#ಭಾಗ_63.
#ಆನ೦ದಪುರಂಗೆ_ರೈಲು_ಮಾರ್ಗ_ಶಿವಮೊಗ್ಗ_ತಾಳಗುಪ್ಪ_ಮೀಟರ್_ಗೇಜ್
#ಶಿವಮೊಗ್ಗ_ಆನಂದಪುರಂ_ರೈಲು_ಮಾರ್ಗ_ಕಾಮಗಾರಿ_1934ಕ್ಕೆ_ಮುಗಿಯಿತು.
#ಮೊದಲ_ರೈಲು_1940_ನವೆಂಬರ್_9ಕ್ಕೆ_ತಾಳಗುಪ್ಪದಿಂದ_ಬೆಳಿಗ್ಗೆ_ಪ್ರಾರಂಭ_ಆಯಿತು.
#ಈ_ಮಾರ್ಗದ_ಮೊದಲ_ರೈಲಿನ_ಸಂಖ್ಯೆ_SMET_SBC_EXP(20652).
ಮುಮ್ಮುಡಿ ಚಾಮರಾಜ ಒಡೆಯರು 1881 ರಿಂದ 13 ವರ್ಷದ ತಮ್ಮ ಆಳ್ವಿಕೆಯಲ್ಲಿ 164 ಲಕ್ಷ ವೆಚ್ಚದಲ್ಲಿ ರಾಜ್ಯದಲ್ಲಿ 315 ಮೈಲು ರೈಲು ಮಾರ್ಗ ನಿರ್ಮಿಸುತ್ತಾರೆ.
ಮಹಾರಾಣಿ ವಾಣಿವಿಲಾಸರು 23 ಲಕ್ಷದಲ್ಲಿ ಬಿರೂರು ಶಿವಮೊಗ್ಗ ಮೀಟರ್ ಗೇಜ್ ರೈಲು ಮಾರ್ಗ ನಿರ್ಮಿಸುತ್ತಾರೆ ಈ ರೀತಿ ಆಗಿನ ಮೈಸೂರು ಅರಸರ ಪ್ರಯತ್ನ ಮತ್ತು ಸಹಕಾರದಲ್ಲಿ ಬ್ರಿಟೀಷರು ನಿರ್ಮಿಸಿದ ರೈಲು ಮಾರ್ಗಗಳು ಆಗ ಮೈಸೂರು ಸ್ಟೇಟ್ ರೈಲ್ವೆ ಇಲಾಖೆ ಹೆಸರಲ್ಲಿ ಸದರ್ನ ರೈಲ್ವೆ ಅಂಗ ಸಂಸ್ಥೆ ಆಗಿ 1891ರಿಂದ 1951ರವರೆಗೆ ಕಾಯ೯ನಿರ್ವಹಿಸಿತ್ತು ಈಗ ಈ ಮಾರ್ಗ ಬ್ರಾಡ್ ಗೇಜ್ ಗಳಾಗಿ ಪ್ರಯಾಣಿಕರಿಗೆ, ಸರಕು ಸಾಗಾಣಿಕೆಗೆ ಅನುಕೂಲಕರವಾಗಿದೆ.
1899 ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ರಾಜರಾಗಿದ್ದಾಗ ಬೀರೂರು ಶಿವಮೊಗ್ಗ ರೈಲು ಮಾರ್ಗ ಆಗಿತ್ತಾದರೂ ಶಿವಮೊಗ್ಗದಿಂದ ಜೋಗ್ ಪಾಲ್ಸ್ ಗೆ ಸಂಪರ್ಕಿಸಲಿಕ್ಕಾಗಿ ಶಿವಮೊಗ್ಗ ತಾಳಗುಪ್ಪ ರೈಲು ಮಾರ್ಗ ಕಾಮಗಾರಿ ಪ್ರಾರಂಭ ಆಗುವುದು 1930ರಲ್ಲಿ.
1934 ಕ್ಕೆ ಶಿವಮೊಗ್ಗದಿಂದ ಆನಂದಪುರಂ ವರೆಗಿನ ಮೀಟರ್ ಗೇಜ್ ಕಾಮಗಾರಿ ಮುಗಿಯುತ್ತದೆ, 1938 ಕ್ಕೆ ಸಾಗರದ ತನಕ ಕಾಮಗಾರಿ ಮುಗಿದು 1939 ಕ್ಕೆ ತಾಳಗುಪ್ಪ ತಲುಪುತ್ತದೆ.
