮತ್ತು 3 ಅಡಿ ಎತ್ತರದ ಟ್ಯಾಂಕ್‌ಗೆ ಹಾಕಿ ಕೆಲ ದಿನ ಕೊಳೆಯಲು ಬಿಟ್ಟು ನಂತರ ನೀರು ತುಂಬಿಸಿ ಒಂದೆರೆಡು ದಿನದ ನಂತರ ಕೆಳಗಿನ ಟ್ಯಾಂಕ್‌ಗೆ ಬಿಟ್ಟು ಶೇಖರಿಸಿ ನಂತರ ಈ ಸಾವಯವ ಗೊಬ್ಬರದ ನೀರನ್ನ ನಮ್ಮ ರಬ್ಬರ್ ತೋಟಕ್ಕೆ ಹಾಕುತ್ತೇವೆ.
2006 ರಿಂದ ಈ ವರೆಗೆ ಒಂದು ಸಣ್ಣ ಕಸ ಕೂಡ ನಮ್ಮ ಸಂಸ್ಥೆ ಮತ್ತು ಮನೆಯಿಂದ ಎಲ್ಲೋ ಹೊರ ಚೆಲ್ಲಿದ ಉದಾಹರಣೆ ಇಲ್ಲ ಈ ಬಗ್ಗೆ ನನಗೆ ಹೆಮ್ಮೆ ಇದೆ.
ಮಳೆಗಾಲದಲ್ಲಿ ಎಲ್ಲಾ ನೀರುಗಳನ್ನ ಕಾಲುವೆ ಮುಖಾಂತರ ನಮ್ಮ ಬೋರ್ ವೆಲ್ ಸಮೀಪ 12 ಅಡಿ ಅಗಲ 15 ಅಡಿ ಆಳದ ಇಂಗು ಗುಂಡಿಗೆ ಹಾಯಿಸಿ ಸಂಪೂಣ೯ ನೀರು ಇಂಗುಸು ತೇವೆ.
ಇಂಗು ಗುಂಡಿ ಕೆಳಭಾಗ 4 ಅಡಿ ಎತ್ತರ ಶಿಲೆ ಕಲ್ಲಿನ ಸೋಲಿಂಗ್ ಅದರ ಮೇಲೆ 40mm ಜಲ್ಲಿ, ಅದರ ಮೇಲೆ 20 mm ಜಲ್ಲಿ ಅದರ ಮೇಲೆ ಮರಳು ಹಾಕಿರುವುದರಿಂದ ಮಳೆ ನೀರು ದೊಡ್ಡ ಪ್ರಮಾಣದಲ್ಲಿದ್ದರೂ ಸರಾಗವಾಗಿ ಇಂಗುತ್ತದೆ.
ನಮ್ಮ ಎರೆಡು ಕಡೆ ಇರುವ ಜಮೀನಿನಲ್ಲಿ 280ಕ್ಕೂ ಹೆಚ್ಚು 6 ಅಡಿ ಉದ್ದ 2 ಅಡಿ ಅಗಲ 2 ಅಡಿ ಆಳದ ಇಂಗು ಗುಂಡಿ ನಿರ್ಮಿಸಿರುವುದರಿಂದ ಮಳೆಗಾಲದಲ್ಲಿನ ಒಂದು ಹನಿ ನೀರು ನನ್ನ ಜಮೀನಿನ ಹೊರ ಹೋಗುವುದಿಲ್ಲ.
ಸುರೇಖಾ ಬೀಮಗುಳಿ ಎಂಬುವವರ ಸ್ವತಃ ಪ್ರಯೋಗ ತುಂಬಾ ಪ್ರೇರಣಿಯ ಇದನ್ನ ಕೂಡ ಓದಿ.
