ಆನಂದಪುರಂ ಇತಿಹಾಸ ಭಾಗ 62, ಆನಂದಪುರಂನ ಪ್ರತಿಷ್ಟಿತ ಕನ್ನಡ ಸಂಘ ಮತ್ತು ಆನಂದಪುರಂನ ಹೆಸರನ್ನು ಸಾಂಸ್ಕೃತಿಕವಾಗಿ ಕೆಲ ದಶಕ ಶ್ರೀಮಂತಗೊಳಿಸಿದ ಪ್ರಖರ ವಾಗ್ಮಿ ಕಲಾವಿದ ಸಂಘಟನಾಕಾರ ದಿವಂಗತ ಹಾ.ಮೊ.ಬಾಷಾ ಸ್ಮರಣೆಯಲ್ಲಿ
#ಭಾಗ_62.
#ಆನಂದಪುರಂ_ಜನತೆಯ_ಸದಾನೆನಪಿನಲ್ಲಿ_ಉಳಿದಿರುವ
#ದಿವ೦ಗತ_ಹಾ_ಮೋ_ಭಾಷಾ .
#ಕನ್ನಡಸಂಘ_ಉತ್ತುಂಗಕ್ಕೆ_ತಲುಪಿಸಿದ_ಕನಸುಗಾರ.
#ಆನಂದಪುರಂನ_ಮೂಲ_ನಿವಾಸಿಗಳು_ಈ_ಮನೆತನದವರು.
#ಆನಂದಪುರಂನ_ಏಕೈಕ_ಬಾರೂದ್_ಮನೆತನ.
ಒಂದು ಕಾಲದಲ್ಲಿ ಮಲೆನಾಡಿನಲ್ಲಿ ಸುತ್ತ ನೂರಾರು ಹಳ್ಳಿಗಳ ಮಧ್ಯೆ ಒಂದು ಪೇಟೆ ಸೃಷ್ಟಿ ಆಗುತ್ತಿತ್ತು, ಆ ಪೇಟೆಯಲ್ಲಿ ಸುತ್ತ ಹಳ್ಳಿಯ ಜನರ ಕೃಷಿ ಉಪಕರಣ ತಯಾರಿಸುವ, ದುರಸ್ತಿ ಮಾಡುವ ವಿಶ್ವಕರ್ಮಿಯರ ಕುಲುಮೆಗಳು, ಕ್ಷೌರಿಕರ ಅಂಗಡಿಗಳು, ಪಂಡಿತರುಗಳು, ನಿತ್ಯ ಉಪಯೋಗಿ ಹಿತ್ತಾಳೆ ಪಾತ್ರೆಗಳಿಗೆ ಕಲಾಯಿ ಹಾಕುವವರು, ಜೋಡು ಹೊಲೆದು ಕೊಡುವವರು, ದಿನಸಿ ಮಾರಾಟ ಮಾಡುವವರು, ಕಂಬಳಿ ಮಾರುವವರು, ಕುಂಬಾರರ ಮನೆಗಳು, ಪುರೋಹಿತರು, ಡಬ್ಬ - ಛತ್ರಿ- ಟಾರ್ಚ್ ದುರಸ್ತಿಗಾರರ ಮತ್ತು ಪಸಲು ರಕ್ಷಣೆಗಾಗಿ - ಶಿಕಾರಿಗಾಗಿ ಬಳಸುವ ಬಂದೂಕುಗಳಿಗೆ ಮದ್ದು ತಯಾರಿಸುವ ಬಾರೂದ್ ಮನೆತನಗಳು ಇದ್ದರೆ ಮಾತ್ರ ಅದು ಪೇಟೆಯ ಅರ್ಹತೆ ಪಡೆಯುತ್ತಿತ್ತು.
ಇಂತಹ ಪೇಟೆಗಳಲ್ಲೆ ಬ್ರಿಟೀಷ್ ಆಡಳಿತದ ಪೋಲಿಸ್ ಠಾಣೆ ಇತ್ಯಾದಿಗಳು ಬಂದವು.
ಆನಂದಪುರಂ ಇಂತಹ ಪೇಟೆ ಆಗಿ ಹೋಬಳಿ ಆಗಿ ನಂತರ ತಾಲ್ಲೂಕ್ ಕೂಡ ಕೆಲ ದಶಕ ಕಾಲ ಆಗಿದ್ದು ಇತಿಹಾಸ.
