ನಾನೂರು ವರ್ಷದ ಹಿಂದೆ ಉತ್ತರ ಭಾರತದ ರಾಜಸ್ಥಾನ, ಗುಜರಾತಿನಿಂದ ವಲಸೆ ಬಂದ ಹಕ್ಕಿಪಿಕ್ಕಿ ಜನಾಂಗದವರು ಈಗ 50 ವರ್ಷದಲ್ಲಿ ಬದಲಾಗಿ ಮುಖ್ಯವಾಹಿನಿಗೆ ಸೇರುತ್ತಿದ್ದಾರೆ.
#ಒಂದುಕಾಲದಲ್ಲಿ_ಹಕ್ಕಿ_ಪಿಕ್ಕಿಜನಾಂಗ_ಅಲೆಮಾರಿ_ಶಿಕಾರಿಗಳು_ಗಿಡಮೂಲಿಕ_ತಜ್ಞರು
ಇವತ್ತು ಬೆಳಿಗ್ಗೆ ಪ್ಲಾಸ್ಟಿಕ್ ಹೂವಿನ ಮಾಲೆ ಮಾರಾಟಕ್ಕೆ ಬಂದ ಶಿವಮೊಗ್ಗ ಚಿಕ್ಕಮಟ್ಟಿ ಹಳ್ಳಿಯ ಹಕ್ಕಿಪಿಕ್ಕಿ ಕ್ಯಾಂಪಿನ ಹಾಲಿ ಶಿವಮೊಗ್ಗದ ನಂಜಪ್ಪ ಹೆಲ್ತ್ ಕೇರ್ ಹಿಂಬಾಗದ ಅಂಬೇಡ್ಕರ್ ಕಾಲೋನಿ ವಾಸಿ ಬೋಣಿಗೆ ಮಾಡಲು ವಿನಂತಿಸಿದ, ಪ್ಲಾಸ್ಟಿಕ್ ನಲ್ಲಿ ಹೂವಿನ ಬಣ್ಣದಲ್ಲಿ ಹೂವು ಸುರಿದು ಮಾಡಿದಂತ ಈ ಮಾಲೆ ನಿಜಕ್ಕೂ ಆಕಷ೯ಕವಾಗಿದೆ ಅವನ ಇವತ್ತಿನ ವ್ಯಾಪಾರಕ್ಕೆ 300 ರೂಪಾಯಿ ಬೊಣಿಗೆ ಮಾಡಿದೆ ಅವನ ಜೊತೆಯ ಇವತ್ತಿನ ಚಿತ್ರ ಮತ್ತು ಈ ಜನಾಂಗದ 50 ವರ್ಷ ಹಿಂದಿನ ಇವರ ಜನ ಜೀವನದ ಚಿತ್ರದ ಜೊತೆ ಹಾಕಿದ್ದೇನೆ.
1960 ರ ದಶಕದಲ್ಲಿ ಸೀಮಿತ ಜನ ಸಂಖ್ಯೆಯ ನಮ್ಮ ಹಳ್ಳಿ ಕಾಡಿನ ಅಂಚಿನಲ್ಲಿ ಇದ್ದ ಹಾಗಿತ್ತು ಆಗ ಪ್ರತಿ ವರ್ಷ ಸುಗ್ಗಿ ನ೦ತರ ಹಕ್ಕಿಪಿಕ್ಕಿ ಜನರ ದೊಡ್ಡ ಕ್ಯಾಂಪ್ ನಮ್ಮ ಊರಿನ ಈಗಿನ ಮಸೀದಿ ಜಾಗದಲ್ಲಿ ಇದ್ದ ದೊಡ್ಡ ಅತ್ತಿ ಮರದ ಬುಡದಲ್ಲಿ ಹಾಕುತ್ತಿದ್ದರು ಆಗೆಲ್ಲ ಇವರು ಶಿಕಾರಿ ಮಾಡುತ್ತಿದ್ದದ್ದು ಅವರ ನಿತ್ಯ ಆಹಾರಕ್ಕೆ ಮಾತ್ರ ಯಾಕೆಂದರೆ ಆಗ ಕಾಡು ಕೋಳಿ ಖರೀದಿ ಮಾಡುವವರು ಹಳ್ಳಿಗಳಲ್ಲಿ ಇರಲಿಲ್ಲ.