"ಪ್ರಕೃತಿಗಾಗಿ ನಮ್ಮ ಕೊಡುಗೆ"
--------------------------------------
ಪಕ್ಕದ ಸೈಟ್ ನಲ್ಲಿ ಮನೆ ಕಟ್ಟಲು ಆರಂಭಿಸಿದಾಗ ನಮ್ಮ ಬಿಟ್ಟಿ ಗೊಬ್ಬರದ ಗುಂಡಿ ಮತ್ತು ಬಿಟ್ಟಿ ಜಾಗದಲ್ಲಿ ಮಾಡಿದ ಕೈದೋಟ ಅನಿವಾರ್ಯ ಅಂತ್ಯ ಕಂಡವು. ಪಿಲ್ಲರ್ ಗಾಗಿ ತೋಡಿದ ಹೊಂಡದಿಂದ ಹೊರಬಿದ್ದ ಕೆಂಪು ಮಣ್ಣು ನಮ್ಮ ಟೆರೆಸ್ ಗಾರ್ಡೆನ್ ಆಸೆಯನ್ನು ಪ್ರಚೋದಿಸಿತು. ಕೆಂಪು ಮಣ್ಣು ಟೆರೆಸ್ ಏರಿತು. ಲಾಲ್ಭಾಗ್ ನಿಂದ ತಂದ ಕಸಿಕಟ್ಟಿದ ಹಣ್ಣಿನ ಗಿಡಗಳು ನೀಲಿ ಡ್ರಮ್ ಗಳಲ್ಲಿ ಮತ್ತು ಹೂಗಿಡಗಳು ಗ್ರೋಬ್ಯಾಗ್ ಗಳಲ್ಲಿ ಸ್ಥಾಪನೆಗೊಂಡವು. ಗಿಡನೆಟ್ಟ ಮೇಲೆ ಗೊಬ್ಬರದ ಅವಶ್ಯಕತೆಯೂ ಬಿತ್ತು. ಇತ್ತ ಪಕ್ಕದ ಸೈಟ್ ನಲ್ಲಿದ್ದ ನಮ್ಮ ಗೊಬ್ಬರಗುಂಡಿ ಅಂತ್ಯಕಂಡಿದ್ದರಿಂದ ’ಮನೆಯ ಹಸಿ ಕಸವನ್ನು ಏನು ಮಾಡುವುದು ?’ ಎಂಬ ಸಮಸ್ಯೆ ತಲೆಗೇರಿತು. ಬಿಬಿಎಂಪಿ ಒದಗಿಸಿದ ಹಸಿಕಸದ ಆಟೋ ಕಾಯುವ ಅನಿವಾರ್ಯತೆ ಬೇಸರ ಹುಟ್ಟಿಸಿತು. ಸಾಕಷ್ಟು ಅಂತರ್ಜಾಲ ಜಾಲಾಡಿದ ನಂತರ ಸೂಕ್ತವೆನ್ನಿಸಿದ್ದು 2230/- ಬೆಲೆಯ ’ಸ್ಮಾರ್ಟ್ ಬಿನ್’. ಖರೀದಿಸಿದ ಎರಡುದಿನದೊಳಗೆ ಸ್ಮಾರ್ಟ್ ಬಿನ್ ಸೆಟ್ ನಮ್ಮನೆಗೆ ಬಂದಿಳಿಯಿತು.
ಹಸಿಕಸವನ್ನು ಗೊಬ್ಬರವನ್ನಾಗಿಸುವ ನಿಟ್ಟಿನಲ್ಲಿ ’ಸ್ಮಾರ್ಟ್ ಬಿನ್’ ಕೆಲಸ ಅತ್ಯಂತ ಸಮರ್ಪಕ. ಉತ್ತಮ ದರ್ಜೆಯ ದಪ್ಪ ಪ್ಲಾಸ್ಟಿಕ್ ಬಕೆಟ್ ಗಳ ಬುಡದಲ್ಲಿ ಹಸಿಕಸದ ರಸ ಇಳಿಸಿಕೊಳ್ಳುವುದಕ್ಕೊಂದು ನಲ್ಲಿ... ಬಕೆಟ್ ಒಳಗೆ ಹಸಿಕಸದ ರಸ ಇಳಿಯಲು ಒಂದು ಫಿಲ್ಟರ್ ತಟ್ಟೆ. ಫಿಲ್ಟರ್ ತಟ್ಟೆಯ ಕೆಳಗೆ ಒಂದು ರಿಂಗ್. ಆ ರಿಂಗ್ ಬುಡದಲ್ಲಿ ನಾಲ್ಕೈದು ಚಮಚ ಬೆಲ್ಲವನ್ನು ಹಾಕಬೇಕೆಂದು ಸ್ಮಾರ್ಟ್ ಬಿನ್ ಮ್ಯಾನ್ಯುಯಲ್ ನಲ್ಲಿದೆ. ಫಿಲ್ಟರ್ ತಟ್ಟೆಯ ಮೇಲೆ ದಿನ ನಿತ್ಯವೂ ಹಸಿಕಸವನ್ನು ಹಾಕಿ, ಒತ್ತುವ ತಟ್ಟೆಯನ್ನು