1938 ರಲ್ಲಿ ಮೈಸೂರಿನ ದಿವಾನರಾದ ದಿವಾನ್ ಸರ್ ಮಿರ್ಜಾ ಇಸ್ಮಾಯಿಲ್ ಶಿವಮೊಗ್ಗದಿಂದ ಸಾಗರದವರೆಗೆ ಮೊದಲ ಪ್ರಯೋಗಾತ್ಮಕ ರೈಲು ಪ್ರಯಾಣ ಮಾಡುತ್ತಾರೆ.
ಶಿವಮೊಗ್ಗ - ತಾಳಗುಪ್ಪ ಮೀಟರ್ ಗೇಜ್ ರೈಲು ಅಧಿಕೃತವಾಗಿ 9- ನವೆಂಬರ್ -1940 ರಲ್ಲಿ ಬೆಳಿಗ್ಗೆ 4.30 ಕ್ಕೆ ತಾಳಗುಪ್ಪದಿಂದ ಮೊದಲ ಪ್ರಯಾಣ ಪ್ರಾರಂಬಿಸುತ್ತದೆ ಈ ರೈಲಿನ ಸಂಖ್ಯೆ SMET SBC EXP (20652).
1938 ರಲ್ಲಿ ಆನಂದಪುರದಿಂದ ಅಡ್ಡೇರಿ ಮದ್ಯದಲ್ಲಿ ಚನ್ನಶೆಟ್ಟಿಕೊಪ್ಪ ಸಮೀಪದಲ್ಲಿ ಆಂದ್ರದ ರೈಲ್ವೆ ಕಾರ್ಮಿಕರನ್ನು ಸಾಗಿಸುತ್ತಿದ್ದ ರೈಲು ಅಪಘಾತವಾಗಿ ಬಿದ್ದು ಅನೇಕ ಕಾರ್ಮಿಕರ ಆಹುತಿ ಆಗಿದ್ದು ಈ ರೈಲು ಮಾರ್ಗದ ಒಂದು ಕಪ್ಪು ಚುಕ್ಕೆ.
ಮಲೆನಾಡಿನಿಂದ ರೈಲ್ವೆ ಮಾರ್ಗದ ಸ್ಲೀಪರ್ ಗಾಗಿ ಮರ ಸಾಗಾಣಿಕೆಗಾಗಿ, ಜೋಗ ಜಲಪಾತ ವೀಕ್ಷಣೆಗಾಗಿ ಶಿವಮೊಗ್ಗ ತಾಳಗುಪ್ಪ ರೈಲು ಮಾರ್ಗವಾಯಿತು ನಂತರ ಭದ್ರಾವತಿ ಉಕ್ಕಿನ ಕಾರ್ಖಾನೆಗೆ ಆಗಿನ ಮರದ ಉರವಲುವಿನಿಂದ ಉಕ್ಕು ನಿರ್ಮಿಸಲು ಬಳಸುತ್ತಿದ್ದ ಪನೇ೯ಸ್ ಗಾಗಿ ಕಟ್ಟಿಗೆ ಸಾಗಾಣಿಕೆಗೆ, ಲಿಂಗನಮಕ್ಕಿ ಆಣೆಕಟ್ಟು ನಿರ್ಮಾಣ ಸಾಮಗ್ರಿ ಸಾಗಾಣಿಕೆಗಾಗಿ ಈ ಮಾರ್ಗ ಉಪಯುಕ್ತವಾಯಿತು.
ಮೈಸೂರು ಸಂಸ್ಥಾನದ ಜೊತೆ ಅತ್ಯುತ್ತಮ ಸಂಬಂದ ಹೊಂದಿದ್ದ ಆನಂದಪುರಂನ ಇನಾಂದಾರರು, ದೊಡ್ಡ ಭೂ ಮಾಲಿಕರು ಆಗಿದ್ದ ರಾಮಕೃಷ್ಣ ಅಯ್ಯಂಗಾರರ ಪ್ರಯತ್ನವೂ ಸೇರಿ ಆನಂದಪುರಂಗೆ ರೈಲು ನಿಲ್ದಾಣಕ್ಕೆ ಕಾರಣವಾಗುತ್ತದೆ.