ಇವರು ತಮ್ಮ ಸಾಕು ದನ (ಶಿಕಾರಿಗೆ ಬಳಸುತ್ತಾರೆ) ಗಳ ಮೇಲೆ ಇಡೀ ಸಂಸಾರ ಸಾಗಿಸುತ್ತಾ ಬರುತ್ತಿದ್ದರು ಅದರಲ್ಲಿ ಟೆಂಟ್ ,ಶಿಕಾರಿ ಸಾಧನಗಳು, ಅಡುಗೆ ಪರಿಕರ ಎಲ್ಲಾ ಇರುತ್ತಿತ್ತು.
ಇವರು ಊರಿಗೆ ಪ್ರವೇಶ ಆದಾಗಿನಿಂದ ಅವರ ಬೆನ್ನು ಬೀಳುತ್ತಿದ್ದೆವು ಆಗ ಅವರ ಚಾಟಿ ಬಿಲ್ಲು, ಕವಣೆ, ಹಕ್ಕಿ ಹಿಡಿಯುವ ಕುಣಿಕೆ, ಬಲೆ ಇವೆಲ್ಲ ಬಾಲ್ಯದಲ್ಲಿ ನಮಗೆ ಅತ್ಯಾಕಷ೯ಣೆ.
ಆಗೆಲ್ಲ ರಣ ಹದ್ದುಗಳಿದ್ದವು ಅದನ್ನು ಹಿಡಿಯಲು ಇವರು ಊರಿನ ಯಾರೂ ವಾರಸುದಾರರಿಲ್ಲದ ಬೀದಿ ನಾಯಿಯನ್ನ ಉಪಾಯ ಮಾಡಿ ಸಾಯಿಸಿ ದೂರದಲ್ಲಿ ಒಗೆದು ಬಿಡುತ್ತಿದ್ದರು ಒಂದೆರೆಡು ದಿನದಲ್ಲಿ ನೂರಾರು ರಣಹದ್ದುಗಳು ಅದನ್ನು ತಿನ್ನಲು ಬಂದಿಳಿಯುತ್ತಿದ್ದವು, ಅವು ನೋಡಲು ಬೀಕರ ರಣವೇ ಯಾಕೆಂದರೆ ಹತ್ತಾರು ಕೆಜಿ ತೂಗುವ ಅದರ ಕುತ್ತಿಗೆ ಬೋಳು, ಕೆಂಪು ಕುತ್ತಿಗೆ, ಕೆಂಪು ಕಣ್ಣು ಭಯ ಹುಟ್ಟಿಸುತ್ತಿತ್ತು ಅದರಲ್ಲಿ ಆಯ್ದ ರಣ ಹದ್ದು ತಲೆ ಹೊಡೆದು ಸಾಯಿಸಿ ಇವರ ಕ್ಯಾಂಪಿನಲ್ಲಿ ಒಂದೆರೆಡು ದಿನ ದೊಡ್ಡ ಹಬ್ಬ ಮಾಡುತ್ತಿದ್ದರು.