ಆನಂದಪುರಂ ಸುತ್ತಮುತ್ತ ದಟ್ಟ ಅರಣ್ಯದಿಂದ ರೈತರ ಪಸಲು ರಕ್ಷಣೆಗಾಗಿ ಮದ್ದುಗುಂಡುಗಳನ್ನು ತಯಾರಿಸಿ ಕೊಡುವ ಉದ್ಯೋಗ ಮಾಡಲು ದೂರದ ಹೊನ್ನಾವರದಿಂದ ಬಂದ ಬಾರೂದ್ ಮೊಯಿದ್ದೀನ್ ಸಾಹೇಬರ ಕುಟುಂಬವೇ ಮೂಲವೋ ಅಥವ ಅದಕ್ಕಿಂತ ಮೊದಲೇ ಅವರ ಕುಟುಂಬದವರು ಬಂದಿದ್ದರಾ ಎಂಬ ನಿಖರ ಮಾಹಿತಿ ಈ ಕುಟುಂಬದ ಈಗಿನ ತಲೆಮಾರಿನವರಿಗೆ ಇಲ್ಲ.
ಮದ್ದು ಗುಂಡು ತಯಾರಿಸಿ ಮಾರಾಟ ಮಾಡಲು ಬ್ರಿಟಿಷರ ಕಾಲದಲ್ಲಿ ಲೈಸೆನ್ಸ್ ಪಡೆದು ಈ ಕುಟು೦ಬ ಆನಂದಪುರಂನ ಆ ಕಾಲದ ಸರ್ ಮಿರ್ಜಾ ಇಸ್ಮಾಯಿಲ್ ತಂಗುದಾಣದ (ನಂತರ ಇದು ದೊಡ್ಡಿ ಆಯಿತು) ಪಕ್ಕದಲ್ಲಿ ಆಗಿನ ಪುರ ಪ್ರಮುಖರಾದ ಅಯ್ಯಂಗಾರ್ ಕುಟುಂಬದ ಅನುಮತಿಯಿಂದ ಈ ಕುಟುಂಬ ಆನಂದಪುರಂ ಕೆರೆ ಪಕ್ಕದಲ್ಲಿ ನೆಲೆಸಿತ್ತು.
ಮದ್ದುಗುಂಡು ಮಾರಾಟ ಮಾಡುವವರಿಗೆ ಬಾರೂದ್ ಮನೆತನ ಎಂಬ ಅಡ್ಡಹೆಸರು ಇರುತ್ತಿತ್ತು, ವರ್ಷ ಪೂರ್ತಿ ಮದ್ದುಗುಂಡು ಅರೆದು ತಯಾರಿಸಿ ಮಾರಾಟ, ಹಬ್ಬ ಹರಿದಿನದಲ್ಲಿ ಆ ಕಾಲದ ದೇಸಿ ಸಿಡಿ ಮದ್ದು ಮಾರಾಟದಿಂದ ಅವರದ್ದು ಶ್ರೀಮಂತ ಜೀವನವೇ ಆಗಿತ್ತು.
ಹೊನ್ನಾವರದ ಬಾರೂದ್ ಮೊಯಿದೀನ್ ಸಾಬ್ ರಿಗೆ ಐವರು ಮಕ್ಕಳು ಹಸನಾರ್, ಅಮೀನಾಬಿ, ಹಮೀದ್ ಸಾಬ್, ಆಹ್ಮದ್ ಖುನ್ನಿ, ಮತ್ತು ಇಬ್ರಾಹಿಂ.
ಮನೆತನದ ಉದ್ಯೋಗವನ್ನು ಹಸನಾರ್ ಸಾಬ್ ಮತ್ತು ಹಮೀದ್ ಸಾಹೇಬರು ಮುಂದುವರೆಸುತ್ತಾರೆ, ಉಳಿದವರು ಸಾಗರ ಮತ್ತು ಗೋವಾದಲ್ಲಿ ಉದ್ಯೋಗ ಮಾಡುತ್ತಾರೆ, ಅಮೀನಾಬಿಯವರನ್ನು ಚಾಬು ಸಾಹೇಬರಿಗೆ ವಿವಾಹ ಮಾಡುತ್ತಾರೆ.
