#ಇದು ಸಾಗರ ತಾಲ್ಲೂಕಿನ ಶ್ರೀ ಗಜಾನನ ಶಮಾ೯ರ ಪೇಸ್‌ಬುಕ್ ಪೋಸ್ಟ್# ಶರಾವತಿ ನದಿ ನೀರು ಮಳೆ ಇಲ್ಲದೆ ಬತ್ತಿದಾಗ ಕಾಣುವ ಲಿಂಗನಮಕ್ಕಿ ಪೂವ೯ದ ಜಲ ವಿದ್ಯುತ್ ಯೋಜನೆ ಆಗಿದ್ದ ಹಿರೇಬಾಸ್ಕರ ಬಗ್ಗೆ ಅತ್ಯುತ್ತಮ ಮಾಹಿತಿ ಇದಾಗಿದೆ, ಅಲ್ಲಿಗೆ ತಲುಪುವುದು ದುಸ್ತರ ಆದರು ಅಲ್ಲಿಗೆ ಹೋಗಿ ಅಮೂಲ್ಯ ಚಿತ್ರ ತೆಗೆದಿದ್ದಾರೆ ಮುಂದಿನ ಪೀಳಿಗೆಗಾಗಿ ಈ ಲೇಖನ ನನ್ನ ಬ್ಲಾಗ್‌ನಲ್ಲಿ ಪ್ರಕಟಿಸಿದ್ದೇನೆ. # ಅರ್ಧ ಶತಮಾನದಿಂದ ಲಿಂಗನಮಕ್ಕಿಯಲ್ಲಿ ಮುಳುಗಿದ್ದರೂ ಸುಸ್ಥಿರವಾಗಿರುವ ಹಿರೇಭಾಸ್ಕರ ಆಣೆಕಟ್ಟು.# ಅದು ೧೯೩೭-೩೮ ರ ಅವಧಿ. ಮಾದರಿ ಮೈಸೂರಿನ ನಿರ್ಮಾತೃ ನಾಲ್ವಡಿಯವರು ಮಹಾಮಾತ್ಯ ಮುತ್ಸದ್ದಿ ಮಿರ್ಜಾ ಇಸ್ಮಾಯಿಲ್ಲರ ದಿವಾನಗಿರಿಯಲ್ಲಿ ನಾಡು ಕಟ್ಟುವ ಕಾಯಕದಲ್ಲಿ ನಿರತರಾಗಿದ್ದ ಕಾಲ. ಶಿವನಸಮುದ್ರದ ವಿದ್ಯುತ್ ಸ್ಥಾವರದ ಎಲ್ಲ ವಿಸ್ತರಣೆ ಮುಗಿದು ಅದರ ಸಾಮರ್ಥ್ಯ ೪೫ ಮೆಗಾವಾಟ್ಟಿಗೆ ಮುಟ್ಟುವ ಹಂತ.ಶಿಂಷಾದಲ್ಲಿ ೧೭.೨ ಮೆಗಾವಾಟ್ ಸಾಮರ್ಥ್ಯದ ಹೊಸ ವಿದ್ಯುದಾಗರ ಕಾರ್ಯಾರಂಭಕ್ಕೆ ಅಣಿಗೊಳ್ಳುತ್ತಿದ್ದ ಸಂದರ್ಭ. ಆದರೂ ಮೈಸೂರು ರಾಜ್ಯಕ್ಕೆ ವಿದ್ಯುತ್ ಕೊರತೆಯ ಭಯ.ಮಹಾರಾಜರು ನಿವ...