ಇದೇ ಸಂದರ್ಭದಲ್ಲಿ ಸಮೀಪದ ರಿಪ್ಪನ್ ಪೇಟೆಯಲ್ಲಿ ರೈಲು ನಿಲ್ದಾಣ ಬೇಡವೇ ಬೇಡ ರೈಲು ಬಂದರೆ ಭಯಾನಿಕ ಸಾಂಕ್ರಮಿಕ ರೋಗ ಬರುತ್ತದೆಂಬ ತಪ್ಪು ಗ್ರಹಿಕೆಯಿಂದ ಅಲ್ಲಿನ ಪ್ರಮುಖರು ರೈಲು ನಿಲ್ದಾಣ ನಿರಾಕರಿಸಿದ್ದರಿಂದ ಅರಸಾಳಿನಿಂದ ರೈಲು ಮಾರ್ಗ ಆನಂದಪುರಂಗೆ ಮಾರ್ಗ ಬದಲಿಸಿತೆಂದು ಹೇಳುತ್ತಾರೆ.
ಲಾರ್ಡ್ ರಿಪ್ಪನ್ ತಮ್ಮ ಅಧಿಕಾರದಲ್ಲಿದ್ದಾಗ ಈ ಪ್ರದೇಶದಲ್ಲಿ ವಿಹಾರ ಮಾಡಿದ್ದರಿಂದ ಲಾಡ್೯ ರಿಪ್ಪನ್ ಗೌರವಾರ್ಥ ರಿಪ್ಪನ್ ಪೇಟೆ ಎಂದು ಸ್ಥಳಿಯರು ಪುನರ್ ನಾಮಕರಣ ಮಾಡಿದ್ದರು ಈ ಕಾರಣದಿಂದ ರಿಪ್ಪನ್ ಪೇಟೆಯ ರೈಲು ಮಾರ್ಗ ಸುಲಭವಾಗಿ ಜನರ ಬೇಡಿಕೆಯಂತೆ ಕೈ ಬಿಡಲಾಯಿತಂತೆ ಆದರೆ ಇದು ತಮ್ಮ ಊರಿಗಾದ ದೊಡ್ಡ ನಷ್ಟ ಎಂದು ಈಗಿನ ರಿಪ್ಪನ್ ಪೇಟೆ ಜನತೆ ಬಾವಿಸುತ್ತಾರೆ.
ಆದರೆ ಆನಂದಪುರಂನಲ್ಲಿ ರೈಲು ನಿಲ್ದಾಣ ಬೇಕೆ ಬೇಕು ಎನ್ನುವ ಬೇಡಿಕೆ ಅಯ್ಯಂಗಾರರಿಂದ ಇದ್ದಿದ್ದರಿಂದ ಆನಂದಪುರಂಗೆ ಸುಲಭವಾಗಿ ರೈಲು ನಿಲ್ದಾಣವಾಯಿತಾದರೂ ಐತಿಹಾಸಿಕ ಕೆಳದಿ ಅರಸರ ಕೋಟೆಯನ್ನೇ ಸೀಳಿ ರೈಲು ಮಾರ್ಗ ಮಾಡಿದ್ದು ಇತಿಹಾಸಕ್ಕಾದ ಅಪಚಾರವೇ ಸರಿ, ಈ ಕಾಮಗಾರಿ ನಿರ್ವಹಿಸಿದವರಿಗೆ ಈ ಕೋಟೆಯಲ್ಲಿ ಅಪಾರ ನಿದಿ ಸಿಕ್ಕಿತು ನಂತರ ಆ ಗುತ್ತಿಗೆದಾರರು ದೇಶದ ಪ್ರತಿಷ್ಟಿತ ಗುತ್ತಿಗೆದಾರ ಕಂಪನಿ ಮಾಡಿದ್ದರು ಇತ್ಯಾದಿ ದಂತಕಥೆಗಳು ಆ ಕಾಲದಲ್ಲಿ ಚಾಲ್ತಿ ಇತ್ತಂತೆ.
Comments
Post a Comment