ಹಕ್ಕಿಪಿಕ್ಕಿ, ಮೇಲ್ ಶಿಕಾರಿ, ಬಾಕ್ರಿ ಅಂತೆಲ್ಲ ಕರೆಯುವ ಇವರೆಲ್ಲ ಸುಮಾರು ನಾನೂರು ವಷ೯ದ ಹಿಂದೆ ರಾಜಸ್ಥಾನ, ಗುಜರಾತ್ ಮತ್ತು ಮಹಾರಾಷ್ಟ್ರದಿಂದ ಕನಾ೯ಟಕದ ಕಾಡಿಗೆ ವಲಸೆ ಬಂದವರು, ಬ್ರಿಟಿಷರ ಆಡಳಿತದಲ್ಲಿ ಅರಣ್ಯವಾಸಿಗಳಾಗಿ ವನ್ಯ ಪ್ರಾಣಿ ಶಿಕಾರಿ, ಗಿಡಮೂಲಿಕೆ ಸಂಗ್ರಹ ಮತ್ತು ಮಾರಾಟದಿಂದ ಜೀವನ ಮಾಡುತ್ತಾ ಅಲೆಮಾರಿ ಜೀವನ ಮಾಡುತ್ತಿದ್ದವರು ಸ್ವಾತಂತ್ರ ನ೦ತರ ವನ್ಯಜೀವಿ ಸಂರಕ್ಷಣ ಕಾಯ್ದೆಯಿಂದ ಅರಣ್ಯದಿಂದ ಹೊರ ಹಾಕಲ್ಪಟ್ಟ ಈ ಜನಾಂಗದವರು ಇಡೀ ದೇಶದಲ್ಲಿ ಸುಮಾರು 30 ಸಾವಿರ ಜನಸಂಖ್ಯೆಯಲ್ಲಿದ್ದಾರೆ ಅದರಲ್ಲಿ ಅದ೯ ಭಾಗ ಕನಾ೯ಟಕ ರಾಜ್ಯದಲ್ಲಿದ್ದರೆ ಉಳಿದವರು ತಮಿಳುನಾಡು, ಆಂಧ್ರ, ಪುದುಚೆರಿ ಮತ್ತು ತೆಲಂಗಾಣದಲ್ಲಿ ಹಂಚಿ ಹೋಗಿದ್ದಾರೆ.
ಇವರ ಭಾಷೆ ವಾಗ್ರಿಬೂಲಿ ಅಂತ ಅದಕ್ಕೆ ಲಿಪಿ ಇಲ್ಲ, ಸ್ಥಳಿಯ ಭಾಷೆ ಎಲ್ಲಾ ಇವರು ಮಾತಾಡುತ್ತಾರೆ,ಇವರಲ್ಲಿ ಹುಟ್ಟಿದ ಮಕ್ಕಳಿಗೆ ಇವರು ಇವರಿಗೆ ಬೇಕಾದ ಸ್ಥಳ ಮತ್ತು ವಸ್ತುಗಳ ಹೆಸರಿಡುವ ಕ್ರಮವೇ ವಿಶಿಷ್ಟ ಅವರ ಹೆಸರು ಬಸ್, ರೈಲು, ಕೋಟ್೯, ಪಿಸ್ಟೂಲ್ , ಡಾಕ್ಟರ್, ಪೋಲಿಸ್, ಲಾಯರ್, ಇಂಗ್ಲೀಷ್, ಜಪಾನ್ ಅಂತೆಲ್ಲ ಮೊದಲು ಇರುತ್ತಿತ್ತು.
ಈಗ 50 ವರ್ಷದಲ್ಲಿ ಇವರ ಜೀವನಕ್ರಮ ಬದಲಾಗಿದೆ, ಶಿಕಾರಿ ಹೆಚ್ಚು ಕಡಿಮೆ ಇಲ್ಲ ಅನ್ನಬಹುದು, ಅಲೆಮಾರಿ ಜೀವನವೂ ಇಲ್ಲ, ಅದುನಿಕ ಜೀವನವನ್ನ ಪಡೆದು ಮುಖ್ಯವಾಹಿನಿಯಲ್ಲಿ ಸಾಗಿದ್ದಾರೆ, ಇವರ ವೇಷ ಭೂಷಣಗಳು ಉದ್ಯೋಗಗಳೂ ಬದಲಾಗಿದೆ ಅದನ್ನು ಈ ಪ್ಲಾಸ್ಟಿಕ್ ಹೂವಿನ ಮಾರಾಟದ ಹಕ್ಕಿಪಿಕ್ಕಿ ಯುವಕನ ಪೋಟೋದಲ್ಲಿ ನೋಡ ಬಹುದು.
Comments
Post a Comment