ನಂತರ ಹಮೀದ್ ಸಾಹೇಬರು ವಾಚ್ ಮತ್ತು ಗಡಿಯಾರ, ರೇಡಿಯೋ ಇತ್ಯಾದಿ ದುರಸ್ತಿಯಲ್ಲಿ ನಿಪುಣರಾಗಿ ರೈಸ್ ಮಿಲ್ ಮೆಕಾನಿಕ್ ಆಗಿ ಪ್ರಸಿದ್ಧರಾಗುತ್ತಾರೆ, ಸುಬ್ಬಣ್ಣ ನಾಯಕರ ರೈತ ಬಂದು ಗ್ರಾಮೋದ್ಯೋಗದಲ್ಲಿ ಪ್ರಮುಖ ಮೆಕ್ಯಾನಿಕ್ ಆಗಿ ಆಧುನಿಕ ನೈಲಾನ್ ಅವಲಕ್ಕಿ ತಯಾರಿಸುವ ಯಂತ್ರ ಕಂಡು ಹಿಡಿಯುತ್ತಾರೆ ಆದರೆ ಅದನ್ನು ಪೇಟೆಂಟ್ ಇತ್ಯಾದಿ ಮಾಡದಿದ್ದರಿಂದ ಇವರಿಗೆ ವೈಯಕ್ತಿಕ ಲಾಭ ದೊರೆಯುವುದಿಲ್ಲ ಆದರೆ ಇವರ ಮಾದರಿ ಯಂತ್ರವೇ ಈಗಲೂ ಎಲ್ಲೆಡೆ ಇದೆ.
ಹಸನಾರ್ ಸಾಬ್ ಮತ್ತು ಶ್ರೀಮತಿ ಖತಿಜಾಬಿ ದಂಪತಿಗಳಿಗೆ ಬಾಬು (ಅಬ್ದುಲ್ ಖಾದರ್ ), ಖಾಸಿಂ, ಹಾ. ಮೊ. ಬಾಷಾ ಮತ್ತು ಷ೦ಷು ಎಂಬ ನಾಲ್ಕು ಗಂಡು ಮಕ್ಕಳು. ಜಾಯಿರಾಬಿ, ಆಲೀಮಾ, ಪಾತೀಮಾ ಮತ್ತು ನೇಬಾನು ಎಂಬ ನಾಲ್ಕು ಹೆಣ್ಣು ಮಕ್ಕಳು.
ಆನಂದಪುರಂನ ಕನ್ನಡ ಸಂಘದಲ್ಲಿಯೇ ಅವರ ಜೀವಮಾನದ ಹೆಚ್ಚಿನ ಕಾಲ ಕಳೆದು ಆ ಮೂಲಕ 1980 ರಿಂದ 2008ರವರೆಗೆ ಸುಮಾರು 3 ದಶಕ ಕಾಲ ಆನಂದಪುರಂನಲ್ಲಿ ನಿರಂತರ ಸಾಂಸ್ಕೃತಿಕ, ಸಾಮಾಜಿಕ ಕಾರ್ಯಗಳನ್ನು ನಡೆಸಿ ಊರಿಗೆ ಹೆಸರು ತಂದ ಖ್ಯಾತಿ ಇವರದ್ದು. ಹಾ.ಮೋ. ಬಾಷಾರ ನಾಟಕ ಇದೆ ಅಂದರೆ ಜನ ಕಿಕ್ಕಿರಿದು ಸೇರುತ್ತಿದ್ದರು ಅವರ ಹಾಸ್ಯಕ್ಕೆ ನಕ್ಕೂ ನಕ್ಕೂ ಹೊಟ್ಟೆ ನೋವಾಯಿತು ಅನ್ನುತ್ತಿದ್ದರು,ಭಾಷಣಕ್ಕೆ ನಿಂತರೆ ಪಿನ್ ಡ್ರಾಪ್ ಸೈಲೆನ್ಸ್ ಇವರ ಬಾಯಿಂದ ಬರುತ್ತಿದ್ದ ನಿರ್ಗಳ ವಚನ, ಗಾದೆ ಮತ್ತು ನುಡಿಮುತ್ತುಗಳು ಕೇಳುಗರಿಗೆ ಮಂತ್ರ ಮುಗ್ದರಾಗಿಸುತ್ತಿತ್ತು.
ವಿಷದ ಹಾವು ಹಿಡಿದು ಕಾಡಿಗೆ ಬಿಡುತ್ತಿದ್ದರು ಈ ಹವ್ಯಾಸವೇ ಇವರ ಅಕಾಲಿಕ ಮೃತ್ಯುವಿಗೆ ಕಾರಣವಾಯಿತು ಎಂಬುದು ವಿಷಾದನೀಯ ಸಂಗತಿ.
ಇವರ ಪತ್ನಿ ಕೂಡ ಇತ್ತೀಚಿಗೆ ಅಪಘಾತದಲ್ಲಿ ಮೃತರಾಗಿದ್ದಾರೆ ಇವರ ಮಗಳು ಮತ್ತು ಮಗ ಸಂಬಂದಿಕರ ನೆರವಿನಿಂದ ವಿದ್ಯಾಬ್ಯಾಸ ಮುಂದುವರಿಸಿದ್ದಾರೆ.
(ನಾಳೆ ಮುಂದಿನ ಭಾಗ - 63)
Comments
Post a Comment