ಅದುಮಿ... ಬಕೆಟ್ ಮುಚ್ಚಲವನ್ನು ಭದ್ರಗೊಳಿಸುವುದಷ್ಟೇ ನಮ್ಮ ದಿನದ ಕೆಲಸ. ಸ್ಮಾರ್ಟ್ ಬಿನ್ ಜೊತೆಗೇ ಕೊಡಲಾಗುವ ಮ್ಯಾಜಿಕ್ ಪುಡಿಯನ್ನು ಮ್ಯಾನ್ಯುಯಲ್ ನಲ್ಲಿ ಹೇಳಿದಂತೆ ಪ್ರತಿ ಸಾರಿ ಹಸಿಕಸ ಹಾಕಿದ ನಂತರ ಒಂದು ಚಮಚದಷ್ಟನ್ನು ಮೊದಮೊದಲು ಹಾಕುತ್ತಿದ್ದೆವು. ಆ ಮ್ಯಾಜಿಕ್ ಪುಡಿ ಹಸಿಕಸವು ಬೇಗ ಕರಗಲು ಸಹಾಯ ಮಾಡುತ್ತದಂತೆ. ಅದು ಖಾಲಿಯಾದ ನಂತರ ಒಮ್ಮೆ ಖರೀದಿಸಿದೆವು. ಮತ್ತೆ ಆ ಪುಡಿಯನ್ನು ತರಿಸುವುದನ್ನು ಬಿಟ್ಟುಬಿಟ್ಟೆವು. ಈಗ ಬೆಲ್ಲ ಹಾಕುವುದೂ ಇಲ್ಲ- ಮ್ಯಾಜಿಕ್ ಪುಡಿ ಉಪಯೋಗಿಸುವುದೂ ಇಲ್ಲ. ಅದಿಲ್ಲದಿದ್ದರೂ ಹಸಿಕಸವನ್ನು ಗೊಬ್ಬರವಾಗಿಸಲು ಸಾಧ್ಯ ಎಂಬ ಸಂಗತಿಯನ್ನು ಅನುಭವದಿಂದ ಕಂಡುಕೊಂಡಿದ್ದೇವೆ.
ನಮ್ಮದು ಅತಿ ಕಡಿಮೆ ಕೆಲಸ/ಶ್ರಮ ಬಯಸುವ - ಮತ್ತೆ ಮತ್ತೆ ಹಣದ ಖರ್ಚು ಬೇಡದ ... ಹಸಿಕಸವನ್ನು ಗೊಬ್ಬರ ಮಾಡುವ ಸ್ವಾಭಾವಿಕ- ಸರಳ ವಿಧಾನ. ಮನೆಯೆದುರು ಹಲಸಿನ ಮತ್ತು ಹೊಂಗೆ ಮರಗಳು ಮೈದುಂಬಿ ನಿಂತಿವೆ. ವರ್ಷದಲ್ಲಿ ಸಾಕೋ ಸಾಕು ಎನ್ನುವಷ್ಟು ಎಲೆ ಉದುರಿಸುತ್ತವೆ. ಅದನ್ನೂ ಹಾಳುಮಾಡದೆ ಗೊಬ್ಬರವಾಗಿಸಿಕೊಳ್ಳುವ ಹೊಣೆಯೂ ನಮ್ಮ ಮೇಲಿದೆ. ಆದ್ದರಿಂದ ಆ ಮರದಿಂದ ಉದುರಿದ ಒಣ ಎಲೆಗಳನ್ನು ಚೀಲಗಳಲ್ಲಿ ತುಂಬಿಸಿ ಇಟ್ಟುಕೊಳ್ಳುತ್ತೇವೆ. ಅದನ್ನೂ ಹಸಿಕಸದೊಂದಿಗೆ ಗೊಬ್ಬರವಾಗಿಸುತ್ತೇವೆ.
ಸ್ಮಾರ್ಟ್ ಬಿನ್ ಒಂದು ಬಕೆಟ್ ತುಂಬಲು ನಮ್ಮ ನಾಲ್ಕು ಜನರ ಕುಟುಂಬಕ್ಕೆ ಒಂದೂವರೆ ತಿಂಗಳು ಹಿಡಿಯುತ್ತದೆ. ಒಂದು ಬಕೆಟ್ ತುಂಬುತ್ತಿದ್ದಂತೆ ಅದಕ್ಕೆ ಬಿಗಿಯಾಗಿ ಮುಚ್ಚಲ ಹಾಕಿ ಬದಿಗಿಟ್ಟುಬಿಡುತ್ತೇವೆ. ಎರಡನೆಯ ಬಕೆಟ್ ಗೆ ಹಸಿಕಸ ಹಾಕಲಾರಂಭಿಸುತ್ತೇವೆ. ಮತ್ತೆ ಒಂದೂವರೆ ತಿಂಗಳಲ್ಲಿ ಎರಡನೆಯ ಬಕೆಟ್ ತುಂಬುತ್ತದೆ. ಆಗ ಮೊದಲ ಬಕೆಟ್ ತೆರೆದು ಮಾಗಿದ ಹಸಿಕಸವನ್ನು ಪದರ ಹಾಕುವ ಕೆಲಸ.
ಇದಕ್ಕಾಗಿ 200 ರೂಪಾಯಿ ಬೆಲೆಯ ಎರಡು ಬೆತ್ತದ ಬುಟ್ಟಿಯನ್ನು ಕೊಂಡಿದ್ದೇವೆ. ಬೆತ್ತದ ಬುಟ್ಟಿಯಲ್ಲಿ ದಪ್ಪನಾಗಿ ದಿನಪತ್ರಿಕೆ ಹಾಸಿ .. ಅದರ ಮೇಲೆ ಒಣ ಎಲೆ ಒಂದು ಪದರ.... ಮಣ್ಣು ಒಂದು ಪದರ ... ಮಾಗಿದ ಹಸಿಕಸ ಇವುಗಳನ್ನು ತೆಳುವಾಗಿ ಪದರ ಪದರವಾಗಿ ಹರಡುತ್ತೇವೆ. ಒಂದು ಬಕೆಟ್ ನಲ್ಲಿರುವ ಮಾಗಿದ ಹಸಿಕಸ ಒಂದು ಬೆತ್ತದ ಬುಟ್ಟಿಯಲ್ಲಿ ಪದರ ಹಾಕಲು ಸರಿ ಹೋಗುತ್ತದೆ. ಅದರ ಮೇಲಿನಿಂದ ದಪ್ಪವಾಗಿ ದಿನಪತ್ರಿಕೆ ಪದರವನ್ನಿಟ್ಟು... ಎಲ್ಲಾ ದಿಕ್ಕಿನಿಂದ ಮುಚ್ಚಿ... ಇಡೀ ಬುಟ್ಟಿಯನ್ನು ಬಟ್ಟೆಯೊಂದರಲ್ಲಿ ಕಟ್ಟಿ ನೀರು ಬೀಳದ ಜಾಗದಲ್ಲಿ ಇಟ್ಟುಬಿಡುತ್ತೇವೆ. ಬೆತ್ತದ ಬುಟ್ಟಿ ಉಪಯೋಗಿಸುವುದು ಒಳಗಿರುವ ಮಣ್ಣಿನ ಉಸಿರಾಟಕ್ಕೆ, ದಿನಪತ್ರಿಕೆ ಉಪಯೋಗ ತೇವಾಂಶ ಹೀರಿಕೊಳ್ಳುವಿಕೆಗೆ ಮತ್ತು ಬಟ್ಟೆಯಲ್ಲಿ ಕಟ್ಟುವುದು ಸುತ್ತಮುತ್ತಲಿನಿಂದ ಕೀಟಗಳು ಬಂದು ಇದರಲ್ಲಿ ಮೊಟ್ಟೆ ಇಡದಿರಲಿ ಎಂಬ ಉದ್ದೇಶಕ್ಕೆ. ಇನ್ನೊಂದೂವರೆ ತಿಂಗಳಲ್ಲಿ ಇನ್ನೊಂದು ಇದೇ ರೀತಿಯ ಬೆತ್ತದ ಬುಟ್ಟಿ ಸಿದ್ಧವಾಗುತ್ತದೆ ತಾನೆ ? ಅವೆರಡನ್ನೂ ಒಂದರ ಮೇಲೆ ಒಂದನ್ನಿಟ್ಟು ಅದಕ್ಕೆ ಮಳೆನೀರು ಅಥವಾ ಬೇರೆ ಯಾವ ನೀರೂ ಬೀಳದಂತೆ ಎಚ್ಚರವಹಿಸುತ್ತೇವೆ. ಈ ಎಲ್ಲಾ ಮಾಹಿತಿಗಳೂ ಅಂತರ್ಜಾಲದಲ್ಲಿ ವಿಡಿಯೋ ರೂಪದಲ್ಲಿ ಲಭ್ಯವಿದೆ.
ಸ್ಮಾರ್ಟ್ ಬಿನ್ ತಳದಲ್ಲಿ ಶೇಖರವಾದ ಹಸಿಕಸದ ರಸ(ಡಿಕಾಕ್ಷನ್)ವನ್ನು ಒಂದು ಬಕೆಟ್ ನೀರಿಗೆ ಸೇರಿಸಿ ಪ್ರತಿ ಗಿಡಕ್ಕೆ ಅರ್ಧ ಲೋಟದಂತೆ ಉಣಿಸುತ್ತೇವೆ. ಆ ಖಾಲಿಯಾದ ಸ್ಮಾರ್ಟ್ ಬಿನ್ ನ್ನು ಒಮ್ಮೆ ತೊಳೆದು- ಒಣಗಿಸಿ ಮತ್ತೆ ಹಸಿಕಸ ತುಂಬಲಾರಂಭಿಸುತ್ತೇವೆ.
ಮೂರು ತಿಂಗಳು ಹೀಗೆ ಕಟ್ಟಿಟ್ಟ ಬೆತ್ತದ ಬುಟ್ಟಿಯನ್ನು ತೆರೆದು ನೋಡಿದರೆ ಒಣ ಎಲೆಗಳು ಕರಗಿರುತ್ತವೆ. ಹಸಿಕಸವೂ ಕರಗಿ ಮಣ್ಣಿನಲ್ಲಿ ಒಂದಾಗಿರುತ್ತದೆ. ಮತ್ತು ತಮ್ಮಲ್ಲಿರುವ ಶೀತಾಂಶವನ್ನು ಪೇಪರ್ ಗೆ ವರ್ಗಾಯಿಸಿ ಮಣ್ಣು ಪುಡಿಪುಡಿಯಾಗಿರುತ್ತದೆ. ಈ ಗೊಬ್ಬರವನ್ನು ನೇರವಾಗಿ ಗಿಡದ ಬುಡಕ್ಕೆ ಉಪಯೋಗಿಸಬಹುದು.
ಆ ಗೊಬ್ಬರವನ್ನೇ ಉಪಯೋಗಿಸಿ ಗಿಡ ನೆಡಬಹುದು. ಪ್ರತಿಸಾರಿಯೂ ಪದರ ಹಾಕುವುದಕ್ಕೆ ಹೊಸ ಮಣ್ಣು ಬೇಕೆಂದಿಲ್ಲ. ಆಯುಷ್ಯ ಮುಗಿದ ಗಿಡದ ಬುಡದಲ್ಲಿರುವ ಮಣ್ಣನ್ನೇ ಪದರ ಹಾಕಲು ಉಪಯೋಗಿಸಬಹುದು.
ಈ ಗೊಬ್ಬರದ ಕೆಲಸ ಸ್ಮಾರ್ಟ್ ಬಿನ್ ತುಂಬಿದ ದಿನ (ಅಂದರೆ ಒಂದೂವರೆ ತಿಂಗಳಿಗೆ ಒಮ್ಮೆ) ನಮ್ಮ ಒಂದು ತಾಸಿನ ಸಮಯವನ್ನು ಬೇಡುತ್ತದೆ ಅಷ್ಟೇ. ಬೆತ್ತದ ಬುಟ್ಟಿಯಲ್ಲಿ ಸಿದ್ಧವಾದ ಪುಡಿಗೊಬ್ಬರವನ್ನು ಗಿಡಗಳಿಗೆ ಉಣಿಸುವುದು ಇಪ್ಪತ್ತು ನಿಮಿಷದ ಕೆಲಸವಾದರೆ- ಇನ್ನರ್ಧ ಗಂಟೆಯಲ್ಲಿ ಆ ಖಾಲಿಯಾದ ಬೆತ್ತದ ಬುಟ್ಟಿಯಲ್ಲಿ ಒಣಎಲೆ-ಮಣ್ಣು-ಮಾಗಿದ ಹಸಿಗೊಬ್ಬರವನ್ನು ಪದರ ಹಾಕುವ ಕೆಲಸ ಮತ್ತು ಹತ್ತು ನಿಮಿಷದಲ್ಲಿ ಸ್ಮಾರ್ಟ್ ಬಿನ್ ನ ಬುಡದಲ್ಲಿ ಸಿಗುವ ಡಿಕಾಕ್ಷನ್ ನ್ನನ್ನು ನೀರು ಸೇರಿಸಿ ಗಿಡಗಳಿಗೆ ಉಣ್ಣಿಸುವ ಕೆಲಸ.
ಆದರೆ ಸಿಗುವ ಸಮಾಧಾನ ? ನಮ್ಮ ಮನೆಯ ಹಸಿಕಸ ಬೆಂಗಳೂರಿನ ಸುತ್ತಮುತ್ತಲಿನ ಯಾವುದೋ ಹಳ್ಳಿಯಲ್ಲಿ ಕೊಳೆತು ... ವಾಸನೆ ಸೂಸುತ್ತಾ... ಆ ಹಳ್ಳಿಗರ ಶಾಪಕ್ಕೆ ನಮ್ಮನ್ನು ಗುರಿಯಾಗಿಸದೆ... ನಮ್ಮನೆಯಲ್ಲೇ ಕಳಿತು-ಕೊಳೆತು ಗೊಬ್ಬರವಾಗಿ ನಮ್ಮ ಮನೆಯ ಪುಟಾಣಿ ಗಿಡವೊಂದಕ್ಕೆ ಆಹಾರವಾಗಿ ಹೂವಾಗಿ-ಕಾಯಾಗಿ- ಹಣ್ಣಾಗಿ ನಮ್ಮ ಕಣ್ಣಿಗೆ ತಂಪಾಗಿ ... ನಮ್ಮ ಹೊಟ್ಟೆಯನ್ನೇ ತಣಿಸಿತಲ್ಲ ... ಇಷ್ಟಕ್ಕಾಗಿ ನಾವು ತೆತ್ತ ಬೆಲೆ ಕೇವಲ ಸ್ಮಾರ್ಟ್ ಬಿನ್ ಗೆ 2230/- ರೂಪಾಯಿ + ಬೆತ್ತದ ಬುಟ್ಟಿಗಳಿಗಾಗಿ 400/- ರೂಪಾಯಿ + ಒಂದೂವರೆ ತಿಂಗಳಿಗೊಮ್ಮೆ ಒಂದು ತಾಸಿನ ಶ್ರಮ ... ಇಷ್ಟೇ....
ಪ್ರಕೃತಿಗೆ ಹತ್ತಿರವಾಗಿ ಬುದುಕುವುದರಲ್ಲಿ ಒಂದು ರೀತಿಯ ಸಮಾಧಾನವಿದೆ. ನಗರ ಪ್ರದೇಶದಲ್ಲಿ ವಾಸಿಸುವವರು ತಮ್ಮ ಮನೆಯ ಹಸಿಕಸವನ್ನು ಗೊಬ್ಬರವನ್ನಾಗಿಸುವ ಮನಮಾಡಿದರೆ ಬಿಬಿಎಂಪಿಯವರ ಹೊರೆ ಅಷ್ಟರಮಟ್ಟಿಗೆ ತಗ್ಗುತ್ತದೆ. ಸುತ್ತಮುತ್ತಲಿನ ಪರಿಸರ ಸ್ವಚ್ಛಗೊಳ್ಳುತ್ತದೆ. ಸ್ಮಾರ್ಟ್ ಬಿನ್- ಎಕೋ ಬಿನ್ - ಕಂಬಂ ಯಾವುದೇ ವಿಧಾನವಾದರೂ ಆದೀತು. ಒಮ್ಮೆ ಗೊಬ್ಬರ ತಯಾರಿಸಲು ಮನಮಾಡಿದಿರೋ ನಿಮ್ಮ ಕೈದೋಟ ಮಾಡುವ ಆಸೆ ತಾಂತಾನೇ ಚಿಗುರುತ್ತದೆ. ಮನೆಯಂಗಳದಲ್ಲಿ ಹಸಿರು ಗಿಡಗಳು ಹೂವರಳಿಸುತ್ತವೆ - ಮನವನ್ನು ಮುದಗೊಳಿಸುತ್ತದೆ. ಇದು ಪ್ರಕೃತಿಗಾಗಿ ನಮ್ಮ ಕೊಡುಗೆ. ನಮ್ಮದೇ ಪ್ರಕೃತಿಗಾಗಿ ಅಷ್ಟೂ ಮಾಡಲಾರೆವಾ ನಾವು ?
- ಸುರೇಖಾ ಭೀಮಗುಳಿ
28/09/2018
ಚಿತ್ರ : ನಮ್ಮದೇ.
ಪೂರಕ ಮಾಹಿತಿ: https://www.facebook.com/permalink.php?story_fbid=2092785207641990&id=100007315925874
Comments
Post a Comment